Asia Cup 2023: ಏಷ್ಯಾಕಪ್ ಪಂದ್ಯಾವಳಿಯ ದಿನಾಂಕ ಪ್ರಕಟ; ಹೈಬ್ರಿಡ್ ಮಾದರಿಯಲ್ಲಿ ಪಾಕ್, ಲಂಕಾದಲ್ಲಿ ಟೂರ್ನಿ
ಕನ್ನಡ ಸುದ್ದಿ  /  ಕ್ರೀಡೆ  /  Asia Cup 2023: ಏಷ್ಯಾಕಪ್ ಪಂದ್ಯಾವಳಿಯ ದಿನಾಂಕ ಪ್ರಕಟ; ಹೈಬ್ರಿಡ್ ಮಾದರಿಯಲ್ಲಿ ಪಾಕ್, ಲಂಕಾದಲ್ಲಿ ಟೂರ್ನಿ

Asia Cup 2023: ಏಷ್ಯಾಕಪ್ ಪಂದ್ಯಾವಳಿಯ ದಿನಾಂಕ ಪ್ರಕಟ; ಹೈಬ್ರಿಡ್ ಮಾದರಿಯಲ್ಲಿ ಪಾಕ್, ಲಂಕಾದಲ್ಲಿ ಟೂರ್ನಿ

India vs Pakistan: ಏಷ್ಯಾಕಪ್‌ ಪಂದ್ಯಾವಳಿಯು ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ. ಸೆಪ್ಟೆಂಬರ್ 17ರಂದು ಫೈನಲ್‌ ಪಂದ್ಯ ನಡೆಯಲಿದೆ.

ಬಾಬರ್ ಅಜಮ್ ಮತ್ತು ರೋಹಿತ್ ಶರ್ಮಾ
ಬಾಬರ್ ಅಜಮ್ ಮತ್ತು ರೋಹಿತ್ ಶರ್ಮಾ (REUTERS)

ಪ್ರಸಕ್ತ ವರ್ಷದ ಪ್ರಮುಖ ಕ್ರೀಡಾಕೂಟವಾದ ಏಕದಿನ ವಿಶ್ವಕಪ್ 2023 (ICC World Cup 2023)ಕ್ಕೂ ಮುಂಚಿತವಾಗಿ, ಏಷ್ಯಾಕಪ್‌ (Asia Cup 2023) ನಡೆಯಲಿದೆ. ಏಷ್ಯಾದ ಎರಡು ಬಲಿಷ್ಠ ತಂಡಗಳು ಹಾಗೂ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ (India vs Pakistan)ದ ರೋಚಕ ಪೈಪೋಟಿಗೆ ಕ್ರಿಕೆಟ್‌ ಅಭಿಮಾನಿಗಳು ಕಾಯುತ್ತಿದ್ದಾರೆ. 2023ರ ಏಷ್ಯಾಕಪ್ ಆವೃತ್ತಿಗೆ ಸದ್ಯ ಮುಹೂರ್ತ ನಿಗದಿಯಾಗಿದ್ದು, ಪಿಸಿಬಿ ಮನವಿಯಂತೆಯೇ ಹೈಬ್ರಿಡ್‌ ಮಾದರಿಯಲ್ಲಿ ನಡೆಯಲಿದೆ.

ಆಗಸ್ಟ್ 31ರಿಂದ ಸೆಪ್ಟೆಂಬರ್ 17ರವರೆಗೆ ಏಷ್ಯಾಕಪ್‌ ಪಂದ್ಯಾವಳಿ ನಡೆಯಲಿದೆ. ಈ ಪಂದ್ಯಾವಳಿಯು ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ. ಸೆಪ್ಟೆಂಬರ್ 17ರಂದು ಫೈನಲ್‌ ಪಂದ್ಯ ನಡೆಯಲಿದೆ.

ಸೆಪ್ಟಂಬರ್ 17ರಂದು (ಭಾನುವಾರ) ಏಷ್ಯಾಕಪ್‌ಗೆ ಚಾಲನೆ ದೊರೆಯಲಿದೆ. ಈ ಬಾರಿ ಒಟ್ಟು ಆರು ತಂಡಗಳು ಪಂದ್ಯಾವಳಿಯಲ್ಲಿ ಭಾಗಿಯಾಗಲಿವೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ನೇಪಾಳ ತಂಡಗಳು ಒಟ್ಟು 13 ಏಕದಿನ ಪಂದ್ಯಗಳನ್ನು ಆಡಲಿವೆ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮಾಹಿತಿ ನೀಡಿದೆ.

ಆತಿಥ್ಯ ಹಕ್ಕು ಹೊಂಡಿರುವ ಪಾಕಿಸ್ಥಾನದಲ್ಲಿ ಹೆಚ್ಚು ಪಂದ್ಯಗಳು ನಡೆಯಬೇಕಿತ್ತು. ಆದರೆ, ಹೈಬ್ರಿಡ್‌ ಮಾದರಿಯಲ್ಲಿ ಪಂದ್ಯಗಳು ನಡೆಯುತ್ತಿರುವುದರಿಂದ ಏಷ್ಯಾಕಪ್‌ನ ನಾಲ್ಕು ಪಂದ್ಯಗಳು ಮಾತ್ರ ಪಾಕಿಸ್ತಾನದಲ್ಲಿ ನಡೆಯಲಿದೆ. ಉಳಿದಂತೆ ಹಾಲಿ ಚಾಂಪಿಯನ್ ಶ್ರೀಲಂಕಾದಲ್ಲಿ ಒಟ್ಟು ಒಂಬತ್ತು ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ.

“ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲಾಗುವುದು. ನಾಲ್ಕು ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯಲಿವೆ. ಉಳಿದ ಒಂಬತ್ತು ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಾಗುತ್ತದೆ. 2023ರ ಆವೃತ್ತಿಯು ಎರಡು ಗುಂಪುಗಳನ್ನು ಒಳಗೊಂಡಿರುತ್ತದೆ. ಪ್ರತಿ ಗುಂಪಿನಿಂದ ಎರಡು ತಂಡಗಳು ಸೂಪರ್ ಫೋರ್ ಹಂತಕ್ಕೆ ಅರ್ಹತೆ ಪಡೆಯಲಿವೆ. ಸೂಪರ್ ಫೋರ್ ಹಂತದಿಂದ ಅಗ್ರ ಎರಡು ತಂಡಗಳು ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ” ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಹೇಳಿಕೆಯಲ್ಲಿ ತಿಳಿಸಿದೆ.

ಏಷ್ಯಾಕಪ್‌ನಲ್ಲಿ ಭಾಗಿಯಾಗುವ ಸಲುವಾಗಿ ಪಾಕಿಸ್ತಾನ ಪ್ರವಾಸ ಮಾಡಲು ಬಿಸಿಸಿಐ ಸಮ್ಮತಿ ನೀಡದ ಕಾರಣದಿಂದ, ಪಿಸಿಬಿಯು ಹೈಬ್ರಿಡ್ ಮಾದರಿಯ ಪ್ರಸ್ತಾಪ ಮಾಡಿತ್ತು. ಆದರೆ ಅದಕ್ಕೆ ಸದಸ್ಯ ರಾಷ್ಟ್ರಗಳು ಆರಂಭದಲ್ಲಿ ಸಮ್ಮತಿಸಿರಲಿಲ್ಲ. ಅಂತಿಮವಾಗಿ ಪಾಕಿಸ್ತಾನಕ್ಕೆ ಕೆಲವು ಪಂದ್ಯಗಳ ಆತಿಥ್ಯಕ್ಕೆ ಅವಕಾಶ ಸಿಕ್ಕಿದೆ.

ವರದಿಯ ಪ್ರಕಾರ, ಪಂದ್ಯಾವಳಿಯ ಮೊದಲ ಸುತ್ತಿನ ನಾಲ್ಕು ಪಂದ್ಯಗಳು ಪಾಕಿಸ್ತಾನದ ಲಾಹೋರ್‌ನಲ್ಲಿ ನಡೆಯಲಿವೆ. ಈ ಪಂದ್ಯಗಳಲ್ಲಿ ಭಾರತ ಆಡುವುದಿಲ್ಲ. ಇದಕ್ಕೆ ಬಿಸಿಸಿಐ ಒಪ್ಪಿಕೊಂಡಿದೆ ಎಂದು ತಿಳಿದುಬಂದಿದೆ. ಎಸಿಸಿ ಅಧ್ಯಕ್ಷರೂ ಆಗಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಭದ್ರತಾ ದೃಷ್ಟಿಯಿಂದ ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಪಾಕಿಸ್ತಾನದ ಪಂದ್ಯಗಳು (ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ ವಿರುದ್ಧ) ಲಾಹೋರ್​ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಭಾರತದೊಂದಿಗೆ ಇತರ ದೇಶಗಳು ಆಡುವ ಪಂದ್ಯಗಳು ದ್ವೀಪರಾಷ್ಟ್ರ ಲಂಕಾದಲ್ಲಿ ನಡೆಯುತ್ತವೆ. ಇದರಲ್ಲಿ ಭಾರತದ ಪಂದ್ಯಗಳು ಮತ್ತು ಫೈನಲ್​ ಪಂದ್ಯವೂ ಸೇರಿದೆ. ಆದರೆ ಸ್ಥಳಗಳನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ಈ ಪ್ರಸ್ತಾವನೆಗೆ ಬಿಸಿಸಿಐ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ ಎಂದು ತಿಳಿದುಬಂದಿದೆ.

ಏಷ್ಯಾಕಪ್​ ಟೂರ್ನಿ ನಮ್ಮ ದೇಶಕ್ಕೆ ಆತಿಥ್ಯ ಸಿಗಲಿಲ್ಲ ಎಂದರೆ ಟೂರ್ನಿಯನ್ನು ಬಹಿಷ್ಕರಿಸುವುದಾಗಿ ಈ ಹಿಂದೆ ಪಾಕಿಸ್ತಾನ ಹೇಳಿತ್ತು. ಅಷ್ಟೆ ಅಲ್ಲದೆ ಈ ವರ್ಷ ನಡೆಯುವ ಏಕದಿನ ವಿಶ್ವಕಪ್​​ನಲ್ಲೂ (ODI World Cup 2023) ಪಾಲ್ಗೊಳ್ಳುವುದಿಲ್ಲ ಎಂದು ಎಚ್ಚರಿಕೆ ನೀಡಿತ್ತು. ಇದೀಗ ಎಲ್ಲಾ ಸಮಸ್ಯೆಗಳು ಇತ್ಯರ್ಥವಾಗಿವೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.