ಪ್ಯಾರಿಸ್ ಒಲಿಂಪಿಕ್ಸ್ ಜ್ಯೋತಿ ಹೊತ್ತು ತಂದ 19ನೇ ಶತಮಾನದ ಹಡಗು; ಜುಲೈ 26ರಂದು ಸೀನ್ ನದಿಯಲ್ಲಿ ಉದ್ಘಾಟನಾ ಸಮಾರಂಭ
Olympic flame : ಮಹೋನ್ನತ ಕ್ರೀಡಾಕೂಟದ ಪ್ಯಾರಿಸ್ ಒಲಿಂಪಿಕ್ಸ್-2024 ಉದ್ಘಾಟನಾ ಸಮಾರಂಭಕ್ಕೆ 79 ದಿನಗಳ ಮೊದಲು 'ಭಾರೀ ಭದ್ರತೆ'ಯ ನಡುವೆ ಒಲಿಂಪಿಕ್ ಜ್ಯೋತಿ ಫ್ರಾನ್ಸ್‌ನ ಮಾರ್ಸೆಲ್ಲೆ ತಲುಪಿದೆ.

ಜುಲೈ 26 ರಿಂದ ಶುರುವಾಗುವ ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟ (Paris Olympics), ಆಗಸ್ಟ್ 11ರ ಭಾನುವಾರ ಮುಕ್ತಾಯಗೊಳ್ಳಲಿದೆ. ಈ ಶ್ರೀಮಂತ ಕ್ರೀಡಾಕೂಟವನ್ನು ಯಶಸ್ವಿಯಾಗಿ ಆಯೋಜಿಸಲು ಇಡೀ ಪ್ಯಾರಿಸ್ ಭಾರಿ ಸಿದ್ಧತೆ ನಡೆಸುತ್ತಿದೆ. ಇದರ ಭಾಗವಾಗಿ ಈಗ ಒಲಿಂಪಿಕ್ ಜ್ಯೋತಿ ಮೇ 8ರ ಬುಧವಾರ ಬಂದರು ನಗರ ಮಾರ್ಸೆಲ್ಲೆಗೆ ಆಗಮಿಸಿದೆ. ಮಹೋನ್ನತ ಕ್ರೀಡಾಕೂಟದ ಉದ್ಘಾಟನಾ ಸಮಾರಂಭಕ್ಕೆ 79 ದಿನಗಳ ಮೊದಲು 'ಅಭೂತಪೂರ್ವ ಮಟ್ಟದ ಭದ್ರತೆ'ಯ ನಡುವೆ ಒಲಿಂಪಿಕ್ ಜ್ಯೋತಿ ಮಾರ್ಸೆಲ್ಲೆ ತಲುಪಿದೆ.
ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಹಂಚಿಕೊಂಡಿದೆ. 19ನೇ ಶತಮಾನದ ವಾಣಿಜ್ಯ ಹಡಗು ‘ಬೆಲೆಮ್’ನಲ್ಲಿ ಜ್ಯೋತಿಯನ್ನು ಸಾಗಿಸಲಾಯಿತು. ಫ್ರಾನ್ಸ್ ಮತ್ತು ಫ್ರೆಂಚ್ ನೇರ ಆಡಳಿತದ ದೇಶಗಳ ರಸ್ತೆಗಳಲ್ಲಿ ಬರೋಬ್ಬರಿ 12,000 ಕಿಲೋ ಮೀಟರ್ (7,500 ಮೈಲಿ) ದೂರ ಸಂಚರಿಸಲಿದೆ. ಇದರೊಂದಿಗೆ ಶತಮಾನದ ನಂತರ ಒಲಿಂಪಿಕ್ಸ್ ಪ್ಯಾರಿಸ್‌ಗೆ ಮರಳುತ್ತಿದೆ. ಕೊನೆಯದಾಗಿ 1924ರಲ್ಲಿ ಒಲಿಂಪಿಕ್ಸ್ಗೆ ಪ್ಯಾರಿಸ್ ಆತಿಥ್ಯ ವಹಿಸಿತ್ತು. ಚೊಚ್ಚಲ ಒಪಿಂಪಿಕ್ಸ್ಗೆ ಆತಿಥ್ಯ ವಹಿಸಿದ್ದು ಕೂಡ ಪ್ಯಾರಿಸ್ ದೇಶವೇ.
12 ದಿನಗಳ ಹಿಂದೆ ಗ್ರೀಸ್‌ನಲ್ಲಿ ಚಾಲನೆ ಪಡೆದ ವ್ಯಾಪಾರಿ ನೌಕೆ ಬೆಲೆಮ್, ಮೇ 8 ಬುಧವಾರ ಮಾರ್ಸೆಲ್ಲೆ ತಲುಪಿದೆ. ಬೆಲೆಮ್ ನೌಕೆ ಬಂದರು ಪ್ರವೇಶಿಸುವ ಅವಧಿಯಲ್ಲಿ ಇತರ 1000 ದೋಣಿಗಳು ಜೊತೆಯಾಗಲಿವೆ. ಅಂದಾಜು 150,000 ಜನರ ಮುಂದೆ 1,000 ಕ್ಕೂ ಹೆಚ್ಚು ದೋಣಿಗಳನ್ನು ಒಳಗೊಂಡ ಆರು ಗಂಟೆಗಳ ಮೆರವಣಿಗೆಯ ಮೂಲಕ ಜ್ಯೋತಿಯನ್ನು ದಡಕ್ಕೆ ತರಲಾಯಿತು. ಈ ವೇಳೆ 6000 ಮಂದಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಪ್ಯಾರಿಸ್ 2024ರ ಸಂಘಟನಾ ಸಮಿತಿಯ ಅಧ್ಯಕ್ಷ ಟೋನಿ ಎಸ್ಟಾಂಗ್ಯೂಟ್, ಫ್ರಾನ್ಸ್‌ನ ಅತ್ಯಂತ ಹಳೆಯ ನಗರ ಮತ್ತು ಗ್ರೀಕರು ಸ್ಥಾಪಿಸಿದ ದೋಣಿ ಮೆರವಣಿಗೆಯನ್ನು ಆಯೋಜಿಸಲು ಮಾರ್ಸೆಲ್ಲೆ ಉತ್ತಮವಾದ ಆಯ್ಕೆ ಎಂದು ಹೇಳಿದ್ದಾರೆ. ಗ್ರೀಸ್‌ನ ಪುರಾತನ ಒಲಿಂಪಿಯಾದಿಂದ ದಕ್ಷಿಣ ಫ್ರಾನ್ಸ್‌ನ ಮೆಡಿಟರೇನಿಯನ್ ಕರಾವಳಿ ನಗರಕ್ಕೆ ಮೂರು-ಮಾಸ್ಡ್ ಹಡಗು ಈ ಜ್ಯೋತಿಯನ್ನು ತಲುಪಿಸಿತು. ಅಲ್ಲಿ ಏಪ್ರಿಲ್ 11 ರಂದು ಜ್ವಾಲೆಯನ್ನು ಬೆಳಗಿಸಲಾಗಿತ್ತು.
ಸೀನ್ ನದಿಯಲ್ಲಿ ಉದ್ಘಾಟನಾ ಸಮಾರಂಭ
ಪ್ಯಾರಿಸ್ ಒಲಿಂಪಿಕ್ಸ್ ವರ್ಣರಂಜಿತ ಉದ್ಘಾಟನಾ ಸಮಾರಂಭ ಜುಲೈ 26ರ ಸಂಜೆ 7.30ಕ್ಕೆ ಸೀನ್ ನದಿಯಲ್ಲಿ ನೆರವೇರಲಿದೆ. ಪ್ಯಾರಾಲಿಂಪಿಕ್ಸ್ ಆಗಸ್ಟ್ 28 ರಿಂದ ಸೆಪ್ಟೆಂಬರ್ 8ರವರೆಗೆ ಜರುಗಲಿದೆ. ಮಹೋನ್ನತ ಕ್ರೀಡಾಕೂಟಕ್ಕೆ ಅಗತ್ಯ ಇರುವ ಎಲ್ಲಾ ಸಿದ್ಧತೆಗಳನ್ನು ಸಂಘಟಕರು ಮಾಡಿದ್ದಾರೆ. ಕ್ರೀಡಾಕೂಟಕ್ಕಾಗಿಯೇ ಸೀನ್ ನದಿಯನ್ನು ಸಾರ್ವಜನಿಕ ನಿಧಿಯಿಂದ ಹೂಡಿಕೆ ಮಾಡಿ ಸ್ನಾನಮಾಡಲು ಯೋಗ್ಯ ಎನಿಸುವ ರೀತಿಯಲ್ಲಿ ಸ್ವಚ್ಛ ಮಾಡಲಾಗಿದೆ.
ಬೋಟ್‌ಗಳಲ್ಲೇ ಕ್ರೀಡಾಪಟುಗಳ ಪರೇಡ್
ಒಲಿಂಪಿಕ್ಸ್ ಇತಿಹಾಸದಲ್ಲಿ ಮೊದಲ ಬಾರಿಗೆ ಕ್ರೀಡಾಂಗಣದ ಹೊರಗೆ ನಡೆಯುವ ಉದ್ಘಾಟನಾ ಸಮಾರಂಭವಾಗಿದೆ. 10,500 ಕ್ಕೂ ಹೆಚ್ಚು ಅಥ್ಲೀಟ್‌ಗಳು ಪ್ಯಾರಿಸ್‌ನಿಂದ 6 ಕಿಲೋಮೀಟರ್ವರೆಗೆ ಬೋಟ್‌ಗಳಲ್ಲೇ ಪರೇಡ್ ನಡೆಸಿ ಅದ್ಧೂರಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. 32 ಕ್ರೀಡೆಗಳು ಮತ್ತು 329 ಈವೆಂಟ್‌ಗಳನ್ನು ಯೋಜಿಸಲಾಗಿದೆ. ಕಳೆದ ಒಲಿಂಪಿಕ್ಸ್ 2020ರಲ್ಲಿ ಟೊಕಿಯೋದಲ್ಲಿ ನಡೆದಿತ್ತು. ಈ ಕ್ರೀಡಾಕೂಟದಲ್ಲಿ ಭಾರತ 7 ಪದಕ ಗೆದ್ದು ಗೆದ್ದಿತ್ತು.