ಒಂದು ಫೋಟೋ, ಒಂದು ಪದ; ಬಾಬರ್ ಜೊತೆಗೆ ಡ್ರೆಸ್ಸಿಂಗ್ ರೂಮ್ ಬಿರುಕು ವದಂತಿಗೆ ತೆರೆ ಎಳೆದ ಶಾಹೀನ್ ಅಫ್ರಿದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಒಂದು ಫೋಟೋ, ಒಂದು ಪದ; ಬಾಬರ್ ಜೊತೆಗೆ ಡ್ರೆಸ್ಸಿಂಗ್ ರೂಮ್ ಬಿರುಕು ವದಂತಿಗೆ ತೆರೆ ಎಳೆದ ಶಾಹೀನ್ ಅಫ್ರಿದಿ

ಒಂದು ಫೋಟೋ, ಒಂದು ಪದ; ಬಾಬರ್ ಜೊತೆಗೆ ಡ್ರೆಸ್ಸಿಂಗ್ ರೂಮ್ ಬಿರುಕು ವದಂತಿಗೆ ತೆರೆ ಎಳೆದ ಶಾಹೀನ್ ಅಫ್ರಿದಿ

Shaheen Afridi: ಕೇವಲ ಒಂದು ಪದ ಹಾಗೂ ಒಂದು ಫೋಟೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿ, ಶಾಹೀನ್‌ ಅಫ್ರಿದಿ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಶಹೀನ್‌ ಅಫ್ರಿದಿ, ಬಾಬರ್‌ ಅಜಾಮ್
ಶಹೀನ್‌ ಅಫ್ರಿದಿ, ಬಾಬರ್‌ ಅಜಾಮ್

ಸೂಪರ್ ಫೋರ್ ಹಂತದಲ್ಲಿ ಸತತವಾಗಿ ಭಾರತ ಮತ್ತು ಶ್ರೀಲಂಕಾ ವಿರುದ್ಧ ಸೋಲು ಕಂಡ ಪಾಕಿಸ್ತಾನ ಕ್ರಿಕೆಟ್‌ ತಂಡವು, 2023ರ ಏಷ್ಯಾಕಪ್‌ನಿಂದ ಹೊರಬಿತ್ತು. ಅದರಲ್ಲಿ ಭಾರತದ ವಿರುದ್ಧ ಹೀನಾಯ ಸೋಲು ಕಂಡರೆ, ಲಂಕಾ ವಿರುದ್ಧ ಕೊನೆಯ ಎಸೆತದಲ್ಲಿ ಪರಾಭವಗೊಂಡಿತು. ಟೂರ್ನಿಯಿಂದ ಆಘಾತಕಾರಿ ನಿರ್ಗಮನ ಕಂಡಿದ್ದು ಮಾತ್ರವಲ್ಲದೆ, ಪಾಕ್‌ ತಂಡದಲ್ಲಿ ಭಿನ್ನಾಭಿಪ್ರಾಯ ಕೂಡಾ ಎದ್ದವು. ನಾಯಕ ಬಾಬರ್ ಅಜಾಮ್ (Babar Azam) ಮತ್ತು ಶಾಹೀನ್ ಅಫ್ರಿದಿ (Shaheen Afridi) ಪರಸ್ಪರ ವಾದ-ವಿವಾದದಲ್ಲಿ‌ ತೊಡಗಿದ್ದರ ಕುರಿತು ವರದಿಯಾಗಿತ್ತು. ಈ ಕುರಿತು ಅನುಭವಿ ಕ್ರಿಕೆಟಿಗರು ತೀವ್ರ ಕಳವಳ ವ್ಯಕ್ತಪಡಿಸಿದ್ದರು.

ಕಳೆದ ವಾರ, ಕೊಲಂಬೊದಲ್ಲಿ ಶ್ರೀಲಂಕಾ ವಿರುದ್ಧದ ಸೂಪರ್‌ ಫೋರ್‌ ಹಂತದ ಪಂದ್ಯದಲ್ಲಿ ಸೋತ ನಂತರ ಡ್ರೆಸ್ಸಿಂಗ್ ರೂಮ್‌ನಲ್ಲಿ ಉಭಯ ಆಟಗಾರರ ನಡುವೆ ಮಾತುಕತೆ ನಡೆದಿರುವ ಕುರಿತಾಗಿ ಪಾಕ್‌ ಮಾಧ್ಯಮಗಳು ವರದಿ ಮಾಡಿದ್ದವು. ಹೀಗಾಗಿ ಪಾಕ್‌ ತಂಡದಲ್ಲಿ ಬಿರುಕು‌ ಮೂಡಿದೆ ಎಂಬ ಚರ್ಚೆ ಮುನ್ನೆಲೆಗೆ ಬಂದಿತ್ತು. ಅಲ್ಲದೆ ನಾಯಕ ಬಾಬರ್‌ ಹಾಗೂ ವೇಗಿ ಶಾಹೀನ್‌ ನಡುವೆ ಭಿನ್ನಾಭಿಪ್ರಾಯಗಳಿವೆ ಎಂಬ ಚರ್ಚೆಯೂ ನಡೆಯಿತು. ಸದ್ಯ ಈ ಕುರಿತಾಗಿ ಶಾಹೀನ್ ಅಫ್ರಿದಿ ಮೌನ ಮುರಿದಿದ್ದಾರೆ. ಕೇವಲ ಒಂದು ಪದ ಹಾಗೂ ಒಂದು ಫೋಟೋದೊಂದಿಗೆ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ನಾಯಕ ಬಾಬರ್ ಜೊತೆಗೂಡಿ ಚೆಸ್‌ ಆಡುತ್ತಿರುವ ಫೋಟೋವನ್ನು ಹಂಚಿಕೊಂಡಿರುವ ಶಾಹೀನ್, ಹೃದಯದ ಎಮೋಟಿಕಾನ್‌ ಜೊತೆಗೆ 'ಕುಟುಂಬ' (family) ಎಂದು ಶೀರ್ಷಿಕೆ ನೀಡಿದ್ದಾರೆ. ಆ ಮೂಲಕ ನಮ್ಮಿಬ್ಬರ ನಡುವೆ ಯಾವುದೇ ಭಿನಾಭಿಪ್ರಾಯಗಳಿಲ್ಲ. ನಾವಿಬ್ಬರು ಒಂದು ಕುಟುಂಬದಂತಿದ್ದೇವೆ ಎಂಬುದಾಗಿ ಶಹೀನ್‌ ಒಂದೇ ಪದದಲ್ಲಿ ತಿಳಿಸಿದ್ದಾರೆ.

ಏಷ್ಯಾಕಪ್​ ಫೈನಲ್‌​ಗೆ ಅರ್ಹತೆ ಪಡೆಯಲು ಗೆಲ್ಲಲೇಬೇಕಾದ ಮಹತ್ವದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸೋತು ಪಾಕಿಸ್ತಾನ ಟೂರ್ನಿಯಿಂದ ಹೊರ ಬಿತ್ತು. ಅಂತಿಮ ಎಸೆತದಲ್ಲಿ ಶ್ರೀಲಂಕಾ ಗೆಲುವಿಗೆ 2 ರನ್‌​ಗಳ ಅಗತ್ಯ ಇತ್ತು. ಆದರೆ, ಕೊನೆಯ ಎಸೆತದಲ್ಲಿ ಚರಿತ್​ ಅಸಲಂಕಾ 2 ರನ್ ಗಳಿಸಿ ಲಂಕಾಗೆ ರೋಚಕ ಗೆಲುವು ತಂದುಕೊಟ್ಟರು. ಪಂದ್ಯ ಸೋತ ನಂತರ ಡ್ರೆಸ್ಸಿಂಗ್​​ ರೂಮ್​ಗೆ ಬಂದ ನಾಯಕ ಬಾಬರ್​, ಹತಾಶೆಯಿಂದ ತಮ್ಮ ಆಟಗಾರರ ಕಳಪೆ ಪ್ರದರ್ಶನದ ವಿರುದ್ಧ ಗುಡುಗಿದ್ದಾರೆ. ಈ ರೀತಿ ಕೆಟ್ಟ ಪ್ರದರ್ಶನ ನೀಡಿದರೆ ವಿಶ್ವಕಪ್​ ಕೊನೆಯಾಗಬಹುದು ಎಂದು ಎಚ್ಚರಿಸಿದ್ದಾರೆ.

ಬಾಬರ್ ಅಜಮ್​ ಈ ರೀತಿ ಎಚ್ಚರಿಕೆ ನೀಡಿದ ಬೆನ್ನಲ್ಲೇ ಸ್ಟಾರ್​ ಬೌಲರ್​ ಶಾಹೀನ್ ಅಫ್ರಿದಿ, ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆಸಿದೆ. ಇಬ್ಬರು ಸೂಪರ್​ ಸ್ಟಾರ್​​ ಆಟಗಾರರಾದ ಬಾಬರ್ ಅಜಾಮ್ ಮತ್ತು ಶಾಹೀನ್ ಅಫ್ರಿದಿ ನಡುವೆ ಮಾತಿನ ಚಕಮಕಿ ನಡೆಯಿತು ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿತ್ತು.

Whats_app_banner