IPL 2023: ಮುಂಬೈ ತಂಡದಿಂದ ಹೊರಬಿದ್ದ ಜೋಫ್ರಾ ಆರ್ಚರ್; ತಂಡ ಸೇರಿಕೊಂಡ ಮತ್ತೋರ್ವ ಇಂಗ್ಲೆಂಡ್ ಆಲ್‌ರೌಂಡರ್
ಕನ್ನಡ ಸುದ್ದಿ  /  ಕ್ರೀಡೆ  /  Ipl 2023: ಮುಂಬೈ ತಂಡದಿಂದ ಹೊರಬಿದ್ದ ಜೋಫ್ರಾ ಆರ್ಚರ್; ತಂಡ ಸೇರಿಕೊಂಡ ಮತ್ತೋರ್ವ ಇಂಗ್ಲೆಂಡ್ ಆಲ್‌ರೌಂಡರ್

IPL 2023: ಮುಂಬೈ ತಂಡದಿಂದ ಹೊರಬಿದ್ದ ಜೋಫ್ರಾ ಆರ್ಚರ್; ತಂಡ ಸೇರಿಕೊಂಡ ಮತ್ತೋರ್ವ ಇಂಗ್ಲೆಂಡ್ ಆಲ್‌ರೌಂಡರ್

ಪ್ರಸಕ್ತ ಋತುವಿನಲ್ಲಿ ಮುಂಬೈ ತಂಡದ ಮೊದಲ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಆರ್ಚರ್ ಕಣಕ್ಕಿಳಿದಿದ್ದರು. ಆದರೆ ಆ ಬಳಿಕ ನಾಲ್ಕು ಪಂದ್ಯಗಳಲ್ಲಿ ಆಡಿರಲಿಲ್ಲ.

ಜೋಫ್ರಾ ಆರ್ಚರ್
ಜೋಫ್ರಾ ಆರ್ಚರ್ (Mumbai Indians Twitter)

ಗಾಯಾಳು ಜೋಫ್ರಾ ಆರ್ಚರ್ (Jofra Archer), ಪ್ರಸಕ್ತ ಆವೃತ್ತಿಯ ಐಪಿಎಲ್‌ನಿಂದ ಹೊರಬಿದ್ದಿದ್ದಾರೆ. ಟೂರ್ನಿಯ ಆರಂಭಕ್ಕೂ ಮುನ್ನ ತಂಡದ ಪ್ರಮುಖ ವೇಗಿ ಬುಮ್ರಾರನ್ನು ಕಳೆದುಕೊಂಡಿದ್ದ ಮುಂಬೈ ಇಂಡಿಯನ್ಸ್‌ (Mumbai Indians), ಇದೀಗ ಮತ್ತೊಬ್ಬ ಪ್ರಮುಖ ಬೌಲರ್‌ ಅನ್ನು ಕಳೆದುಕೊಂಡಿದೆ. ಹೀಗಾಗಿ ಆರ್ಚರ್‌ ಬದಲಿಗೆ ಇಂಗ್ಲೆಂಡ್ ಆಲ್ ರೌಂಡರ್ ಕ್ರಿಸ್ ಜೋರ್ಡನ್ (Chris Jordan) ತಂಡ ಸೇರಿಕೊಂಡಿದ್ದಾರೆ.

"ಮುಂಬೈ ಇಂಡಿಯನ್ಸ್ (MI) ತಂಡವು ಮಂಗಳವಾರವಾದಂದು ಇಂಡಿಯನ್ ಪ್ರೀಮಿಯರ್ ಲೀಗ್‌ನ ಉಳಿದ ಪಂದ್ಯಗಳಿಗೆ ಗಾಯಗೊಂಡ ಜೋಫ್ರಾ ಆರ್ಚರ್ ಬದಲಿಗೆ ಕ್ರಿಸ್ ಜೋರ್ಡಾನ್ ಅವರನ್ನು ಹೆಸರಿಸಿದೆ" ಎಂದು ಐಪಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದೆರಡು ವರ್ಷಗಳಿಂದ ಗಾಯಗಳಿಂದ ಬಳಲುತ್ತಿರುವ ಆರ್ಚರ್, ಈ ಋತುವಿನಲ್ಲಿ ಕೇವಲ ಐದು ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಆಡಿರುವ ಪಂದ್ಯಗಳಲ್ಲಿ ಪರಿಣಾಮಕಾರಿಯಾಗಿ ಬೌಲಿಂಗ್‌ ಮಾಡಲು ಅವರಿಂದ ಸಾಧ್ಯವಾಗಿರಲಿಲ್ಲ. ಹೀಗಾಗಿ ಕೇವಲ ಎರಡು ವಿಕೆಟ್ ಪಡೆದಿದ್ದಾರೆ. ಕಳೆದ ವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅವರು ತಮ್ಮ ಕೊನೆಯ ಪಂದ್ಯವನ್ನಾಡಿದ್ದರು.

ಆರ್ಚರ್‌ನ ಗಾಯದ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಆದರೆ 2021ರಿಂದ ಅವರು ಬಲ ಮೊಣಕೈ ಗಾಯದಿಂದ ಸಮಸ್ಯೆ ಅನುಭವಿಸುತ್ತಿದ್ದಾರೆ. ಹೀಗಾಗಿಯೇ ಕಳೆದ ವರ್ಷ ಸಂಪೂರ್ಣ ಐಪಿಎಲ್‌ ಆವೃತ್ತಿಯನ್ನು ಅವರು ತಪ್ಪಿಸಿಕೊಂಡಿದ್ದರು. ಪ್ರಸಕ್ತ ಋತುವಿನಲ್ಲಿ ಮುಂಬೈ ತಂಡದ ಮೊದಲ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಕಣಕ್ಕಿಳಿದಿದ್ದರು. ಆದರೆ ಆ ಬಳಿಕ ನಾಲ್ಕು ಪಂದ್ಯಗಳನ್ನು ಕಳೆದುಕೊಂಡರು.

ಸಣ್ಣಮಟ್ಟದ ಶಸ್ತ್ರಚಿಕಿತ್ಸೆಗೆ ಒಳಗಾಗಲು ಪಂದ್ಯಾವಳಿಯ ಮಧ್ಯದಲ್ಲಿಯೇ ಅವರು ಬೆಲ್ಜಿಯಂಗೆ ತೆರಳಿದ್ದರು ಎಂದು ಕೆಲವು ವರದಿಗಳು ತಿಳಿಸಿವೆ. ಅವರು ಆ ಬಳಿಕ ತಂಡಕ್ಕೆ ಮರಳಿದರು. ಆದರೆ ನಾಯಕ ರೋಹಿತ್ ಶರ್ಮಾ ಅವರ ಅನಾರೋಗ್ಯವನ್ನು ಉಲ್ಲೇಖಿಸಿ ತಂಡದಿಂದ ಹೊರಗಿಟ್ಟಿದ್ದರು.

2016ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಜೋರ್ಡಾನ್, ಇದುವರೆಗೆ 28 ಐಪಿಎಲ್ ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಅಲ್ಲದೆ 27 ವಿಕೆಟ್‌ಗಳನ್ನು ಪಡೆದಿದ್ದಾರೆ. ವೇಗಿಯು ಇಂಗ್ಲೆಂಡ್ ತಂಡವನ್ನು 87 ಟಿ20 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದು, 96 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಮುಂಬೈ ತಂಡವು ಜೋರ್ಡಾನ್ ಅವರನ್ನು 2 ಕೋಟಿ ರೂಪಾಯಿಗೆ ಖರೀದಿಸಿತ್ತು.

ಇಂದು ಆರ್‌ಸಿಬಿ - ಮುಂಬೈ ಪಂದ್ಯ

ಮಾಜಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್ ತಂಡವು ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಪೈಪೋಟಿಗಳಿಯಲಿದೆ. ಆವೃತ್ತಿಯ ಆರಂಭದಲ್ಲಿ ಬೆಂಗಳೂರಿನಲ್ಲಿ ಮುಖಾಮುಖಿಯಾಗಿದ್ದ ಉಭಯ ತಂಡಗಳು, ಇಂದು ಎರಡನೇ ಕಾದಾಟಕ್ಕೆ ಸಜ್ಜಾಗಿದೆ. ಕಳೆದ ಪಂದ್ಯದಲ್ಲಿ ಆರ್‌ಸಿಬಿ ತವರಲ್ಲಿ ಸೋತಿದ್ದ ಎಂಐ, ಇಂದು ತನ್ನ ತವರು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ.

ಮುಂಬೈ ತಂಡದ ಪ್ರಮುಖ ಆಟಗಾರರು ಫಾರ್ಮ್‌ ಸಮಸ್ಯೆಯಿಂದ ಹೊರಬರಬೇಕಿದೆ. ಅನಾರೋಗ್ಯದಿಂದ ಕಳೆದ ಪಂದ್ಯದಲ್ಲಿ ಆಡುವ ಬಳಗದಲ್ಲಿ ಕಾಣಿಸಿಕೊಳ್ಳದ ತಿಲಕ್‌ ವರ್ಮಾ, ಇಂದಿನ ಪಂದ್ಯದಲ್ಲಿ ಆಡುವ ಸಾಧ್ಯತೆ ಇದೆ. ಇವರ ಅನುಪಸ್ಥಿತಿ ಸಿಎಸ್‌ಕೆ ವಿರುದ್ಧದ ಕೊನೆಯ ಪಂದ್ಯದಲ್ಲಿ ತಂಡವನ್ನು ಕಾಡಿತ್ತು. ಮತ್ತೊಂದೆಡೆ ನಾಯಕ ರೋಹಿತ್ ಶರ್ಮಾ ಅವರ ಫಾರ್ಮ್ ತಂಡದ ಗಂಭೀರ ಸಮಸ್ಯೆಯಾಗಿದೆ. ಮತ್ತೊಂದೆಡೆ ಯುವ ಆಟಗಾರರಾದ ನೆಹಾಲ್ ವಧೇರಾ ಮತ್ತು ಹೃತಿಕ್ ಶೋಕೀನ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ ಇತಿಹಾಸದಲ್ಲಿ 31 ಬಾರಿ ಪರಸ್ಪರ ಮುಖಾಮುಖಿಯಾಗಿವೆ. 5 ಬಾರಿ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿರುವ ಮುಂಬೈ 17 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದರೆ, ಆರ್‌ಸಿಬಿಯು 14 ಬಾರಿ ಗೆಲುವಿನ ರುಚಿ ಕಂಡಿದೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.