ಆಸ್ಟ್ರೇಲಿಯನ್ ಓಪನ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಬೋಪಣ್ಣ-ಎಬ್ಡೆನ್ ಜೋಡಿ
Australian Open 2024: ಇಂಡೋ-ಆಸ್ಟ್ರೇಲಿಯನ್ ಜೋಡಿಯು ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವದ ಆರನೇ ಶ್ರೇಯಾಂಕದ ಅರ್ಜೆಂಟೀನಾದ ಮ್ಯಾಕ್ಸಿಮೊ ಗೊನ್ಜಾಲೆಜ್ ಮತ್ತು ಆಂಡ್ರೆಸ್ ಮೊಲ್ಟೆನಿ ಜೋಡಿಯನ್ನು ಎದುರಿಸಲಿದ್ದಾರೆ.
ಆಸ್ಟ್ರೇಲಿಯನ್ ಓಪನ್‌ನ (Australian Open) ಪುರುಷರ ಡಬಲ್ಸ್‌ನಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯನ್ ಜೊತೆಗಾರ ಮ್ಯಾಥ್ಯೂ ಎಬ್ಡೆನ್ (Rohan Bopanna and Matthew Ebden) ಅವರು ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ. ಪ್ರಿಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನೆದರ್‌ಲ್ಯಾಂಡ್‌ನ ವೆಸ್ಲಿ ಕೂಲ್‌ಹಾಫ್ ಮತ್ತು ಕ್ರೊಯೇಷಿಯಾದ ನಿಕೋಲಾ ಮೆಕ್ಟಿಕ್ (Wesley Koolhof and Nikola Mektic) ಜೋಡಿ ವಿರುದ್ಧ 7-6 7-6 ಸೆಟ್‌ಗಳ ನೇರ ಜಯ ಸಾಧಿಸುವ ಮೂಲಕ ಬಲಿಷ್ಠ ಜೋಡಿಯು ಮುಂದಿನ ಸುತ್ತಿಗೆ ಅರ್ಹತೆ ಪಡೆದಿದೆ.
ಎರಡನೇ ಶ್ರೇಯಾಂಕದ ಜೋಡಿಯಾದ 43 ವರ್ಷದ ಬೋಪಣ್ಣ ಮತ್ತು ಎಬ್ಡೆನ್, ಎರಡೂ ಸೆಟ್‌ಗಳಲ್ಲಿ ಆರಂಭದಲ್ಲಿ ಹಿಂದೆಬಿದ್ದರು. ಆದರೆ ಆ ಬಳಿಕ 14ನೇ ಶ್ರೇಯಾಂಕದ ಜೋಡಿ ವಿರುದ್ಧ ಉತ್ತಮ ಹೊಡೆತಗಳನ್ನಾಡಿ ಮೇಲುಗೈ ಸಾಧಿಸಿದರು. ಇಂಡೋ-ಆಸ್ಟ್ರೇಲಿಯನ್ ಜೋಡಿಯು ಮುಂದಿನ ಸುತ್ತಿನಲ್ಲಿ ಆರನೇ ಶ್ರೇಯಾಂಕದ ಅರ್ಜೆಂಟೀನಾದ ಮ್ಯಾಕ್ಸಿಮೊ ಗೊನ್ಜಾಲೆಜ್ ಮತ್ತು ಆಂಡ್ರೆಸ್ ಮೊಲ್ಟೆನಿ ಜೋಡಿಯನ್ನು ಎದುರಿಸಲಿದ್ದಾರೆ.
ಸದ್ಯ ಪುರುಷರ ಡಬಲ್ಸ್ ಸ್ಪರ್ಧೆಯಲ್ಲಿ ಜೀವಂತವಾಗಿರುವ ಅತ್ಯುನ್ನತ ಶ್ರೇಯಾಂಕದ ಜೋಡಿ ಇದಾಗಿದೆ. ಜನವರಿ 22ರ ಸೋಮವಾರದ ಗೆಲುವು ವಿಶ್ವದ ಮಾಜಿ ಅಗ್ರ ಶ್ರೇಯಾಂಕದ ಡಬಲ್ಸ್ ಜೋಡಿಯ ವಿರುದ್ಧ ಶ್ಲಾಘನೀಯ ಗೆಲುವಾಗಿದೆ. ಈ ಗೆಲುವಿನೊಂದಿಗೆ, ಭಾರತದ ಬೋಪಣ್ಣ ಅವರು ವೃತ್ತಿಜೀವನದ ಉನ್ನತ ಡಬಲ್ಸ್ ಶ್ರೇಯಾಂಕ ನಂಬರ್ 2ನ್ನು ಖಚಿತಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ | ಆಸ್ಟ್ರೇಲಿಯನ್ ಓಪನ್; ವೃತ್ತಿಜೀವನದ 500ನೇ ಗೆಲುವು ದಾಖಲಿಸಿದ ರೋಹನ್ ಬೋಪಣ್ಣ
ಪಂದ್ಯದ ಆರಂಭಿಕ 15 ನಿಮಿಷಗಳಲ್ಲಿ 14ನೇ ಶ್ರೇಯಾಂಕದ ಜೋಡಿಯು 3-0 ಅಂತರದಿಂದ ಮುನ್ನಡೆ ಸಾದಿಸಿದರು. ಆ ಬಳಿಕ ಉಭಯ ಆಟಗಾರರು ಮೇಲುಗೈ ಸಾಧಿಸಿದರು.
ಎರಡನೇ ಸೆಟ್‌ನಲ್ಲೂ ಬೋಪಣ್ಣ ತಮ್ಮ ಮೊದಲ ಸರ್ವಿಸ್ ಗೇಮ್ ಸೋತರು. ಡಚ್-ಕ್ರೊಯೇಷಿಯಾ ಜೋಡಿಯು 4-2ರಿಂದ ಮೇಲುಗೈ ಸಾಧಿಸಿದರು. ತಕ್ಷಣ ಕಂಬ್ಯಾಕ್ ಮಾಡಿದ ಇಂಡೋ-ಆಸೀಸ್ ಜೋಡಿಯು ಅಂಕ ಹೆಚ್ಚಿಸಿಕೊಂಡರು. ಎಬ್ಡೆನ್ ತನ್ನ ಸರ್ವ್‌ನಲ್ಲಿ ಒಂದೇ ಒಂದು ಅಂಕ ಕೂಡಾ ಕಳೆದುಕೊಂಡಿಲ್ಲ. ಎರಡನೇ ಸೆಟ್‌ನ ಎಂಟನೇ ಗೇಮ್‌ನಲ್ಲಿ, ಬೋಪಣ್ಣ ಮತ್ತೊಮ್ಮೆ ತಮ್ಮ ಆಟವನ್ನು ಹೆಚ್ಚಿಸಿದರು. ಎದುರಾಳಿಗಳು ತಪ್ಪುಗಳನ್ನು ಮಾಡುವಂತೆ ಮಾಡಿ, ಚಾಣಾಕ್ಷ ಆಟವಾಡಿದರು. ಟೈ-ಬ್ರೇಕರ್‌ನಲ್ಲಿ ಬೋಪಣ್ಣ-ಎಬ್ಡೆನ್ 3-0 ಮುನ್ನಡೆ ಸಾಧಿಸಿದರು. ಇದನ್ನು ಮೀರಿಸಲು ಎದುರಾಳಿಗಳಿಂದ ಸಾಧ್ಯವಾಗಲಿಲ್ಲ.
ಪುರುಷರ ಡಬಲ್ಸ್‌ನ ಮೊದಲ ಸುತ್ತಿನಲ್ಲಿ ಮ್ಯಾಥ್ಯೂ ಎಬ್ಡೆನ್ ಜೊತೆಗೂಡಿ ಗೆದ್ದ ರೋಹನ್ ಬೋಪಣ್ಣ ಆ ಗೆಲುವಿನೊಂದಿಗೆ ಐತಿಹಾಸಿಕ ದಾಖಲೆ ಮಾಡಿದ್ದಾರೆ. ತಮ್ಮ ವೃತ್ತಿಜೀವನದ 500ನೇ ಪ್ರವಾಸ ಮಟ್ಟದ ಗೆಲುವನ್ನು ದಾಖಲಿಸಿದರು.
ಇದನ್ನೂ ಓದಿ | ಆಸ್ಟ್ರೇಲಿಯಾ ಓಪನ್ ಐತಿಹಾಸಿಕ ಗೆಲುವು; 80 ಸಾವಿರದಿಂದ 98 ಲಕ್ಷ ರೂಪಾಯಿಗೇರಿದ ಸುಮಿತ್ ಬ್ಯಾಂಕ್ ಬ್ಯಾಲೆನ್ಸ್
ಅತ್ತ ಭಾರತದ ಭರವಸೆಯ ಆಟಗಾರ ಸುಮಿತ್ ನಗಾಲ್ ಆಸ್ಟ್ರೇಲಿಯಾ ಓಪನ್ ಪುರುಷರ ಸಿಂಗಲ್ಸ್‌ನಲ್ಲಿ ಸೋಲು ಕಂಡಿದ್ದಾರೆ. ಮೊದಲ ಸುತ್ತಿನಲ್ಲಿ ಐತಿಹಾಸಿಕ ಜಯಭೇರಿ ಬಾರಿಸಿ ಎರಡನೇ ಸುತ್ತಿಗೆ ಮುನ್ನಡೆದಿದ್ದ ಭಾರತದ ನಂಬರ್ ವನ್ ಆಟಗಾರ, ಎರಡನೇ ಸುತ್ತಿನಲ್ಲಿ ಸೋತಿದ್ದಾರೆ. ಪುರುಷರ ಸಿಂಗಲ್ಸ್ ಎರಡನೇ ಸುತ್ತಿನ ಪಂದ್ಯದಲ್ಲಿ ಚೀನಾದ ಯುವ ಟೆನ್ನಿಸ್ ಆಟಗಾರ ಚೀನಾದ ಜುಂಚೆಂಗ್ ಶಾಂಗ್ ವಿರುದ್ಧ 6-2, 3-6, 5-7, 4-6 ಸೆಟ್‌ಗಳಿಂದ ಸೋತು ಆಸ್ಟ್ರೇಲಿಯನ್ ಓಪನ್‌ನಿಂದ ಸುಮಿತ್ ನಗಾಲ್ ಹೊರಬಿದ್ದಿದ್ದಾರೆ.