Telangana Election: ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣವಾದ ಮತಗಳಿಕೆ ಅಂತರ ಶೇಕಡ 2
ತೆಲಂಗಾಣದಲ್ಲಿ ಯಾವುದೇ ಪಕ್ಷ ಅಧಿಕಾರ ಹಿಡಿಯಬೇಕಾದರೆ ಶೇಕಡ 40 ಮತ ಗಳಿಸಬೇಕು ಎಂಬ ಲೆಕ್ಕಾಚಾರ ಇತ್ತು. ವಿಧಾನ ಸಭೆ ಚುನಾವಣೆ ಮುಗಿದು ಫಲಿತಾಂಶ ಪ್ರಕಟವಾಗಿದೆ. ಗೆದ್ದ ಕಾಂಗ್ರೆಸ್ ಪಕ್ಷದ ಮತಗಳಿಕೆ ಶೇಕಡ 39.40 ಇದೆ. ವಿಶೇಷ ಎಂದರೆ ಗೆಲುವಿನ ಅಂತರದ ಮತಗಳಿಕೆ ಪ್ರಮಾಣ ಶೇಕಡ 2.
ತೆಲಂಗಾಣ ಚುನಾವಣೆಯ ಮತದಾನ ಮುಗಿದು ಫಲಿತಾಂಶವೂ ಪ್ರಕಟವಾಗಿದ್ದು, ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಿದೆ. ಶೇ.40 ಮತಗಳಿಸುವ ಪಕ್ಷಕ್ಕೆ ತೆಲಂಗಾಣದಲ್ಲಿ ಅಧಿಕಾರ ಸಿಗಲಿದೆ ಎಂಬ ಲೆಕ್ಕಾಚಾರ ಈ ಹಿಂದೆಯೇ ಪ್ರಕಟವಾಗಿತ್ತು. ವಿಶೇಷ ಎಂದರೆ ಭಾರತ ರಾಷ್ಟ್ರ ಸಮಿತಿಗಿಂತ ಶೇಕಡ 2 ರಷ್ಟು ಹೆಚ್ಚುವರಿ ಮತ ಗಳಿಕೆಯೊಂದಿಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೇರಿದ್ದು.
ಚುನಾವಣಾ ಆಯೋಗದ ದತ್ತಾಂಶ ಪ್ರಕಾರ, ತೆಲಂಗಾಣದ 119 ಸ್ಥಾನಗಳ ಪೈಕಿ ಕಾಂಗ್ರೆಸ್ ಪಕ್ಷ 64 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. ಶೇ. 39.40 ಮತ ಗಳಿಸಿದೆ. ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) 39 ಸ್ಥಾನ ಗೆದ್ದುಕೊಂಡಿದೆ. ಮತ ಗಳಿಕೆ ಪ್ರಮಾಣ ಶೇ. 37.35. ಅಂದರೆ ಬಿಆರ್‌ಎಸ್ ಮತ ಗಳಿಕೆಗೂ ಕಾಂಗ್ರೆಸ್ ಮತ ಗಳಿಕೆಗೂ ನಡುವಿನ ಅಂತರ ಶೇ. 2.05.
ಬಿಆರ್‌ಎಸ್ ಮತ ಗಳಿಕೆ ಪ್ರಮಾಣದಲ್ಲಿ ಭಾರಿ ಕುಸಿತ
ಕೆ.ಚಂದ್ರಶೇಖರ ರಾವ್ ನೇತೃತ್ವದ ಬಿಆರ್‌ಎಸ್ ಮತ ಗಳಿಕೆ ಪ್ರಮಾಣದಲ್ಲಿ ಭಾರಿ ಕುಸಿತ ಕಂಡಿದೆ. 2018ರ ವಿಧಾನ ಸಭೆ ಚುನಾವಣೆಯಲ್ಲಿ ಶೇಕಡ 47 ಮತ ಗಳಿಸಿದ್ದ ಬಿಆರ್‌ಎಸ್ ಮತ ಗಳಿಕೆ ಈ ಬಾರಿ ಶೇಕಡ 37.35. ಅಂದರೆ ಮತ ಗಳಿಕೆ ಪ್ರಮಾಣದಲ್ಲಿ ಶೇ. 10 ರಷ್ಟು ಇಳಿಕೆ.
ಇದೇ ವೇಳೆ ಕಾಂಗ್ರೆಸ್ ಪಕ್ಷಕ್ಕೆ ಮತ ಗಳಿಕೆ ಪ್ರಮಾಣದಲ್ಲಿ ಶೇ.11ರಷ್ಟು ಹೆಚ್ಚಳ ದಾಖಲಾಗಿದೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಶೇ. 28.4 ಮತ ಗಳಿಸಿತ್ತು. ಆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ 19 ಸ್ಥಾನಗಳು ಲಭಿಸಿದ್ದವು. ಬಿಆರ್‌ಎಸ್ 88 ಸ್ಥಾನಗಳಲ್ಲಿ ಗೆಲುವು ದಾಖಲಿಸಿತ್ತು.
ಬಿಜೆಪಿ ತನ್ನ ಮತ ಗಳಿಕೆ ಪ್ರಮಾಣವನ್ನು ದುಪ್ಪಟ್ಟು ಮಾಡಿಕೊಂಡಿದೆ. ಹಿಂದಿನ ಚುನಾವಣೆಯಲ್ಲಿ ಶೇ. 7 ಮತ ಗಳಿಸಿ ಒಂದು ಸ್ಥಾನ ಗೆದ್ದುಕೊಂಡಿದ್ದ ಬಿಜೆಪಿ, ಈ ಬಾರಿ ಶೇ.15 ಮತಗಳಿಕೆಯೊಂದಿಗೆ 8 ಸ್ಥಾನಗಳನ್ನು ಗೆದ್ದುಕೊಂಡಿದೆ.
ತೆಲಂಗಾಣ ರಾಜ್ಯಪಾಲರನ್ನು ಭೇಟಿ ಮಾಡಿದ ಕಾಂಗ್ರೆಸ್ ನಿಯೋಗ
ತೆಲಂಗಾಣದಲ್ಲಿ ಸರ್ಕಾರ ರಚನೆ ಮಾಡುವುದಕ್ಕಾಗಿ ರಾಜ್ಯಪಾಲರಾದ ತಮಿಳ್‌ಸಾಯಿ ಸೌಂದರರಾಜನ್ ಅವರನ್ನು ಕಾಂಗ್ರೆಸ್ ನಿಯೋಗ ಭೇಟಿ ಮಾಡಿತ್ತು. ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅನುಮುಲ ರೇವಂತ ರೆಡ್ಡಿ ನಿಯೋಗದ ನೇತೃತ್ವವಹಿಸಿದ್ದರು.
ಕೋಡಂಗಲ್ ವಿಧಾನ ಸಭಾ ಕ್ಷೇತ್ರದಲ್ಲಿ ಸಮೀಪದ ಪ್ರತಿಸ್ಪರ್ಧಿ ಬಿಆರ್‌ಎಸ್‌ನ ಪಟ್ನಾಮ್ ನರೇಂದರ್ ರೆಡ್ಡಿ ಅವರನ್ನು 32,000ಕ್ಕೂ ಹೆಚ್ಚುಮತಗಳಿಂದ ಸೋಲಿಸಿದ್ದರು. ಆದಾಗ್ಯೂ, ಕಾಮರೆಡ್ಡಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಕೆಸಿಆರ್ ವಿರುದ್ಧ ಸ್ಪರ್ಧಿಸಿದ್ದ ಅವರು ಮೂರನೇ ಸ್ಥಾನಕ್ಕೆ ಕುಸಿದರು. ಈ ಕ್ಷೇತ್ರದಲ್ಲಿ ಬಿಜೆಪಿಯ ಕೆವಿಆರ್ ರೆಡ್ಡಿ ವಿಜಯಿಯಾದರು.
ತೆಲಂಗಾಣ ರಾಜ್ಯ ರಚನೆಯಾದ ಅಂದಿನಿಂದ ಅಂದರೆ 2014ರಿಂದ ಭಾರತ ರಾಷ್ಟ್ರ ಸಮಿತಿ ಆಡಳಿತ ನಡೆಸಿದೆ. ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಪಕ್ಷ ಹಳೇಹೈದರಾಬಾದ್ ಭಾಗದಲ್ಲಿ ತನ್ನ ಸ್ಥಾನಗಳನ್ನು ಮತ್ತು ಮತ ಗಳಿಕೆ ಪ್ರಮಾಣವನ್ನು ದಶಕಗಳಿಂದ ಹಾಗೆಯೇ ಕಾಪಾಡಿಕೊಂಡುಬಂದಿದೆ. ವಿವರ ಓದಿಗೆ - ತೆಲಂಗಾಣದಲ್ಲಿ ಎಐಎಂಐಎಂ ಭದ್ರಕೋಟೆ 7, ಬಿಜೆಪಿಗೆ 8 ಸ್ಥಾನದಲ್ಲಿ ಗೆಲುವು, ಮತಗಳಿಕೆಯಲ್ಲೂ ಗಣನೀಯ ಸಾಧನೆ
ಭಾರತೀಯ ಕ್ರಿಕೆಟ್ ತಂಡದ ಮಾಜಿ ಕಪ್ತಾನ ಮೊಹಮ್ಮದ್ ಅಜರುದ್ದೀನ್ ಹೈದರಾಬಾದ್‌ನ ಜುಬಲೀ ಹಿಲ್ಸ್‌ನಲ್ಲಿ ಸ್ಪರ್ಧಿಸಿ ಸೋಲನುಭವಿಸಿದ್ದಾರೆ. ಆ ಕ್ಷೇತ್ರದ ಹಾಲಿ ಶಾಸಕ ಬಿಆರ್‌ಎಸ್‌ನ ಮಗಂಟಿ ಗೋಪಿನಾಥ್ 16,337 ಮತಗಳ ಅಂತರದ ಗೆಲುವು ದಾಖಲಿಸಿದ್ದಾರೆ. ಗೋಪಿನಾಥ್ 80,549 ಮತ ಗಳಿಸಿದರೆ, ಅಜರುದ್ದೀನ್ 64,212 ಮತಗಳಿಸಿದ್ದರು.
ತೆಲಂಗಾಣ ವಿಧಾನಸಭೆ ಚುನಾವಣೆ ನವೆಂಬರ್ 30ರಂದು ಮತದಾನ ನಡೆದರೆ, ಡಿಸೆಂಬರ್ 3ರಂದು ಫಲಿತಾಂಶ ಪ್ರಕಟವಾಗಿತ್ತು.
ವಿಭಾಗ