ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವ; ದಿಗಂತದಲ್ಲಿ ಹೊಸ ಭಾಷ್ಯ ಬರೆಯಲು ಸಜ್ಜಾದ ಇಸ್ರೋ; ಗಿರೀಶ್ ಲಿಂಗಣ್ಣ ಬರಹ

ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವ; ದಿಗಂತದಲ್ಲಿ ಹೊಸ ಭಾಷ್ಯ ಬರೆಯಲು ಸಜ್ಜಾದ ಇಸ್ರೋ; ಗಿರೀಶ್ ಲಿಂಗಣ್ಣ ಬರಹ

ಬಾಹ್ಯಾಕಾಶ ಸಂಶೋಧನೆಯಲ್ಲಿ ಇಸ್ರೋ ಸಾಧನೆಗಳಿಗೆ ಇಡೀ ಜಗತ್ತೇ ತಲೆಬಾಗುತ್ತಿದೆ. ಇತರೆ ದೇಶಗಳಂತೆ ಭಾರತದಲ್ಲೂ ಬಾಹ್ಯಕಾಶ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವ ಹೆಚ್ಚಾಗುತ್ತಿದೆ. ಹೆಮ್ಮೆಯ ಇಸ್ರೋ ಮತ್ತಷ್ಟು ಮೈಲುಗಲ್ಲಿಗೆ ಸಜ್ಜಾಗುತ್ತಿದೆ. ಈ ಕುರಿತು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರಾದ ಗಿರೀಶ್ ಲಿಂಗಣ್ಣ ಬರೆದಿದ್ದಾರೆ.

ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವ; ದಿಗಂತದಲ್ಲಿ ಹೊಸ ಭಾಷ್ಯ ಬರೆಯಲು ಸಜ್ಜಾದ ಇಸ್ರೋ; ಗಿರೀಶ್ ಲಿಂಗಣ್ಣ ಬರಹ
ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವ; ದಿಗಂತದಲ್ಲಿ ಹೊಸ ಭಾಷ್ಯ ಬರೆಯಲು ಸಜ್ಜಾದ ಇಸ್ರೋ; ಗಿರೀಶ್ ಲಿಂಗಣ್ಣ ಬರಹ

ಬೆಂಗಳೂರು: ಬಾಹ್ಯಾಕಾಶ ತಂತ್ರಜ್ಞಾನ ಮುಂದುವರೆದಂತೆಲ್ಲಾ ಈ ಕ್ಷೇತ್ರದ ಕುರಿತು ಮಾನವನ ಕುತೂಹಲ ಕೂಡ ಹೆಚ್ಚುತ್ತಿದೆ. ಇದಕ್ಕೆ ಪೂರಕವಾಗಿ ಜಗತ್ತಿನ ವಿವಿಧ ದೇಶಗಳ ಬಾಹ್ಯಾಕಾಶ ಸಂಸ್ಥೆಗಳು ಕೂಡ ಹೊಸ ಹೊಸ ಮೈಲಿಗಲ್ಲುಗಳನ್ನು ಸಾಧಿಸುತ್ತಿವೆ. ಇದಕ್ಕೆ ಭಾರತೀಯ ಬಾಹ್ಯಾಕಾಶ ಸಂಸ್ಥೆ ಸಂಶೋಧನಾ ಸಂಸ್ಥೆ(ಇಸ್ರೋ) ಕೂಡ ಹೊರತಲ್ಲ. ಬಾಹ್ಯಾಕಾಶ ಸಂಶೋಧನೆಯಲ್ಲಿ ಇಸ್ರೋ ಮಾಡಿರುವ ಮತ್ತು ಮಾಡುತ್ತಿರುವ ಸಾಧನೆಗಳಿಗೆ ಇಡೀ ಜಗತ್ತೇ ಇಂದು ತಲೆಬಾಗುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಹದಿನೈದು ವರ್ಷಗಳ ಹಿಂದೆ ಅಂದರೆ ಏಪ್ರಿಲ್ 2009ರಲ್ಲಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ತನ್ನ ಮೊದಲ ರಾಡಾರ್ ಇಮೇಜಿಂಗ್ ಉಪಗ್ರಹ RISAT-2 ಅನ್ನು ಉಡಾವಣೆ ಮಾಡಿತ್ತು. ಅದರಂತೆ RISAT-1 (ರಾಡಾರ್ ಇಮೇಜಿಂಗ್ ಸ್ಯಾಟಲೈಟ್-1)ನ್ನು 2012ರಲ್ಲಿ ಉಡಾವಣೆ ಮಾಡಲಾಗಿತ್ತು. RISAT-2 ಉಡಾವಣೆಯ ನಂತರ RISAT-1 ಉಪಗ್ರಹವನ್ನು ಉಡಾವಣೆ ಮಾಡಿದ್ದು ವಿಶೇಷ.

ನವೆಂಬರ್ 2008ರಲ್ಲಿ ಮುಂಬೈ ಭಯೋತ್ಪಾದಕ ದಾಳಿಯ ನಂತರ, ಬಾಹ್ಯಾಕಾಶ ಕಣ್ಗಾವಲಿನ ತುರ್ತು ಅಗತ್ಯವನ್ನು ಮನಗಂಡ ಭಾರತ ಸರ್ಕಾರ, ಈ ನಿಟ್ಟಿನಲ್ಲಿ ಅಣಿಯಾಗುವಂತೆ ಇಸ್ರೋಗೆ ಸೂಚನೆ ನೀಡಿತ್ತು. RISAT-2 ಮತ್ತು RISAT-1 ಇದೇ ಉದ್ದೇಶಕ್ಕಾಗಿ ಹರಿಬಿಡಲಾದ ಉಪಗ್ರಹಗಳಾಗಿವೆ. RISAT-2 ಸಿಂಥೆಟಿಕ್-ಅಪರ್ಚರ್ ರೇಡಾರ್ (SAR) ತಂತ್ರಜ್ಞಾನವನ್ನು ಬಳಸಿಕೊಂಡು ಭೂಮಿಯನ್ನು ವೀಕ್ಷಿಸಲು ವಿನ್ಯಾಸಗೊಳಿಸಿದ ಉಪಗ್ರಹವಾಗಿದೆ. ಇದನ್ನು ಕಣ್ಗಾವಲುಗಾಗಿ ಬಳಸಲಾಗಿದ್ದರೂ, ಇದು ಬಹುಮುಖಿ ಕಾರ್ಯಗಳನ್ನು ಮಾಡುವ ಕ್ಷಮತೆ ಹೊಂದಿದೆ. ಇದು ಕೃಷಿ, ಅರಣ್ಯ ಸಂರಕ್ಷಣೆ, ಮಣ್ಣಿನ ತೇವಾಂಶವನ್ನು ಅಂದಾಜು ಮಾಡಲು ಮತ್ತು ಪ್ರಾಕೃತಿಕ ವಿಪತ್ತುಗಳನ್ನು ನಿರ್ವಹಿಸಲು ನಮಗೆ ಸಹಾಯ ಮಾಡಿದೆ. SAR ತಂತ್ರಜ್ಞಾನವು ಬಾಹ್ಯಾಕಾಶದಿಂದ ಸ್ಪಷ್ಟ ಮತ್ತು ವಿವರವಾದ ಚಿತ್ರಗಳನ್ನು ರವಾನಿಸುವ ಮೂಲಕ ಗಮನಾರ್ಹ ಸೇವೆ ಸಲ್ಲಿಸುತ್ತಿದೆ.

ಕೃತಕ-ದ್ಯುತಿರಂಧ್ರ ರೇಡಾರ್ (SAR) ತಂತ್ರಜ್ಞಾನವು ಸಾಮಾನ್ಯ ಬೆಳಕಿನ ಬದಲಿಗೆ, ರಾಡಾರ್ ತರಂಗಗಳನ್ನು ಬಳಸಿಕೊಂಡು ಮೋಡಗಳ ಮೂಲಕ ಮತ್ತು ಕತ್ತಲೆಯಲ್ಲಿಯೂ ಸಹ ಭೂಮಿಯ ಸ್ಪಷ್ಟ ಮತ್ತು ವಿವರವಾದ ಚಿತ್ರಗಳನ್ನು ಕ್ಲಿಕ್ಕಿಸಲು ಉಪಗ್ರಹಗಳಿಗೆ ನೆರವಾಗುತ್ತದೆ. ಮೇ 1, 2024ರಂದು ಬೆಂಗಳೂರಿನಲ್ಲಿರುವ ಸ್ಟಾರ್ಟಪ್ ಗ್ಯಾಲಕ್ಸ್ ಐ, ಬಾಹ್ಯಾಕಾಶ ಇಲಾಖೆಯ ಭಾಗವಾಗಿರುವ ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ಅಧಿಕಾರ ಕೇಂದ್ರದೊಂದಿಗೆ (IN-SPAce) ಒಪ್ಪಂದಕ್ಕೆ ಸಹಿ ಹಾಕಿತು. ಈ ಒಪ್ಪಂದವು ಗ್ಯಾಲಕ್ಸ್ ಐಗೆ ತಮ್ಮದೇ ಆದ SAR (ಸಿಂಥೆಟಿಕ್-ಅಪರ್ಚರ್ ರೇಡಾರ್) ಮತ್ತು MSI (ಮಲ್ಟಿ-ಸ್ಪೆಕ್ಟ್ರಲ್ ಇಮೇಜಿಂಗ್) ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಇಸ್ರೋ ಸೌಲಭ್ಯಗಳನ್ನು ಬಳಸಲು ಅನುಮತಿ ನೀಡುತ್ತದೆ.

"ಈ ಪಾಲುದಾರಿಕೆಯು ಗ್ಯಾಲಕ್ಸ್ ಐ ಮತ್ತು ಸಂಪೂರ್ಣ ಬಾಹ್ಯಾಕಾಶ ಪರಿಶೋಧನೆ ಕ್ಷೇತ್ರ ಎರಡಕ್ಕೂ ಒಂದು ಪ್ರಮುಖ ಮೈಲಿಗಲ್ಲು" ಎಂದು ಫೋರ್ಬ್ಸ್ ವರದಿ ಮಾಡಿದೆ. ಒಪ್ಪಂದ ಅಂತಿಮವಾದ ಬಳಿಕ ಗ್ಯಾಲಕ್ಸ್ ಐನ ಸಹ-ಸ್ಥಾಪಕ ಮತ್ತು ಸಿಇಒ ಸುಯಶ್ ಸಿಂಗ್ ಕೂಡ ತಮ್ಮ ಬ್ಲಾಗ್ ನಲ್ಲಿ ಈ ಕುರಿತು ವಿವರಾಗಿ ಬರೆದಿದ್ದಾರೆ. ಮಲ್ಟಿ-ಸ್ಪೆಕ್ಟ್ರಲ್ ಇಮೇಜಿಂಗ್ (MSI) ಎನ್ನುವುದು ಬೆಳಕಿನ ಅನೇಕ ತರಂಗಾಂತರಗಳಲ್ಲಿ ಭೂಮಿಯ ಚಿತ್ರಗಳನ್ನು ಸೆರೆಹಿಡಿಯುವ ತಂತ್ರಜ್ಞಾನವಾಗಿದೆ. ಇದು ಮಾನವನ ಕಣ್ಣುಗಳು ಗ್ರಹಿಸಲಾಗದ ಬೆಳಕನ್ನು ಕೂಡ ಅತ್ಯಂತ ಕರಾರುವಕ್ಕಾಗಿ ಗುರುತಿಸಬಲ್ಲದು. ಸಸ್ಯವರ್ಗ, ಖನಿಜಗಳು ಮತ್ತು ನೀರಿನಂತಹ ವಿವಿಧ ನೈಸರ್ಗಿಕ ವೈಶಿಷ್ಟ್ಯಗಳನ್ನು ಗುರುತಿಸಲು ಮತ್ತು ವಿಶ್ಲೇಷಿಸಲು ಇದು ಸಹಾಯ ಮಾಡುತ್ತದೆ.

"ಭವಿಷ್ಯದಲ್ಲಿ, ಹೊಸ ತಲೆಮಾರುಗಳು ಭಾರತದ ಬಾಹ್ಯಾಕಾಶ ಇತಿಹಾಸದಲ್ಲಿ ಈ ಅವಧಿಯನ್ನು ಹಿಂತಿರುಗಿ ನೋಡುತ್ತವೆ ಮತ್ತು ದೇಶದ ಖಾಸಗಿ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಯನ್ನು ಇಸ್ರೋ ಹೇಗೆ ಬೆಂಬಲಿಸಿದೆ ಎಂಬುದನ್ನು ಗುರುತಿಸುತ್ತದೆ. ಇದು ತನ್ನದೇ ಆದ ಪ್ರಭಾವಶಾಲಿ ಕಾರ್ಯಾಚರಣೆಗಳನ್ನು ಮೀರಿ ಇಸ್ರೋದ ಅತ್ಯಂತ ಮಹತ್ವದ ಹೆಜ್ಜೆಗುರುತಾಗಬಹದು.." ಎಂಬ ಸುಯಶ್ ಸಿಂಗ್ ಅವರ ಹೇಳಿಕೆ ಅರ್ಥಗರ್ಭಿತವಾಗಿದೆ.

ಭಾರತದಲ್ಲಿ ಇತ್ತೀಚಿಗೆ ಖಾಸಗಿ ಬಾಹ್ಯಾಕಾಶ-ತಂತ್ರಜ್ಞಾನ ಕಂಪನಿಗಳಿಗೆ ಅವಕಾಶದ ಬಾಗಿಲು ತೆರೆದಿದ್ದು, ಇಸ್ರೋದ ನೆರವಿನಿಂದ ಈ ಖಾಸಗಿ ಕಂಪನಿಗಳು ಬಾಹ್ಯಾಕಾಶ ಕ್ಷೇತ್ರದಲ್ಲಿ ಮುಂದಡಿ ಇಡುತ್ತಿವೆ. ಭೂಮಿಯ ವೀಕ್ಷಣಾ ಉಪಗ್ರಹಗಳಿಂದ ಉಪಗ್ರಹ ಉಡಾವಣಾ ವಾಹನಗಳು ಮತ್ತು ಬಾಹ್ಯಾಕಾಶ ಪ್ರೊಪಲ್ಷನ್ ಸಿಸ್ಟಮ್‌ಗಳವರೆಗೆ, ಈ ಖಾಸಗಿ ಕಂಪನಿಗಳು ತಮ್ಮ ಗಮನವನ್ನು ಕೇಂದ್ರೀಕರಿಸಿವೆ.

ಈ ಸ್ಟಾರ್ಟ್‌ಅಪ್‌ಗಳಲ್ಲಿ, ಸ್ಕೈರೂಟ್ ಏರೋಸ್ಪೇಸ್ ತನ್ನ ಮೊದಲ ತಂತ್ರಜ್ಞಾನ ಪ್ರದರ್ಶಕ ರಾಕೆಟ್ ಅನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಅಗ್ನಿಕುಲ್ ಕಾಸ್ಮೊಸ್ ತನ್ನ ಮೊದಲ ರಾಕೆಟ್ ಅನ್ನು ಶೀಘ್ರದಲ್ಲೇ ಪರೀಕ್ಷಿಸಲು ಸಜ್ಜಾಗಿದೆ. ಅದೇ ರೀತಿ ಬೆಲ್ಲಟ್ರಿಕ್ಸ್ ಏರೋಸ್ಪೇಸ್ ತನ್ನ ಬಾಹ್ಯಾಕಾಶ ಪ್ರೊಪಲ್ಷನ್ ಸಿಸ್ಟಮ್‌ಗಳಿಗಾಗಿ, ಬೆಂಗಳೂರಿನಲ್ಲಿ ಅತ್ಯಾಧುನಿಕ ಕಾರ್ಖಾನೆಯನ್ನು ನಿರ್ಮಿಸಲು ಯೋಜನೆ ಸಿದ್ಧಪಡಿಸಿದೆ. ಈ ಕಂಪನಿ ಈಗಾಗಲೇ ತಮ್ಮ ಮೊದಲ ಉತ್ಪನ್ನದ ಯಶಸ್ವಿ ಪ್ರಯೋಗ್ ಕೂಡ ನಡೆಸಿದೆ.

2023ರಲ್ಲಿ ಗ್ಯಾಲಕ್ಸ್ ಐ SAR ತಂತ್ರಜ್ಞಾನದೊಂದಿಗೆ ಭಾರತದ ಮೊದಲ ಸ್ವದೇಶಿ ಡ್ರೋನ್ ಅನ್ನು ನಿರ್ಮಿಸಿತು. ಇದೀಗ ಭೂ ವೀಕ್ಷಣಾ ಉಪಗ್ರಹಗಳ ಖಾಸಗಿ ನೆಟ್ವರ್ಕ್ ನಲ್ಲಿ ಈ ಕಂಪನಿ ತನ್ನನ್ನು ತೊಡಗಿಸಿಕೊಂಡಿದೆ. ಮುಂದಿನ ವರ್ಷದೊಳಗೆ ದೃಷ್ಟಿ ಮಿಷನ್ ಎಂಬ ತನ್ನ ಮೊದಲ ಉಪಗ್ರಹವನ್ನು ಉಡಾವಣೆ ಮಾಡಲು ಗ್ಯಾಲಕ್ಸ್ ಐ ಸಿದ್ಧವಾಗಿದೆ. ಗ್ಯಾಲಕ್ಸ್ ಐ ಪ್ರಕಾರ, ಈ ಉಪಗ್ರಹವು ಭಾರತದ ಮೊದಲ ಮತ್ತು ವಿಶ್ವದ ಅತಿ ಹೆಚ್ಚು ರೆಸಲ್ಯೂಶನ್ ಮಲ್ಟಿ-ಸೆನ್ಸರ್ ಇಮೇಜಿಂಗ್ ಉಪಗ್ರಹವಾಗಿರಲಿದೆ.

ಅತ್ಯುನ್ನತ ರೆಸಲ್ಯೂಶನ್ ಬಹು-ಸಂವೇದಕ ಇಮೇಜಿಂಗ್ ಉಪಗ್ರಹವು, ಬಹು ಸಂವೇದಕಗಳನ್ನು ಬಳಸಿಕೊಂಡು ಅತ್ಯಂತ ವಿವರವಾದ ಚಿತ್ರಗಳನ್ನು ಸೆರೆಹಿಡಿಯಬಹುದು, ಮ್ಯಾಪಿಂಗ್, ಮೇಲ್ವಿಚಾರಣೆ ಮತ್ತು ವಿಶ್ಲೇಷಣೆಯಂತಹ ವಿವಿಧ ಅಪ್ಲಿಕೇಶನ್‌ಗಳಿಗೆ ಸ್ಪಷ್ಟ ಮತ್ತು ನಿಖರವಾದ ಡೇಟಾವನ್ನು ಒದಗಿಸುತ್ತದೆ.

ಕಳೆದ 15 ವರ್ಷಗಳಲ್ಲಿ ಇಸ್ರೋ ಅನೇಕ ಪ್ರಭಾವಶಾಲಿ ಮೈಲಿಗಲ್ಲುಗಳನ್ನು ಸಾಧಿಸಿದೆ. ಚಂದ್ರಯಾನ-1, GSAT-4, ಮಂಗಳಯಾನ (ಮಂಗಳ ಕಕ್ಷೆ), GSAT-9, GSAT-19, GSAT-29, ಚಂದ್ರಯಾನ-2, PSLV-C51/RISAT-1A, ಮತ್ತು ಚಂದ್ರಯಾನ-3 ಯೋಜನೆಯ ಗಮನಾರ್ಹ ಯಶಸ್ಸು ಇಸ್ರೋದ ಮುಡಿಗೇರಿದೆ. ಚಂದ್ರಯಾನ-1 ಚಂದ್ರನ ನೆಲ ತಲುಪಿದ ಭಾರತದ ಮೊದಲ ಮಿಷನ್ ಆಗಿತ್ತು, ಅಕ್ಟೋಬರ್ 2008ರಲ್ಲಿ ಇದು ಉಡಾವಣೆ ಕಂಡಿತ್ತು. 2009ರ ಹೊತ್ತಿಗೆ, ಇದು ಚಂದ್ರನ ಮೇಲ್ಮೈಯಲ್ಲಿ ನೀರಿನ ಅಂಶ ಕಂಡುಹಿಡಿಯುವುದೂ ಸೇರಿದಂತೆ ಹಲವಾರು ಪ್ರಮುಖ ಆವಿಷ್ಕಾರಗಳನ್ನು ಮಾಡಿತು.

ಮುಂದೆ ಜುಲೈ 2019ರಲ್ಲಿ ಉಡಾವಣೆಯಾದ ಚಂದ್ರಯಾನ-2, ಚಂದ್ರನ ದಕ್ಷಿಣ ಧ್ರುವದಲ್ಲಿ ನೀರಿನ ಅಂಶವನ್ನು ಸಂಶೋಧಿಸುವ ಗುರಿಯನ್ನು ನಿಭಾಯಿಸಿತು. ಇದರ ವಿಕ್ರಮ್ ಲ್ಯಾಂಡರ್ ಅಂತಿಮ ಸಮಯದಲ್ಲಿ ಸಂವಹನವನ್ನು ಕಳೆದುಕೊಂಡಿದ್ದರೂ, ಚಂದ್ರಯಾನ-2ನ ಆರ್ಬಿಟರ್ ಚಂದ್ರನ ಅಧ್ಯಯನವನ್ನು ಕಕ್ಷೆಯಿಂದಲೇ ಮುಂದುವರೆಸಿದೆ. ಚಂದ್ರಯಾನ-3 ಆಗಸ್ಟ್ 2023ರಲ್ಲಿ ಚಂದ್ರನ ಮೇಲೆ ಇಳಿಯುವ ಮೂಲಕ ಹಿಂದಿನ ಹಿನ್ನಡೆಯನ್ನು ಯಶಸ್ವಿಯಾಗಿ ನಿವಾರಿಸಿತು. ಇದು ಪ್ರಗ್ಯಾನ್ ಎಂಬ ರೋವರ್ ನ ದೋಷರಹಿತ ಕಾರ್ಯಾಚರಣೆಗೂ ಸಾಕ್ಷಿಯಾಯಿತು.

2018ರಲ್ಲಿ ಘೋಷಿಸಲಾದ ಗಗನಯಾನ್ ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಮಿಷನ್ ಆಗಿದೆ. 2025ರಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಬರಲಿರುವುವುದು ಬಹುತೇಕ ಖಚಿತವಾಗಿದೆ. ಭಾರತೀಯ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮತ್ತು ಅವರನ್ನು ಸುರಕ್ಷಿತವಾಗಿ ಮರಳಿ ಭೂಮಿಗೆ ತರುವ ಭಾರತದ ಸಾಮರ್ಥ್ಯವನ್ನು ಇಡೀ ಜಗತ್ತು ಕಣ್ತುಂಬಿಕೊಳ್ಳಲಿದೆ. ಈ ಕಾರ್ಯಾಚರಣೆಗೆ ಭಾರತೀಯ ವಾಯುಪಡೆಯ ನಾಲ್ಕು ಪೈಲಟ್‌ಗಳಿಗೆ ತರಬೇತಿ ನೀಡಲಾಗುತ್ತಿದೆ. ಈ ಪೈಕಿ ಮೂವರು ಗಗನಯಾತ್ರಿಗಳನ್ನು ಭೂಮಿಯ 400 ಕಿಮೀ ಕಕ್ಷೆಗೆ ಸೇರಿಸಿ, ಮೂರು ದಿನಗಳ ನಂತರ ಅವರನ್ನು ಯಶಸ್ವಿಯಾಗಿ ಭೂಮಿಗೆ ಮರಳಿ ಕರೆತರುವ ಯೋಜನೆ ಇದಾಗಿದೆ.

ಫೆಬ್ರವರಿ 2017ರಲ್ಲಿ ಇಸ್ರೋ ಪಿಎಸ್‌ಎಲ್‌ವಿ-ಸಿ 37 ರಾಕೆಟ್‌ನೊಂದಿಗೆ ಒಂದೇ ಕಾರ್ಯಾಚರಣೆಯಲ್ಲಿ 104 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ವಿಶ್ವದಾಖಲೆ ನಿರ್ಮಿಸಿತು. ಅಂದಿನಿಂದ ಇಸ್ರೋ ತನ್ನ ಉಡಾವಣಾ ಸೇವೆಗಳನ್ನು ವಿಶ್ವದಾದ್ಯಂತ ಅನೇಕ ಗ್ರಾಹಕ ರಾಷ್ಟ್ರಗಳಿಗೆ ಒದಗಿಸಿದೆ.

ಮಾರ್ಚ್ 2023ರಲ್ಲಿ ಭಾರತದ ಭಾರ್ತಿ ಎಂಟರ್‌ಪ್ರೈಸಸ್ ಬೆಂಬಲಿತ ಯುಕೆ ಉಪಗ್ರಹ ಸಮೂಹ ಸಂಸ್ಥೆಯಾದ ಒನ್‌ವೆಬ್‌ಗಾಗಿ 36 ಉಪಗ್ರಹಗಳನ್ನು ಉಡಾವಣೆ ಮಾಡಿದ್ದು, ಇಸ್ರೋದ ಇತ್ತೀಚಿನ ಗಮನಾರ್ಹ ಸಾಧನೆಯಾಗಿದೆ. ಇದು ಒನ್‌ವೆಬ್‌ಗಾಗಿ ಭಾರತದಿಂದ ಕಾರ್ಯಾಚರಣೆ ಮಾಡಿದ ಎರಡನೇ ಯಶಸ್ವಿ ವಾಣಿಜ್ಯ ಉಡಾವಣೆಯಾಗಿದೆ. ಉಡಾವಣಾ ಒಪ್ಪಂದವನ್ನು ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (NSIL) ಮೂಲಕ ಮಾಡಲಾಗಿದ್ದು, ಜಾಗತಿಕ ವಾಣಿಜ್ಯ ಬಾಹ್ಯಾಕಾಶ ಕಾರ್ಯಾಚರಣೆಗಳಲ್ಲಿ ಇಸ್ರೋದ ಸಾಮರ್ಥ್ಯಗಳು ಭಾರತದ ಬೆಳವಣಿಗೆಯನ್ನು ಹೇಗೆ ಬೆಂಬಲಿಸುತ್ತಿವೆ ಎಂಬುದರ ಮೇಲೆ ಬೆಳಕು ಚೆಲ್ಲುತ್ತದೆ.

"ಒನ್‌ವೆಬ್‌ಗಾಗಿ ಸತತ ಎರಡನೇ ವಾಣಿಜ್ಯ ಉಡಾವಣೆಯನ್ನು ನಾವು ಯಶಸ್ವಿಯಾಗಿ ಪೂರ್ಣಗೊಳಿಸಿದ ಕಾರಣ, ಈ ಯಶಸ್ವಿ ಕಾರ್ಯಾಚರಣೆ ಇಸ್ರೋ ಪಾಲಿಗೆ ಒಂದು ಪ್ರಮುಖ ಮೈಲಿಗಲ್ಲು.." ಎಂದು ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಮತ್ತು ಇಸ್ರೋ ಅಧ್ಯಕ್ಷ ಸೋಮನಾಥ್ ಎಸ್ ಹೇಳಿದ್ದಾರೆ. "NSIL ಮೂಲಕ LVM3 ರಾಕೆಟ್‌ನ ಈ ಉಡಾವಣೆಯೊಂದಿಗೆ, "ಇಸ್ರೋ ಭವಿಷ್ಯದಲ್ಲಿ LEO ಮತ್ತು GEO ಮಿಷನ್‌ಗಳಿಗಾಗಿ ಇನ್ನೂ ಅನೇಕ ಉಡಾವಣೆಗಳನ್ನು ನಿರ್ವಹಿಸುವ ವಿಶ್ವಾಸ ಹೊಂದಿದೆ.." ಎಂದು ಸೋಮನಾಥ್ ಎಸ್ ಹೇಳಿದ್ದಾರೆ.

NSIL, ಇಸ್ರೋದ ವಾಣಿಜ್ಯ ವಿಭಾಗವಾಗಿದ್ದು, ಬಾಹ್ಯಾಕಾಶ ಇಲಾಖೆಯ ಅಡಿಯಲ್ಲಿ ಸರ್ಕಾರಿ ಸ್ವಾಮ್ಯದ ಕಂಪನಿಯಾಗಿ ಮಾರ್ಚ್ 2019ರಿಂದ ಕಾರ್ಯನಿರ್ವಹಿಸುತ್ತಿದೆ. ಜೂನ್ 2020 ರಲ್ಲಿ IN-SPAce ಅನ್ನು ರಚಿಸುವುದರ ಜೊತೆಗೆ, ಭಾರತದಲ್ಲಿ ಖಾಸಗಿ ವಲಯಕ್ಕೆ ಇಸ್ರೋ ತನ್ನ ಬಾಗಿಲನ್ನು ತೆರೆದಿದೆ. ಇದು ಖಾಸಗಿ ಕಂಪನಿಗಳಿಗೆ ಇಸ್ರೋ ಜೊತೆಗಿನ ಸಹಯೋಗವನ್ನು ಹೆಚ್ಚಿಸಲು ನೆರವಾಗುತ್ತದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024