ಕನ್ನಡ ಸುದ್ದಿ  /  Cricket  /  Hardik Pandya Prays God Inside Dressing Room Of Mumbai Indians To Celebrate Homecoming Of Mi Ahead Of Ipl 2024 Jra

Video: ನಾಯಕನಾಗಿ ಮುಂಬೈ ಇಂಡಿಯನ್ಸ್ ಕ್ಯಾಂಪ್‌ ಸೇರಿಕೊಂಡ ಹಾರ್ದಿಕ್ ಪಾಂಡ್ಯ; ಡ್ರೆಸ್ಸಿಂಗ್‌ ರೂಮ್‌ನಲ್ಲಿ ದೇವರಿಗೆ ಪೂಜೆ

Hardik Pandya: ಎರಡು ವರ್ಷಗಳ ಬಳಿಕ ಹಾರ್ದಿಕ್ ಪಾಂಡ್ಯ ತಮ್ಮ ಹಳೆಯ ತಂಡ ಮುಂಬೈ ಇಂಡಿಯನ್ಸ್‌ಗೆ ಮರಳಿದ್ದಾರೆ. ಈ ಬಾರಿ ನಾಯಕನಾಗಿ ಹೊಸ ಸವಾಲು ಸ್ವೀಕರಿಸಿದ್ದಾರೆ. ಶುಭಾರಂಭವನ್ನು ದೇವರ ಪೂಜೆಯೊಂದಿಗೆ ಆರಂಭಿಸಿರುವ ಪಾಂಡ್ಯ ವಿಡಿಯೋ ವೈರಲ್‌ ಆಗಿದೆ.

ಮುಂಬೈ ಇಂಡಿಯನ್ಸ್ ಡ್ರೆಸ್ಸಿಂಗ್‌ ರೂಮ್‌ನಲ್ಲಿ ದೇವರಿಗೆ ಪೂಜೆ ಹಾರ್ದಿಕ್ ಪಾಂಡ್ಯ
ಮುಂಬೈ ಇಂಡಿಯನ್ಸ್ ಡ್ರೆಸ್ಸಿಂಗ್‌ ರೂಮ್‌ನಲ್ಲಿ ದೇವರಿಗೆ ಪೂಜೆ ಹಾರ್ದಿಕ್ ಪಾಂಡ್ಯ (Mumbai Indians Screengrab)

ಕಳೆದ ವರ್ಷದ ಐಪಿಎಲ್‌ನಲ್ಲಿ ಗುಜರಾತ್‌ ಟೈಟಾನ್ಸ್‌ ಪರ ನಾಯಕನಾಗಿ ಆಡಿದ್ದ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ, ಈ ಬಾರಿ ತಮ್ಮ ಹಳೆಯ ಫ್ರಾಂಚೈಸ್‌ ಮುಂಬೈ ಇಂಡಿಯನ್ಸ್‌ಗೆ ಮರಳಿದ್ದಾರೆ. ಮತ್ತೆ ತವರಿಗೆ ಮರಳಿದ ಖುಷಿಯಲ್ಲಿರುವ ಪಾಂಡ್ಯ, ಖುಷಿಯಿಂದಲೇ ಎಂಐ ಡ್ರೆಸಿಂಗ್‌ ರೂಮ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಡ್ರೆಸ್ಸಿಂಗ್ ರೂಮ್‌ನಲ್ಲಿ ದೇವರ ಫೋಟೋ ಇಟ್ಟು ದೇವರ ಆಶೀರ್ವಾದ ಪಡೆಯುವ ಮೂಲಕ, ಹೊಸ ಪ್ರಯಣ ಆರಂಭಿಸಿದ್ದಾರೆ. ಹಾರ್ದಿಕ್‌ ಪಾಂಡ್ಯ ಹೋಮ್‌ ಕಮಿಂಗ್‌ ವಿಡಿಯೋವನ್ನು ಮಾಜಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿಯು ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.

ತಮ್ಮ ಹಳೆಯ ತಂಡದ ಡ್ರೆಸ್ಸಿಂಗ್‌ ಕೋಣೆಗೆ ಹೊಸ ಹುರುಪಿನೊಂದಿಗೆ ಪ್ರವೇಶಿಸಿದ ಹಾರ್ದಿಕ್,‌ ದೇವರ ಫೋಟೋಗೆ ಹೂಮಾಲೆ ಹಾಕಿದ್ದಾರೆ. ಪಕ್ಕದಲ್ಲೇ ಸಿಹಿತಿಂಡಿ ಇರಿಸಿ, ದೇವರನ್ನು ಸ್ಮರಿಸುವ ಮೂಲಕ ಹೊಸ ಜರ್ನಿಗೆ ಮುನ್ನುಡಿ ಬರೆದಿದ್ದಾರೆ. ಎಂಐ ತಂಡದ ಮುಖ್ಯ ಕೋಚ್ ಮಾರ್ಕ್ ಬೌಷರ್ ಕೂಡಾ ಭಾರತೀಯ ಸಂಸ್ಕೃತಿಯನ್ನು ಪಾಲಿಸಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ವಿಕೆಟ್ ಕೀಪರ್‌, ತೆಂಗಿನಕಾಯಿಯನ್ನು ಒಡೆದು ಗಮನ ಸೆಳೆದಿದ್ದಾರೆ.

2021ರ ಆವೃತ್ತಿಯವರೆಗೂ ಮುಂಬೈ ಇಂಡಿಯನ್ಸ್‌ ತಂಡದ ಪರ ಆಡಿದ್ದ ಹಾರ್ದಿಕ್‌ ಪಾಂಡ್ಯ, 2022ರ ಹರಾಜಿನಲ್ಲಿ ಹೊಸ ತಂಡ ಗುಜರಾತ್‌ ಟೈಟಾನ್ಸ್ ಸೇರಿಕೊಂಡರು. ಮೊದಲ ಐಪಿಎಲ್‌ ಪಂದ್ಯಾವಳಿಯಲ್ಲೇ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದರು. ಆ ಬಳಿಕ 2023ರಲ್ಲಿಯೂ ತಂಡವನ್ನು ಫೈನಲ್‌ಗೆ ಮುನ್ನಡೆಸಿದರು. ನಾಯಕನಾಗಿ ಸತತ ಎರಡು ಬಾರಿ ಫೈನಲ್‌ ಪಂದ್ಯವಾಡಿದ ಬಳಿಕ, ಹಾರ್ದಿಕ್ ಈ ಬಾರಿ ಮತ್ತೆ ತಮ್ಮ ಹಳೆಯ ಫ್ರಾಂಚೈಸಿಗೆ ಮರಳಿದ್ದಾರೆ. 2015ರಲ್ಲಿ ಇದೇ ತಂಡದೊಂದಿಗೆ ತಮ್ಮ ಐಪಿಎಲ್ ವೃತ್ತಿಜೀವನ ಆರಂಭಿಸಿದ್ದ ಪಾಂಡ್ಯ, ಆ ಬಳಿಕ ಟೀಮ್‌ ಇಂಡಿಯಾದಲ್ಲಿಯೂ ಅಬ್ಬರಿಸುತ್ತಿದ್ದಾರೆ.

ಇದನ್ನೂ ಓದಿ | ಡಬ್ಲ್ಯುಪಿಎಲ್ ಪಂದ್ಯ ವೀಕ್ಷಿಸಿದ ಕತ್ರೀನಾ ಕೈಫ್; ಫ್ಯಾನ್ಸ್‌, ಯುಪಿ ವಾರಿಯರ್ಸ್ ತಂಡದೊಂದಿಗೆ ಫೋಟೋಗೆ ಪೋಸ್ ನೀಡಿದ ನಟಿ

ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್‌ ಪಂದ್ಯಾವಳಿ ವೇಳೆ, ಹಾರ್ದಿಕ್‌ ಪಾಂಡ್ಯ ಗಾಯಗೊಂಡಿದ್ದರು. ಅದಾದ ಬಳಿಕ, ಈ ಬಾರಿಯ ಐಪಿಎಲ್‌ ಮೂಲಕ ಇದೇ ಮೊದಲ ಬಾರಿಗೆ ಮೈದಾನಕ್ಕೆ ಇಳಿಯುತ್ತಿದ್ದಾರೆ. ಹೀಗಾಗಿ ಈ ಬಾರಿಯ ಐಪಿಎಲ್ ಪಂದ್ಯಾವಳಿಯು ಪಾಂಡ್ಯ ಪಾಲಿಗೆ ಮಹತ್ವದ್ದು. ಅವರ ಫಿಟ್ನೆಸ್ ಮತ್ತು ನಾಯಕತ್ವಕ್ಕೂ ಇದು ನಿಜವಾದ ಪರೀಕ್ಷೆಯಾಗಿದೆ. ಮುಂದೆ ನಡೆಯಲಿರುವ ಮಹತ್ವದ ಟಿ20 ವಿಶ್ವಕಪ್‌ ಪಂದ್ಯಾವಳಿಗೆ ಆಟಗಾರರ ಆಯ್ಕೆಯಲ್ಲೂ ಪಾಂಡ್ಯ ಪ್ರದರ್ಶನ ಪ್ರಮುಖ ಪಾತ್ರ ವಹಿಸಲಿದೆ.

ಆಟಗಾರನಾಗಿ ಮುಂಬೈ ತಂಡದಲ್ಲಿ ಏಳು ವರ್ಷಗಳ ಕಾಲ ಪ್ರತಿನಿಧಿಸಿದ ಅನುಭವ ಪಾಂಡ್ಯಗೆ ಇದೆ. ಆದರೆ, ನಾಯಕನಾಗಿ ಚಾಂಪಿಯನ್‌ ತಂಡವನ್ನು ಮುನ್ನಡೆಸುವುದು ಅವರ ಮುಂದಿನ ಅತಿ ದೊಡ್ಡ ಸವಾಲಾಗಿದೆ. ಐದು ಬಾರಿಯ ಚಾಂಪಿಯನ್‌ ಆಗಿರುವ ಮುಂಬೈ ಇಂಡಿಯನ್ಸ್ ತಂಡದ ಪಾಲಿಗೆ ಈ ಹಿಂದೆ ರೋಹಿತ್ ಶರ್ಮಾ ಯಶಸ್ವಿ ನಾಯಕನಾಗಿದ್ದರು.

ಇದೀಗ ಹಾರ್ದಿಕ್ ಅವರನ್ನು ನಾಯಕನನ್ನಾಗಿ ನೇಮಿಸಿರುವುದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ತಮ್ಮ ಆಯ್ಕೆಯನ್ನು ಸಮರ್ಥಿಸುವ ಒತ್ತಡ ಹಾರ್ದಿಕ್ ಮೇಲಿದೆ. ತಂಡದಲ್ಲಿ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ ಅವರಂಥ ಅನುಭವಿ ಹಾಗೂ ಬಲಿಷ್ಠ ಆಟಗಾರರ ಸಹಕಾರ ಪಾಂಡ್ಯಗೆ ಸಿಗಲಿದೆ. ಇದನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ಅವರ ಮೇಲಿರುವ ಸವಾಲು.

ಇದನ್ನೂ ಓದಿ | ಚಿನ್ನಸ್ವಾಮಿ ಮೈದಾನಕ್ಕೆ ನೀರಿನ ಸಮಸ್ಯೆ ಇಲ್ಲ; ಬೆಂಗಳೂರಿನಲ್ಲಿ ಆರ್‌ಸಿಬಿ ಪಂದ್ಯ ನಡೆಸಲು ಸಮಸ್ಯೆ ಇಲ್ಲ ಎಂದ ಕೆಎಸ್‌ಸಿಎ

ಕ್ರಿಕೆಟ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This copy first appeared in Hindustan Times Kannada website. To read more like this please logon to kannada.hindustantimes.com)