World Cup 2023: ವಿಶ್ವಕಪ್ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ; ಭಾರತ ಪಾಕಿಸ್ತಾನ ಪಂದ್ಯದ ದಿನಾಂಕ ಇಲ್ಲಿದೆ
ಕನ್ನಡ ಸುದ್ದಿ  /  ಕ್ರೀಡೆ  /  World Cup 2023: ವಿಶ್ವಕಪ್ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ; ಭಾರತ ಪಾಕಿಸ್ತಾನ ಪಂದ್ಯದ ದಿನಾಂಕ ಇಲ್ಲಿದೆ

World Cup 2023: ವಿಶ್ವಕಪ್ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ; ಭಾರತ ಪಾಕಿಸ್ತಾನ ಪಂದ್ಯದ ದಿನಾಂಕ ಇಲ್ಲಿದೆ

India vs Pakistan: ವಿಶ್ವಕಪ್ ವೇಳಾಪಟ್ಟಿಯಲ್ಲಿ ಬದಲಾವಣೆಗಾಗಿ ಐಸಿಸಿಯ ಸದಸ್ಯ ರಾಷ್ಟ್ರಗಳು ಬಿಸಿಸಿಐಗೆ ಪತ್ರ ಬರೆದಿವೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ. ಹೀಗಾಗಿ ಇಂಡೋ ಪಾಕ್‌ ಪಂದ್ಯದ ದಿನಾಂಕ ಬಹುತೇಕ ಬದಲಾಗಲಿದೆ.

ಭಾರತ ಪಾಕಿಸ್ತಾನ ಪಂದ್ಯದ ದಿನಾಂಕ ಬದಲಾವಣೆ
ಭಾರತ ಪಾಕಿಸ್ತಾನ ಪಂದ್ಯದ ದಿನಾಂಕ ಬದಲಾವಣೆ (Getty)

ಭಾರತದ ಆತಿಥ್ಯದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ (World Cup 2023) ವೇಳಾಪಟ್ಟಿ ಈಗಾಗಲೇ ಪ್ರಕಟಗೊಂಡಿದೆ. ಇದೀಗ ಈ ವೇಳಾಪಟ್ಟಿಯಲ್ಲಿ ಮತ್ತಷ್ಟು ಬದಲಾವಣೆಗಳಾಗುವ ಸಾಧ್ಯತೆ ಇದೆ. ಅದರಲ್ಲೂ ಅಕ್ಟೋಬರ್ 15ರಂದು ನಿಗದಿಪಡಿಸಲಾದ ಭಾರತ ಹಾಗೂ ಪಾಕಿಸ್ತಾನ (India vs Pakistan) ನಡುವಿನ ರೋಚಕ ಪಂದ್ಯದ ದಿನಾಂಕವನ್ನು ಬಿಸಿಸಿಐ ಬದಲಾಯಿಸುವ ಸಾಧ್ಯತೆ ಇದೆ.

ವೇಳಾಪಟ್ಟಿಯಲ್ಲಿ ಕೆಲ ಬದಲಾವಣೆಗೆಳನ್ನು ಮಾಡುವಂತೆ ವಿಶ್ವಕಪ್‌ನಲ್ಲಿ ಭಾಗವಹಿಸುವ ಕೆಲ ಸದಸ್ಯ ರಾಷ್ಟ್ರಗಳಿಂದ ಬಿಸಿಸಿಐಗೆ ಮನವಿಗಳು ಬಂದಿವೆ. ಹೀಗಾಗಿ ದಿನಾಂಕದಲ್ಲಿ ಬದಲಾವಣೆ ಸಾಧ್ಯತೆ ಇದೆ. ಆದರೆ, ದಿನಾಂಕ ಬದಲಾದರೂ, ಇಂಡೋ ಪಾಕ್‌ ಕದನವು ಅಹಮದಾಬಾದ್‌ನ ನರೇಂದ್ರ ಮೋಡಿ ಕ್ರೀಡಾಂಗಣದಲ್ಲೇ ನಡೆಯುವುದು ಬಹುತೇಕ ಖಚಿತವಾಗಿದೆ.

“ವೇಳಾಪಟ್ಟಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡುವಂತೆ ವಿಶ್ವಕಪ್‌ನಲ್ಲಿ ಭಾಗವಹಿಸುವ 2-3 ಐಸಿಸಿ ಸದಸ್ಯ ಮಂಡಳಿಗಳು ವಿನಂತಿ ಮಾಡಿವೆ” ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಗುರುವಾರ (ಜುಲೈ 27) ದೆಹಲಿಯಲ್ಲಿ ತಿಳಿಸಿದ್ದಾರೆ. ನಾವು ಆತಿಥ್ಯ ಸ್ಥಳಗಳಲ್ಲಿ ಯಾವುದೇ ಬದಲಾವಣೆಯನ್ನು ಮಾಡಬೇಕಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಭದ್ರತೆಯೇ ತಲೆನೋವು

ಭಾರತದಾದ್ಯಂತ ಅದ್ಧೂರಿಯಾಗಿ ನವರಾತ್ರಿ ಉತ್ಸವವನ್ನು ಆಚರಿಸಲಾಗುತ್ತದೆ. ಇದರಿಂದಾಗಿ ಭಾರತ-ಪಾಕಿಸ್ತಾನ ಪಂದ್ಯದ ದಿನಾಂಕವನ್ನು ಬದಲಾಯಿಸಬೇಕಾಗಿ ಬಂದಿದೆ. ಅಲ್ಲದೆ ಹಬ್ಬದ ಸಮಯದಲ್ಲಿ ಪೊಲೀಸ್ ಪಡೆಗಳಿಗೆ ಭದ್ರತೆ ಒದಗಿಸುವುದು ಕೂಡಾ ತಲೆನೋವಾಗಿ ಪರಿಣಮಿಸಬಹುದು. ಹಾಗೆಂದು ಭದ್ರತಾ ಕಾರಣಗಳಿಗಾಗಿ ಪಂದ್ಯವನ್ನು ಸ್ಥಳಾಂತರಿಸುವ ಕುರಿತು ಶಾ ಅಲ್ಲಗಳೆದಿದ್ದಾರೆ.

ಅಕ್ಟೋಬರ್ 14ರಂದು ಇಂಡೋ ಪಾಕ್‌ ಕದನ

ಪರ್ಯಾಯ ದಿನಾಂಕಗಳನ್ನು ಇನ್ನೂ ದೃಢಪಡಿಸಿಲ್ಲ. ಆದರೆ, ಐಸಿಸಿಯ ವಾಣಿಜ್ಯ ಪಾಲುದಾರರು, ಮಾರಾಟಗಾರರು ಮತ್ತು ಈಗಾಗಲೇ ಹೋಟೆಲ್‌ ಹಾಗೂ ವಿಮಾನ ಟಿಕೆಟ್‌ಗಳನ್ನು ಮುಂಗಡವಾಗಿ ಕಾಯ್ದಿರಿಸಿದ ಕ್ರಿಕೆಟ್ ಅಭಿಮಾನಿಗಳ ಯೋಜನೆಗಳಿಗೆ ಅಡ್ಡಿಯಾಗದಂತೆ ಅಕ್ಟೋಬರ್ 14ರಂದು ಪಂದ್ಯವನ್ನು ನಡೆಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ.

ವೇಳಾಪಟ್ಟಿಯಲ್ಲಿ ಇನ್ನೂ ಕೆಲವು ಬದಲಾವಣೆಗಳಾಗುವ ಸಾಧ್ಯತೆ ಇದೆ. ಕೆಲವು ಪಂದ್ಯಗಳ ನಡುವಿನ ಅಂತರವನ್ನು ಕೂಡಾ ಕಡಿಮೆ ಮಾಡಬಹುದು. 46 ದಿನಗಳ ಕಾಲ ನಡೆಯಲಿರುವ ಮೂಲ ವೇಳಾಪಟ್ಟಿಯಲ್ಲಿ ಮಾಡಲಾಗುವ ಬದಲಾವಣೆಗಳ ಅಂತಿಮ ಚಿತ್ರಣವು ಮುಂದಿನ 3ರಿಂದ 4 ದಿನಗಳಲ್ಲಿ ಸ್ಪಷ್ಟವಾಗಲಿದೆ.

ಮುಂಬರುವ ವಿಶ್ವಕಪ್‌ಗೆ ಇ-ಟಿಕೆಟ್‌ ಮಾತ್ರವಲ್ಲದೆ ಭೌತಿಕ ಟಿಕೆಟ್ ನೀಡುವುದನ್ನು ಮುಂದುವರೆಸುವುದಾಗಿ ಬಿಸಿಸಿಐ ಸ್ಪಷ್ಟಪಡಿಸಿದೆ. ಅಭಿಮಾನಿಗಳು ಹನುಮನ ಬಾಲದಂದತಿರುವ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು, ಪ್ರತಿ ಪಂದ್ಯಕ್ಕೂ ಒಂದು ವಾರದ ಮೊದಲು ಆಯಾ ಮೈದಾನಗಳಲ್ಲಿ ಹಲವು ಟಿಕೆಟ್ ಕಲೆಕ್ಷನ್ ಪಾಯಿಂಟ್‌ಗಳನ್ನು ಸ್ಥಾಪಿಸಲು ಬಿಸಿಸಿಐ ಯೋಜಿಸುತ್ತಿದೆ. ಮುಂದಿನ ವಾರದಿಂದಲೇ ಟಿಕೆಟ್‌ಗಳು ಮಾರಾಟವಾಗುವ ಸಾಧ್ಯತೆಯಿದೆ. ಆದರೆ ವೇಳಾಪಟ್ಟಿಯಲ್ಲಿ ಅಂತಿಮ ಬದಲಾವಣೆಗಳನ್ನು ಮಾಡಿದ ನಂತರವೇ ಈ ವ್ಯವಸ್ಥೆ ಆರಂಭಿಸಲಾಗುತ್ತದೆ.

ಸದ್ಯದ ವೇಳಾಪಟ್ಟಿ ಪ್ರಕಾರ, ಏಕದಿನ ವಿಶ್ವಕಪ್ ಅಕ್ಟೋಬರ್ 5ರಂದು ಆರಂಭವಾಗಲಿದೆ. ವಿಶ್ವದ ಅತಿ ದೊಡ್ಡ ಕ್ರಿಕೆಟ್‌ ಮೈದಾನವಾದ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಮೊದಲ ಪಂದ್ಯದಲ್ಲಿ‌ ಮುಖಾಮುಖಿಯಾಗಲಿವೆ. ಆತಿಥೇಯ ಭಾರತವು 2023ರ ಏಕದಿನ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. ಅಕ್ಟೋಬರ್ 8ರಂದು ಚೆನ್ನೈನಲ್ಲಿ ಭಾರತದ ಮೊದಲ ಪಂದ್ಯ ನಡೆಯಲಿದೆ.

ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣ ನವೆಂಬರ್ 19ರಂದು ಏಕದಿನ ವಿಶ್ವಕಪ್‌ ಫೈನಲ್‌ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಅದಕ್ಕೂ ಮುನ್ನ ನವೆಂಬರ್ 15 ಮತ್ತು 16 ರಂದು ಎರಡು ಸೆಮಿಫೈನಲ್‌ ಪಂದ್ಯಗಳು ಕ್ರಮವಾಗಿ ಮುಂಬೈನ ವಾಂಖೆಡೆ ಸ್ಟೇಡಿಯಂ ಮತ್ತು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ ಮೈದಾನಗಳಲ್ಲಿ ನಡೆಯಲಿದೆ.

Whats_app_banner