Telangana Elections: ತೆಲಂಗಾಣದಲ್ಲಿ ಎಐಎಂಐಎಂ ಭದ್ರಕೋಟೆ 7, ಬಿಜೆಪಿಗೆ 8 ಸ್ಥಾನದಲ್ಲಿ ಗೆಲುವು, ಮತಗಳಿಕೆಯಲ್ಲೂ ಗಣನೀಯ ಸಾಧನೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Telangana Elections: ತೆಲಂಗಾಣದಲ್ಲಿ ಎಐಎಂಐಎಂ ಭದ್ರಕೋಟೆ 7, ಬಿಜೆಪಿಗೆ 8 ಸ್ಥಾನದಲ್ಲಿ ಗೆಲುವು, ಮತಗಳಿಕೆಯಲ್ಲೂ ಗಣನೀಯ ಸಾಧನೆ

Telangana Elections: ತೆಲಂಗಾಣದಲ್ಲಿ ಎಐಎಂಐಎಂ ಭದ್ರಕೋಟೆ 7, ಬಿಜೆಪಿಗೆ 8 ಸ್ಥಾನದಲ್ಲಿ ಗೆಲುವು, ಮತಗಳಿಕೆಯಲ್ಲೂ ಗಣನೀಯ ಸಾಧನೆ

ತೆಲಂಗಾಣ ವಿಧಾನ ಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಎಐಎಂಐಎಂ ಮತಗಳಿಕೆ ಪ್ರಮಾಣ ಇಳಿಕೆಯಾಗಿದೆ. ಆದಾಗ್ಯೂ ತನ್ನ ಭದ್ರಕೋಟೆಯಂತಿರುವ 7 ಕ್ಷೇತ್ರಗಳನ್ನು ಉಳಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಕ್ಷೇತ್ರಗಳ ಪೈಕಿ 3ರಲ್ಲಿ ಬಿಜೆಪಿ ಎರಡನೇ ಸ್ಥಾನದಲ್ಲಿದೆ. ಈ ನಡುವೆ, ಬಿಜೆಪಿ 8 ಸ್ಥಾನ ಗೆದ್ದುಕೊಂಡು ಉತ್ತಮ ಸಾಧನೆ ತೋರಿದೆ.

ಎಐಎಂಐಎಂ ಸಾಧನೆ ಮೀರಿಸಿದ ಬಿಜೆಪಿ ಸಾಧನೆ. 8 ಸ್ಥಾನಗಳಲ್ಲಿ ಗೆದ್ದ ಬಿಜೆಪಿ, 7 ಸ್ಥಾನ ಉಳಿಸಿಕೊಂಡ ಎಐಎಂಐಎಂ
ಎಐಎಂಐಎಂ ಸಾಧನೆ ಮೀರಿಸಿದ ಬಿಜೆಪಿ ಸಾಧನೆ. 8 ಸ್ಥಾನಗಳಲ್ಲಿ ಗೆದ್ದ ಬಿಜೆಪಿ, 7 ಸ್ಥಾನ ಉಳಿಸಿಕೊಂಡ ಎಐಎಂಐಎಂ

ಹೈದರಾಬಾದ್‌: ತೆಲಂಗಾಣ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಈ ಸಲ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಾರ್ಟಿಗಿಂತ ಉತ್ತಮ ಸಾಧನೆ ಮಾಡಿದೆ.

ಬಿಜೆಪಿ 8 ಸ್ಥಾನಗಳಲ್ಲಿ ಗೆಲುವು ದಾಖಲಿಸಿದ್ದು, ಎಐಎಂಐಎಂ 7 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. ಹೈದರಾಬಾದ್ ಭಾಗದಲ್ಲಿ ಪ್ರಾಬಲ್ಯ ಉಳಿಸಿಕೊಂಡಿರುವ ಎಐಎಂಐಎಂ ಕಳೆದ ಎರಡು ಚುನಾವಣೆಗಳಂತೆಯೇ ಈ ಬಾರಿ ಕೂಡ 7 ಸ್ಥಾನಗಳನ್ನು ಉಳಿಸಿಕೊಂಡಿದೆ.

ಹಳೇಹೈದರಾಬಾದ್ ಭಾಗದಲ್ಲಿ ಎಐಎಂಐಎಂ ಭದ್ರಕೋಟೆಗಳಂತಿರುವ 7 ಕ್ಷೇತ್ರಗಳು

ಹಳೇಹೈದರಾಬಾದ್ ಭಾಗದ 7 ಕ್ಷೇತ್ರಗಳಾದ ಮಲಕ್‌ಪೇಟ್‌, ನಾಂಪಳ್ಳಿ, ಕರ್ವಾನ್‌, ಚಾರ್‌ಮಿನಾರ್, ಚಂದ್ರಯಾಂಗುಟ್ಟ, ಯಾಕುಟ್‌ಪುರ, ಬಹದುರ್‌ಪುರಗಳಲ್ಲಿ 2009ರಿಂದ ನಿರಂತರವಾಗಿ ಎಐಎಂಐಎಂ ಗೆಲ್ಲುತ್ತ ಬಂದಿದೆ. 2009ಕ್ಕೂ ಮೊದಲು ಕರ್ವಾನ್‌, ಚಾರ್‌ಮಿನಾರ್, ಚಂದ್ರಯಾಂಗುಟ್ಟ, ಯಾಕುಟ್‌ಪುರಗಳು ಎಐಎಂಐಎಂ ಭದ್ರಕೋಟೆಗಳಾಗಿದ್ದವು. ಎಐಎಂಐಎಂ ಭದ್ರಕೋಟೆಯಂತಿರುವ ಏಳು ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಲ್ಲಿ ಬಿಜೆಪಿ 2ನೇ ಸ್ಥಾನದಲ್ಲಿದೆ.

ತೆಲಂಗಾಣ ವಿಧಾನ ಸಭಾ ಚುನಾವಣೆಯಲ್ಲಿ ಎಐಎಂಐಎಂ 7 ಕ್ಷೇತ್ರಗಳಲ್ಲಿ ತನ್ನ ಪಾರಮ್ಯ ಉಳಿಸಿದೆಯಾದರೂ, ಮತ ಗಳಿಕೆ ಪ್ರಮಾಣದಲ್ಲಿ ಏರಿಳಿತ ಇದೆ. 2014ರಲ್ಲಿ ಶೇಕಡ 3.7 ಇದ್ದದ್ದು, 2018ಕ್ಕೆ ಶೇಕಡ 2.7ಕ್ಕೆ ಕುಸಿದಿದೆ. 2023ರಲ್ಲಿ ಇದು ಶೇಕಡ 2.22ರ ಆಸುಪಾಸಿನಲ್ಲಿದೆ.

ಬಿಜೆಪಿ ಸ್ಥಾನ ಮತ್ತು ಮತಗಳಿಕೆಯಲ್ಲಿ ಏರಿಕೆ

ತೆಲಂಗಾಣ ರಾಜ್ಯ ರಚನೆಯಾದ ನಂತರ ನಡೆದ ಮೊಲದ ಚುನಾವಣೆಯಲ್ಲಿ ಬಿಜೆಪಿ ಶೇಕಡ 7 (5 ಸ್ಥಾನ) ಮತಗಳಿಸಿತ್ತು. ಆಗ ರಾಜ್ಯ ರಚನೆಯ ಕಾವು ಮತ್ತು ಹೋರಾಟಗಾರರ ಬಲ ಎಲ್ಲವೂ ಕೆಆರ್‌ಎಸ್‌ ಜತೆಗಿತ್ತು.

ಇನ್ನು 2018ರ ಚುನಾವಣೆಯಲ್ಲಿ ಬಿಜೆಪಿ ಮತಗಳಿಕೆ ಪ್ರಮಾಣ ಶೇಕಡ 7 ಉಳಿಯಿತಾದರೂ, ಸ್ಥಾನಗಳ ಸಂಖ್ಯೆ 5ರಿಂದ 1ಕ್ಕೆ ಇಳಿಯಿತು. ಈ ಸಲ 2023ರ ಚುನಾವಣೆಯಲ್ಲಿ ಬಿಜೆಪಿ ಸ್ಥಾನಗಳ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಮತಗಳಿಕೆ ಪ್ರಮಾಣ ಶೇಕಡ 13.90ಗೆ ಏರಿಕೆಯಾಗಿದೆ.

ಬಿಜೆಪಿ ವಿಚಾರಕ್ಕೆ ಬಂದರೆ, 2018ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಶೇಕಡ 6.98 ಇದ್ದ ಮತಗಳಿಕೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅಂದರೆ 2019ರಲ್ಲಿ ಶೇಕಡ 28.43 ಕ್ಕೆ ಭಾರಿ ಜಿಗಿತವನ್ನು ಕಂಡಿತ್ತು. ಈಗ 2023ರ ಫಲಿತಾಂಶ ಗಮನಿಸಿದರೆ 2024ರ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರ ನಡುವೆ ಆಶಾವಾದ ಇನ್ನಷ್ಟು ಹೆಚ್ಚಾಗಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.