PV Sindhu: ಒಲಿಂಪಿಕ್ ಚಾಂಪಿಯನ್ ಚೆನ್ ಯು ವಿರುದ್ಧ ಸೋಲು; ಫ್ರೆಂಚ್ ಓಪನ್‌ನಿಂದ ಹೊರಬಿದ್ದ ಪಿವಿ ಸಿಂಧು
ಕನ್ನಡ ಸುದ್ದಿ  /  ಕ್ರೀಡೆ  /  Pv Sindhu: ಒಲಿಂಪಿಕ್ ಚಾಂಪಿಯನ್ ಚೆನ್ ಯು ವಿರುದ್ಧ ಸೋಲು; ಫ್ರೆಂಚ್ ಓಪನ್‌ನಿಂದ ಹೊರಬಿದ್ದ ಪಿವಿ ಸಿಂಧು

PV Sindhu: ಒಲಿಂಪಿಕ್ ಚಾಂಪಿಯನ್ ಚೆನ್ ಯು ವಿರುದ್ಧ ಸೋಲು; ಫ್ರೆಂಚ್ ಓಪನ್‌ನಿಂದ ಹೊರಬಿದ್ದ ಪಿವಿ ಸಿಂಧು

French Open Super 750: ಸುಮಾರು ಒಂದು ಗಂಟೆ 32 ನಿಮಿಷಗಳ ಕಾಲ ನಡೆದ ರೋಚಕ ಪೈಪೋಟಿಯಲ್ಲಿ ಚೀನಾದ ಚೆನ್ ಯು ಫೀ ವಿರುದ್ಧ ಭಾರತದ ಪಿವಿ ಸಿಂಧು ಸೋಲು ಅನುಭವಿಸಿದರು. ಆ ಮೂಲಕ ಫ್ರೆಂಚ್ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಿಂದ ಹೊರಬಿದ್ದರು.

ಫ್ರೆಂಚ್ ಓಪನ್‌ನಿಂದ ಹೊರಬಿದ್ದ ಪಿವಿ ಸಿಂಧು
ಫ್ರೆಂಚ್ ಓಪನ್‌ನಿಂದ ಹೊರಬಿದ್ದ ಪಿವಿ ಸಿಂಧು

ಫ್ರೆಂಚ್ ಓಪನ್ ಸೂಪರ್ 750 (French Open Super 750) ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಿಂದ ಭಾರತದ ಭರವಸೆಯ ಆಟಗಾರ್ತಿ ಪಿವಿ ಸಿಂಧು PV Sindhu) ಹೊರಬಿದ್ದಿದ್ದಾರೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹಾಲಿ ಒಲಿಂಪಿಕ್ ಚಾಂಪಿಯನ್ ಚೀನಾದ ಚೆನ್ ಯು ಫೀ (Chen Yu Fei) ವಿರುದ್ಧ ಸೋತು ಮುಗ್ಗರಿಸಿದ್ದಾರೆ. ಗಾಯದಿಂದ ಚೇತರಿಸಿಕೊಂಡು ಸುದೀರ್ಘ ನಾಲ್ಕು ತಿಂಗಳ ಅವಧಿಯ ಬಳಿಕ ಅಖಾಡಕ್ಕೆ ಇಳಿದ ಸಿಂಧು, ಮೊದಲ ಅಭಿಯಾನದಲ್ಲಿ ಸೋಲು ಕಂಡಿದ್ದಾರೆ.

ಸುಮಾರು ಒಂದು ಗಂಟೆ 32 ನಿಮಿಷಗಳ ಕಾಲ ನಡೆದ ರೋಚಕ ಪೈಪೋಟಿಯಲ್ಲಿ ಚಾಂಪಿಯನ್‌ ಆಟಗಾರ್ತಿ ವಿರುದ್ಧ ಒಲಿಂಪಿಕ್‌ ಪದಕ ವಿಜೇತ ಆಟಗಾರ್ತಿ ಕಠಿಣ ಪೈಪೋಟಿ ನೀಡಿದರು. ತಮ್ಮ ಸ್ಟ್ರೋಕ್ ಪ್ಲೇ ಮತ್ತು ದೈಹಿಕ ಸಾಮರ್ಥ್ಯವನ್ನು ಸಮರ್ಥವಾಗಿ ಪ್ರದರ್ಶಿಸಿದರು. ಆದರೆ, ವಿಶ್ವದ ಎರಡನೇ ಶ್ರೇಯಾಂಕಿತ ಆಟಗಾರ್ತಿ ಹಾಗೂ ಮತ್ತು ಹಾಲಿ ಚಾಂಪಿಯನ್ ಚೆನ್ ವಿರುದ್ಧ 24-22, 17-21, 18-21 ಅಂತರದಲ್ಲಿ ಸೋಲನುಭವಿಸಿದರು. ಕೊನೆಯವರೆಗೂ ರೋಚಕ ಹೋರಾಟ ನೀಡಿದ ಸಿಂಧು, ವೀರೋಚಿತ ಸೋಲು ಕಂಡರು.

ಕೊನೆಯ ಬಾರಿಗೆ 2019ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸಿಂಧು ಅವರು ವಿಶ್ವದ 2ನೇ ಶ್ರೇಯಾಂಕದ ಆಟಗಾರ್ತಿ ಚೆನ್ ಅವರನ್ನು ಸೋಲಿಸಿದ್ದರು. ಆ ಮೂಲಕ ಚಿನ್ನ ಗೆದ್ದಿದ್ದರು. ಆ ನಂತರದಲ್ಲಿ ಭಾರತದ ಆಟಗಾರ್ತಿ ಕೊನೆಯ ಎರಡು ಪಂದ್ಯಗಳಲ್ಲಿ ಚೀನಾ ಆಟಗಾರ್ತಿ ವಿರುದ್ಧ ಸೋತಿದ್ದಾರೆ. ಆದರೂ, ಡ್ರ್ಯಾಗನ್‌ ರಾಷ್ಟ್ರದ ಬಲಿಷ್ಠ ಆಟಗಾರ್ತಿ ವಿರುದ್ಧ ಸಿಂಧು 6-5 ಅಂತರದಿಂದ ಮುನ್ನಡೆ ಸಾಧಿಸಿರುವ ದಾಖಲೆ ಕಾಯ್ದುಕೊಂಡಿದ್ದಾರೆ.

ಕಂಬ್ಯಾಕ್‌ ಮಾಡಿದ ಚೆನ್ ಯು ಫೀ

ಸಿಂಧು ಆರಂಭದಿಂಧಲೂ ಆಕ್ರಮಣಕಾರಿ ಪ್ರದರ್ಶನ ನೀಡಿ ಮೊದಲ ಸುತ್ತು ಗೆದ್ದರು. ಆ ಬಳಿಕ ಕಂಬ್ಯಾಕ್‌ ಮಾಡಿದ ಚೆನ್ ಯು, ಕೊನೆಯಲ್ಲಿ ಎರಡು ಸೆಟ್‌ಗಳನ್ನು ಸತತವಾಗಿ ವಶಪಡಿಸಿಕೊಂಡರು.

ಇದನ್ನೂ ಓದಿ | ಫ್ರೆಂಚ್ ಓಪನ್: ಕ್ವಾರ್ಟರ್ ಫೈನಲ್ ತಲುಪಿದ ಭಾರತದ ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಜೋಡಿ

ಅತ್ತ ಭಾರತದ ಸ್ಟಾರ್‌ ಬ್ಯಾಡ್ಮಿಂಟನ್‌ ಜೋಡಿಯಾದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಫ್ರೆಂಚ್ ಓಪನ್‌ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದ್ದಾರೆ. ಮಲೇಷ್ಯಾದ ಮ್ಯಾನ್ ವೀ ಚೊಂಗ್ ಮತ್ತು ಕೈ ವೂ ಟೀ ಜೋಡಿ ವಿರುದ್ಧ ಸುಲಭ ಹಾಗೂ ನೇರ ಗೇಮ್‌ಗಳ ಗೆಲುವು ಸಾಧಿಸಿದ ಭಾರತದ ಬಲಿಷ್ಠ ಜೋಡಿಯು, ಪ್ರಶಸ್ತಿ ಸುತ್ತಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಗುರುವಾರ ನಡೆದ 16ನೇ ಸುತ್ತಿನ ಪಂದ್ಯದಲ್ಲಿ ಮಲೇಷ್ಯಾದ ಜೋಡಿಯನ್ನು 21-13, 21-12ರ ಸುಲಭ ಅಂತರದಿಂದ ಸೋಲಿಸಿದ್ದಾರೆ. ಪಂದ್ಯದುದ್ದಕ್ಕೂ ಸಂಪೂರ್ಣ ಪ್ರಾಬಲ್ಯ ಸಾಧಿಸಿದ ಭಾರತವು, ಕೇವಲ 32 ನಿಮಿಷಗಳಲ್ಲಿ ಪಂದ್ಯವನ್ನು ಪೂರ್ಣಗೊಳಿಸಿದರು.

ಇದನ್ನೂ ಓದಿ | ಚಾಂಪಿಯನ್ಸ್ ಲೀಗ್ ಪಂದ್ಯದ ವೇಳೆ ಮ್ಯಾಂಚೆಸ್ಟರ್ ಸಿಟಿ ಆಟಗಾರನಿಗೆ ಗಂಭೀರ ಗಾಯ; ಬೆರಳು ಮುರಿದುಕೊಂಡ ಮ್ಯಾಥ್ಯೂಸ್

2023ರ ಚೀನಾ ಓಪನ್, ಮಲೇಷ್ಯಾ ಓಪನ್ ಸೂಪರ್ 1000 ಮತ್ತು ಇಂಡಿಯಾ ಓಪನ್ ಸೂಪರ್ 750 ಟೂರ್ನಿಗಳಲ್ಲಿ ಸತತ ರನ್ನರ್ ಅಪ್ ಸ್ಥಾನ ಪಡೆದಿರುವ ಸಾತ್ವಿಕ್ ಮತ್ತು ಚಿರಾಗ್, ಈ ಋತುವಿನಲ್ಲಿ ವಿಶ್ವದ ನಂಬರ್ 1 ಡಬಲ್ಸ್ ಜೋಡಿಯಾಗಿ ಹೊರಹೊಮ್ಮಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.