ಕನ್ನಡ ಸುದ್ದಿ  /  Nation And-world  /  Pm Modi Names 21 Largest Unnamed Andaman And Nicobar Islands Find Out Names Here

Andaman Islands: ಅಂಡಮಾನ್ ಮತ್ತು ನಿಕೋಬಾರ್‌ನ 21 ದೊಡ್ಡ ದ್ವೀಪಗಳಿಗೆ 21 ಹುತಾತ್ಮರ ಹೆಸರು ನಾಮಕರಣ ಮಾಡಿದ ಮೋದಿ

ಪರಾಕ್ರಮ್ ದಿವಸ್ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಅಂಡಮಾನ್ ಮತ್ತು ನಿಕೋಬಾರ್‌ನ 21 ದೊಡ್ಡ ದ್ವೀಪಗಳಿಗೆ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತ ಹುತಾತ್ಮರ ಹೆಸರನ್ನು ನಾಮಕರಣ ಮಾಡಿದ್ದಾರೆ. ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪದಲ್ಲಿ ನಿರ್ಮಿಸಲಾಗುವ ರಾಷ್ಟ್ರೀಯ ಸ್ಮಾರಕದ ಮಾದರಿಯನ್ನೂ ಇದೇ ವೇಳೆ ಪ್ರಧಾನಿ ಮೋದಿ ಅನಾವರಣಗೊಳಿಸಿದರು. ಈ ಕುರಿತು ಇಲ್ಲಿದೆ ಮಾಹಿತಿ.

ಪ್ರಧಾನಿ ಮೋದಿ
ಪ್ರಧಾನಿ ಮೋದಿ (Verified Twitter)

ನವದೆಹಲಿ: ಪರಾಕ್ರಮ್ ದಿವಸ್ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಅಂಡಮಾನ್ ಮತ್ತು ನಿಕೋಬಾರ್‌ನ 21 ದೊಡ್ಡ ದ್ವೀಪಗಳಿಗೆ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತ ಹುತಾತ್ಮರ ಹೆಸರನ್ನು ನಾಮಕರಣ ಮಾಡಿದ್ದಾರೆ.

ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪದಲ್ಲಿ ನಿರ್ಮಿಸಲಾಗುವ ರಾಷ್ಟ್ರೀಯ ಸ್ಮಾರಕದ ಮಾದರಿಯನ್ನೂ ಇದೇ ವೇಳೆ ಪ್ರಧಾನಿ ಮೋದಿ ಅನಾವರಣಗೊಳಿಸಿದರು. ಈ ದ್ವೀಪ ಸಮೂಹವನ್ನು ಈ ಹಿಂದೆ ರಾಸ್ ಐಲ್ಯಾಂಡ್ಸ್ ಎಂದು ಕರೆಯಲಾಗುತ್ತಿತ್ತು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಭಾಗವಹಿಸಿದ್ದರು.

ಶ್ರೀನಗರ ವಿಮಾನ ನಿಲ್ದಾಣದ ಬಳಿ ಪಾಕಿಸ್ತಾನಿ ನುಸುಳುಕೋರರ ವಿರುದ್ಧ ಹೋರಾಡುವಾಗ ನವೆಂಬರ್ 3, 1947 ರಂದು ಕಾರ್ಯಾಚರಣೆಯಲ್ಲಿ ಪ್ರಾಣ ಕಳೆದುಕೊಂಡ ಮೊದಲ ಪರಮ ವೀರ ಚಕ್ರ ಪ್ರಶಸ್ತಿ ಪುರಸ್ಕೃತ ಮೇಜರ್ ಸೋಮನಾಥ್ ಶರ್ಮಾ ಅವರ ಹೆಸರನ್ನು ಅತಿದೊಡ್ಡ ದ್ವೀಪಕ್ಕೆ ಹೆಸರಿಸಲಾಗಿದೆ.

ಹುತಾತ್ಮರ ಹೆಸರಿನಲ್ಲಿ ನಾಮಕರಣಗೊಂಡ ದ್ವೀಪಗಳು

ಮೇಜರ್ ಸೋಮನಾಥ್ ಶರ್ಮಾ

ಸುಬೇದಾರ್ ಮತ್ತು ಗೌರವಾನ್ವಿತ ಕ್ಯಾಪ್ಟನ್ (ಆಗ ಲ್ಯಾನ್ಸ್ ನಾಯ್ಕ್) ಕರಂ ಸಿಂಗ್

ಸೆಕೆಂಡ್ ಲೆಫ್ಟಿನೆಂಟ್ ರಾಮ ರಘೋಬಾ ರಾಣೆ

ನಾಯಕ್ ಜದುನಾಥ್ ಸಿಂಗ್

ಕಂಪನಿ ಹವಾಲ್ದಾರ್ ಮೇಜರ್ ಪಿರು ಸಿಂಗ್

ಕ್ಯಾಪ್ಟನ್ ಜಿಎಸ್ ಸಲಾರಿಯಾ

ಲೆ. ಕರ್ನಲ್ ಧಾನ್ ಸಿಂಗ್ ಥಾಪಾ

ಸುಬೇದಾರ್ ಜೋಗಿಂದರ್ ಸಿಂಗ್

ಮೇಜರ್ ಶೈತಾನ್ ಸಿಂಗ್

ಸಿಕ್ಯೂಎಂಎಚ್ ಅಬ್ದುಲ್ ಹಮೀದ್

ಲೆ. ಕರ್ನಲ್ ಆರ್ದೇಶಿರ್ ಬುರ್ಜೋರ್ಜಿ ತಾರಾಪೋರ್

ಲ್ಯಾನ್ಸ್ ನಾಯ್ಕ್ ಆಲ್ಬರ್ಟ್ ಎಕ್ಕಾ

ಮೇಜರ್ ಹೋಶಿಯಾರ್ ಸಿಂಗ್

ಸೆಕೆಂಡ್ ಲೆ. ಅರುಣ್ ಕ್ಷೇತ್ರಪಾಲ್

ಫ್ಲೈಯಿಂಗ್ ಆಫೀಸರ್ ನಿರ್ಮಲ್ಜಿತ್ ಸಿಂಗ್ ಶೇಖಾನ್

ಮೇಜರ್ ರಾಮಸ್ವಾಮಿ ಪರಮೇಶ್ವರನ್

ನೈಬ್ ಸುಬೇದಾರ್ ಬನಾ ಸಿಂಗ್

ಕ್ಯಾಪ್ಟನ್ ವಿಕ್ರಮ್ ಬಾತ್ರಾ

ಲೆ. ಮನೋಜ್ ಕುಮಾರ್ ಪಾಂಡೆ

ಸುಬೇದಾರ್ ಮೇಜರ್ (ಆಗ ರೈಫಲ್‌ಮ್ಯಾನ್) ಸಂಜಯ್ ಕುಮಾರ್

ಸುಬೇದಾರ್ ಮೇಜರ್ ನಿವೃತ್ತ ಗ್ರೆನೇಡಿಯರ್ ಯೋಗೇಂದ್ರ ಸಿಂಗ್ ಯಾದವ್.

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದ ನೆನಪಿಗಾಗಿ ಸರ್ಕಾರವು 2021ರಲ್ಲಿ ಜನವರಿ 23 ಅನ್ನು ಪರಾಕ್ರಮ್ ದಿವಸ್ ಎಂದು ಘೋಷಿಸಿತ್ತು.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಐತಿಹಾಸಿಕ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ನೇತಾಜಿ ಅವರ ಸ್ಮರಣೆಯನ್ನು ಗೌರವಿಸಲು, ರಾಸ್ ದ್ವೀಪಗಳನ್ನು ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪ ಎಂದು ಮರುನಾಮಕರಣ ಮಾಡಲಾಗಿದೆ. ಶಹೀದ್ ದ್ವೀಪ್ ಮತ್ತು ಸ್ವರಾಜ್ ದ್ವೀಪ್ ಎಂದು ಕೂಡ ಈ ದ್ವೀಪಗಳಿಗೆ ಮರುನಾಮಕರಣ ಮಾಡಲಾಗಿದೆ.

"ದೇಶದ ನೈಜ ಹೀರೋಗಳಿಗೆ ಸರಿಯಾದ ಗೌರವವನ್ನು ನೀಡುವುದು ಪ್ರಧಾನಿ ಮೋದಿ ಅವರ ಅತ್ಯುನ್ನತ ಆದ್ಯತೆಯಾಗಿದೆ. ಈ ಮನೋಭಾವದೊಂದಿಗೆ ಮುಂದುವರಿಯುತ್ತಾ, ಈಗ ದ್ವೀಪ ಸಮೂಹದ ಇದುವರೆಗೂ ಹೆಸರಿಸದ 21 ದೊಡ್ಡ ದ್ವೀಪಗಳಿಗೆ 21 ಪರಮ ವೀರ ಚಕ್ರ ಪುರಸ್ಕೃತ ಹುತಾತ್ಮರ ಹೆಸರನ್ನು ಇಡಲು ನಿರ್ಧರಿಸಲಾಗಿದೆ.." ಎಂದು ಪ್ರಧಾನಿ ಕಚೇರಿ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ರಾಷ್ಟ್ರದ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ರಕ್ಷಿಸಲು ಅಪ್ರತಿಮ ತ್ಯಾಗ ಮಾಡಿರುವ ವೀರರ ಗೌರವಾರ್ಥವಾಗಿ, ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಸಮೂಹದ 21 ದೊಡ್ಡ ದ್ವೀಪಗಳಿಗೆ ಹುತಾತ್ಮರ ಹೆಸರನ್ನು ಇಡಲಾಗಿದೆ ಎಂದು ಪ್ರಧಾನಿ ಕಚೇರಿ ಮಾಹಿತಿ ನೀಡಿದೆ.

ಏತನ್ಮಧ್ಯೆ, ಪ್ರಧಾನಿ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಲೋಕಸಭೆ ಮತ್ತು ರಾಜ್ಯಸಭೆಯ ವಿಪಕ್ಷಗಳ ನಾಯಕರು, ಸಂಸದರು, ಮಾಜಿ ಸಂಸದರು ಮತ್ತು ಇತರ ಗಣ್ಯರು ಸೆಂಟ್ರಲ್ ಹಾಲ್‌ನಲ್ಲಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಿದ್ದಾರೆ.

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಭಾವಚಿತ್ರವನ್ನು ಅಂದಿನ ಭಾರತದ ರಾಷ್ಟ್ರಪತಿ ಎನ್ ಸಂಜೀವ ರೆಡ್ಡಿ ಅವರು ಜನವರಿ 23, 1978 ರಂದು ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ಅನಾವರಣಗೊಳಿಸಿದ್ದರು. ಜನವರಿ 23, 1897 ರಂದು ಜನಿಸಿದ ನೇತಾಜಿ ಅವರು ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

ಸುಭಾಷ್ ಚಂದ್ರ ಬೋಸ್ ಆಜಾದ್ ಹಿಂದ್ ಫೌಜ್(ಐಎನ್‌ಎ) ಸ್ಥಾಪಿಸಿ, ಬ್ರಿಟಿಷರ ವಿರುದ್ಧ ಹೋರಾಡಿದ್ದರು. ಆಗಸ್ಟ್ 18, 1945 ರಂದು ತೈಪೆಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ಬೋಸ್ ಹುತಾತ್ಮರಾಗಿದ್ದರು. ಕೇಂದ್ರ ಸರ್ಕಾರವು 2017ರಲ್ಲಿ ಮಾಹಿತಿ ಹಕ್ಕು ಅಡಿ ಬೋಸ್‌ ಅವರು ಈ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದರು ಎಂಬುದನ್ನು ದೃಢಪಡಿಸಿತ್ತು.

ಕಳೆದ ವರ್ಷನೇತಾಜಿ ಅವರ 125 ನೇ ಜನ್ಮದಿನದ ಸಂದರ್ಭದಲ್ಲಿ, ದೆಹಲಿಯ ಇಂಡಿಯಾ ಗೇಟ್‌ನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಹೊಲೊಗ್ರಾಮ್ ಪ್ರತಿಮೆಯನ್ನು ಪ್ರಧಾನಿ ಅನಾವರಣಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

IPL_Entry_Point

ವಿಭಾಗ