West Indies vs India: ಕಾಡಿದ ಮಳೆ, ಬ್ಯಾಟರ್‌ಗಳ ಅಬ್ಬರ; ವೆಸ್ಟ್ ಇಂಡೀಸ್ ವಿರುದ್ಧ ಸರಣಿ ಕ್ಲೀನ್‌ಸ್ವೀಪ್ ಹಾದಿಯಲ್ಲಿ ಭಾರತ
ಕನ್ನಡ ಸುದ್ದಿ  /  ಕ್ರೀಡೆ  /  West Indies Vs India: ಕಾಡಿದ ಮಳೆ, ಬ್ಯಾಟರ್‌ಗಳ ಅಬ್ಬರ; ವೆಸ್ಟ್ ಇಂಡೀಸ್ ವಿರುದ್ಧ ಸರಣಿ ಕ್ಲೀನ್‌ಸ್ವೀಪ್ ಹಾದಿಯಲ್ಲಿ ಭಾರತ

West Indies vs India: ಕಾಡಿದ ಮಳೆ, ಬ್ಯಾಟರ್‌ಗಳ ಅಬ್ಬರ; ವೆಸ್ಟ್ ಇಂಡೀಸ್ ವಿರುದ್ಧ ಸರಣಿ ಕ್ಲೀನ್‌ಸ್ವೀಪ್ ಹಾದಿಯಲ್ಲಿ ಭಾರತ

West Indies vs India 2nd Test: ಮೊದಲ ಇನ್ನಿಂಗ್ಸ್‌ನಲ್ಲಿ 183 ರನ್‌ಗಳ ಬೃಹತ್ ಮುನ್ನಡೆ ಗಳಿಸಿದ ಭಾರತ ಎರಡನೇ ಇನಿಂಗ್ಸ್‌ನಲ್ಲಿ ಅಬ್ಬರದ ಬ್ಯಾಟಿಂಗ್‌ಗೆ ಮುಂದಾಯಿತು. ಟೆಸ್ಟ್‌ನಲ್ಲಿಯೂ ಟಿ20ಯಂತೆ ಬ್ಯಾಟ್‌ ಬೀಸಿದ ಭಾರತೀಯರು, ಕೇವಲ 24 ಓವರ್‌ ಮಾತ್ರ ಬ್ಯಾಟ್‌ ಬೀಸಿ ಎರಡು ವಿಕೆಟ್‌ ನಷ್ಟಕ್ಕೆ 181 ರನ್ ಗಳಿಸಿದರು.

ಭಾರತ ನಾಯಕ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್
ಭಾರತ ನಾಯಕ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ (AP)

ವೆಸ್ಟ್‌ ಇಂಡೀಸ್‌ ವಿರುದ್ಧದ ಸರಣಿಯ ಎರಡನೇ ಟೆಸ್ಟ್‌ (West Indies vs India) ಪಂದ್ಯವು ರೋಚಕ ಹಂತಕ್ಕೆ ತಲುಪಿದೆ. ನಾಲ್ಕನೇ ದಿನದಾಟದಲ್ಲಿ ಮಳೆಯಿಂದ ಪಂದ್ಯಕ್ಕೆ ಅಡ್ಡಿಯಾದರೂ, ಬೌಲಿಂಗ್‌ ಹಾಗೂ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಟೀಮ್‌ ಇಂಡಿಯಾ, ಸರಣಿ ಗೆಲ್ಲುವ ಉತ್ಸಾಹದಲ್ಲಿದೆ. ವೇಗಿ ಮೊಹಮ್ಮದ್ ಸಿರಾಜ್ ತಮ್ಮ ವೃತ್ತಿಜೀವನದ ಅತ್ಯುತ್ತಮ ಬೌಲಿಂಗ್‌ ಅಂಕಿಅಂಶಗಳನ್ನು ದಾಖಲಿಸಿದರು. ಬ್ಯಾಟಿಂಗ್‌ನಲ್ಲಿ ಆಕ್ರಮಣಕಾರಿ ವಿಧಾನ ಅನುಸರಿಸಿದ ಭಾರತ ಐದನೇ ದಿನದಾಟವನ್ನು ಕುತೂಹಲದ ಘಟ್ಟಕ್ಕೆ ಕೊಂಡೊಯ್ದಿದೆ.

ಮೂರನೇ ದಿನದಾಟದ ಅಂತ್ಯದ ವೇಳೆಗೆ 5 ವಿಕೆಟ್‌ ನಷ್ಟಕ್ಕೆ 229 ರನ್ ಗಳಿಸಿ ನಾಲ್ಕನೇ ದಿನವನ್ನು ಪ್ರಾರಂಭಿಸಿದ ಆತಿಥೇಯರು, ಸಿರಾಜ್ ಮಾರಕ ದಾಳಿಗೆ ಪತನವಾಯ್ತು. ಐದು ವಿಕೆಟ್‌ಗಳನ್ನು ಪಡೆದು ಮಿಂಚಿದ ಸಿರಾಜ್‌, ವೆಸ್ಟ್ ಇಂಡೀಸ್ ತಂಡವನ್ನು ಅಂತಿಮವಾಗಿ ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿ 255 ರನ್‌ಗಳಿಗೆ ಆಲೌಟ್ ಮಾಡಿದರು.

ಟೀಮ್‌ ಇಂಡಿಯಾ ವೇಗದ ಶತಕ

ಮೊದಲ ಇನ್ನಿಂಗ್ಸ್‌ನಲ್ಲಿ 183 ರನ್‌ಗಳ ಬೃಹತ್ ಮುನ್ನಡೆ ಗಳಿಸಿದ ಭಾರತ ಎರಡನೇ ಇನಿಂಗ್ಸ್‌ನಲ್ಲಿ ಅಬ್ಬರದ ಬ್ಯಾಟಿಂಗ್‌ಗೆ ಮುಂದಾಯಿತು. ಟೆಸ್ಟ್‌ನಲ್ಲಿಯೂ ಟಿ20ಯಂತೆ ಬ್ಯಾಟ್‌ ಬೀಸಿದ ಭಾರತೀಯರು, ಕೇವಲ 24 ಓವರ್‌ ಮಾತ್ರ ಬ್ಯಾಟ್‌ ಬೀಸಿ ಎರಡು ವಿಕೆಟ್‌ ನಷ್ಟಕ್ಕೆ 181 ರನ್ ಗಳಿಸಿದರು. ಚಹಾ ವಿರಾಮದ ಬಳಿಕ ಇನ್ನಿಂಗ್ಸ್‌ ಡಿಕ್ಲೇರ್ ಮಾಡಿಕೊಂಡ ಟೀಮ್‌ ಇಂಡಿಯಾ, ಅಂತಿಮವಾಗಿ ಆತಿಥೇಯರಿಗೆ 365 ರನ್‌ಗಳ ಗುರಿ ನೀಡಿದೆ. ಭಾರತವು ಕೇವಲ 12.2 ಓವರ್‌ಗಳಲ್ಲಿ 100 ರನ್ ಪೇರಿಸಿತು. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ತಂಡವೊಂದರ ವೇಗದ ಶತಕವಾಗಿದೆ.

ವೆಸ್ಟ್‌ ಇಂಡೀಸ್‌ಗೆ ಬೃಹತ್‌ ಗುರಿ

ನಾಲ್ಕನೇ ದಿನದಾಟದ ಅಂತ್ಯಕ್ಕೆ ವೆಸ್ಟ್ ಇಂಡೀಸ್ 32 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 76 ರನ್ ಗಳಿಸಿದೆ. ನಾಯಕ ಕ್ರೈಗ್ ಬ್ರಾಥ್ ವೈಟ್ 28 ರನ್‌ ಗಳಿಸಿ ಔಟಾದರೆ, ಕಿರ್ಕ್ ಮೆಕೆಂಜಿ ಖಾತೆ ತೆರೆಯದೆ ಸ್ಪಿನ್ನರ್ ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದರು. ಸದ್ಯ ಟ್ಯಾಗ್ನರಿನ್ ಚಂದ್ರಪಾಲ್ ಮತ್ತು ಜೆರ್ಮೈನ್ ಬ್ಲಾಕ್‌ವುಡ್ ಕ್ರೀಸ್‌ನಲ್ಲಿದ್ದು, ಐದನೇ ದಿನಕ್ಕೆ ವಿಕೆಟ್‌ ಕಾಯ್ದುಕೊಂಡಿದ್ದಾರೆ. ಇಬ್ಬರೂ ಕ್ರಮವಾಗಿ 24 ಮತ್ತು 20 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಆತಿಥೇಯರ ಗೆಲುವಿಗೆ ಇನ್ನೂ 289 ರನ್‌ಗಳ ಅಗತ್ಯವಿದೆ. ಈ ಸವಾಲು ವಿಂಡೀಸ್‌ ಪಾಲಿಗೆ ದೊಡ್ಡದಾಗಿದ್ದು, ಭಾರತದ ಗೆಲುವು ಬಹುತೇಕೆ ನಿಚ್ಚಳವಾಗಿದೆ.

ಮಳೆ ಕಾಟ

ದಿನದ ಬಹುತೇಕ ಅವಧಿಯಲ್ಲಿ ಮಳೆ ಕಾಡಿತು. ಮಧ್ಯಾಹ್ನದ ಅವಧಿಯಲ್ಲಿ ಕೇವಲ ಮೂರು ಓವರ್‌ಗಳನ್ನಷ್ಟೇ ಬೌಲ್ ಮಾಡಲು ಸಾಧ್ಯವಾಯಿತು. ರೋಚಕ ಹಂತಕ್ಕೆ ಬಂದಿರುವ ಐದನೇ ದಿನದಾಟದಲ್ಲೂ ಮಳೆ ಬರುವ ಸಾಧ್ಯತೆ ಇದೆ.

ಭಾರತದ ವೇಗದ ಆಟ

ಎರಡನೇ ಇನ್ನಿಂಗ್ಸ್‌ನಲ್ಲಿ ಟೀಮ್‌ ಇಂಡಿಯಾ ವೇಗದ ಆಟಕ್ಕೆ ಮುನ್ನುಗ್ಗಿತು. ವೇಗವಾಗಿ ರನ್‌ ಕಲೆ ಹಾಕಿ ವಿಂಡೀಸ್‌ಗೆ ನಾಲ್ಕನೇ ದಿನದ ಅಂತ್ಯದಲ್ಲೂ ಬ್ಯಾಟಿಂಗ್‌ಗೆ ಅವಕಾಶ ನೀಡುವ ಯೋಚನೆ ಭಾರತಕ್ಕಿತ್ತು. ನಾಯಕ ರೋಹಿತ್ ಶರ್ಮಾ ಕೇವಲ 44 ಎಸೆತಗಳಲ್ಲಿ 57 ರನ್‌ ಗಳಿಸಿದರು. ಸೆಂಚುರಿ ಹೀರೋ ಯಶಸ್ವಿ ಜೈಸ್ವಾಲ್ 30 ಎಸೆತಗಳಲ್ಲಿ 38 ರನ್‌ ಗಳಿಸಿದರು. ಶುಬ್ಮನ್‌ ಗಿಲ್‌ ತುಸು ನಿಧಾನವಾಗಿ ಬ್ಯಾಟ್‌ ಬೀಸಿದರೆ, ಇಶಾನ್ ಕಿಶನ್ ಕೂಡ ವೇಗದ ಆಟಕ್ಕೆ ಮುನ್ನುಗ್ಗಿದರು. 34 ಎಸೆತಗಳಲ್ಲಿ ಅಜೇಯ 52 ರನ್ ಗಳಿಸಿದರು. ಇವರಿಬ್ಬರೂ ಅಜೇಯ 79 ರನ್‌ಗಳ ಜೊತೆಯಾಟವಾಡಿದರು.

ನಾಲ್ಕನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಬದಲಿಗೆ ಬಂದ ಕಿಶನ್ ನಾಲ್ಕು ಬೌಂಡರಿಗಳು ಮತ್ತು ಎರಡು ಸಿಕ್ಸರ್‌ ಸಹಿತ ಅಬ್ಬರಿಸಿದರು. ಸದ್ಯ ಐದನೇ ದಿನದಾಟ ಕುತೂಹಲ ಮೂಡಿಸಿದ್ದು, ಭಾರತ ಗೆಲುವು ಸಾಧಿಸುವ ಭರವಸೆಯಲ್ಲಿದೆ.

Whats_app_banner