PKL 2024: ಪ್ರೊ ಕಬಡ್ಡಿ ಲೀಗ್ನ ಎಲಿಮಿನೇಟರ್ ಪಂದ್ಯಗಳಲ್ಲಿ ಯಾವ್ಯಾವ ತಂಡಗಳು ಮುಖಾಮುಖಿ; ಎಲ್ಲಿ ಯಾವಾಗ?
PKL 2024 Playoffs Schedule : ಪ್ರೊ ಕಬಡ್ಡಿ ಲೀಗ್ ಸೀಸನ್-10ರ ಎಲಿಮಿನೇಟರ್ ಪಂದ್ಯಗಳಲ್ಲಿ ದಬಾಂಗ್ ಡೆಲ್ಲಿ ಕೆಸಿ, ಗುಜರಾತ್ ಜೈಂಟ್ಸ್, ಹರಿಯಾಣ ಸ್ಟೀಲರ್ಸ್ ಮತ್ತು ಪಾಟ್ನಾ ಪೈರೇಟ್ಸ್ ತಂಡಗಳು ಸೆಣಸಾಟ ನಡೆಸಲಿವೆ.
ಪ್ರೊ ಕಬಡ್ಡಿ ಲೀಗ್ ಸೀಸನ್ 10ರ ಎಲಿಮಿನೇಟರ್ಸ್ ಪಂದ್ಯಗಳಿಗೆ ಒಂದು ದಿನವಷ್ಟೇ ಬಾಕಿ ಇದೆ. ನಾಲ್ಕು ತಂಡಗಳ ನಡುವೆ ಎಲಿಮಿನೇಟರ್ ನಡೆಯಲಿದೆ. ಪ್ಲೇ ಅಫ್ ಪ್ರವೇಶಿಸಿದ ಆರು ತಂಡಗಳ ಪೈಕಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಎರಡು ತಂಡಗಳು ನೇರವಾಗಿ ಸೆಮಿಫೈನಲ್ಗೆ ಅರ್ಹತೆ ಪಡೆದುಕೊಂಡಿವೆ. ಪುಣೇರಿ ಪಲ್ಟನ್, ಜೈಪುರ್ ಪಿಂಕ್ ಪ್ಯಾಂಥರ್ಸ್ ಸೆಮೀಸ್ಗೇರಿವೆ.
ಉಳಿದಂತೆ ದಬಾಂಗ್ ಡೆಲ್ಲಿ ಕೆಸಿ, ಗುಜರಾತ್ ಜೈಂಟ್ಸ್, ಹರಿಯಾಣ ಸ್ಟೀಲರ್ಸ್ ಮತ್ತು ಪಾಟ್ನಾ ಪೈರೇಟ್ಸ್ ಪಿಕೆಎಲ್ ಸೀಸನ್ 10ರ ಎಲಿಮಿನೇಟರ್ಸ್ನಲ್ಲಿ ಸೆಣಸಾಟ ನಡೆಸಲಿವೆ. ಇಲ್ಲಿ ಗೆದ್ದ ತಂಡಗಳು ಸೆಮಿಫೈನಲ್ಗೆ ಪ್ರವೇಶಿಸಲಿವೆ. ಸೋತವರು ಗಂಟು ಮೂಟೆ ಕಟ್ಟಲಿದ್ದಾರೆ. ಎಲಿಮಿನೇಟರ್ 1, ಎಲಿಮಿನೇಟರ್ 2 ಪಂದ್ಯಗಳು ಫೆಬ್ರವರಿ 26ರಂದು ಹೈದರಾಬಾದ್ನ ಗಚ್ಛಿಬೋಲಿ ಇಂದೋರ್ ಸ್ಟೇಡಿಯಂನಲ್ಲಿ ನಡೆಲಿವೆ.
ಎಲಿಮಿನೇಟರ್, ಸೆಮಿಫೈನಲ್, ಫೈನಲ್ ವೇಳಾಪಟ್ಟಿ
ಎಲಿಮಿನೇಟರ್ 1: ದಬಾಂಗ್ ದೆಹಲಿ vs ಪಾಟ್ನಾ ಪೈರೇಟ್ಸ್ ಸೋಮವಾರ, ಫೆಬ್ರವರಿ 26 ರಂದು ರಾತ್ರಿ 8 ಗಂಟೆಗೆ, ಗಚ್ಚಿಬೋಲಿ ಇಂದೋರ್ ಸ್ಟೇಡಿಯಂ.
ಎಲಿಮಿನೇಟರ್ 2: ಗುಜರಾತ್ ಜೈಂಟ್ಸ್ vs ಹರಿಯಾಣ ಸ್ಟೀಲರ್ಸ್ ಸೋಮವಾರ, ಫೆಬ್ರವರಿ 26 ರಂದು ರಾತ್ರಿ 9 ಗಂಟೆಗೆ, ಗಚ್ಚಿಬೋಲಿ ಇಂದೋರ್ ಸ್ಟೇಡಿಯಂ.
ಸೆಮಿಫೈನಲ್ 1: ಪುಣೇರಿ ಪಲ್ಟನ್ vs ಎಲಿಮಿನೇಟರ್ 1ರ ವಿಜೇತರು, ಬುಧವಾರ, ಫೆಬ್ರವರಿ 28 ರಂದು ರಾತ್ರಿ 8 ಗಂಟೆಗೆ, ಗಚ್ಚಿಬೋಲಿ ಇಂದೋರ್ ಸ್ಟೇಡಿಯಂ.
ಸೆಮಿ-ಫೈನಲ್ 2: ಜೈಪುರ ಪಿಂಕ್ ಪ್ಯಾಂಥರ್ಸ್ vs ಎಲಿಮಿನೇಟರ್ 2ರ ವಿಜೇತರು, ಬುಧವಾರ, ಫೆಬ್ರವರಿ 28 ರಂದು ರಾತ್ರಿ 9 ಗಂಟೆಗೆ, ಗಚ್ಚಿಬೋಲಿ ಇಂದೋರ್ ಸ್ಟೇಡಿಯಂ.
ಫೈನಲ್: ಸೆಮಿ-ಫೈನಲ್ 1ರ ವಿಜೇತರು ಮತ್ತು ಸೆಮಿ-ಫೈನಲ್ 2ರ ವಿಜೇತರು ಶುಕ್ರವಾರ, ಮಾರ್ಚ್ 1 ರಂದು ರಾತ್ರಿ 8 ಗಂಟೆಗೆ, ಗಚ್ಚಿಬೋಲಿ ಇಂದೋರ್ ಸ್ಟೇಡಿಯಂ.
ಪುಣೇರಿ ಮತ್ತು ಜೈಪುರ ಸೆಮಿಫೈನಲ್ ಪ್ರವೇಶ
ಕಳೆದ ವರ್ಷ ಫೈನಲ್ ಪ್ರವೇಶಿಸಿದ ತಂಡಗಳಾದ ಜೈಪುರ ಪಿಂಕ್ ಪ್ಯಾಂಥರ್ಸ್ ಮತ್ತು ಪುಣೇರಿ ಪಲ್ಟನ್ ಮೊದಲ 2 ಸ್ಥಾನಗಳನ್ನು ಕಾಯ್ದಿರಿಸಿದ್ದವು. ಕಾರಣ ನೇರವಾಗಿ ಸೆಮಿಫೈನಲ್ಗೆ ಪ್ರವೇಶ ಪಡೆದಿವೆ.
ಎಲಿಮಿನೇಟರ್ ಆಡುವ ತಂಡಗಳ ಲೀಗ್ ಪ್ರದರ್ಶನ ಹೇಗಿತ್ತು?
1. ದಬಾಂಗ್ ಡೆಲ್ಲಿ ತಂಡ 79 ಅಂಕ ಗಳಿಸಿ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. 22 ಪಂದ್ಯಗಳಲ್ಲಿ 13 ಗೆಲುವು ಸಾಧಿಸಿ 6 ಸೋಲು, 3 ಡ್ರಾ ಆಗಿದೆ.
2. 70 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿರುವ ಗುಜರಾತ್ ಜೈಂಟ್ಸ್ ಸಹ ಪ್ಲೇ ಆಫ್ಗೆ ಅರ್ಹತೆ ಪಡೆದಿದೆ. ಸದ್ಯ ಆಡಿದ 22 ಪಂದ್ಯಗಳಲ್ಲಿ 13 ಗೆಲುವು, 9 ಸೋಲು ಅನುಭವಿಸಿದೆ.
3. ಐದನೇ ಸ್ಥಾನದಲ್ಲಿರುವ ಹರಿಯಾಣ ಸ್ಟೀಲರ್ಸ್ ಸಹ 70 ಅಂಕ ಸಂಪಾದಿಸಿದೆ. ಪ್ಲೇ ಆಫ್ಗೆ ಕ್ವಾಲಿಫೈ ಆಗಿರುವ ಹರಿಯಾಣ 22 ಪಂದ್ಯಗಳಲ್ಲಿ 13 ಗೆಲುವು, 8 ಸೋಲು, 1 ಡ್ರಾ ಸಾಧಿಸಿದೆ.
4. ಪ್ಲೇ ಆಫ್ಗೆ ಕೊನೆಯ ತಂಡವಾಗಿ ಅರ್ಹತೆ ಗಿಟ್ಟಿಸಿಕೊಂಡಿರುವ ಪಾಟ್ನಾ ಪೈರೇಟ್ಸ್, 69 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. 22 ಪಂದ್ಯಗಳಲ್ಲಿ 11 ಗೆಲುವು, 8 ಸೋಲು, 3 ಡ್ರಾ ಸಾಧಿಸಿದೆ.
ಪಿಕೆಎಲ್ ಪ್ಲೇಆಫ್ ಲೈವ್ ಸ್ಟ್ರೀಮಿಂಗ್, ಟೆಲಿಕಾಸ್ಟ್ ವಿವರ
ಪಿಕೆಎಲ್ 2024 ಪ್ಲೇಆಫ್‌ಗಳ ನೇರ ಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಸ್ಟಾರ್ ಸ್ಪೋರ್ಟ್ಸ್ 2 ಎಸ್‌ಡಿ, ಸ್ಟಾರ್ ಸ್ಪೋರ್ಟ್ಸ್ 2 ಎಚ್‌ಡಿ, ಸ್ಟಾರ್ ಸ್ಪೋರ್ಟ್ಸ್ 1 ಎಸ್‌ಡಿ ಹಿಂದಿ, ಸ್ಟಾರ್ ಸ್ಪೋರ್ಟ್ಸ್ 1 ಎಚ್‌ಡಿ ಹಿಂದಿ ಮತ್ತು ಸ್ಟಾರ್ ಸ್ಪೋರ್ಟ್ಸ್ ಫಸ್ಟ್ ಚಾನಲ್‌ಗಳ ಮೂಲಕ ತೋರಿಸಲಾಗುತ್ತದೆ. ಆದರೆ ಪಿಕೆಎಲ್ ಲೈವ್ ಸ್ಟ್ರೀಮಿಂಗ್ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಲಭ್ಯವಿರುತ್ತದೆ.