ಕನ್ನಡ ಸುದ್ದಿ  /  ಕ್ರೀಡೆ  /  ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಗ್ರ್ಯಾಂಡ್ ಮಾಸ್ಟರ್ಸ್ ಚೆಸ್ ಪಂದ್ಯಾವಳಿ; ಜನವರಿ 18ರಂದು ಆರಂಭ

ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಗ್ರ್ಯಾಂಡ್ ಮಾಸ್ಟರ್ಸ್ ಚೆಸ್ ಪಂದ್ಯಾವಳಿ; ಜನವರಿ 18ರಂದು ಆರಂಭ

ಬೆಂಗಳೂರು ಅಂತಾರಾಷ್ಟ್ರೀಯ ಗ್ರ್ಯಾಂಡ್‌ಮಾಸ್ಟರ್ಸ್ ಓಪನ್ ಚೆಸ್ ಪಂದ್ಯಾವಳಿಯು ಎ, ಬಿ ಮತ್ತು ಸಿ ಎಂಬ ಮೂರು ವಿಭಾಗಗಳಲ್ಲಿ ನಡೆಯಲಿದೆ. 50 ಗ್ರ್ಯಾಂಡ್‌ಮಾಸ್ಟರ್‌ಗಳು ಮತ್ತು 2250 ಆಯ್ದ ಆಟಗಾರರು ಪಾಲ್ಗೊಳ್ಳಲಿದ್ದಾರೆ.

ಉದ್ಯಾನ ನಗರಿಯಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ಗ್ರ್ಯಾಂಡ್‌ಮಾಸ್ಟರ್ಸ್ ಓಪನ್ ಚೆಸ್ ಪಂದ್ಯಾವಳಿ ನಡೆಯಲಿದೆ (File Photo)
ಉದ್ಯಾನ ನಗರಿಯಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ಗ್ರ್ಯಾಂಡ್‌ಮಾಸ್ಟರ್ಸ್ ಓಪನ್ ಚೆಸ್ ಪಂದ್ಯಾವಳಿ ನಡೆಯಲಿದೆ (File Photo) (ANI)

ಬೆಂಗಳೂರು ಅರ್ಬನ್ ಡಿಸ್ಟ್ರಿಕ್ಟ್ ಚೆಸ್ ಅಸೋಸಿಯೇಷನ್ (BUDCA) ಬೆಂಗಳೂರು ಅಂತಾರಾಷ್ಟ್ರೀಯ ಗ್ರ್ಯಾಂಡ್‌ಮಾಸ್ಟರ್ಸ್ ಓಪನ್ ಚೆಸ್ ಪಂದ್ಯಾವಳಿಯನ್ನು ಆಯೋಜಿಸುತ್ತಿದೆ. ತನ್ನ ಮಹತ್ವಾಕಾಂಕ್ಷೆಯ ಯೋಜನೆಯಾದ ಚೆಸ್ ಪಂದ್ಯಾವಳಿಗೆ ಜನವರಿ 18ರಂದು ಚಾಲನೆ ಸಿಗಲಿದ್ದು, ಜನವರಿ 26ರವರೆಗೆ ನಡೆಯಲಿದೆ.

ಟ್ರೆಂಡಿಂಗ್​ ಸುದ್ದಿ

ಉದ್ಯಾನ ನಗರಿಯ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಪಂದ್ಯಾವಳಿ ನಡೆಯಲಿದೆ ಎಂದು ಅಸೋಸಿಯೇಷನ್ ಎಂದು ಘೋಷಿಸಿದೆ. 40ಕ್ಕೂ ಹೆಚ್ಚು ಗ್ರ್ಯಾಂಡ್‌ಮಾಸ್ಟರ್‌ಗಳು ಸೇರಿದಂತೆ ಭಾರತ ಹಾಗೂ ಇತರ 20 ದೇಶಗಳ 2000ಕ್ಕೂ ಹೆಚ್ಚು ಆಟಗಾರರು ಪಂದ್ಯಾವಳಿಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ಪಂದ್ಯಾವಳಿ ಆಯೋಜನೆ ಕುರಿತು ಮಾತನಾಡಿರುವ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಕೆಓಎ ಮತ್ತು ಎಫ್ಐಬಿಎ ಏಷ್ಯಾ ಪೆಸಿಫಿಕ್ ಅಧ್ಯಕ್ಷರಾದ ಡಾ.ಕೆ ಗೋವಿಂದರಾಜ್, ಈ 42 ವರ್ಷಗಳಲ್ಲಿ ನಾವು ಬೆಂಗಳೂರಿನಲ್ಲಿ ಮೊದಲನೇ ಅಂತಾರಾಷ್ಟ್ರೀಯ ಗ್ರ್ಯಾಂಡ್ ಮಾಸ್ಟರ್ಸ್ ಚೆಸ್ ಪಂದ್ಯಾವಳಿಯನ್ನು ಆಯೋಜಿಸುತ್ತಿದ್ದೇವೆ. ಇದು ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ ನಡೆಸಲ್ಪಡುತ್ತಿರುವ ಬಿಯುಡಿಸಿಎಯ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದೆ. ಜನವರಿ 18ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚೆಸ್ ದಂತಕಥೆ ವಿಶ್ವನಾಥನ್ ಆನಂದ್ ಅವರೊಂದಿಗೆ ಪಂದ್ಯಾವಳಿಯನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ | ಆಸ್ಟ್ರೇಲಿಯಾ ಓಪನ್ ಐತಿಹಾಸಿಕ ಗೆಲುವು; 80 ಸಾವಿರದಿಂದ 98 ಲಕ್ಷ ರೂಪಾಯಿಗೇರಿದ ಸುಮಿತ್ ಬ್ಯಾಂಕ್ ಬ್ಯಾಲೆನ್ಸ್

ಬೆಂಗಳೂರು ಜಾಗತಿಕ ಚೆಸ್ ಹಬ್ ಆಗಲು ಸಜ್ಜಾಗಿದ್ದು, ಹೊಸ ಪೀಳಿಗೆಯ ಚೆಸ್ ಉತ್ಸಾಹಿಗಳಿಗೆ ಸ್ಫೂರ್ತಿ ಒದಗಿಸಲಿದೆ. ಬಿಯುಡಿಸಿಎಯ ದೂರದೃಷ್ಟಿ ಮತ್ತು ಶ್ರದ್ಧೆಗೆ ನಾನು ಅವರನ್ನು ಮನಪೂರ್ವಕವಾಗಿ ಶ್ಲಾಘಿಸುತ್ತೇನೆ. ಈ ಪಂದ್ಯಾವಳಿಯು ನಮ್ಮ ನಗರ ಮತ್ತು ರಾಜ್ಯವನ್ನು ವ್ಯಾಖ್ಯಾನಿಸುವ ಶ್ರೇಷ್ಠತೆ, ಕ್ರೀಡಾ ಮನೋಭಾವ ಮತ್ತು ರೋಮಾಂಚಕ ಚೆಸ್ ಸಂಸ್ಕೃತಿಯ ಪ್ರತೀಕವಾಗಲಿ ಎಂದು ಅವರು ಹೇಳಿದ್ದಾರೆ.

ಹೇಗೆ ನಡೆಯಲಿದೆ ಪಂದ್ಯಾವಳಿ

ಪಂದ್ಯಾವಳಿಯು ಎ, ಬಿ ಮತ್ತು ಸಿ ಎಂಬ ಮೂರು ವಿಭಾಗಗಳಲ್ಲಿ ನಡೆಯಲಿದೆ. 50 ಗ್ರ್ಯಾಂಡ್‌ಮಾಸ್ಟರ್‌ಗಳು ಮತ್ತು 2250 ಆಯ್ದ ಆಟಗಾರರು ಪಾಲ್ಗೊಳ್ಳಲಿದ್ದಾರೆ. ಪಂದ್ಯಾವಳಿಯು 50 ಲಕ್ ರೂಪಾಯಿಗಳ ಬಹುಮಾನ ಮೊತ್ತವನ್ನು ಹೊಂದಿದ್ದು, ಸ್ಪರ್ಧಿಗಳನ್ನು ಮತ್ತಷ್ಟು ಉತ್ತೇಜಿಸುವ ಸಾಧ್ಯತೆ ಇದೆ. ಇದರೊಂದಿಗೆ, ಎಲ್ಲಾ ವಯಸ್ಸಿನ ಆಟಗಾರರು ಸ್ಪರ್ಧಿಸಬಹುದಾದ ಬ್ಲಿಟ್ಜ್ ಟೂರ್ನಮೆಂಟ್ ಅನ್ನು ಜನವರಿ 22ರಂದು ನಿಗದಿಪಡಿಸಲಾಗಿದೆ. ಈ ಸಮಾನಾಂತರ ಸ್ಪರ್ಧೆಯು ಆಟದಲ್ಲಿ ಆಸಕ್ತಿ ಇರುವ ವಿವಿಧ ಮಟ್ಟದ ಕೌಶಲ್ಯ ಹೊಂದಿರುವ ಉತ್ಸಾಹಿಗಳಿಗೆ ನೆರವಾಗಲಿದೆ.

ಇದನ್ನೂ ಓದಿ | ಪ್ರೊ ಕಬಡ್ಡಿ 1000ನೇ ಪಂದ್ಯ; ವಾರಿಯರ್ಸ್ ವಿರುದ್ಧ ಬೆಂಗಳೂರು ಬುಲ್ಸ್‌ಗೆ ಸೋಲು, ಪ್ಯಾಂಥರ್ಸ್‌ಗೆ ಜಯ

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಚೆಸ್ ದಂತಕಥೆ ವಿಶ್ವನಾಥನ್ ಆನಂದ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿರಲಿದ್ದಾರೆ. ಪ್ರತಿನಿತ್ಯ 3000ದಿಂದ 5000 ಜನರು ಭಾಗವಹಿಸುವ ನಿರೀಕ್ಷೆ ಇದೆ. ಬೆಂಗಳೂರಿನ ಅಪೂರ್ವ ಚೆಸ್ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಅದ್ಭುತ ವಾತಾವರಣವನ್ನು ಸೃಷ್ಟಿಸುವ ಸಾಧ್ಯತೆ ಇದೆ.