Kamran Akmal: ಹೈಬ್ರಿಡ್ ಮಾಡೆಲ್ ಒಪ್ಪಿದ್ದು, ಫೈವ್ಸ್ಟಾರ್ ಹೋಟೆಲ್ಗಳಲ್ಲಿ ಕೂತು ತಿನ್ನೋದಕ್ಕೆ; ಪಿಸಿಬಿ ವಿರುದ್ಧ ಕಮ್ರಾನ್ ಅಕ್ಮಲ್ ಗರಂ
Kamran Akmal: ಹೈಬ್ರಿಡ್ ಮಾಡೆಲ್ನಲ್ಲಿ ಏಷ್ಯಾಕಪ್ ಟೂರ್ನಿಯನ್ನು ಆಯೋಜಿಸಲು ಪಾಕಿಸ್ತಾನ ಒಪ್ಪಿದೆ. ಇದರ ಬೆನ್ನಲ್ಲೇ ಪಾಕ್ ಮಾಜಿ ಕ್ರಿಕೆಟಿಗರು ನಿರ್ಗಮಿತ ಅಧ್ಯಕ್ಷ ನಜಮ್ ಸೇಥಿ ಅವರನ್ನು ಟೀಕಿಸುತ್ತಿದ್ದಾರೆ.
ಏಷ್ಯಾಕಪ್ 2023ರ (Aisa Cup 2023) ಟೂರ್ನಿಗೆ ಆತಿಥ್ಯಕ್ಕೆ ಸಂಬಂಧಿಸಿದ್ದ ವಿವಾದ ಬಹುತೇಕ ಸುಖಾಂತ್ಯ ಕಂಡಿದೆ. ಭಾರತ, ಪಾಕಿಸ್ತಾನಕ್ಕೆ (India - Pakistan) ಪ್ರಯಾಣ ಬೆಳೆಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಹೈಬ್ರಿಡ್ ಮಾದರಿಯಲ್ಲೇ ಟೂರ್ನಿ ಆಯೋಜಿಸಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (Asian Cricket Council) ಒಪ್ಪಿದೆ. ಟೂರ್ನಿಯ್ಲಲಿ 4 ಪಂದ್ಯಗಳು ಪಾಕಿಸ್ತಾನದಲ್ಲಿ ಹಾಗೂ 9 ಪಂದ್ಯಗಳು ಶ್ರೀಲಂಕಾದಲ್ಲಿ (Sri Lanka) ನಡೆಸಲು ತೀರ್ಮಾನಿಸಿವೆ. ಆ ಮೂಲಕ ಟೂರ್ನಿಯನ್ನು ಅದ್ಧೂರಿಯಾಗಿ ಎಸಿಸಿ ಆಯೋಜಿಸಲು ವ್ಯವಸ್ಥೆ ಮಾಡಿದೆ.
ಆದರೆ, ಹೈಬ್ರಿಡ್ ಮಾದರಿ ಪ್ರಸ್ತಾಪಿಸಿ ಒಪ್ಪಿಗೆ ಪಡೆದಿರುವ ಪಾಕಿಸ್ತಾನ ಭಾರೀ ಟೀಕೆಗೆ ಗುರಿಯಾಗಿದೆ. ಅದೇ ಸಮಯದಲ್ಲಿ ಪಿಸಿಬಿಯ ನಿಯೋಜಿತ ಅಧ್ಯಕ್ಷ ಝಾಕಾ ಅಶ್ರಫ್ ಅವರು, ವೈಯಕ್ತಿಕವಾಗಿ ಈ ಹೈಬ್ರಿಡ್ ಮಾದರಿಯನ್ನು (Hybrid Model) ಇಷ್ಟವಾಗಿಲ್ಲ ಎಂದು ಪ್ರತಿಕ್ರಿಯಿಸಿದ್ದರು. ಇದೀಗ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್ (Kamran Akmal) ಕೂಡ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ನಿರ್ಗಮಿತ ಅಧ್ಯಕ್ಷ ನಜಮ್ ಸೇಥಿ (Najam Sethi) ನಿಲುವನ್ನು ಟೀಕಿಸಿದ್ದಾರೆ.
ಟೀಕಿಸಿದ ಕಮ್ರಾನ್ ಅಕ್ಮಲ್
ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಪ್ರತಿಕ್ರಿಯಿಸಿರುವ ಅಕ್ಮಲ್, ನಿರ್ಗಮಿತ ಪಿಸಿಬಿ ಅಧ್ಯಕ್ಷ ನಜಮ್ ಸೇಥಿ ಅವರನ್ನು ಕಟುವಾಗಿ ಟೀಕಿಸಿದರು. ಹೈಬ್ರಿಡ್ ಮಾದರಿಯನ್ನು ಒಪ್ಪಿರುವುದು ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಪೂರೈಸಿಕೊಳ್ಳಲು. ಏಷ್ಯಾಕಪ್ ಟೂರ್ನಿಯನ್ನು ಶ್ರೀಲಂಕಾ ಅಥವಾ ದುಬೈನಲ್ಲಿ ಆಯೋಜಿಸಲು ಬಯಸಿದ್ದರು. ಇದೀಗ ಅವರಂದುಕೊಂಡಂತೆ ನೆರವೇರಿದೆ. ಇದರಿಂದ ಅವರು ಫೈವ್ ಸ್ಟಾರ್ ಹೋಟೆಗಳಲ್ಲಿ ತಿಂದು ತೇಗಿ ಎಂಜಾಯ್ ಮಾಡಬಹುದು ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವ್ಯಂಗ್ಯವಾಡಿದ ಮಾಜಿ ವಿಕೆಟ್ ಕೀಪರ್
ಹೈಬ್ರಿಡ್ ಮಾದರಿಯಲ್ಲಿ ಏಷ್ಯಾಕಪ್ ಆಯೋಜಿಸಲು ಒಪ್ಪಿಗೆ ಸೂಚಿಸಿರುವುದಕ್ಕೆ ಪಿಸಿಬಿ ನಿರ್ಗಮಿತ ಅಧ್ಯಕ್ಷ ನಜಮ್ ಸೇಥಿಯನ್ನು ನಾವು ಖಂಡಿತವಾಗಿ ಪ್ರಶಂಸಿಸಬೇಕು. ತಮ್ಮ ವೈಯಕ್ತಿಕ ಹಿತಾಸಕ್ತಿಗಳಿಂದ ಇದನ್ನು ಒಪ್ಪಿಕೊಂಡಿದ್ದಾರೆ. ಈ ನಿರ್ಧಾರಕ್ಕಾಗಿ ಹಗಲು ರಾತ್ರಿ ಕಷ್ಟ ಪಟ್ಟರು. ಸಾಕಷ್ಟು ಹೋರಾಟ ನಡೆಸಿದರು. ಎಸಿಸಿಯನ್ನು ಮನವೊಲಿಸಲು ಶ್ರಮಿಸಿದರು. ಇದು ಸುಲಭವಾಗಿರಲಿಲ್ಲ. ಒಂದು ವೇಳೆ ಸೇಥಿ ಅವರು ಸಾಕಷ್ಟು ಪರಿಶ್ರಮ ಪಡದಿದ್ದರೆ ಹೈಬ್ರಿಡ್ ಯೋಜನೆ ತಪ್ಪಿಹೋಗುತ್ತಿತ್ತು ಎಂದು ವ್ಯಂಗ್ಯವಾಡಿದ್ದಾರೆ.
ಅಭಿಮಾನಿಗಳಿಗೆ ನಿರಾಸೆಯಾಗಿದೆ
ಕೆಲವು ವರ್ಷಗಳಿಂದ ಪಾಕಿಸ್ತಾನದಲ್ಲಿ ಏಷ್ಯಾಕಪ್ ಟೂರ್ನಿ ನಡೆಯುವುದಿಲ್ಲ ಎನ್ನುವಂತಾಗಿತ್ತು. ಸದ್ಯ ನಾವು ಅತಿಥೇಯರು ಆಗಿರುವ ಕಾರಣ, ಪಾಕಿಸ್ತಾನದಲ್ಲೇ ಟೂರ್ನಿ ಆಯೋಜಿಸಬೇಕು ಎಂಬುದು ಎಲ್ಲರ ಕನಸು. ಆದರೆ ಏಷ್ಯಾಕಪ್‌ನ ಆತಿಥ್ಯ ಹಕ್ಕು ಪಡೆದರೂ ಪ್ರಮುಖ ಪಂದ್ಯಗಳು ಪೂರ್ಣ ಪ್ರಮಾಣ ನಡೆಯದ ಕಾರಣ ಪಾಕಿಸ್ತಾನದ ಅಭಿಮಾನಿಗಳು ತೀವ್ರ ನಿರಾಸೆಗೊಂಡಿದ್ದಾರೆ. ಆತಿಥ್ಯ ಪಡೆಯಲು ಯಶಸ್ವಿಯಾದರೂ, ಎಲ್ಲೋ ಒಂದು ಕಡೆ ನಿರಾಸೆಯಾಗಿದೆ ಎಂದು ಕಮ್ರಾನ್ ಅಕ್ಮಲ್ ಟೀಕಿಸಿದ್ದಾರೆ.
ಆಗಸ್ಟ್ 31ರಿಂದ ಟೂರ್ನಿ ಆರಂಭ
ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಇತ್ತೀಚೆಗೆ ಪ್ರಕಟಿಸಿದ ವೇಳಾಪಟ್ಟಿಯ ಪ್ರಕಾರ, ಏಷ್ಯಾ ಕಪ್ ಆಗಸ್ಟ್ 31 ರಿಂದ ಸೆಪ್ಟೆಂಬರ್ 17 ರವರೆಗೆ ನಡೆಯಲಿದೆ. ಇದರ ಪ್ರಕಾರ ಪಿಸಿಬಿ ಪಾಕಿಸ್ತಾನದಲ್ಲಿ ನಾಲ್ಕು ಪಂದ್ಯಗಳನ್ನು ಮತ್ತು ಶ್ರೀಲಂಕಾದಲ್ಲಿ 9 ಪಂದ್ಯಗಳನ್ನು ಆಡಲು ಒಪ್ಪಿಕೊಂಡಿದೆ.