ಕನ್ನಡ ಸುದ್ದಿ  /  Sports  /  French Open Badminton 2024 Mens Doubles Final Indias Satwiksairaj Rankireddy-chirag Shetty Clinch Second Title Prs

ಫ್ರೆಂಚ್ ಓಪನ್ 2024: ಎರಡನೇ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕಿದ ಭಾರತದ ಸಾತ್ವಿಕ್​ರಾಜ್ ರಾಂಕಿರೆಡ್ಡಿ, ಚಿರಾಗ್ ಶೆಟ್ಟಿ

French Open Badminton 2024 : ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿಯು ಮಾರ್ಚ್ 10ರಂದು ತನ್ನ ಎರಡನೇ ಫ್ರೆಂಚ್ ಓಪನ್ ಪುರುಷರ ಡಬಲ್ಸ್ ಬ್ಯಾಡ್ಮಿಂಟನ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಎರಡನೇ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕಿದ ಭಾರತದ ಸಾತ್ವಿಕ್​ರಾಜ್ ರಾಂಕಿರೆಡ್ಡಿ, ಚಿರಾಗ್ ಶೆಟ್ಟಿ
ಎರಡನೇ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕಿದ ಭಾರತದ ಸಾತ್ವಿಕ್​ರಾಜ್ ರಾಂಕಿರೆಡ್ಡಿ, ಚಿರಾಗ್ ಶೆಟ್ಟಿ

ಭಾರತದ ಸ್ಟಾರ್ ಷಟ್ಲರ್​​ಗಳಾದ ಮತ್ತು ಅಗ್ರ ಶ್ರೇಯಾಂಕದ ಜೋಡಿ ಸಾತ್ವಿಕ್‌ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಭಾನುವಾರ (ಮಾರ್ಚ್ 10) ನಡೆದ ಪ್ರತಿಷ್ಠಿತ ಬಿಡಬ್ಲ್ಯುಎಫ್ ಫ್ರೆಂಚ್ ಓಪನ್ 2024 ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಚೀನಾದ ತೈಪೆಯ ಲೀ ಝೆ ಹುಯಿ ಮತ್ತು ಯಾಂಗ್ ಪೊ ಹ್ಸುವಾನ್ ಜೋಡಿಯನ್ನು 21-11, 21-17 ಅಂತರದಿಂದ ಮಣಿಸಿ 2ನೇ ಬಾರಿಗೆ ಫ್ರೆಂಚ್ ಓಪನ್ ಪುರುಷರ ಡಬಲ್ಸ್ ಕಿರೀಟಕ್ಕೆ ಮುತ್ತಿಕ್ಕಿದ್ದಾರೆ.

2022ರಲ್ಲಿ ಇದೇ ಪ್ರಶಸ್ತಿಯ ವಿಜೇತರು ಮತ್ತು ಮೂರು ಬಾರಿ ಫೈನಲ್​ಗೇರಿದ ವಿಶ್ವದ ನಂಬರ್​ 1 ಜೋಡಿ 36 ನಿಮಿಷಗಳಲ್ಲಿ ಸುಲಭ ಜಯದೊಂದಿಗೆ ತಮ್ಮ ಎದುರಾಳಿಗಳ ಮೇಲೆ ಪ್ರಾಬಲ್ಯ ಸಾಧಿಸಿತು. ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತರು ಈ ವರ್ಷದ ಜನವರಿಯಲ್ಲಿ ಮಲೇಷ್ಯಾ ಮಾಸ್ಟರ್ಸ್ (ಸೂಪರ್ 1000) ಮತ್ತು ಇಂಡಿಯನ್ ಓಪನ್ (ಸೂಪರ್ 750)ನ ಫೈನಲ್‌ಗಳಲ್ಲಿ ಪ್ರಸಿದ್ಧ ಗೆಲುವು ಕಂಡಿದ್ದರು.

ಆದರೆ ಪ್ಯಾರಿಸ್ ಒಲಿಂಪಿಕ್ಸ್​ ಬರುವುದಕ್ಕೂ ಮುನ್ನ ಭಾರತ ಷಟ್ಲರ್​​ಗಳ ಅದ್ಭುತ ಫಾರ್ಮ್​​ ನಿರೀಕ್ಷೆ ದುಪ್ಪಟ್ಟು ಮಾಡುವಂತೆ ಮಾಡಿದೆ. ಮೊದಲ ಗೇಮ್ ಅನ್ನು 21-11 ಅಂತರದಿಂದ ಜಯಿಸಿ ಭಾರತ ಪ್ರಾಬಲ್ಯ ಸಾಧಿಸಿತು. 2ನೇ ಗೇಮ್​​ನಲ್ಲಿ ಭಾರತೀಯ ಆಟಗಾರರು ಪ್ರಯಾಸಪಟ್ಟರು. ಮಧ್ಯಂತರ ವಿರಾಮದ ವೇಳೆಗೆ 9-11 ರಿಂದ ಹಿನ್ನಡೆ ಅನುಭವಿಸಿದ್ದರು. ಬ್ರೇಕ್ ನಂತರ ಪುಟಿದೆದ್ದ ಭಾರತೀಯರು ಎದರಾಳಿಗೆ ಸೋಲುಣಿಸಿದರು. ಇದರೊಂದಿಗೆ ಈ ವರ್ಷದ ಮೊದಲ ಪ್ರಶಸ್ತಿಯನ್ನು ಗೆದ್ದರು.

2023ರಲ್ಲಿ ಭರ್ಜರಿ ಪ್ರದರ್ಶನ

ಏಷ್ಯನ್ ಚಾಂಪಿಯನ್‌ಶಿಪ್, ಇಂಡೋನೇಷಿಯನ್ ಸೂಪರ್ 1000, ಕೊರಿಯಾ ಸೂಪರ್ 500 ಮತ್ತು ಸ್ವಿಸ್ ಓಪನ್ ಸೂಪರ್ 300 ಪ್ರಶಸ್ತಿಗಳನ್ನು ಗೆದ್ದಿರುವ ಸಾತ್ವಿಕ್ ಮತ್ತು ಚಿರಾಗ್, ಕಳೆದ ವರ್ಷ ಭಾರತದ ಅತ್ಯಂತ ಯಶಸ್ವಿ ಆಟಗಾರರಾಗಿದ್ದರು. ಒಂದೇ ವರ್ಷ ಒಟ್ಟು ಆರು ಪ್ರಶಸ್ತಿ ಗೆದ್ದಿರುವ ಈ ಜೋಡಿ, ಕಳೆದ ವರ್ಷ ನವೆಂಬರ್‌ನಲ್ಲಿ ಚೀನಾ ಮಾಸ್ಟರ್ಸ್ ಸೂಪರ್ 750ರ ಫೈನಲ್‌ಗೆ ತಲುಪಿದ್ದರು. ಇದೇ ವರ್ಷ ಮಲೇಷ್ಯಾ ಓಪನ್ ಫೈನಲ್​ನಲ್ಲಿ ರನ್ನರ್​ಅಪ್​ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.

ಸೆಮಿಫೈನಲ್​​ನಲ್ಲಿ ಕೊರಿಯಾದ ಕಾಂಗ್ ಮಿನ್ ಹ್ಯುಕ್ ಮತ್ತು ಸಿಯೊ ಸೆಯುಂಗ್ ಜೇ ಜೋಡಿಯನ್ನು 21-13, 21-16 ಅಂತರದಿಂದ ಸೋಲಿಸಿದ್ದ ಭಾರತದ ಜೋಡಿ ಫೈನಲ್​ಗೆ ಲಗ್ಗೆ ಇಟ್ಟಿತು. ಹ್ಯಾಂಗ್​ಝೌನಲ್ಲಿ ಕಳೆದ ವರ್ಷ ನಡೆದ ಏಷ್ಯನ್ ಗೇಮ್ಸ್​​ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದ ಈ ಸ್ಟಾರ್​​ ಆಟಗಾರರಿಗೆ, ಈ ಗೆಲುವು 2024ರ ವರ್ಷದ ಮೊದಲ ಪ್ರಶಸ್ತಿಯಾಗಿದೆ.

ಸಾತ್ವಿಕ್ ಮತ್ತು ಚಿರಾಗ್ ಈ ವರ್ಷದ ಕೊನೆಯಲ್ಲಿ ಪ್ಯಾರಿಸ್​ನಲ್ಲಿ ಜರುಗಲಿರುವ ಒಲಿಂಪಿಕ್ಸ್​ನಲ್ಲಿ ಪೋಡಿಯಂ ಫಿನಿಷ್ ಮಾಡಲಿರುವ ಪ್ರಮುಖ ಸ್ಪರ್ಧಿಗಳಾಗಿದ್ದಾರೆ. ಈ ವರ್ಷ ಮಲೇಷ್ಯಾ ಸೂಪರ್ 1000 ಮತ್ತು ಇಂಡಿಯಾ ಸೂಪರ್ 750ನಲ್ಲಿ ಭಾರತದ ಜೋಡಿ 2ನೇ ಅತ್ಯುತ್ತಮ ಸ್ಥಾನ ಮತ್ತು ಕಳೆದ ವರ್ಷ ಚೀನಾ ಮಾಸ್ಟರ್ಸ್ ಸೂಪರ್ 750ನಲ್ಲಿ ಫೈನಲ್​ನಲ್ಲಿ ಸೋಲನುಭವಿಸಿತ್ತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This copy first appeared in Hindustan Times Kannada website. To read more like this please logon to kannada.hindustantimes.com)