Mohammad Kaif: ವಿರಾಟ್ ಬ್ಯಾಟಿಂಗ್‌ನಲ್ಲಿ ದೌರ್ಬಲ್ಯವಿದೆ; ಅವರಿಗಿಂತ ಸಚಿನ್‌ ಜೊತೆಗೆ ಗಿಲ್ ಹೋಲಿಕೆ ಸೂಕ್ತ ಎಂದ ಕೈಫ್
ಕನ್ನಡ ಸುದ್ದಿ  /  ಕ್ರೀಡೆ  /  Mohammad Kaif: ವಿರಾಟ್ ಬ್ಯಾಟಿಂಗ್‌ನಲ್ಲಿ ದೌರ್ಬಲ್ಯವಿದೆ; ಅವರಿಗಿಂತ ಸಚಿನ್‌ ಜೊತೆಗೆ ಗಿಲ್ ಹೋಲಿಕೆ ಸೂಕ್ತ ಎಂದ ಕೈಫ್

Mohammad Kaif: ವಿರಾಟ್ ಬ್ಯಾಟಿಂಗ್‌ನಲ್ಲಿ ದೌರ್ಬಲ್ಯವಿದೆ; ಅವರಿಗಿಂತ ಸಚಿನ್‌ ಜೊತೆಗೆ ಗಿಲ್ ಹೋಲಿಕೆ ಸೂಕ್ತ ಎಂದ ಕೈಫ್

Shubman Gill vs Sachin Tendulkar: ಶುಬ್ಮನ್ ಗಿಲ್, ಸಚಿನ್ ತೆಂಡೂಲ್ಕರ್ ಮತ್ತು ಕೊಹ್ಲಿ ಅವರನ್ನು ಹೋಲಿಸುವಾಗ ವಿರಾಟ್ ಕೊಹ್ಲಿಗೆ ದೌರ್ಬಲ್ಯಗಳಿವೆ ಎಂದು ಮೊಹಮ್ಮದ್ ಕೈಫ್ ಹೇಳಿದ್ದಾರೆ.

ವಿರಾಟ್ ಕೊಹ್ಲಿ, ಶುಬ್ಮನ್ ಗಿಲ್, ಸಚಿನ್ ತೆಂಡೂಲ್ಕರ್
ವಿರಾಟ್ ಕೊಹ್ಲಿ, ಶುಬ್ಮನ್ ಗಿಲ್, ಸಚಿನ್ ತೆಂಡೂಲ್ಕರ್

ವಿರಾಟ್ ಕೊಹ್ಲಿ (Virat Kohli) ಮತ್ತು ಸಚಿನ್ ತೆಂಡೂಲ್ಕರ್ (Sachin Tendulkar) ಅವರುಗಳ ನಡುವೆ ಉತ್ತಮ ಬ್ಯಾಟರ್ ಯಾರು ಎಂಬ ಬಗೆಗಿನ ಚರ್ಚೆ ಹಲವು ವರ್ಷಗಳಿಂದ ಅಸ್ತಿತ್ವದಲ್ಲಿದೆ. ಈ ಎರಡು ಹೆಸರುಗಳೊಂದಿಗೆ ಉದಯೋನ್ಮುಖ ತಾರೆ ಶುಬ್ಮನ್ ಗಿಲ್ (Shubman Gill) ಹೆಸರು ಕೂಡಾ ಇತ್ತೀಚೆಗೆ ಸೇರಿಕೊಂಡಿದೆ. ಅದಾಗಲೇ ಸಚಿನ್‌ ಜೊತೆಗೆ ದಿಗ್ಗಜ ಕ್ರಿಕೆಟ್‌ರ್‌ಗಳ ಪಟ್ಟಿಯನ್ನು ಸೇರಿಕೊಂಡಿರುವ ವಿರಾಟ್‌ಗೆ, ಗಿಲ್‌ ಭರ್ಜರಿ ಪೈಪೋಟಿ ನೀಡುತ್ತಿದ್ದಾರೆ.

ಈಗಾಗಲೇ ಟಿ20 ಕ್ರಿಕೆಟ್‌ನಲ್ಲಿ ಮೊದಲ ಶತಕ ಮತ್ತು ಏಕದಿನ ಕ್ರಿಕೆಟ್‌ನಲ್ಲಿಯೂ ದಾಖಲೆಯ ದ್ವಿಶತಕ ಸಿಡಿಸಿರುವ ಗಿಲ್‌, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇತ್ತೀಚೆಗೆ‌ ಭಾರಿ ಸುದ್ದಿಯಲ್ಲಿದ್ದಾರೆ. ಅದಾಗಲೇ ಐದು ಶತಕಗಳನ್ನು ಸಿಡಿಸಿರುವ ಅವರು, ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್‌ನ 2023 ಆವೃತ್ತಿಯಲ್ಲಿ ಮೂರು ಶತಕಗಳನ್ನು ಸಿಡಿಸಿದರು. ಸದ್ಯ ಗಿಲ್‌ ಅವರನ್ನು ಸಚಿನ್‌ ಮತ್ತು ವಿರಾಟ್‌ಗೆ ಹೋಲಿಕೆ ಮಾಡಲಾಗುತ್ತಿದೆ. ಆದರೆ, 2014ರ ಇಂಗ್ಲೆಂಡ್ ಪ್ರವಾಸವನ್ನು ಮೆಲುಕು ಹಾಕಿರುವ ಭಾರತದ ದಿಗ್ಗಜ ಕ್ರಿಕೆಟಿಗ ಮೊಹಮ್ಮದ್‌ ಕೈಫ್‌, ಗಿಲ್ ಅವರನ್ನು ಸಚಿನ್‌ಗೆ ಹೋಲಿಸಿದ್ದಾರೆ. ಈ ಪಟ್ಟಿಯಲ್ಲಿ ವಿರಾಟ್‌ರನ್ನು ಕೆಳಗಿಟ್ಟಿದ್ದಾರೆ.

ಪ್ರಸಕ್ತ ವರ್ಷದ ಆರಂಭದಲ್ಲಿ, ಭಾರತದ ಪರ ಗಿಲ್ ಮೇಲಿಂದ ಮೇಲೆ ಶತಕಗಳನ್ನು ಸಿಡಿಸಿದರು. ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ಸೆಂಚುರಿ ಸಾಧನೆ ಮಾಡಿದರು. ಈ ವೇಳೆ, ಭಾರತಕ್ಕೆ ಕೊಹ್ಲಿಯ ಉತ್ತರಾಧಿಕಾರಿ ಸಿಕ್ಕಿದ್ದಾರೆ ಎಂಬ ಮಾತು ಎಲ್ಲೆಡೆ ಮುನ್ನೆಲೆಗೆ ಬಂತು. ಅದರ ಬೆನ್ನಲ್ಲೇ ಐಪಿಎಲ್‌ನ ಪ್ರಸಕ್ತ ಆವೃತ್ತಿಯಲ್ಲಿ 17 ಇನ್ನಿಂಗ್ಸ್‌ಗಳಲ್ಲಿ 890 ರನ್‌ ಗಳಿಸಿದ ಗಿಲ್‌, ಕೊಹ್ಲಿಯ 2016ರ ದಾಖಲೆಯನ್ನು ಬ್ರೇಕ್‌ ಮಾಡುವ ಹಂತಕ್ಕೆ ಬಂದು ವಿಫಲರಾದರು. ಈ ನಡುವೆ ಗಿಲ್‌ ಅವರನ್ನು ಕ್ರಿಕೆಟ್‌ ದೇವರು ಸಚಿನ್ ಅವರೊಂದಿಗೆ ಹೋಲಿಕೆ ಮಾಡಲಾಗುತ್ತಿದೆ.

ಈ ಕುರಿತಾಗಿ ಸ್ಪೋಟ್ಸ್‌ಕೀಡಾದೊಂದಿಗೆ ಮಾತನಾಡಿದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್, ಗಿಲ್ ಅವರ ಬ್ಯಾಟಿಂಗ್ ಕೊಹ್ಲಿಗಿಂತ ಸಚಿನ್‌ ಅವರ ಬ್ಯಾಟಿಂಗ್‌ಗೆ ಹೆಚ್ಚು ಹೋಲುತ್ತದೆ ಎಂದು ಹೇಳಿದ್ದಾರೆ. ವಿರಾಟ್‌ ಬ್ಯಾಟಿಂಗ್‌ನಲ್ಲಿ ಕೆಲವೊಂದು ದೌರ್ಬಲ್ಯಗಳಿವೆ ಎಂದ ಅವರು, ಗಿಲ್‌ ಬ್ಯಾಟಿಂಗ್ ದೋಷರಹಿತವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ಕೊಹ್ಲಿ ಕುರಿತಾಗಿ ನೀಡಿದ ಹೇಳಿಕೆಯನ್ನು ಇನ್ನಷ್ಟು ಬಿಡಿಸಿ ಹೇಳಿದ ಕೈಫ್,‌ ಇಂಗ್ಲೆಂಡ್‌ನಲ್ಲಿ 2014ರಲ್ಲಿ ನಡೆದ ಸರಣಿಯ ಬಗ್ಗೆ ವಿವರಿಸಿದರು.

“ಸಚಿನ್ ತುಂಬಾ ಸಂಘಟಿತ ಬ್ಯಾಟರ್ ಆಗಿದ್ದರು. ನಾನು ಸಚಿನ್ ಮತ್ತು ವಿರಾಟ್ ಅವರನ್ನು ಹೋಲಿಸುವುದಾದರೆ, ಅವರಲ್ಲಿ ಕೊಹ್ಲಿ ಇನ್ನೂ ಕೆಲವು ದೌರ್ಬಲ್ಯಗಳನ್ನು ಹೊಂದಿದ್ದಾರೆ. 2014ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಾಗ‌ ವಿರಾಟ್‌ ಫಾರ್ಮ್‌ ಕಳೆದುಕೊಂಡಿದ್ದರು. ಜೇಮ್ಸ್ ಆಂಡರ್ಸನ್ ವಿರಾಟ್‌ರನ್ನು ಬಹಳಷ್ಟು ಕಾಡಿದರು. ಅದಕ್ಕೆ ಕೊಹ್ಲಿ ಬ್ಯಾಟ್‌ನಿಂದ ಉತ್ತರ ಬರಲಿಲ್ಲ. ಆ ಸರಣಿಯಲ್ಲಿ ಕೊಹ್ಲಿ ಸಂಪೂರ್ಣ ಫ್ಲಾಪ್ ಆಗಿದ್ದರು" ಎಂದು ಕೈಫ್ ಹೇಳಿದ್ದಾರೆ.

“ಗಿಲ್ ಅವರ ಬ್ಯಾಟಿಂಗ್ ತಂತ್ರವು ತೆಂಡೂಲ್ಕರ್ ಅವರಂತೆಯೇ ಇದೆ ಎಂದು ನಾನು ಭಾವಿಸುತ್ತೇನೆ. ಈ ಸಮಯದಲ್ಲಿ ಅವರನ್ನು ಔಟ್‌ ಮಾಡುವುದು ತುಂಬಾ ಕಷ್ಟ. ಅವರ ಆಟದಲ್ಲಿ ಯಾವುದೇ ದೌರ್ಬಲ್ಯ ಕಾಣುತ್ತಿಲ್ಲ. ವಿರಾಟ್ ಮತ್ತು ಸಚಿನ್ ಇಬ್ಬರೂ ದಂತಕಥೆಗಳು. ನಾನು ಅವರು ಇಬ್ಬರೊಂದಿಗೂ ಆಡಿದ್ದೇನೆ. ಆದರೆ ಕೊಹ್ಲಿ ಕೆಲವು ದೌರ್ಬಲ್ಯಗಳನ್ನು ಹೊಂದಿದ್ದಾರೆ,” ಎಂದು ಕೈಫ್ ಹೇಳಿದ್ದಾರೆ.

“ತಂತ್ರ ಮತ್ತು ಮಾನಸಿಕ ಸಾಮರ್ಥ್ಯವನ್ನು ನೋಡಿದರೆ, ಗಿಲ್ ಅವರು ಸಚಿನ್ ಅವರಂತೆ ಶ್ರೇಷ್ಠ ಕ್ರಿಕೆಟಿಗರಾಗುವ ಹಾದಿಯಲ್ಲಿದ್ದಾರೆ” ಎಂದು ಕೈಫ್ ತಿಳಿಸಿದ್ದಾರೆ.

Whats_app_banner