ರಸ್ತೆ ಮೇಲೆ ಹಾಲಿನ ಹೊಳೆ: ಸೋರುತ್ತಿದ್ದ ಟ್ಯಾಂಕರ್‌ನಿಂದ ಹಾಲು ತುಂಬಿಸಿಕೊಳ್ಳಲು ಮುಗಿಬಿದ್ದ ಜನ, ಈ ಘಟನೆ ನಡೆದದ್ದು...
Viral Video: ತೆಲಂಗಾಣದ ನಲ್ಗೊಂಡ ಜಿಲ್ಲೆಯ ಮಿರ್ಯಾಲಗುಡ ಪಟ್ಟಣದಲ್ಲಿ ಹಾಲಿನ ಟ್ಯಾಂಕರ್ ಪಲ್ಟಿಯಾಗಿದೆ. ಈ ವೇಳೆ ರಸ್ತೆಗೆ ಚೆಲ್ಲಿ ವ್ಯರ್ಥವಾಗುತ್ತಿದ್ದ ಹಾಲನ್ನು ಸ್ಥಳೀಯರು ಬಕೆಟ್, ಬಾಟಲಿ ಹೀಗೆ ಪಾತ್ರೆಗಳಿಗೆ ತುಂಬಿ ಮನೆಗೆ ಕೊಂಡೊಯ್ದಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ದುಡ್ಡು ಕೊಟ್ಟು ತೆಗೆದುಕೊಳ್ಳಬೇಕಾದ ವಸ್ತು ಅಥವಾ ಆಹಾರಗಳು ಬಿಟ್ಟಿಯಾಗಿ ಸಿಕ್ಕಾಗ ಯಾರಾದರೂ ಬಿಡುತ್ತಾರಾ? ಇಲ್ಲ. ಅದರಲ್ಲೂ ಹೊಟ್ಟೆ ಸೇರಬೇಕಾದ ಆಹಾರ ಪದಾರ್ಥ ವ್ಯರ್ಥವಾಗುತ್ತಿದೆ ಎಂದಾಗ ಅದನ್ನು ನೋಡಿ ಸುಮ್ಮನಿರುವ ಜನರು ತೀರಾ ಕಡಿಮೆ. ತೆಲಂಗಾಣದ ನಲ್ಗೊಂಡದಲ್ಲಿ ಇದೇ ರೀತಿಯ ಘಟನೆ ನಡೆದಿದೆ. ಹಾಲಿನ ಮಿನಿ ಟ್ಯಾಂಕರ್ ಒಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಪಲ್ಟಿಯಾಗಿದ್ದೇ ತಡ. ರಸ್ತೆಗೆ ಹರಿದು ವ್ಯರ್ಥವಾಗಿ ಹೋಗುತ್ತಿದ್ದ ಹಾಲನ್ನು ಸ್ಥಳೀಯರು ಕೈಗೆ ಸಿಕ್ಕ ಪಾತ್ರೆಗಳಲ್ಲಿ ತುಂಬಿಸಿಕೊಂಡಿದ್ದಾರೆ.
ತೆಲಂಗಾಣದ ನಲ್ಗೊಂಡ ಜಿಲ್ಲೆಯ ಮಿರ್ಯಾಲಗುಡ ಪಟ್ಟಣದ ಸಮೀಪದ ನಂದಿಪಾಡು ಬೈಪಾಸ್ ರಸ್ತೆಯಲ್ಲಿ ಹಾಲು ತುಂಬಿದ್ದ ಮಿನಿ ಟ್ಯಾಂಕರ್ ಪಲ್ಟಿಯಾಗಿದೆ. ಸೆಪ್ಟೆಂಬರ್ 9ರ ಸೋಮವಾರ ಈ ಘಟನೆ ನಡೆದಿದೆ. ಟ್ಯಾಂಕರ್ ಪಲ್ಟಿಯಾಗಿ ಹಾಲು ರಸ್ತೆಗೆಲ್ಲಾ ಚೆಲ್ಲುತ್ತಿದೆ ಎಂದಾಗ ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿದ್ದಾರೆ. ಮಿನಿ ಟ್ಯಾಂಕರ್‌ನಿಂದ ಹಾಲು ರಸ್ತೆಗೆ ಸೋರಿಕೆಯಾಗುತ್ತಿದ್ದ ಭಾಗಕ್ಕೆ ಬಕೆಟ್, ಬಾಟಲಿಗಳನ್ನು ಹಿಡಿದು ಹಾಲನ್ನು ಮನೆಗೆ ಕೊಂಡೊಯ್ದಿದ್ದಾರೆ.
ಹಾಲು ರಸ್ತೆಗೆ ಚೆಲ್ಲಿ ರಸ್ತೆಯೆಲ್ಲಾ ಬಿಳಿ ಬಣ್ಣ ಬಳಿದಂತೆ ಕಾಣುತ್ತಿತ್ತು. ಸಾವಿರಾರು ಲೀಟರ್ ಹಾಲು ರಸ್ತೆಗೆ ಚೆಲ್ಲಿ ಅದಾಗಲೇ ವ್ಯರ್ಥವಾಗಿ ಚರಂಡಿ ಸೇರಿತ್ತು. ಹಾಗೆಯೇ ಬಿಟ್ಟಿದ್ದರೆ ಟ್ಯಾಂಕರ್‌ನಲ್ಲಿ ಮಿಕ್ಕಿದ್ದ ಹಾಲು ಕೂಡಾ ಚರಂಡಿ ಸೇರಬೇಕಿತ್ತು. ಹೀಗಾಗಿ ನಂದಿಪಾಡು ಭಾಗದ ನಿವಾಸಿಗಳೆಲ್ಲ ಬೇಗನೆ ಕೈಗೆ ಸಿಕ್ಕಿದ ಬಕೆಟ್, ಡಬ್ಬಗಳು, ಪ್ಲಾಸ್ಟಿಕ್ ಪಾತ್ರೆಗಳು ಮತ್ತು ಬಾಟಲಿಗಳನ್ನು ತಂದಿದ್ದಾರೆ. ಸಾಧ್ಯವಾದಷ್ಟೂ ಹಾಲನ್ನು ತಾವು ತಂದಿದ್ದ ಪಾತ್ರೆಗಳಲ್ಲಿ ತುಂಬಿಸಿ ಕೊಂಡೊಯ್ದಿದ್ದಾರೆ.
10 ಸಾವಿರ ಲೀಟರ್ ಹಾಲು
ಡೈರಿ ಫಾರಂಗೆ ಸೇರಿದ ಟ್ಯಾಂಕರ್ ಇದಾಗಿದ್ದು, ಬರೋಬ್ಬರಿ 10 ಸಾವಿರ ಲೀಟರ್ ಹಾಲನ್ನು ತುಂಬಿಕೊಂಡು ಮಿರ್ಯಾಲಗುಡ ಕಡೆಯಿಂದ ನಕ್ರೇಕಲ್ ಕಡೆಗೆ ಹೋಗುತ್ತಿತ್ತು. ನಂದಿಪಾಡು ಬಳಿ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ. ಘಟನೆಯಿಂದ ಬೈಪಾಸ್ ರಸ್ತೆಯಲ್ಲಿ ತಾತ್ಕಾಲಿಕ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಅಪಘಾತದಿಂದಾಗಿ ಟ್ಯಾಂಕ್‌ನ ವಾಲ್ವ್‌ಗೆ ಹಾನಿಯಾಗಿ ಹಾಲು ರಸ್ತೆಗೆ ಹರಿಯಲಾರಂಭಿಸಿತು. ಅದನ್ನು ಗಮನಿಸಿದ ನಿವಾಸಿಗಳು ಹಾಲು ಸಂಗ್ರಹಿಸಲು ತ್ವರಿತವಾಗಿ ಧಾವಿಸಿದ್ದಾರೆ.
ಮಿನಿ ಟ್ಯಾಂಕರ್‌ನ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಬಳಿಕ ಪೊಲೀಸರು ಸ್ಥಳಕ್ಕೆ ಧಾವಿಸಿ ಕ್ರೇನ್ ಮೂಲಕ ಟ್ಯಾಂಕರ್ ಅನ್ನು ಮೇಲಕ್ಕೆತ್ತಿದ್ದಾರೆ. ಘಟನೆಯಿಂದ ಸ್ಥಳೀಯರಿಗೆ ವಾರಕ್ಕೆ ಬೇಕಾದಷ್ಟು ಹಾಲು ಬಿಟ್ಟಿಯಾಗಿ ಸಿಕ್ಕಂತಾಗಿದೆ.