Telangana Next CM: ತೆಲಂಗಾಣದ ಮುಂದಿನ ಮುಖ್ಯಮಂತ್ರಿ ಯಾರು?, ರೇವಂತ್ ರೆಡ್ಡಿ ಹೆಸರು ಮುಂಚೂಣಿಗೆ ಉಳಿದವರಾರು 5 ಅಂಶಗಳು
ತೆಲಂಗಾಣ ವಿಧಾನಸಭಾ ಚುನಾವಣೆಯ ಫಲಿತಾಂಶ ಬಹುತೇಕ ನಿಕ್ಕಿಯಾಗಿದ್ದು, ಕಾಂಗ್ರೆಸ್ ಪಕ್ಷ ಅಧಿಕಾರ ಚುಕ್ಕಾಣಿ ಹಿಡಿಯವುದು ಖಚಿತ. ಕಾಂಗ್ರೆಸ್ ಅಧ್ಯಕ್ಷ ಎ. ರೇವಂತ ರೆಡ್ಡಿ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಮುಂದಿನ ಸಿಎಂ ಯಾರು ಎಂಬ ಪ್ರಶ್ನೆಗೆ ಇವರ ಹೆಸರು ಮುಂಚೂಣಿಗೆ ಬಂದಿದೆ. ಆದರೆ ಸಿಎಂ ರೇಸ್‌ನಲ್ಲಿ ಇನ್ನೂ ಕೆಲವು ಪ್ರಮುಖ ನಾಯಕರ ಹೆಸರು ಸೇರಿಕೊಂಡಿದೆ.
ತೆಲಂಗಾಣದ ವಿಧಾನ ಸಭಾ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದು, ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಖಚಿತವಾಗಿದೆ ಸದ್ಯದ ಮಾಹಿತಿ ಪ್ರಕಾರ ಕಾಂಗ್ರೆಸ್ 63, ಬಿಆರ್‌ಎಸ್ 40, ಬಿಜೆಪಿ 9, ಎಐಎಂಐಎಂ 6, ಸಿಪಿಐ1ರಲ್ಲಿ ಮುನ್ನಡೆ ಸಾಧಿಸಿದೆ.
ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷದ ಅಭೂತಪೂರ್ವ ಗೆಲುವು ಈಗ ಹೊಸ ಪ್ರಶ್ನೆಯೊಂದನ್ನು ಮುಂದಕ್ಕಿಟ್ಟಿದೆ. ತೆಲಂಗಾಣದ ಮುಂದಿನ ಮುಖ್ಯಮಂತ್ರಿ ಯಾರು? ಇದು ಮಿಲಿಯನ್ ಡಾಲರ್ ಪ್ರಶ್ನೆ.
1 ತೆಲಂಗಾಣದ ಸಿಎಂ ರೇಸ್‌ನಲ್ಲಿ ರೇವಂತ ರೆಡ್ಡಿ ಸೇರಿ 3 ಪ್ರಮುಖ ನಾಯಕರು
ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಗಾದಿ ರೇಸ್‌ನಲ್ಲಿ ಕಾಂಗ್ರೆಸ್ ಅಧ್ಯಕ್ಷ ಎ ರೇವಂತ ರೆಡ್ಡಿ ಮುಂಚೂಣಿಯಲ್ಲಿದ್ದಾರೆ. ಈ ಸಲದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಫೇಸ್ ಆಗಿ ರೇವಂತ ರೆಡ್ಡಿ ಕಾಣಿಸಿಕೊಂಡಿರುವುದು ಇದಕ್ಕೆ ಕಾರಣ.
ಆದಾಗ್ಯೂ, ಮತಗಟ್ಟೆ ಸಮೀಕ್ಷೆ ಫಲಿತಾಂಶ ಪ್ರಕಟವಾದ ಬಳಿಕ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ್ದ ಅವರು, ನಮ್ಮೆಲ್ಲ ಶಾಸಕರು ಒಟ್ಟು ಸೇರಿ ಮುಂದಿನ ಮುಖ್ಯಮಂತ್ರಿಯನ್ನು ನಿರ್ಧರಿಸುತ್ತಾರೆ. ಪಕ್ಷದ ಹೈಕಮಾಂಡ್ ಹೇಳಿದ್ದನ್ನು ಅನುಸರಿಸುವುದಾಗಿಯೂ ಹೇಳಿದ್ದರು.
ಆದಾಗ್ಯೂ, ರೇವಂತ ರೆಡ್ಡಿ ಜತೆಗೆ ಇತರೆ ಇಬ್ಬರು ಹಿರಿಯ ನಾಯಕರ ಹೆಸರು ಸಿಎಂ ರೇಸ್‌ನ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.
2. ಎ. ರೇವಂತ ರೆಡ್ಡಿ
ತೆಲಂಗಾಣದಲ್ಲಿ 2018ರ ಸೋಲಿನ ಬಳಿಕ ಪಕ್ಷವನ್ನು ಅಧಿಕಾರಕ್ಕೆ ತರುವಂತಹ ಬಹುದೊಡ್ಡ ಹೊಣೆಗಾರಿಕೆ ಎ ರೇವಂತ ರೆಡ್ಡಿ ಹೆಗಲೇರಿತ್ತು. ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಉತ್ತಮ ಸಾಧನೆ ದಾಖಲಾಯಿತಾದರೂ, ಈ ಸಲದ ವಿಧಾನ ಸಭಾ ಚುನಾವಣೆ ಮಹತ್ವದ ಸವಲಾಗಿ ಎದುರಾಗಿತ್ತು.
ಈ ಸಲದ ಚುನಾವಣೆಯಲ್ಲಿ ಎ ರೇವಂತ ರೆಡ್ಡಿ ಅವರು ಕಾಮರೆಡ್ಡಿಯಲ್ಲಿ ಮುಖ್ಯಮಂತ್ರಿ ಕೆಸಿಆರ್ ವಿರುದ್ಧ ಸೆಣಸಿದರೆ, ಕೋಡಂಗಲ್ಲು ಎಂಬಲ್ಲಿಂದಲೂ ಕಣಕ್ಕೆ ಇಳಿದಿದ್ದರು. ಎರಡೂ ಕಡೆ ಅವರು ಮುನ್ನಡೆ ಸಾಧಿಸಿದ್ದಾರೆ.
ಆಸಕ್ತಿದಾಯಕ ವಿಚಾರ ಎಂದರೆ ಎ. ರೇವಂತ ರೆಡ್ಡಿ ಅವರು 2017ರಲ್ಲಿ ಟಿಡಿಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ನಾಲ್ಕೇ ವರ್ಷದಲ್ಲಿ ಅವರು ಪಕ್ಷದ ಉನ್ನತ ಹೊಣೆಗಾರಿಕೆ ವಹಿಸಿದ್ದರು. ಟಿಪಿಸಿಸಿ ಅಧ್ಯಕ್ಷ ಸ್ಥಾನದ ಹೊಣೆಗಾರಿಕೆಯನ್ನು ಪಕ್ಷದ ಹಿರಿಯ ನಾಯಕ ಉತ್ತಮ ಕುಮಾರ್ ರೆಡ್ಡಿ ಅವರಿಂದ ಪಡೆದಿದ್ದರು.
ರೇವಂತ್ ರೆಡ್ಡಿ ಅವರನ್ನು ಅಧ್ಯಕ್ಷರನ್ನಾಗಿಸಿದ್ದನ್ನು ಖಂಡಿಸಿ ದಾಸೋಜು ಸ್ರಯಾನ್, ಕೊಮಟಿ ರೆಡ್ಡಿ, ರಾಜಗೋಪಾಲ್ ರೆಡ್ಡಿ ಪಕ್ಷ ಬಿಟ್ಟಿದ್ದರು. ಈ ಪೈಕಿ ರಾಜಗೋಪಾಲ್ ರೆಡ್ಡಿ ವಾಪಸ್ ಬಂದಿದ್ದರು. ಆದಾಗ್ಯೂ ಈ ನಾಯಕರೆಲ್ಲ ಈಗಲೂ ರೇವಂತ್ ರೆಡ್ಡಿಯಿಂದ ಅಂತರ ಕಾಪಾಡಿಕೊಂಡಿದ್ದಾರೆ. ಪಕ್ಷದ ವರಿಷ್ಠರ ಒಲವು ರೇವಂತ್ ಕಡೆಗೆ ಇದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
3. ಮಲ್ಲು ಭಟ್ಟಿ ವಿಕ್ರಮಾರ್ಕ
ಇಂಡಿಯಾ ಟುಡೇ ಏಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್‌ನಲ್ಲಿ ಶೇಕಡ 22 ಮತದಾರರು ಮಲ್ಲು ಭಟ್ಟಿ ವಿಕ್ರಮಾರ್ಕ ಅವರು ಸಿಎಂ ಆಗಬೇಕು ಎಂದು ಬಯಸಿದ್ದರು. ಮಧಿರಾ ಕ್ಷೇತ್ರದಿಂದ ಸ್ಪರ್ಧಿಸಿರುವ ವಿಕ್ರಮಾರ್ಕ ಅವು ಭಾರಿ ಅಂತರದ ಗೆಲುವು ದಾಖಲಿಸುವ ಹಾದಿಯಲ್ಲಿದ್ಧಾರೆ.
ಭಾರತ್ ಜೋಡೋ ಯಾತ್ರೆಯನ್ನು ಮಲ್ಲು ಭಟ್ಟಿ ವಿಕ್ರಮಾರ್ಕ ಅವರು 36 ಕ್ಷೇತ್ರಗಳಲ್ಲಿ ಮುನ್ನಡೆಸಿದ್ದರು. ಈ ಪ್ರದೇಶಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಮುನ್ನಡೆ ಸಿಕ್ಕಿದೆ.
ಒಂದೊಮ್ಮೆ ಭಟ್ಟಿ ವಿಕ್ರಮಾರ್ಕ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಕ್ಕರೆ ತೆಲಂಗಾಣದ ಮೊದಲ ದಲಿತ ಮುಖ್ಯಮಂತ್ರಿ ಆಗಲಿದ್ದಾರೆ. ಇದೇನಾದರೂ ನಡೆದರೆ ಕೆಸಿಆರ್‌ಗೆ ಮತ್ತು ಬಿಆರ್‌ಎಸ್‌ಗೆ ದೊಡ್ಡ ಹೊಡೆತ ನೀಡಲಿದೆ. 2014ರಲ್ಲಿ ಮೊದಲ ದಲಿತ ಸಿಎಂ ಅನ್ನು ನೇಮಿಸುವುದಾಗಿ ಕೆಸಿಆರ್ ಭರವಸೆ ನೀಡಿದ್ದರು. ಆದರೆ ಅದನ್ನು ಈಡೇರಿಸಿರಲಿಲ್ಲ.
4 ಉತ್ತಮಕುಮಾರ್ ರೆಡ್ಡಿ
ನಲ್ಲಗೊಂಡದ ಸಂಸದ ಉತ್ತಮ ಕುಮಾರ್ ರೆಡ್ಡಿ ಅವರು ದಕ್ಷಿಣ ತೆಲಂಗಾಣದಲ್ಲಿ ಜನಪ್ರಿಯ ನಾಯಕರು. ಅವರು ಎ ರೇವಂತ ರೆಡ್ಡಿ ಅವರಿಗಿಂತ ಮೊದಲು ಟಿಪಿಸಿಸಿ ಅಧ್ಯಕ್ಷ (2015-2021)ರಾಗಿದ್ದರು.
ಭಾರತೀಯ ವಾಯುಪಡೆಯ ಪೈಲಟ್ ಆಗಿದ್ದ ಉತ್ತಮ ಕುಮಾರ್ ರೆಡ್ಡಿ, ಕೋಡದ್ ಕ್ಷೇತ್ರದಿಂದ 5 ಸಲ ಗೆದ್ದು ಶಾಸಕರಾಗಿದ್ದರು. 2009ರಿಂದ 2019ರ ತನಕ ಹುಝೂರ್‌ನಗರ್ ಕ್ಷೇತ್ರದ ಶಾಸಕರಾಗಿದ್ದರು. ಲೋಕಸಭೆ ಚುನಾವಣೆ ಗೆದ್ದ ಬಳಿಕ ಶಾಸಕ ಸ್ಥಾನ ತ್ಯಜಿಸಿದ್ದರು. ಬಳಿಕ ನಡೆದ ಉಪಚುನಾವಣೆಯಲ್ಲಿ ಅವರ ಪತ್ನಿ ಸ್ಪರ್ಧಿಸಿದ್ದಾರಾದರೂ ಬಿಆರ್‌ಎಸ್ ಎದುರು ಸೋತಿದ್ದರು.
5 ಸಿಎಂ ರೇಸ್‌ನಲ್ಲಿರುವ ಉಳಿದವರು ಯಾರು
ತೆಲಂಗಾಣ ಮುಖ್ಯಮಂತ್ರಿ ಹುದ್ದೆ ರೇಸ್‌ನಲ್ಲಿರುವ ಕಾಂಗ್ರೆಸ್‌ನ ಇತರ ನಾಯಕರ ಪಟ್ಟಿಯಲ್ಲಿ ಕೋಮಟಿರೆಡ್ಡಿ ಸಹೋದರರು - ಕೋಮಟಿರೆಡ್ಡಿ ವೆಂಕಟ್ ರೆಡ್ಡಿ ಮತ್ತು ಕೋಮಟಿರೆಡ್ಡಿ ರಾಜ್ ಗೋಪಾಲ್ ರೆಡ್ಡಿ ಸೇರಿಕೊಂಡಿದ್ದಾರೆ. ಅವರು ನಾಗೊಂಡ ಪ್ರದೇಶದಲ್ಲಿ ಪ್ರಮುಖರು.
ವಿಭಾಗ