Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು-google doodle celebrates 1st woman professional wrestler hamida banu in india 5 interesting points about hamida banu uks ,ಕ್ರೀಡೆ ಸುದ್ದಿ
ಕನ್ನಡ ಸುದ್ದಿ  /  ಕ್ರೀಡೆ  /  Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಭಾರತದ ಕುಸ್ತಿ ಅಖಾಡದಲ್ಲಿ ಸಂಚಲನ ಮೂಡಿಸಿದ್ದ ಮಹಿಳಾ ಕುಸ್ತಿಪಟು ಹಮೀದಾ ಬಾನು (Hamida Banu), "ನನ್ನನ್ನು ಒಂದು ಪಂದ್ಯದಲ್ಲಿ ಸೋಲಿಸಿ. ನಾನು ನಿಮ್ಮನ್ನು ಮದುವೆಯಾಗುತ್ತೇನೆ" ಎಂಬ ಸವಾಲಿನೊಂದಿಗೆ ಕುಸ್ತಿ ಅಖಾಡಕ್ಕೆ ಇಳಿದವರು. ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ. ಅವರ ಕಿರುಪರಿಚಯ ಇಲ್ಲಿದೆ.

ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ
ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ (Google)

ನವದೆಹಲಿ: ಭಾರತದ ಮೊದಲ ವೃತ್ತಿಪರ ಮಹಿಳಾ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದಿನ (ಮೇ 4) ಗೂಗಲ್ ಡೂಡಲ್ ಗೌರವ ಪ್ರಾಪ್ತಿಯಾಗಿದೆ. 1940 - 50 ರ ದಶಕದಲ್ಲಿ ಪುರುಷರ ಭದ್ರಕೋಟೆಯಾಗಿದ್ದ ಕುಸ್ತಿ ಅಖಾಡಕ್ಕೆ ಪ್ರವೇಶಿಸಿ ತನ್ನದೇ ಛಾಪು ಮೂಡಿಸಿದ ಸಾಧಕಿಯ ಸ್ಮರಣೆ, ಗೌರವಾರ್ಥ ಈ ಗೂಗಲ್‌ ಡೂಡಲ್ ಎಂಬುದನ್ನು ಗೂಗಲ್ ಉಲ್ಲೇಖಿಸಿದೆ.

"ನನ್ನನ್ನು ಒಂದು ಪಂದ್ಯದಲ್ಲಿ ಸೋಲಿಸಿ. ನಾನು ನಿಮ್ಮನ್ನು ಮದುವೆಯಾಗುತ್ತೇನೆ" ಎಂಬ ಸವಾಲಿನೊಂದಿಗೆ ಕುಸ್ತಿ ಅಖಾಡಕ್ಕೆ ಇಳಿದವರು ಹಮೀದಾ ಬಾನು. 1954ರ ಫೆಬ್ರವರಿಯಲ್ಲಿ ಬಾನು ಪುರುಷ ಕುಸ್ತಿಪಟುಗಳಿಗೆ ನೀಡಿದ ಸವಾಲು ಇದು ಎಂದು ಆ ಕಾಲದ ಸುದ್ದಿ ವರದಿಗಳನ್ನು ಉಲ್ಲೇಖಿಸಿ ಬಿಬಿಸಿ ಹೇಳಿದೆ.

ಈ ಸವಾಲೆಸೆದ ಬಳಿಕ ಹಮೀದಾ ಬಾನು ಅವರು, ಪಂಜಾಬಿನ ಪಟಿಯಾಲದ ಒಬ್ಬರು ಮತ್ತು ಪಶ್ಚಿಮ ಬಂಗಾಳ ಕೋಲ್ಕತದ ಒಬ್ಬರು ಪುರುಷ ಕುಸ್ತಿ ಚಾಂಪಿಯನ್‌ಗಳನ್ನು ಸೋಲಿಸಿದ್ದರು. ಅದೇ ವರ್ಷ (1954) ಮೇ ತಿಂಗಳಲ್ಲಿ ಮೂರನೇ ಕುಸ್ತಿ ಪಂದ್ಯಕ್ಕಾಗಿ ಗುಜರಾತಿನ ವಡೋದರಾವನ್ನು ತಲುಪಿದರು ಎಂದು ವಡೋದರಾ ನಿವಾಸಿ ಸುಧೀರ್ ಪರಬ್‌ ಅವರು ತಮ್ಮ ಬಾಲ್ಯದ ಸಂದರ್ಭವನ್ನು ನೆನಪಿಸಿದ್ದಾಗಿ ಉಲ್ಲೇಖಿಸಿ ಬಿಬಿಸಿ ವರದಿ ಮಾಡಿದೆ.

ಆ ಸಂದರ್ಭದಲ್ಲಿ ವಡೋದರಾ ನಗರದಲ್ಲಿ ಉಂಟಾಗಿದ್ದ ಉನ್ಮಾದದ ಚಿತ್ರಣವನ್ನು ಸುಧೀರ್ ಪರಬ್ ಕಟ್ಟಿಕೊಟ್ಟಿದ್ದು, ಹಮೀದಾ ಬಾನು ಕುಸ್ತಿ ಪಂದ್ಯ ವೀಕ್ಷಿಸಲು ಟ್ರಕ್ ಮತ್ತು ಇತರೆ ವಾಹನಗಳಲ್ಲಿ ಜನ ಬಂದಿದ್ದರು. ಈ ಪಂದ್ಯಾವಳಿಯ ಪ್ರಚಾರಕ್ಕೆ ಬ್ಯಾನರ್‌, ಪೋಸ್ಟರ್‌ಗಳನ್ನೂ ಬಳಸಲಾಗಿತ್ತು. ಸುದ್ದಿ ಪತ್ರಿಕೆಗಳು ಹಮೀದಾ ಬಾನು ಅವರನ್ನು "ಅಲಿಗಢದ ಅಮೆಜಾನ್" ಎಂದು ಕರೆದಿದ್ದವು ಎಂಬುದನ್ನು ನೆನಪಿಸಿಕೊಂಡರು ಎಂದು ವರದಿ ತಿಳಿಸಿದೆ.

ಏತನ್ಮಧ್ಯೆ, ಅಲ್ಲಿ ಪುರುಷ ಕುಸ್ತಿಪಟು ಮಹಿಳೆಯನ್ನು ಎದುರಿಸಲು ನಿರಾಕರಿಸಿದ ನಂತರ ಅವಳು ಬಾಬಾ ಪಹಲ್ವಾನ್‌ನೊಂದಿಗೆ ಹೋರಾಡಿದಳು. ಅದರಲ್ಲಿ ಹಮೀದಾ ಬಾನು ಕೇವಲ 1 ನಿಮಿಷ ಮತ್ತು 34 ಸೆಕೆಂಡುಗಳಲ್ಲಿ ಗೆದ್ದರು ಎಂಬುದನ್ನು ಅಸೋಸಿಯೇಟೆಡ್ ಪ್ರೆಸ್ 1954ರ ಮೇ 3 ರಂದು ಮಾಡಿದ ವರದಿ ಉಲ್ಲೇಖಿಸಿದೆ. ಅದಾಗಿ, ಪಹಲ್ವಾನ್ ಅವರನ್ನು ಮದುವೆ ಸವಾಲಿನ ವ್ಯಾಪ್ತಿಯಿಂದ ಹೊರಗಿಡಲಾಗಿದೆ ಎಂದು ಘೋ‍ಷಿಸಿದರು ಎಂದು ವರದಿ ವಿವರಿಸಿದೆ.

ಹಮೀದಾ ಬಾನು- ಆಸಕ್ತಿದಾಯಕ 5 ಅಂಶಗಳು

1) ಹಮೀದಾ ಬಾನು ಅವರ ತೂಕ, ಎತ್ತರ ಮತ್ತು ಆಹಾರ ಎಲ್ಲವೂ ಸುದ್ದಿಯಾಗಿದೆ ಎಂದು ವರದಿ ತಿಳಿಸಿದೆ. ಹಮೀದಾ ಬಾನು 108 ಕೆಜಿ ತೂಕ ಮತ್ತು 5 ಅಡಿ 3 ಇಂಚು ಎತ್ತರವಿದ್ದರು.

2) ಹಮೀದಾ ಬಾನು ಅವರ ದೈನಂದಿನ ಆಹಾರದಲ್ಲಿ 5.6 ಲೀಟರ್ ಹಾಲು, 1.8 ಲೀಟರ್ ಹಣ್ಣಿನ ರಸ, 6 ಮೊಟ್ಟೆಗಳು, ಒಂದು ಕೋಳಿ, 2.8 ಲೀಟರ್ ಸೂಪ್, ಸುಮಾರು 1 ಕೆಜಿ ಮಟನ್ ಮತ್ತು ಬಾದಾಮಿ, ಅರ್ಧ ಕಿಲೋ ಬೆಣ್ಣೆ, ಎರಡು ದೊಡ್ಡ ರೊಟ್ಟಿಗಳು ಮತ್ತು ಎರಡು ಪ್ಲೇಟ್ ಬಿರಿಯಾನಿ ಸೇರಿವೆ.

3) ಲೇಖಕ ಮಹೇಶ್ವರ್ ದಯಾಳ್ ಅವರು ತಮ್ಮ 1987 ರ ಪುಸ್ತಕದಲ್ಲಿ, ಉತ್ತರ ಪ್ರದೇಶ ಮತ್ತು ಪಂಜಾಬಿನಲ್ಲಿ ಹಲವಾರು ಕುಸ್ತಿ ಪಂದ್ಯದಲ್ಲಿ ಭಾಗವಹಿಸಿದ ಹಮೀದಾ ಬಾನು ಖ್ಯಾತಿ ಪರಊರುಗಳಲ್ಲೂ ಹೇಗೆ ಬೆಳೆಯಿತೆಂಬುದನ್ನು ವಿವರಿಸಿದ್ದಾರೆ.

4) 1954ರಲ್ಲಿ ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ಬಾನು ರಷ್ಯಾದ 'ಹೆಣ್ಣು ಕರಡಿ' ಎಂದು ಕರೆಯಲ್ಪಡುವ ವೆರಾ ಚಿಸ್ಟಿಲಿನ್ ವಿರುದ್ಧ ಜಯ ಸಾಧಿಸಿದ್ದರು. ಅವರು ಅದೇ ವರ್ಷ ಯುರೋಪಿಗೆ ಪ್ರಯಾಣಿಸಿ ಅಲ್ಲಿನ ಕುಸ್ತಿಪಟುಗಳ ವಿರುದ್ಧ ಸ್ಪರ್ಧಿಸಲು ಉದ್ದೇಶಿಸಿದ್ದರು ಎಂದು ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಬಿಬಿಸಿ ವರದಿ ಮಾಡಿದೆ. ಆದಾಗ್ಯೂ, ಹೆಚ್ಚು ಪ್ರಚಾರ ಪಡೆದ ಈ ಪಂದ್ಯಗಳ ನಂತರ, 320 ಕುಸ್ತಿ ಪಂದ್ಯಗಳನ್ನಾಡಿದ್ದ ಹಮೀದಾ ಬಾನು ಕುಸ್ತಿ ಮೈದಾನದಿಂದ ಕಣ್ಮರೆಯಾದರು.

5) ಬಾನು ಅವರ ತರಬೇತುದಾರ ಸಲಾಮ್ ಪಹಲ್ವಾನ್ ಅವರು ಯುರೋಪ್‌ಗೆ ಹೋಗುವುದನ್ನು ತಡೆಯಲು ಆಕೆಯ ಕೈಗಳನ್ನು ಮುರಿದಿದ್ದರು. ಈ ಹಲ್ಲೆಯ ಸಂದರ್ಭದಲ್ಲಿ ಆಕೆ ಕಾಲುಗಳನ್ನೂ ಮುರಿದುಕೊಂಡಿದ್ದರು. ಹೀಗಾಗಿ ಆ ಸಂದರ್ಭದಲ್ಲಿ ಆಕೆಗೆ ಎದ್ದು ನಿಲ್ಲಲೂ ಸಾಧ್ಯವಾಗುತ್ತಿರಲಿಲ್ಲ ಎಂದು ನೆರೆಹೊರೆಯವರನ್ನು ಉಲ್ಲೇಖಿಸಿ ಬಿಬಿಸಿ ವರದಿ ಮಾಡಿದೆ.

ಹಮೀದಾ ಬಾನು - ಸಂಕಷ್ಟಮಯ ವೈಯಕ್ತಿಕ ಬದುಕು

ಹೀಗಿದ್ದರು ಹಮೀದಾ ಬಾನು
ಹೀಗಿದ್ದರು ಹಮೀದಾ ಬಾನು

ಹಮೀದಾ ಬಾನು ತನ್ನ ಸಾರ್ವಜನಿಕ ಪ್ರದರ್ಶನಗಳಲ್ಲಿ ಸೋಲುಂಡ ಮತ್ತು ಕೋಪಗೊಂಡ ವ್ಯಕ್ತಿಗಳಿಂದ ತೊಂದರೆಗಳನ್ನು ಎದುರಿಸಬೇಕಾಯಿತು. ಪುಣೆಯಲ್ಲಿ, ಸ್ಥಳೀಯ ಕುಸ್ತಿ ಒಕ್ಕೂಟದ ಆಕ್ಷೇಪಣೆಯ ಕಾರಣ ಪುರುಷ ಕುಸ್ತಿಪಟು ರಾಮಚಂದ್ರ ಸಾಳುಂಕೆ ಅವರ ಜೊತೆಗಿನ ಪಂದ್ಯವನ್ನು ರದ್ದುಗೊಳಿಸಬೇಕಾಯಿತು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಹೇಳಿದೆ.

ಮತ್ತೊಂದು ಸಂದರ್ಭದಲ್ಲಿ, ಬಾನು ಗೇಲಿಗಳನ್ನು ಎದುರಿಸಿದರು ಮತ್ತು ಪುರುಷ ಎದುರಾಳಿಯ ವಿರುದ್ಧ ಜಯಗಳಿಸಿದ ನಂತರ ಅಭಿಮಾನಿಗಳು ಕಲ್ಲುಗಳಿಂದ ಗುರಿಯಾದರು. ಪೊಲೀಸರು ಮಧ್ಯಪ್ರವೇಶಿಸಿ ಅಶಿಸ್ತಿನ ಜನಸಮೂಹವನ್ನು ನಿರ್ವಹಿಸಬೇಕಾಯಿತು ಎಂದು ಪತ್ರಿಕೆ ವರದಿ ಮಾಡಿದೆ.

ಈ ನಡುವೆ, ಹಮೀದಾ ಬಾನು ಅವರ ವೈಯಕ್ತಿಕ ಜೀವನವೂ ಅಷ್ಟೇ ಪ್ರಕ್ಷುಬ್ಧವಾಗಿತ್ತು. ಬಾನು ಅವರ ತರಬೇತುದಾರ ಸಲಾಮ್ ಪಹಲ್ವಾನ್ ಅವರು ಯುರೋಪ್‌ಗೆ ಹೋಗುವುದನ್ನು ತಡೆಯಲು ಆಕೆಯ ಕೈಗಳನ್ನು ಮುರಿದು ಪ್ರಯತ್ನಿಸಿದ್ದರು ಎಂದು ಆಕೆಯ ಮೊಮ್ಮಗ ಫಿರೋಜ್ ಶೇಖ್ ಅವರನ್ನು ಉಲ್ಲೇಖಿಸಿ ವರದಿ ಹೇಳಿದೆ. ಇದಲ್ಲದೆ, ದಾಳಿಯ ನಂತರ ಅವಳು ಕಾಲು ಮುರಿತಕ್ಕೆ ಒಳಗಾಗಿದ್ದಳು. ಆಕೆಗೆ ಆ ಸಂದರ್ಭದಲ್ಲಿ ಎದ್ದು ನಿಲ್ಲಲು ಆಗುತ್ತಿರಲಿಲ್ಲ. ಅದು ನಂತರ ವಾಸಿಯಾಯಿತು, ಆದರೆ ಅವಳು ಕೋಲುಗಳಿಲ್ಲದೆ ವರ್ಷಗಳ ಕಾಲ ನಡೆಯಲಾಗುತ್ತಿರಲಿಲ್ಲ ಎಂದು ಆಕೆಯ ನೆರೆಯವರಾದ ರಾಹಿಲ್ ಖಾನ್ ಬಿಬಿಸಿಗೆ ತಿಳಿಸಿದ್ದಾಗಿ ವರದಿ ಹೇಳಿದೆ.

mysore-dasara_Entry_Point
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.