ಪ್ರೊ ಕಬಡ್ಡಿ: ಹರಿಯಾಣ, ಪಾಟ್ನಾಗೆ ಸುಲಭ ಗೆಲುವು; ಬೆಂಗಳೂರು ಬುಲ್ಸ್ ಪ್ಲೇ ಆಫ್ ಹಾದಿ ಕಠಿಣ
PKL 10: ಸದ್ಯ ಪಾಟ್ನಾ ಪೈರೇಟ್ಸ್ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಹರಿಯಾಣ ಮತ್ತು ಗುಜರಾತ್ ಕ್ರಮವಾಗಿ 5 ಮತ್ತು 6ನೇ ಸ್ಥಾನದಲ್ಲಿದೆ. ಬೆಂಗಾಲ್ ವಾರಿಯರ್ಸ್ 10ನೇ ಸ್ಥಾನ ಪಡೆದಿದೆ.
ಪ್ರೊ ಕಬಡ್ಡಿಯಲ್ಲಿ (Pro Kabaddi League) ಜನವರಿ 29ರ ಸೋಮವಾರ ನಡೆದ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ಧ ಹರಿಯಾಣ ಸ್ಟೀಲರ್ಸ್ ರೋಚಕ ಜಯ ಸಾಧಿಸಿದೆ. ದಿನದ ಎರಡನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಪಾಟ್ನಾ ಪೈರೇಟ್ಸ್ ಸುಲಭ ಗೆಲುವು ಒಲಿಸಿಕೊಂಡಿದೆ.
ರೈಡಿಂಗ್‌ನಲ್ಲಿ ಶಿವಂ ಪಟಾರೆ ಹಾಗೂ ಸಿದ್ಧಾರ್ಥ್ ದೇಸಾಯಿ ಸೂಪರ್ 10 ನೆರವಿಂದ ಬೆಂಗಾಲ್ ವಿರುದ್ಧ ಹರಿಯಾಣ ಸ್ಟೀಲರ್ಸ್ 41-36 ಅಂಕಗಳ ಅಂತರದಿಂದ ಜಯ ಗಳಿಸಿತು. ವಾರಿಯರ್ಸ್ ಪರ ಮಣಿಂದರ್ ಸಿಂಗ್ ಏಕಾಂಗಿಯಾಗಿ 13 ಅಂಕ ಕಲೆ ಹಾಕಿದರೂ ತಂಡದ ಗೆಲುವು ಸಾಧ್ಯವಾಗಲಿಲ್ಲ. ಉಭಯ ತಂಡಗಳು ರೈಡಿಂಗ್‌ನಲ್ಲಿ ಸಮಬಲದ ಹೋರಾಟ ನಡೆಸಿದರೂ, ಬೆಂಗಾಲ್ ತಂಡವನ್ನು ಎರಡೆರಡು ಬಾರಿ ಆಲೌಟ್ ಮಾಡಿದ್ದು ಸ್ಟೀಲರ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.
ಅತ್ತ ದಿನದ ಎರಡನೇ ಪಂದ್ಯದಲ್ಲಿ ಗುಜರಾತ್ ಮಂಕಾಯಿತು. ತಂಡದ ಪರ ಪ್ರತೀಕ್ ದಹಿಯಾ ಅತಿಹೆಚ್ಚು, ಅಂದರೆ 6 ರೈಡ್ ಪಾಯಿಂಟ್ ಕಲೆ ಹಾಕಿದರು. ಪಾಟ್ನಾ ಆಟಗಾರರಿಂದಲೂ ನಿರೀಕ್ಷಿತ ಪ್ರದರ್ಶನ ಬರಲಿಲ್ಲ. ಸಂದೀಪ್ ಕುಮಾರ್ 7 ರೈಡ್ ಪಾಯಿಂಟ್ ಕಲೆ ಹಾಕದರೆ, ಅಂಕಿತ್ ಜಗ್ಲಾನ್ 6 ಅಂಕ ತಮ್ಮದಾಗಿಸಿಕೊಂಡರು.
ಇದನ್ನೂ ಓದಿ | ಯುಪಿ ಯೋಧಾಸ್ ವಿರುದ್ಧ ದಬಾಂಗ್ ಡೆಲ್ಲಿಗೆ ಭರ್ಜರಿ ಗೆಲುವು; ಪಾಟ್ನಾ-ಪುಣೇರಿ ಪಂದ್ಯ ರೋಚಕ ಡ್ರಾ
ಸದ್ಯ ಪಾಟ್ನಾ ಪೈರೇಟ್ಸ್ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಹರಿಯಾಣ ಮತ್ತು ಗುಜರಾತ್ ಕ್ರಮವಾಗಿ 5 ಮತ್ತು 6ನೇ ಸ್ಥಾನದಲ್ಲಿದೆ. ಬೆಂಗಾಲ್ ವಾರಿಯರ್ಸ್ 10ನೇ ಸ್ಥಾನ ಪಡೆದಿದೆ.
ಪ್ರತಿ ತಂಡಗಳು ತನ್ನ ಎದುರಾಳಿ ವಿರುದ್ಧ ತಲಾ 2 ಪಂದ್ಯಗಳನ್ನು ಆಡುತ್ತದೆ. ಒಂದು ತಂಡವು ಲೀಗ್ ಹಂತದಲ್ಲಿ ಒಟ್ಟು 22 ಪಂದ್ಯಗಳನ್ನು ಆಡಲಿದೆ. ಸದ್ಯ ಬೆಂಗಳೂರು ಬುಲ್ಸ್ ತಂಡವು ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದು, ಈಗಾಗಲೇ ಆಡಿದ 16 ಪಂದ್ಯಗಳಲ್ಲಿ 6ರಲ್ಲಿ ಮಾತ್ರ ಜಯ ಸಾಧಿಸಿದೆ. ಮುಂದಕ್ಕೆ ತಂಡವು 6 ಪಂದ್ಯಗಳಲ್ಲಿ ಆಡಲಿದೆ. ಈ ಎಲ್ಲಾ ಪಂದ್ಯಗಳಲ್ಲಿ ಗೆದ್ದರೆ ಮಾತ್ರ ತಂಡವು ಮುಂದಿನ ಹಂತಕ್ಕೆ ಪ್ರವೇಶಿಸುವ ಅವಕಾಶ ಪಡೆಯುತ್ತದೆ.
ಬೆಂಗಳೂರು ಬುಲ್ಸ್ ತಂಡಕ್ಕೆ ಅಗ್ರ-6ರೊಳಗೆ ಪ್ರವೇಶಿಸಲು ಇನ್ನೂ ಅವಕಾಶ ಇದೆ. ಆದರೆ ಉಳಿದ 6 ಪಂದ್ಯಗಳಲ್ಲೂ ಭರ್ಜರಿ ಗೆಲುವು ಸಾಧಿಸಬೇಕು. ಕೇವಲ ಕಡಿಮೆ ಅಂತರದ ಗೆಲುವಿನ ಬದಲಿಗೆ ಭಾರಿ ಅಂತರದ ಜಯ ಸಾಧಿಸಬೇಕು. ಆ ಮೂಲಕ ಹೆಚ್ಚು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೇಲೇರಲು ಸಾಧ್ಯ. ಅಷ್ಟೇ ಅಲ್ಲದೆ, ಉಳಿದ ತಂಡಗಳ ಫಲಿತಾಂಶ ಕೂಡ ಇಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಬೆಂಗಳೂರು ಬುಲ್ಸ್ ಮುಂದಿನ ಪಂದ್ಯಗಳು
ಜನವರಿ 31, ರಾತ್ರಿ 8 ಗಂಟೆ- ಬೆಂಗಳೂರು ಬುಲ್ಸ್ vs ಪಾಟ್ನಾ ಪೈರೇಟ್ಸ್
ಫೆಬ್ರವರಿ 04, ರಾತ್ರಿ 8 ಗಂಟೆ- ಬೆಂಗಳೂರು ಬುಲ್ಸ್ vs ಯು ಮುಂಬಾ
ಫೆಬ್ರವರಿ 07, ರಾತ್ರಿ 8 ಗಂಟೆ- ಬೆಂಗಳೂರು ಬುಲ್ಸ್ vs ಪುಣೇರಿ ಪಲ್ಟನ್
ಫೆಬ್ರವರಿ 11, ರಾತ್ರಿ 9 ಗಂಟೆ- ಬೆಂಗಳೂರು ಬುಲ್ಸ್ vs ಗುಜರಾತ್ ಜೈಂಟ್ಸ್
ಫೆಬ್ರವರಿ 18, ರಾತ್ರಿ 9 ಗಂಟೆ- ಬೆಂಗಳೂರು ಬುಲ್ಸ್ vs ದಬಾಂಗ್ ಡೆಲ್ಲಿ
ಫೆಬ್ರವರಿ 21, ರಾತ್ರಿ 9 ಗಂಟೆ- ಬೆಂಗಳೂರು ಬುಲ್ಸ್ vs ಹರಿಯಾಣ ಸ್ಟೀಲರ್ಸ್