ನಿರಂತರ ಮಳೆಯ ಮುನ್ಸೂಚನೆಯಿಂದ ಸೂಪರ್-4 ಪಂದ್ಯಗಳ ಸ್ಥಳಾಂತರ; ಕೊಲೊಂಬೊದಿಂದ ಈ ಮೈದಾನಕ್ಕೆ ಶಿಫ್ಟ್
Asia Cup 2023, India vs Pakistan: ಶ್ರೀಲಂಕಾದಲ್ಲಿ ನಡೆಯಲಿರುವ ಸೂಪರ್-4 ಪಂದ್ಯಗಳಿಗೆ ಭಾರಿ ಮಳೆ ಸುರಿಯುವ ಸಾಧ್ಯತೆ ಇರುವ ಕಾರಣ ಪಂದ್ಯಗಳನ್ನು ಸ್ಥಳಾಂತರಗೊಳಿಸಲು ಎಸಿಸಿ ಚಿಂತಿಸಿದೆ. ಈಗಾಗಲೇ ಹವಾಮಾನ ಇಲಾಖೆ ವರದಿ ನೀಡಿದ್ದು, ನಿರಂತರ ಮಳೆ ಸುರಿಯುವ ಮುನ್ಸೂಚನೆ ನೀಡಿದೆ.
ಪಾಕಿಸ್ತಾನದ (Pakistan) ಜೊತೆಗೆ ಏಷ್ಯಾಕಪ್ಗೆ (Asia Cup 2023) ಆತಿಥ್ಯ ವಹಿಸಿರುವ ಶ್ರೀಲಂಕಾದಲ್ಲಿ (Sri Lanka) ಮಳೆ ಹೆಚ್ಚಾಗುತ್ತಿದ್ದು, ಪಂದ್ಯಗಳು ಮಳೆಯಿಂದ ರದ್ದಾಗುವ ಸಂಭವ ಹೆಚ್ಚಿದೆ. ಈಗಾಗಲೇ ಭಾರತ-ಪಾಕಿಸ್ತಾನ (India vs Pakistan) ಪಂದ್ಯ ಫಲಿತಾಂಶ ಕಾಣದೆ ರದ್ದುಗೊಂಡಿದೆ. ಇದು ಏಷ್ಯನ್ ಕ್ರಿಕೆಟ್ ಮಂಡಳಿಗೆ (Asian Cricket Board) ತಲೆನೋವಾಗಿದೆ. ಹಾಗಾಗಿ ಸೂಪರ್-4 ಹಂತದ ಪಂದ್ಯಗಳ ಸ್ಥಳ ಬದಲಾಯಿಸಲು ಚಿಂತಿಸಿದೆ.
ಫೈನಲ್ ಸೇರಿದಂತೆ ಸೂಪರ್-4 ಹಂತದ ಎಲ್ಲಾ ಪಂದ್ಯಗಳು ಕೊಲೊಂಬೊದ ಆರ್ ಪ್ರೇಮದಾಸ ಮೈದಾನದಲ್ಲಿ (R.Premadasa Stadium, Colombo) ನಡೆಯಲಿವೆ. ಈ ಪ್ರದೇಶದಲ್ಲಿ ಮುಂಗಾರು ಹೆಚ್ಚಾಗಿರುವ ಕಾರಣ ಮಳೆಯ ಸಂಭವ ಹೆಚ್ಚಾಗಿದೆ. ಹಾಗಾಗಿ ಈ ಪಂದ್ಯಗಳನ್ನು ಡಂಬುಲ್ಲಾಗೆ ಸ್ಥಳಾಂತರಿಸುವ ಸಾಧ್ಯತೆ ಕುರಿತು ಎಸಿಸಿ ಚಿಂತನೆ ನಡೆಸಿದೆ. ಸೆಪ್ಟೆಂಬರ್ 2ರಂದು ನಡೆದ ನಡೆದ ಬಹುನಿರೀಕ್ಷಿತ ಭಾರತ-ಪಾಕಿಸ್ತಾನ ಪಂದ್ಯ ಮಳೆಯಿಂದ ರದ್ದಾಗಿ ಕೋಟ್ಯಂತರ ಅಭಿಮಾನಿಗಳಿಗೆ ನಿರಾಸೆ ಉಂಟುಮಾಡಿತ್ತು.
ಎಸಿಸಿಗೆ ನಷ್ಟ
ಇಂದು ಭಾರತ, ನೇಪಾಳ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಭಾರತ ಗೆಲ್ಲುವ ವಿಶ್ವಾಸದಲ್ಲಿದೆ. ಆ ಮೂಲಕ ಸೂಪರ್-4 ಹಂತಕ್ಕೆ ಪ್ರವೇಶಿಸಿದರೆ, ಪಾಕಿಸ್ತಾನದ ಜೊತೆ ಮತ್ತೊಮ್ಮೆ ಸೆಣಸಾಟ ನಡೆಸಲಿದೆ. ಒಂದು ಫೈನಲ್ ತಲುಪಿದರೆ 3ನೇ ಬಾರಿ ಮುಖಾಮುಖಿ ಆಗಲಿವೆ. ಒಂದು ವೇಳೆ ಈ ಪಂದ್ಯಗಳು ರದ್ದಾದರೆ ಎಸಿಸಿ ಪೂರ್ಣ ಪ್ರಮಾಣದಲ್ಲಿ ಆರ್ಥಿಕ ನಷ್ಟ ಅನುಭವಿಸಲಿವೆ. ಏಷ್ಯಾಕಪ್ ಟೂರ್ನಿಯಲ್ಲಿ ಈ ಎರಡು ತಂಡಗಳಿಗೇ ಹೆಚ್ಚು ಕ್ರೇಜ್ ಹುಟ್ಟಿಕೊಂಡಿರುವುದು ವಿಶೇಷ.
ಸೆಪ್ಟೆಂಬರ್ 5ಕ್ಕೆ ಗ್ರೂಪ್ ಹಂತದ ಪಂದ್ಯಗಳಿಗೆ ತೆರೆ ಬೀಳಲಿದೆ. ಸೆ. 6ರಿಂದ ಸೂಪರ್ 4 ಪಂದ್ಯಗಳು ಶುರುವಾಗಲಿವೆ. ಸೆಪ್ಟೆಂಬರ್ 6ರಂದು ನಡೆಯುವ ಸೂಪರ್ 4 ಪಂದ್ಯ ಪಾಕಿಸ್ತಾನದ ಲಾಹೋರ್ನನ ಗಡಾಫಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಾಕಿಸ್ತಾನ ತಂಡವು ಬಿ ಗುಂಪಿನ ಎರಡನೇ ತಂಡದ ವಿರುದ್ಧ ಸೆಣಸಾಟ ನಡೆಸಲಿದೆ. ತದನಂತರ 2ನೇ ಪಂದ್ಯ ಸೆಪ್ಟೆಂಬರ್ 9ರಂದು ಕೊಲಂಬೊದಲ್ಲಿ ನಡೆಯಲಿದೆ.
ಭಾರಿ ಮಳೆ ಮುನ್ಸೂಚನೆ
ಶ್ರೀಲಂಕಾದಲ್ಲಿ ನಡೆಯಲಿರುವ ಸೂಪರ್-4 ಪಂದ್ಯಗಳಿಗೆ ಭಾರಿ ಮಳೆ ಸುರಿಯುವ ಸಾಧ್ಯತೆ ಇರುವ ಕಾರಣ ಪಂದ್ಯಗಳನ್ನು ಸ್ಥಳಾಂತರಗೊಳಿಸಲು ಎಸಿಸಿ ಚಿಂತಿಸಿದೆ. ಈಗಾಗಲೇ ಹವಾಮಾನ ಇಲಾಖೆ ವರದಿ ನೀಡಿದ್ದು, ನಿರಂತರ ಮಳೆ ಸುರಿಯುವ ಮುನ್ಸೂಚನೆ ನೀಡಿದೆ. ಹಾಗಾಗಿ ಕೊಲಂಬೊದಿಂದ ಡಂಬುಲ್ಲಾ ಅಥವಾ ಪಲ್ಲೆಕೆಲೆಗೆ ಸ್ಥಳಾಂತರಿಸುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.
ಮೊದಲೇ ನೀಡಿತ್ತು ಮಾಹಿತಿ
ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಪ್ರಕಾರ, ಕೊಲಂಬೊ ಹವಾಮಾನ ಪರಿಸ್ಥಿತಿಯ ಕುರಿತು ಎಲ್ಲಾ ತಂಡಗಳಿಗೆ ವಿವರಿಸಲಾಗಿದೆ. ಪಲ್ಲೆಕೆಲೆ ಮತ್ತು ದಂಬುಲಾ ಮೈದಾನಗಳಿಗೆ ಪಂದ್ಯ ಸ್ಥಳಾಂತರ ಮಾಡಲು ಯೋಜನೆ ರೂಪಿಸಲಾಗುತ್ತಿದೆ. ಇಲ್ಲಿನ ಹವಾಮಾನ ಪರಿಸ್ಥಿತಿ ಕುರಿತು ಶ್ರೀಲಂಕಾ ಕ್ರಿಕೆಟ್ ಮಂಡಳಿ ಮೊದಲೇ ಮಾಹಿತಿ ನೀಡಿತ್ತು. ಅಲ್ಲದೆ, ಕೊಲಂಬೊ ಬದಲಿಗೆ ದಂಬುಲಾದಲ್ಲಿ ಪಂದ್ಯಗಳ ಆಯೋಜನೆ ಸಂಬಂಧಿಸಿ ಮಾಹಿತಿ ಕೊಟ್ಟಿತ್ತು.
ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ
ಟೂರ್ನಿಯ ಆತಿಥ್ಯ ಪಾಕಿಸ್ತಾನಕ್ಕೆ ಸಿಕ್ಕಿದೆ. ಭಾರತವು ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸದ ಕಾರಣ, ಹೈಬ್ರಿಡ್ ಮಾದರಿಯಲ್ಲಿ ಏಷ್ಯಾಕಪ್ ಟೂರ್ನಿ ನಡೆಸಲು ಎಸಿಸಿ ಒಪ್ಪಿಗೆ ನೀಡಿತ್ತು. ಅದರಂತೆ ಪಾಕಿಸ್ತಾನ ದೇಶದಲ್ಲಿ 4 ಪಂದ್ಯಗಳು, ಫೈನಲ್ ಸೇರಿ 9 ಪಂದ್ಯಗಳನ್ನು ಶ್ರೀಲಂಕಾದಲ್ಲಿ ನಡೆಸಲು ಒಪ್ಪಿಗೆ ನೀಡಲಾಗಿತ್ತು. ಅದರಂತೆ ಟೂರ್ನಿ ನಡೆಯುತ್ತಿದೆ. ಇದೀಗ ಸೂಪರ್-4 ಪಂದ್ಯಗಳನ್ನು ಮಳೆಯ ಕಾರಣ ಸ್ಥಳಾಂತರಿಸಲು ಯೋಜನೆ ರೂಪಿಸಿದೆ.