ಕನ್ನಡ ಸುದ್ದಿ  /  ಕ್ರಿಕೆಟ್  /  ಟಿ20 ವಿಶ್ವಕಪ್​ಗೆ ಆಯ್ಕೆ ಮಾಡಲೇಬೇಕಾದ ಆಟಗಾರರನ್ನು ಹೆಸರಿಸಿದ ಮ್ಯಾಥ್ಯೂ ಹೇಡನ್ ಮತ್ತು ಇರ್ಫಾನ್ ಪಠಾಣ್

ಟಿ20 ವಿಶ್ವಕಪ್​ಗೆ ಆಯ್ಕೆ ಮಾಡಲೇಬೇಕಾದ ಆಟಗಾರರನ್ನು ಹೆಸರಿಸಿದ ಮ್ಯಾಥ್ಯೂ ಹೇಡನ್ ಮತ್ತು ಇರ್ಫಾನ್ ಪಠಾಣ್

Matthew Hayden Irfan Pathan : 2024ರ ಟಿ20 ವಿಶ್ವಕಪ್ ಟೂರ್ನಿಗೆ ಆಯ್ಕೆ ಮಾಡಲೇಬೇಕಾದ ಆಟಗಾರ ಯಾರೆಂಬುದನ್ನು ಮ್ಯಾಥ್ಯೂ ಹೇಡನ್ ಮತ್ತು ಇರ್ಫಾನ್ ಪಠಾಣ್ ಹೆಸರಿಸಿದ್ದಾರೆ.

ಟಿ20 ವಿಶ್ವಕಪ್​ಗೆ ಆಯ್ಕೆ ಮಾಡಲೇಬೇಕಾದ ಆಟಗಾರರನ್ನು ಹೆಸರಿಸಿದ ಮ್ಯಾಥ್ಯೂ ಹೇಡನ್ ಮತ್ತು ಇರ್ಫಾನ್ ಪಠಾಣ್
ಟಿ20 ವಿಶ್ವಕಪ್​ಗೆ ಆಯ್ಕೆ ಮಾಡಲೇಬೇಕಾದ ಆಟಗಾರರನ್ನು ಹೆಸರಿಸಿದ ಮ್ಯಾಥ್ಯೂ ಹೇಡನ್ ಮತ್ತು ಇರ್ಫಾನ್ ಪಠಾಣ್

ಜೂನ್ 1 ರಿಂದ 29ರ ತನಕ ವೆಸ್ಟ್ ಇಂಡೀಸ್ ಮತ್ತು ಯುಎಸ್​ಎನಲ್ಲಿ 2024ರ ಟಿ20 ವಿಶ್ವಕಪ್ (T20 World Cup 2024) ನಡೆಯಲಿದೆ. ಜೂನ್ 5 ರಿಂದ ಐರ್ಲೆಂಡ್ ವಿರುದ್ಧ ಸೆಣಸಾಟ ನಡೆಸುವ ಮೂಲಕ ವಿಶ್ವಕಪ್ ಅಭಿಯಾನ ಪ್ರಾರಂಭಿಸಲು ಟೀಮ್ ಇಂಡಿಯಾ (Team India) ಸಜ್ಜಾಗಿದೆ. 2013ರ ನಂತರ ಮೊದಲ ಐಸಿಸಿ ಟ್ರೋಫಿ ಗೆಲ್ಲಲು ಯೋಜನೆ ರೂಪಿಸುತ್ತಿದೆ. ಮೆಗಾ ಟೂರ್ನಿಗೆ ಮೇ 1ರೊಳಗೆ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ.

ಅಂತಿಮ 15 ಸದಸ್ಯರಲ್ಲಿ ಯಾರಿಗೆ ಅವಕಾಶ ಸಿಗುತ್ತದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಆಟಗಾರರಿಗೂ ತಂಡದ ಭಾಗವಾಗಲಿದ್ದಾರೆ ಎಂದು ಹೇಳಲಾಗಿದೆ. ತಂಡದ ಆಯ್ಕೆಗೆ ಸಂಬಂಧಿಸಿ ಈಗಾಗಲೇ ಸಾಕಷ್ಟು ಊಹಾಪೋಹಗಳು ಎದ್ದಿವೆ. ರೋಹಿತ್ ಶರ್ಮಾ ಅವರೇ ನಾಯಕ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಖಚಿತಪಡಿಸಿದ್ದಾರೆ.

ರೋಹಿತ್​ ಜೊತೆಗೆ ವಿರಾಟ್ ಕೊಹ್ಲಿ ಕೂಡ ಅಂತಿಮ ತಂಡಕ್ಕೆ ಲಾಕ್ ಆಗಿರುವ ಇನ್ನೊಬ್ಬ ಆಟಗಾರನಾಗಿದ್ದಾರೆ ಎಂದು ಹೇಳಲಾಗಿದೆ. ಆದಾಗ್ಯೂ, ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ ಮ್ಯಾಥ್ಯೂ ಹೇಡನ್ ಅವರು ಇಬ್ಬರು ದೊಡ್ಡ ಆಟಗಾರರಲ್ಲಿ ಯಾರನ್ನೂ ತಂಡದಿಂದ ಕೈಬಿಡಲಾಗದವರು ಎಂದು ಹೆಸರಿಸಿಲ್ಲ. ಆದರೆ, ಆಯ್ಕೆ ಮಾಡಲೇಬೇಕಾದ ಆಟಗಾರ ಯಾರೆಂಬುದನ್ನು ಗುರುತಿಸಿದ್ದಾರೆ.

ಶಿವಂ ದುಬೆಯನ್ನು ಆಯ್ಕೆ ಮಾಡಲೇಬೇಕು ಎಂದ ಮ್ಯಾಥ್ಯೂ ಹೇಡನ್

ಸ್ಟಾರ್ ಸ್ಪೋರ್ಟ್ಸ್ ಜೊತೆಗಿನ ಸಂವಾದದಲ್ಲಿ ಮ್ಯಾಥ್ಯೂ ಹೇಡನ್ ಅವರು ಸ್ಟಾರ್ ಚೆನ್ನೈ ಸೂಪರ್ ಕಿಂಗ್ಸ್ ಆಲ್ ರೌಂಡರ್ ಶಿವಂ ದುಬೆ ಅವರನ್ನು ಟಿ20 ವಿಶ್ವಕಪ್ 2024ರಲ್ಲಿ ಭಾರತ ಆಡುವ 11ರಿಂದ ಕೈ ಬಿಡಬಾರದ ವ್ಯಕ್ತಿ ಎಂದು ಹೆಸರಿಸಿದ್ದಾರೆ. 2024ರ ಐಪಿಎಲ್​ನಲ್ಲಿ ದುಬೆ ಪ್ರಚಂಡ ಫಾರ್ಮ್‌ನಲ್ಲಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ದುಬೆ ಆಡಿರುವ 8 ಪಂದ್ಯಗಳಲ್ಲಿ 170ರ ಸ್ಟ್ರೈಕ್​ರೇಟ್​​ನಲ್ಲಿ 311 ರನ್ ಸಿಡಿಸಿದ್ದಾರೆ. 51 ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ.

ಐಪಿಎಲ್​ ಟೂರ್ನಿಯಲ್ಲಿ ಗರಿಷ್ಠ ಸಿಕ್ಸರ್​​ಗಳನ್ನು ಸಿಡಿಸಿರುವವರ ಪಟ್ಟಿಯಲ್ಲಿ ಹೆನ್ರಿಚ್ ಕ್ಲಾಸೆನ್ ಮತ್ತು ಅಭಿಷೇಕ್ ಶರ್ಮಾ ನಂತರ ಸ್ಥಾನ ಪಡೆದಿರುವ ದುಬೆ (22), 2023ರ ಐಪಿಎಲ್​ನಲ್ಲಿ 35 ಸಿಕ್ಸರ್ ಬಾರಿಸಿದ್ದರು. ಆಕ್ರಮಣಕಾರಿ ಬ್ಯಾಟಿಂಗ್​ನೊಂದಿಗೆ ಟಿ20 ವಿಶ್ವಕಪ್​ಗೆ ಟಿಕೆಟ್ ಪಡೆಯುವ ನಿರೀಕ್ಷೆಯಲ್ಲಿರುವ ದುಬೆಯನ್ನು ಟಿ20 ವಿಶ್ವಕಪ್​ಗೆ ಆಯ್ಕೆ ಮಾಡಬೇಕು ಎಂದು ಹೇಡನ್​, ಬಿಸಿಸಿಐಗೆ ಸೂಚಿಸಿದ್ದಾರೆ.

ರಿಂಕು ಸಿಂಗ್​ಗೆ ವೋಟ್ ಹಾಕಿದ ಇರ್ಫಾನ್ ಪಠಾಣ್

ಐಪಿಎಲ್​ನಲ್ಲಿ ಭಾರತದ ಅತ್ಯುತ್ತಮ ಸ್ಟ್ರೈಕರ್‌ಗಳಲ್ಲಿ ಒಬ್ಬರಾಗಿ ತಮ್ಮ ಖ್ಯಾತಿಯನ್ನು ಹೆಚ್ಚಿಸಿರುವ ಸಿಎಸ್​ಕೆ ಆಲ್​ರೌಂಡರ್, ವೆಸ್ಟ್ ಇಂಡೀಸ್ ಮತ್ತು ಯುಎಸ್​​ಎನ ನಿಧಾನಗತಿಯ ಪಿಚ್‌ಗಳಲ್ಲಿ ಬ್ಯಾಟ್‌ನೊಂದಿಗೆ ಆರ್ಭಟಿಸಲು ಉತ್ತಮ ಆಯ್ಕೆಯಾಗಿದ್ದಾರೆ. ಚರ್ಚೆಯ ಸಮಯದಲ್ಲಿ ಪ್ಯಾನೆಲ್‌ನ ಭಾಗವಾಗಿದ್ದ ಇರ್ಫಾನ್ ಪಠಾಣ್, ಕೈಬಿಡಬಾರದ ಆಟಗಾರನನ್ನು ಗುರುತಿಸಿದ್ದಾರೆ. ಕೆಕೆಆರ್​ ಫಿನಿಶರ್ ರಿಂಕು ಸಿಂಗ್ ಅವರನ್ನು ಟಿ20 ವಿಶ್ವಕಪ್ 2024ನಲ್ಲಿ ಭಾರತ ತಂಡದ ಪ್ಲೇಯಿಂಗ್ XI ನಿಂದ ಕೈಬಿಡಲಾಗದ ಆಟಗಾರ ಎಂದು ತಿಳಿಸಿದ್ದಾರೆ.

ಐಪಿಎಲ್​ನಲ್ಲಿ ದೊಡ್ಡ ಹೆಸರು ಸಂಪಾದಿಸಿರುವ ರಿಂಕು ಸಿಂಗ್, 2023ರ ಐಪಿಎಲ್​ನಲ್ಲಿ 59.25ರ ಸರಾಸರಿಯಲ್ಲಿ 474 ರನ್ ಬಾರಿಸಿದ್ದರು. ಕೆಕೆಆರ್​​ ಪರ ಗರಿಷ್ಠ ಸ್ಕೋರರ್ ಆಗಿ ಹೊರಹೊಮ್ಮಿದರು. ಆದರೆ, ಈ ಬಾರಿ ಮಿಂಚಿನ ಬ್ಯಾಟಿಂಗ್ ನಡೆಸಲಿಲ್ಲ. ಐಪಿಎಲ್‌ನಲ್ಲಿ ಅಬ್ಬರಿಸಿದ ಕಾರಣ ಕಳೆದ ವರ್ಷ ಆಗಸ್ಟ್‌ನಲ್ಲಿ ಐರ್ಲೆಂಡ್‌ಗೆ ಪ್ರವಾಸಕ್ಕೆ ಆಯ್ಕೆ ಆಗಿದ್ದರು. ನಂತರ ಅತ್ಯಂತ ಕಡಿಮೆ ಸ್ವರೂಪದಲ್ಲಿ ಭಾರತ ತಂಡದಲ್ಲಿ ನಿರಂತರ ಸ್ಥಾನ ಗಳಿಸುವಲ್ಲಿ ಯಶಸ್ವಿಯಾದರು.

ಸಿಕ್ಕ ಅವಕಾಶದಲ್ಲಿ ಭಾರತದ ಪರ ಅಬ್ಬರಿಸಿದ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ ರಿಂಕು ಸಿಂಗ್, ಸ್ಥಿರ ಪ್ರದರ್ಶನ ನೀಡುತ್ತಿರುವ ಆಟಗಾರರಲ್ಲಿ ತಾನೂ ಒಬ್ಬರಾಗಿದ್ದಾರೆ. ಟೀಮ್ ಇಂಡಿಯಾ ಪರ 15 ಪಂದ್ಯಗಳಿಂದ 356 ರನ್ ಗಳಿಸಿದ್ದಾರೆ. 89ರ ಅದ್ಭುತ ಸರಾಸರಿ ಹೊಂದಿದ್ದಾರೆ. ಇದಕ್ಕೆ ಕಾರಣ ಅವರು ತಮ್ಮ ಹೆಚ್ಚಿನ ಇನ್ನಿಂಗ್ಸ್​ಗಳಲ್ಲಿ ಔಟಾಗದೆ ಉಳಿದಿದ್ದಾರೆ. ಬಹುತೇಕ ಮಾಜಿ ಕ್ರಿಕೆಟರ್​ಗಳು ಸಹ ರಿಂಕು ಸಿಂಗ್ ಟಿ20 ವಿಶ್ವಕಪ್ ತಂಡದ ಭಾಗವಾಗಬೇಕು ಎಂದು ಹೇಳಿದ್ದಾರೆ.

ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

IPL_Entry_Point