ಟಿ20 ವಿಶ್ವಕಪ್‌ಗೆ ವಿರಾಟ್‌ ಕೊಹ್ಲಿ ಆಯ್ಕೆ ಅನುಮಾನ; ಕಠಿಣ ನಿರ್ಧಾರಕ್ಕೆ ಮುಂದಾದ ಬಿಸಿಸಿಐ
ಕನ್ನಡ ಸುದ್ದಿ  /  ಕ್ರಿಕೆಟ್  /  ಟಿ20 ವಿಶ್ವಕಪ್‌ಗೆ ವಿರಾಟ್‌ ಕೊಹ್ಲಿ ಆಯ್ಕೆ ಅನುಮಾನ; ಕಠಿಣ ನಿರ್ಧಾರಕ್ಕೆ ಮುಂದಾದ ಬಿಸಿಸಿಐ

ಟಿ20 ವಿಶ್ವಕಪ್‌ಗೆ ವಿರಾಟ್‌ ಕೊಹ್ಲಿ ಆಯ್ಕೆ ಅನುಮಾನ; ಕಠಿಣ ನಿರ್ಧಾರಕ್ಕೆ ಮುಂದಾದ ಬಿಸಿಸಿಐ

Virat Kohli: ಮುಂಬರುವ ಟಿ20 ವಿಶ್ವಕಪ್‌ ಪಂದ್ಯಾವಳಿಗೆ ವಿರಾಟ್ ಕೊಹ್ಲಿ ಆಯ್ಕೆ ಕುರಿತಾಗಿ ಬಿಸಿಸಿಐ ಆಯ್ಕೆದಾರರು ಕಠಿಣ ನಿರ್ಧಾರ ತೆಗೆದುಕೊಳ್ಳಲು ಸಿದ್ಧರಾಗಿದ್ದಾರೆ. ಸದ್ಯದ ವರದಿಗಳ ಪ್ರಕಾರ, ಟೀಮ್‌ ಇಂಡಿಯಾ ವಿರಾಟ್‌ ಅನುಪಸ್ಥಿತಿಯಲ್ಲಿ ವಿಶ್ವಕಪ್‌ ಆಡಲಿದೆ.

ಟಿ20 ವಿಶ್ವಕಪ್‌ಗೆ ವಿರಾಟ್‌ ಕೊಹ್ಲಿ ಆಯ್ಕೆ ಅನುಮಾನ
ಟಿ20 ವಿಶ್ವಕಪ್‌ಗೆ ವಿರಾಟ್‌ ಕೊಹ್ಲಿ ಆಯ್ಕೆ ಅನುಮಾನ (Reuters)

ಎರಡನೇ ಮಗು ಜನನದ ಹಿನ್ನೆಯಲ್ಲಿ ಕೆಲವು ವಾರಗಳಿಂದ ಕ್ರಿಕೆಟ್‌ ಆಟದಿಂದ ದೂರ ಉಳಿದಿರುವ ವಿರಾಟ್‌ ಕೊಹ್ಲಿ, ಇದೀಗ ಐಪಿಎಲ್‌ ಪಂದ್ಯಾವಳಿ ಮೂಲಕ ಮತ್ತೆ ಮೈದಾನಕ್ಕಿಳಿಯುವ ನಿರೀಕ್ಷೆ ಇದೆ. ಆದರೆ, ಈ ಕುರಿತು ಇನ್ನೂ ಖಚಿತ ಮಾಹಿತಿ ಇಲ್ಲ. ಮಿಲಿಯನ್‌ ಡಾಲರ್‌ ಟೂರ್ನಿ ಮುಗಿದ ಬೆನ್ನಲ್ಲೇ ಮಹತ್ವದ ಟಿ20 ವಿಶ್ವಕಪ್‌ ಪಂದ್ಯಾವಳಿ ಆರಂಭವಾಗಲಿದೆ. ಆದರೆ, ಐಸಿಸಿ ಟೂರ್ನಿಗೆ ವಿರಾಟ್‌ ಕೊಹ್ಲಿ ಆಯ್ಕೆಯಾಗುವುದು ಅನುಮಾನವಾಗಿದೆ. ಭಾರತದಲ್ಲಿ ಚುಟುಕು ಸ್ವರೂಪಕ್ಕೆ ಸರಿಹೊಂದುವ ಆಟಗಾರರ ದೊಡ್ಡ ಬಳಗವೇ ಇದೆ. ಹೀಗಾಗಿ ವಿರಾಟ್‌ ಬದಲಿಗೆ ಸ್ಫೋಟಕ ಆಟಗಾರರತ್ತ ಆಯ್ಕೆದಾರರು ನೋಡುತ್ತಿದ್ದಾರೆ.

ಜೂನ್‌ ತಿಂಗಳಲ್ಲಿ ಯುಎಸ್ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ಟಿ20 ವಿಶ್ವಕಪ್ ಪಂದ್ಯಾವಳಿ ನಡೆಯಲಿದೆ. ಈ ಟೂರ್ನಿಯಲ್ಲಿ ಟೀಮ್‌ ಇಂಡಿಯಾ ನಾಯಕ ರೋಹಿತ್ ಶರ್ಮಾ ಭಾರತದ ತಂಡವನ್ನು ಮುನ್ನಡೆಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ತಂಡದಲ್ಲಿ ವಿರಾಟ್ ಕೊಹ್ಲಿ ಸ್ಥಾನದ ಬಗ್ಗೆ ಇಂಥಾ ಖಚಿತತೆ ಇಲ್ಲ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು, ಈಗಾಗಲೇ ಟಿ20 ವಿಶ್ವಕಪ್‌ಗೆ ರೋಹಿತ್ ಶರ್ಮಾ ಅವರನ್ನು ಭಾರತದ ನಾಯಕನಾಗಿ ಖಚಿತಪಡಿಸಿದ್ದಾರೆ.‌ ಆದರೆ ಚುಟುಕು ಟೂರ್ನಿಯಲ್ಲಿ ಕೊಹ್ಲಿ ಆಡುವ ಬಗ್ಗೆ ಚರ್ಚೆಯ ಬಳಿಕ ನಿರ್ಧರಿಸಲಾಗುವುದು ಎಂದಷ್ಟೇ ಹೇಳಿದ್ದಾರೆ. ಇದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.

ಸದ್ಯದ ಪರಿಸ್ಥಿತಿಯಲ್ಲಿ, ಟಿ20 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿಯ ಸ್ಥಾನದ ಬಗ್ಗೆ ಆಯ್ಕೆದಾರರು ಇನ್ನೂ ಗೊಂದಲದಲ್ಲಿದ್ದಾರೆ. 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಸೆಮಿಫೈನಲ್‌ನಲ್ಲಿ ಭಾರತ ಸೋತು ನಿರ್ಗಮಿಸಿತು.‌ ಆ ನಂತರ ರೋಹಿತ್ ಮತ್ತು ಕೊಹ್ಲಿ ಇಬ್ಬರೂ ಚುಟುಕು ಸ್ವರೂಪದಿಂದ ವಿರಾಮ ತೆಗೆದುಕೊಂಡರು. ಬಳಿಕ ಹಾರ್ದಿಕ್ ಪಾಂಡ್ಯ ಅವರಿಗೆ ಟಿ20 ತಂಡದ ನಾಯಕತ್ವ ನೀಡಲಾಯ್ತು. ಆ ಬಳಿಕ ನಡೆದ ಏಕದಿನ ವಿಶ್ವಕಪ್‌ನಲ್ಲಿ ಗಾಯಗೊಂಡು ಪಾಂಡ್ಯ ಹೊರಬಿದ್ದರು. ಹೀಗಾಗಿ ಮತ್ತೆ ಹಿಟ್‌ಮ್ಯಾನ್‌ ನಾಯಕನಾಗಿ ತಂಡ ಸೇರಿಕೊಂಡರು.

ಇದನ್ನೂ ಓದಿ | ಚಿನ್ನಸ್ವಾಮಿ ಮೈದಾನಕ್ಕೆ ನೀರಿನ ಸಮಸ್ಯೆ ಇಲ್ಲ; ಬೆಂಗಳೂರಿನಲ್ಲಿ ಆರ್‌ಸಿಬಿ ಪಂದ್ಯ ನಡೆಸಲು ಸಮಸ್ಯೆ ಇಲ್ಲ ಎಂದ ಕೆಎಸ್‌ಸಿಎ

ಬಿಸಿಸಿಐ ಅಧಿಕಾರಿಗಳು ಮತ್ತು ಆಯ್ಕೆದಾರರು ರೋಹಿತ್ ಮತ್ತು ಕೊಹ್ಲಿ ಅವರೊಂದಿಗೆ ಈ ವಿಚಾರವಾಗಿ ನಿಕಟ ಸಂಪರ್ಕದಲ್ಲಿದ್ದಾರೆ. ಇಬ್ಬರೂ ಟಿ20 ಪಂದ್ಯಗಳಲ್ಲಿ ಆಡಲು ಉತ್ಸುಕರಾಗಿದ್ದಾರೆಯೇ ಎಂದು ಅಧಿಕಾರಿಗಳು ಸಂಪರ್ಕಿಸಿದ್ದಾರೆ. ಈ ಪ್ರಶ್ನೆಗೆ ಉಭಯ ಆಟಗಾರರು ಕೂಡಾ ಸಕಾರಾತ್ಮಕ ಉತ್ತರ ನೀಡಿದ್ದಾರೆ. ಹೀಗಾಗಿ ಅಫ್ಘಾನಿಸ್ತಾನ ವಿರುದ್ಧದ ತವರಿನ ಸರಣಿಯಲ್ಲಿ ರೋಹಿತ್ ಮತ್ತು ಕೊಹ್ಲಿ ಟಿ20 ಸ್ವರೂಪಕ್ಕೆ ಮರಳಿದರು. ಅದು ಸುಮಾರು 15 ತಿಂಗಳ ನಂತರ ಎಂಬುದು ವಿಶೇಷ.

ಟಿ20 ವಿಶ್ವಕಪ್‌ಗೆ ಕೊಹ್ಲಿ ಆಯ್ಕೆ ಮಾಡಲು ಆಯ್ಕೆದಾರರ ನಿರುತ್ಸಾಹ

ಸದ್ಯ ಯುವ ಆಟಗಾರರು ಟೀಮ್‌ ಇಂಡಿಯಾದಲ್ಲಿ ತುಂಬಿಕೊಂಡಿದ್ದಾರೆ. ಹೀಗಾಗಿ ಆಯ್ಕೆದಾರರು ಕೊಹ್ಲಿಯ ಸ್ಥಾನದ ಬಗ್ಗೆ ಸ್ವಲ್ಪ ಅನುಮಾನ ವ್ಯಕ್ತಪಡಿಸಿದ್ದಾರೆ. ದಿ ಟೆಲಿಗ್ರಾಫ್ ವರದಿಯ ಪ್ರಕಾರ, ಈ ಅನುಮಾನ ಹೆಚ್ಚಾಗಿದೆ. ಚುಟುಕು ಸ್ವರೂಪದಲ್ಲಿ ಕೊಹ್ಲಿ ತಂಡದ ಅಗತ್ಯಗಳನ್ನು ನಿಭಾಯಿಸಲು ಸಾಧ್ಯವಾಗಿಲ್ಲ. ಹೀಗಾಗಿ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಅತ್ಯುನ್ನತ ಪ್ರದರ್ಶನ ನೀಡಿದರೆ ಮಾತ್ರ ಅವರನ್ನು ವಿಶ್ವಕಪ್‌ ಆಯ್ಕೆಗೆ ಪರಿಗಣಿಸಲಾಗುತ್ತದೆ.

ಕೊಹ್ಲಿಯನ್ನು ಆಯ್ಕೆ ಮಾಡುವ ವಿಚಾರದಲ್ಲಿ ಬಿಸಿಸಿಐ ಉನ್ನತ ಅಧಿಕಾರಿಗಳು ಮಧ್ಯಪ್ರವೇಶಿಸಲು ಬಯಸದ ಕಾರಣ, ಅಂತಿಮ ನಿರ್ಧಾರವು ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಅವರ ತಲೆ ಮೇಲೆ ಬಿದ್ದಿದೆ.

ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಭಾರತದ ಮುಂದಿರುವ ಆಯ್ಕೆಗಳೇನು?

ಒಂದು ವೇಳೆ ವಿರಾಟ್‌ ಅವರನ್ನು ವಿಶ್ವಕಪ್‌ ತಂಡಕ್ಕೆ ಆಯ್ಕೆ ಆಡಲು ಆಗದಿದ್ದರೆ, ಬದಲಿ ಆಯ್ಕೆಗೆ ಆಟಗಾರರ ಸಂಖ್ಯೆ ದೊಡ್ಡದಿದೆ. ಆದರೆ, ವಿರಾಟ್‌ ಅವರಂಥ ಸ್ಥಿರ ಹಾಗೂ ಬೋಲ್ಡ್‌ ಆಟ ಯಾರಿಂದ ಬರುತ್ತದೆ ಎಂಬುದು ಹೇಳುವುದು ಅಸಾಧ್ಯ. ಟಿ20ಯಲ್ಲಿ ಕೊಹ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಾರೆ. ಹೀಗಾಗಿ ಕೆಎಲ್ ರಾಹುಲ್ ಅಥವಾ ಸಂಜು ಸ್ಯಾಮ್ಸನ್ ಅವರನ್ನು ಕೀಪರ್ ಮತ್ತು 3ನೇ ಕ್ರಮಾಂಕದ ಆಟಗಾರನಾಗಿ ಆಯ್ಕೆ ಮಾಡುವ ಸಾಧ್ಯತೆ ಇದೆ. ಇದೇ ವೇಳೆ ವಿಶ್ವದ ನಂಬರ್‌ 1 ಟಿ20 ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರನ್ನು 3ನೇ ಕ್ರಮಾಂಕದಲ್ಲಿ ಆಡಿಸುವುದು ಉತ್ತಮ ಆಯ್ಕೆ. ಆ ಬಳಿಕ ರಿಂಕು ಸಿಂಗ್, ಶಿವಂ ದುಬೆ ಮತ್ತು ರವೀಂದ್ರ ಜಡೇಜಾ ಅವರಂಥ ಸ್ಫೋಟಕ ಆಟಗಾರರು ನಂತರದ ಕ್ರಮಾಂಕದಲ್ಲಿ ಆಡಬಹುದು.

ಇದನ್ನೂ ಓದಿ | Video: ನಾಯಕನಾಗಿ ಮುಂಬೈ ಇಂಡಿಯನ್ಸ್ ಕ್ಯಾಂಪ್‌ ಸೇರಿಕೊಂಡ ಹಾರ್ದಿಕ್ ಪಾಂಡ್ಯ; ಡ್ರೆಸ್ಸಿಂಗ್‌ ರೂಮ್‌ನಲ್ಲಿ ದೇವರಿಗೆ ಪೂಜೆ

ಕ್ರಿಕೆಟ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner