ದೊಡ್ಡ ಶಿಕ್ಷೆ; ಆ ಒಂದು ಕಾರಣದಿಂದ ವಿಜಯ್ ಹಜಾರೆ ಟ್ರೋಫಿಗೆ ಸೂಪರ್‌ಸ್ಟಾರ್ ಸಂಜು ಸ್ಯಾಮ್ಸನ್ ಕೈಬಿಟ್ಟ ಕೇರಳ ತಂಡ
ಕನ್ನಡ ಸುದ್ದಿ  /  ಕ್ರಿಕೆಟ್  /  ದೊಡ್ಡ ಶಿಕ್ಷೆ; ಆ ಒಂದು ಕಾರಣದಿಂದ ವಿಜಯ್ ಹಜಾರೆ ಟ್ರೋಫಿಗೆ ಸೂಪರ್‌ಸ್ಟಾರ್ ಸಂಜು ಸ್ಯಾಮ್ಸನ್ ಕೈಬಿಟ್ಟ ಕೇರಳ ತಂಡ

ದೊಡ್ಡ ಶಿಕ್ಷೆ; ಆ ಒಂದು ಕಾರಣದಿಂದ ವಿಜಯ್ ಹಜಾರೆ ಟ್ರೋಫಿಗೆ ಸೂಪರ್‌ಸ್ಟಾರ್ ಸಂಜು ಸ್ಯಾಮ್ಸನ್ ಕೈಬಿಟ್ಟ ಕೇರಳ ತಂಡ

Sanju Samson: ಲಿಸ್ಟ್ ಎ ದೇಶೀಯ ಟೂರ್ನಿಯ ಪೂರ್ವಸಿದ್ಧತಾ ಶಿಬಿರಕ್ಕೆ ಹಾಜರಾಗದ ಕಾರಣಕ್ಕೆ ಕೇರಳ ಕ್ರಿಕೆಟ್ ಸಂಸ್ಥೆಯು ಸಂಜು ಸ್ಯಾಮ್ಸನ್ ಅವರನ್ನು ವಿಜಯ್ ಹಜಾರೆ ಟ್ರೋಫಿ ತಂಡದಿಂದ ಕೈಬಿಡಲಾಗಿದೆ ಎಂದು ವರದಿಯಾಗಿದೆ.

ವಿಜಯ್ ಹಜಾರೆ ಟ್ರೋಫಿಗೆ ಆ ಒಂದು ಕಾರಣದಿಂದ ಸೂಪರ್‌ಸ್ಟಾರ್ ಸಂಜು ಸ್ಯಾಮ್ಸನ್ ಕೈಬಿಟ್ಟ ಕೇರಳ ತಂಡ
ವಿಜಯ್ ಹಜಾರೆ ಟ್ರೋಫಿಗೆ ಆ ಒಂದು ಕಾರಣದಿಂದ ಸೂಪರ್‌ಸ್ಟಾರ್ ಸಂಜು ಸ್ಯಾಮ್ಸನ್ ಕೈಬಿಟ್ಟ ಕೇರಳ ತಂಡ (AP)

ಇತ್ತೀಚೆಗೆ ಮುಕ್ತಾಯಗೊಂಡ ಸೈಯಸ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ನಾಯಕತ್ವ ವಹಿಸಿದ್ದ ಸಂಜು ಸ್ಯಾಮ್ಸನ್ ಅವರಿಗೆ ಕೇರಳ ತಂಡವು ದೊಡ್ಡ ಶಿಕ್ಷೆ ವಿಧಿಸಿದೆ. ಡಿಸೆಂಬರ್ 21ರಿಂದ ಶುರುವಾಗುವ ವಿಜಯ್ ಹಜಾರೆ ಟ್ರೋಫಿಗೆ ಸಂಜು ಸ್ಯಾಮ್ಸನ್​ರನ್ನು ಕೈಬಿಡಲಾಗಿದೆ. ಇದು ಕ್ರಿಕೆಟ್ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ. ಈ ಹಿಂದೆ ಉತ್ತಮ ಪ್ರದರ್ಶನದ ಹೊರತಾಗಿಯೂ ವಿಕೆಟ್ ಕೀಪರ್​ ಬ್ಯಾಟರ್​ಗೆ ರಾಷ್ಟ್ರೀಯ ತಂಡದಲ್ಲಿ ಸ್ಥಿರ ಅವಕಾಶ ಸಿಗುತ್ತಿಲ್ಲ ಎಂಬ ಕೂಗು ಕೇಳಿಬರುತ್ತಿತ್ತು. ಇದೀಗ ಭಾರತ ಟಿ20ಐ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಂಡ ಸಂಜುಗೆ, ತಮ್ಮ ರಾಜ್ಯ ತಂಡದಲ್ಲೇ ಅವಕಾಶ ಇಲ್ಲದಂತಾಗಿದೆ.

ಫಾರ್ಮ್ ಅಥವಾ ಕ್ರಿಕೆಟ್ ಕಾರಣಗಳಿಂದ ಸಂಜು ಹೊರಗುಳಿದಿಲ್ಲ. ವಿಚಿತ್ರ ಕಾರಣಕ್ಕೆ ಸ್ಟಾರ್ ಕ್ರಿಕೆಟಿಗನನ್ನು ತಂಡದಿಂದ ಕೈಬಿಡಲಾಗಿದೆ. ಲಿಸ್ಟ್ ಎ ದೇಶೀಯ ಟೂರ್ನಿಯ ಪೂರ್ವಸಿದ್ಧತಾ ಶಿಬಿರಕ್ಕೆ ಹಾಜರಾಗದ ಕಾರಣಕ್ಕೆ ಕೇರಳ ಕ್ರಿಕೆಟ್ ಸಂಸ್ಥೆಯು ಸಂಜು ಅವರನ್ನು ತಂಡದಿಂದ ಡ್ರಾಪ್ ಮಾಡಿದೆ ಎಂದು ವರದಿಯಾಗಿದೆ. ಸ್ಯಾಮ್ಸನ್ ಜೊತೆಗೆ ಕೇರಳ ತಂಡದಲ್ಲಿ ಅನುಭವಿ ಸ್ಟಾರ್ ಸಚಿನ್ ಬೇಬಿ ಅವರಿಗೂ ಅವಕಾಶ ಸಿಕ್ಕಿಲ್ಲ. ಸೈಯದ್ ಮುಷ್ತಾಕ್ ಅಲಿಯಲ್ಲಿ ಸಚಿನ್ ಗಾಯಗೊಂಡಿದ್ದರು. ಅವರು ಚೇತರಿಸಿಕೊಳ್ಳಲು ಕೆಲವು ದಿನಗಳು ಬೇಕಿದೆ. ಆ ಬಳಿಕ ಕೇರಳದ ಸೆಲೆಕ್ಷನ್ ಕಮಿಟಿ ಸಚಿನ್‌ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ.

ಇಬ್ಬರು ಅನುಭವಿ ತಾರೆಗಳ ಅನುಪಸ್ಥಿತಿಯಲ್ಲಿ ಬ್ಯಾಟರ್ ಸಲ್ಮಾನ್ ನಿಜಾರ್ ಅವರು ವಿಜಯ್ ಹಜಾರೆ ಟ್ರೋಫಿಯಲ್ಲಿ ಕೇರಳ ತಂಡವನ್ನು ಮುನ್ನಡೆಸಲಿದ್ದಾರೆ. 50 ಓವರ್‌ಗಳ ಟೂರ್ನಿಗೆ ಸ್ಯಾಮ್ಸನ್, ಕೇರಳದ 30 ಸದಸ್ಯರ ಸಂಭಾವ್ಯ ಪ್ರಾಥಮಿಕ ತಂಡದ ಭಾಗವಾಗಿದ್ದರು. ಕೃಷ್ಣಗಿರಿ ಸ್ಟೇಡಿಯಂನಲ್ಲಿ 2 ಅಭ್ಯಾಸ ಪಂದ್ಯಗಳನ್ನು ಆಡಲಾಗಿತ್ತು. ಶಿಬಿರದಲ್ಲಿ ಪಾಲ್ಗೊಂಡವರಲ್ಲಿ ತಂಡ ಆಯ್ಕೆ ಮಾಡಲು ಕೆಸಿಎ ನಿರ್ಧರಿಸಿತ್ತು. ESPNCricinfo ವರದಿಯ ಪ್ರಕಾರ ಶಿಬಿರಕ್ಕೆ ಅಲಭ್ಯರಾಗುವುದಾಗಿ ಕೇರಳ ಕ್ರಿಕೆಟ್ ಸಂಸ್ಥೆಗೆ (ಕೆಸಿಎ) ತಿಳಿಸಿದ್ದ ಕಾರಣ ಸಂಜು ಕೈಬಿಟ್ಟು 19 ಆಟಗಾರರ ಅಂತಿಮ ತಂಡವನ್ನು ಪ್ರಕಟಿಸಲಾಯಿತು.

ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಸಂಜು ಪ್ರದರ್ಶನ

30 ವರ್ಷದ ವಿಕೆಟ್‌ಕೀಪರ್ ಬ್ಯಾಟರ್ ಈ ವರ್ಷ ಎಲ್ಲಾ ಸ್ವರೂಪಗಳಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2024ರಲ್ಲಿ 149.45 ರ ಸ್ಟ್ರೈಕ್​ರೇಟ್‌ನಲ್ಲಿ 5 ಇನ್ನಿಂಗ್ಸ್‌ಗಳಲ್ಲಿ 136 ರನ್ ಗಳಿಸಿದ್ದರು. ಸಂಜು 1 ಇನ್ನಿಂಗ್ಸ್‌ನಲ್ಲಿ ತಮ್ಮ ವೈಯಕ್ತಿಕ ಅರ್ಧಶತಕ ಪೂರೈಸಿದರು. ಅವರ ಗರಿಷ್ಠ ವೈಯಕ್ತಿಕ ಇನ್ನಿಂಗ್ಸ್ 75 ರನ್ ಆಗಿತ್ತು. ಈ ಬಾರಿಯ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಸಂಜು ಸ್ಯಾಮ್ಸನ್ ಒಟ್ಟು 19 ಬೌಂಡರಿ ಹಾಗೂ 5 ಸಿಕ್ಸರ್ ಸಿಡಿಸಿದ್ದರು. ಸಂಜು ನಾಯಕತ್ವದಲ್ಲಿ ಕೇರಳ 6 ಗುಂಪು-ಹಂತದ ಪಂದ್ಯಗಳಲ್ಲಿ 4 ಗೆದ್ದರೂ ನಾಕೌಟ್ ಅರ್ಹತೆಗೆ ಅರ್ಹತೆ ಪಡೆಯಲಿಲ್ಲ.

ಸ್ಯಾಮ್ಸನ್ ಅನುಪಸ್ಥಿತಿಯು ಡಿಸೆಂಬರ್ 21ರಂದು ಶುರುವಾಗಲಿರುವ ವಿಜಯ್ ಹಜಾರೆ ಟ್ರೋಫಿಯ 29ನೇ ಆವೃತ್ತಿಯಲ್ಲಿ ಕೇರಳ ತಂಡದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಸ್ಟಾರ್ ಬ್ಯಾಟರ್ ಸಚಿನ್ ಬೇಬಿ ಇಲ್ಲದೆ ಕೇರಳ ಕೂಡ ಕಣಕ್ಕಿಳಿಯಲಿದೆ. ಕಳೆದ ಆವೃತ್ತಿಯಲ್ಲಿ ನಾಯಕನಾಗಿದ್ದ ರೋಹನ್ ಕುನ್ನುಮ್ಮಾಲ್ 2024ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನಂತರ ತಂಡದ ಭಾಗವಾಗಿದ್ದಾರೆ. ಡಿಸೆಂಬರ್ 23 ರಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬರೋಡಾ ವಿರುದ್ಧ ಕೇರಳ ತನ್ನ ವಿಜಯ್ ಹಜಾರೆ ಟ್ರೋಫಿ 2024-25 ಅಭಿಯಾನವನ್ನು ಪ್ರಾರಂಭಿಸಲಿದೆ.

2024-25ರ ವಿಜಯ್ ಹಜಾರೆ ಟ್ರೋಫಿಗಾಗಿ ಕೇರಳ ತಂಡ

ಸಲ್ಮಾನ್ ನಿಜಾರ್ (ನಾಯಕ), ರೋಹನ್ ಕುನ್ನುಮ್ಮಾಲ್, ಶೌನ್ ರೋಜರ್, ಮೊಹಮ್ಮದ್ ಅಜರುದ್ದೀನ್ (ವಿಕೆಟ್ ಕೀಪರ್​), ಆನಂದ್ ಕೃಷ್ಣನ್, ಕೃಷ್ಣ ಪ್ರಸಾದ್, ಜಲಜ್ ಸಕ್ಸೇನಾ, ಆದಿತ್ಯ ಸರ್ವತೆ, ಸಿಜೋಮನ್ ಜೋಸೆಫ್, ಬಸಿಲ್ ಥಂಪಿ, ಬೇಸಿಲ್ ಎನ್‌ಪಿ, ನಿಧೀಶ್ ಎಂಡಿ, ಈಡನ್ ಆಪಲ್ ಟಾಮ್, ಶರಫುದ್ದೀನ್, ಅಖಿಲ್ ಸ್ಕೇರಿಯಾ , ವಿಶ್ವೇಶ್ವರ್ ಸುರೇಶ್, ವೈಶಾಕ್ ಚಂದ್ರನ್, ಅಜ್ನಾಸ್ ಎಂ (ವಿಕೆಟ್ ಕೀಪರ್).

Whats_app_banner