ಕನ್ನಡ ಸುದ್ದಿ  /  ಕ್ರಿಕೆಟ್  /  ಎದ್ದು ಬಿದ್ದು ಗೆದ್ದು ಸೇಡು ತೀರಿಸಿಕೊಂಡ ದಕ್ಷಿಣ ಆಫ್ರಿಕಾ; ಸೋತರೂ ನೆದರ್ಲೆಂಡ್ಸ್ ಹೋರಾಟಕ್ಕೆ ಮೆಚ್ಚುಗೆ

ಎದ್ದು ಬಿದ್ದು ಗೆದ್ದು ಸೇಡು ತೀರಿಸಿಕೊಂಡ ದಕ್ಷಿಣ ಆಫ್ರಿಕಾ; ಸೋತರೂ ನೆದರ್ಲೆಂಡ್ಸ್ ಹೋರಾಟಕ್ಕೆ ಮೆಚ್ಚುಗೆ

Netherlands vs South Africa : ಐಸಿಸಿ ಟಿ20 ವಿಶ್ವಕಪ್ 2024 ಟೂರ್ನಿಯ 16ನೇ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ದಕ್ಷಿಣ ಆಫ್ರಿಕಾ ಎದ್ದು ಬಿದ್ದು ಗೆದ್ದಿದೆ.

ಎದ್ದು ಬಿದ್ದು ಗೆದ್ದು ಸೇಡು ತೀರಿಸಿಕೊಂಡ ದಕ್ಷಿಣ ಆಫ್ರಿಕಾ; ಸೋತರೂ ನೆದರ್ಲೆಂಡ್ಸ್ ಹೋರಾಟಕ್ಕೆ ಮೆಚ್ಚುಗೆ
ಎದ್ದು ಬಿದ್ದು ಗೆದ್ದು ಸೇಡು ತೀರಿಸಿಕೊಂಡ ದಕ್ಷಿಣ ಆಫ್ರಿಕಾ; ಸೋತರೂ ನೆದರ್ಲೆಂಡ್ಸ್ ಹೋರಾಟಕ್ಕೆ ಮೆಚ್ಚುಗೆ

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ 16ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಿಣುಕಾಡಿ ಗೆದ್ದರೆ, ನೆದರ್ಲೆಂಡ್ಸ್​ ಹೋರಾಡಿ ಸೋತಿತು. ಸೌತ್ ಆಫ್ರಿಕಾ ಎದ್ದು ಬಿದ್ದು ಗೆದ್ದ ಕಳೆದ ವರ್ಷದ ಸೋಲಿನ ಸೇಡು ತೀರಿಸಿಕೊಂಡಿತು. ಡೇವಿಡ್ ಮಿಲ್ಲರ್ ಅವರ ಏಕಾಂಗಿ ಹೋರಾಟದ ಫಲವಾಗಿ ಹರಿಣಗಳ ಪಡೆ 4 ವಿಕೆಟ್​​ ಪ್ರಯಾಸದ ಗೆಲುವು ದಾಖಲಿಸಲು ಸಾಧ್ಯವಾಯಿತು. ಇದರೊಂದಿಗೆ ಟೂರ್ನಿಯಲ್ಲಿ ಸತತ 2ನೇ ದಿಗ್ವಿಜಯ ದಾಖಲಿಸಿತು. ಡಚ್ಚರು ಸೋತರೂ ಅವರ ಹೋರಾಟಕ್ಕೆ ಮೆಚ್ಚುಗೆ ವ್ಯಕ್ತವಾಯಿತು.

ಟ್ರೆಂಡಿಂಗ್​ ಸುದ್ದಿ

ನ್ಯೂಯಾರ್ಕ್​ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ನೆದರ್ಲೆಂಡ್ಸ್ ಮೊದಲು ಬ್ಯಾಟಿಂಗ್ ಮಾಡಿತು. ಆದರೆ ಬೌಲರ್​​​ಗಳಿಗೆ ನೆರವು ನೀಡುವ ಪಿಚ್​​​ನಲ್ಲಿ ಅನುಭವಿ ಬೌಲರ್​​ಗಳ ಎದುರು ನೆದರ್ಲೆಂಡ್ಸ್ ರನ್ ಗಳಿಸಲು ಪರದಾಡಿತು. ಸೈಬ್ರಾಂಡ್ ಎಂಗಲ್‌ಬ್ರೆಕ್ಟ್ 40 ರನ್ ಗಳಿಸಿ ಮಿಂಚಿದರು. 40 ರನ್ ಗಳಿಸಲು ತೆಗೆದುಕೊಂಡಿದ್ದು 45 ಎಸೆತಗಳನ್ನು. ಒಟ್ನೀಲ್ ಬಾರ್ಟ್ಮನ್ ಸತತ ವಿಕೆಟ್ ಪಡೆದು ತಂಡದ ಸ್ಕೋರ್​ಗೆ ಕಡಿವಾಣ ಹಾಕಿದರು.

ಉಳಿದಂತೆ, ವಿಕ್ರಮಜಿತ್ ಸಿಂಗ್ (12), ಸ್ಕಾಟ್ ಎಡ್ವರ್ಡ್ (10), ವಾನ್ ವೀಕ್ (23) ಅವರು ಮಾತ್ರ ಎರಡಂಕಿಯ ಮೊತ್ತವನ್ನು ದಾಟಿದರು. ಉಳಿದ ಆಟಗಾರರು ಒಂದಂಕಿಗೆ ಔಟಾದರು. ಆಫ್ರಿಕಾ ಪರ ಬಾರ್ಟ್ಮನ್ 4 ವಿಕೆಟ್ ಉರುಳಿಸಿದರೆ, ಮಾರ್ಕೋ ಯಾನ್ಸನ್ ಮತ್ತು ಆನ್ರಿಚ್ ನೋಕಿಯಾ ತಲಾ 2 ವಿಕೆಟ್ ಉರುಳಿಸಿದರು. ಅಂತಿಮವಾಗಿ ಡಚ್ಚರು 20 ಓವರ್​​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 103 ರನ್ ಪೇರಿಸಿದರು.

ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಕೂಡ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಮೊದಲ ಮೂರು ಓವರ್​​​ಗಳಲ್ಲೂ ಒಂದೊಂದು ವಿಕೆಟ್ ಕಳೆದುಕೊಂಡಿತು. ಆಗ ತಂಡದ ಸ್ಕೋರ್​ 3-3ಕ್ಕೆ ಆಗಿತ್ತು. 5ನೇ ಓವರ್​​ನಲ್ಲಿ ಹೆನ್ರಿಚ್ ಕ್ಲಾಸ್ ಹೊರ ನಡೆದರು. ಇದರೊಂದಿಗೆ ತಂಡ ಸಂಕಷ್ಟಕ್ಕೆ ಸಿಲುಕಿತು. ಮೊದಲ 10 ಓವರ್​​​ಗಳಲ್ಲಿ ಆಫ್ರಿಕಾ ಗಳಿಸಿದ್ದೇ ಕೇವಲ 4 ವಿಕೆಟ್ ನಷ್ಟಕ್ಕೆ 30 ರನ್. ಈ ವೇಳೆ ಮಿಲ್ಲರ್​-ಸ್ಟಬ್ಸ್ ಹೋರಾಟ ನಡೆಸಿದರು.

ಟ್ರಿಸ್ಟಾನ್ ಸ್ಟಬ್ಸ್ ಮತ್ತು ಮಿಲ್ಲರ್​ ಹೋರಾಟ

ಸತತ ವಿಕೆಟ್ ಕಳೆದುಕೊಂಡಿದ್ದರ ನಡುವೆಯೂ ಟ್ರಿಸ್ಟಾನ್ ಸ್ಟಬ್ಸ್ ಮತ್ತು ಡೇವಿಡ್ ಮಿಲ್ಲರ್ ಜವಾಬ್ದಾರಿಯುತ ಆಟ ಪ್ರದರ್ಶಿಸಿದರು. ಆದರೆ ಡಚ್ ಬೌಲರ್​​ಗಳು ಮಾರಕ ದಾಳಿ ಬೌಲಿಂಗ್ ಪ್ರದರ್ಶಿಸಿದರು. ಬಲಿಷ್ಟ ತಂಡಕ್ಕೇ ಸೋಲುವ ಭೀತಿ ಸೃಷ್ಟಿಸಿದ್ದರು. ಈ ಜೋಡಿ ಐದನೇ ವಿಕೆಟ್​ಗೆ 65 ರನ್​ಗಳ ಪಾಲುದಾರಿಕೆ ನೀಡುವ ಮೂಲಕ ಗೆಲ್ಲಲು ಸಹಕಾರಿಯಾಯಿತು.

ಟ್ರಿಸ್ಟಾನ್ ಸ್ಟಬ್ಸ್ 37 ಎಸೆತಗಳಲ್ಲಿ 1 ಬೌಂಡರಿ, 1 ಸಿಕ್ಸರ್ ಸಹಿತ 33 ರನ್ ಗಳಿಸಿ ಔಟಾದರು. ಆದರೆ ಡೇವಿಡ್ ಮಿಲ್ಲರ್ ಮತ್ತೆ ಹೋರಾಟ ಮುಂದುವರೆಸಿದರು. ಕೊನೆಯವರೆಗೂ ಕ್ರೀಸ್​ ಕಚ್ಚಿ ನಿಂತು ಇನ್ನೂ 7 ಎಸೆತಗಳನ್ನು ಬಾಕಿ ಉಳಿಸಿ ಪಂದ್ಯವನ್ನು ಗೆದ್ದುಕೊಟ್ಟರು. ಆದರೆ, ನೆದರ್ಲೆಂಡ್ಸ್​ ಕೊನೆಯವರೆಗೂ ಹೋರಾಡಿ ಸೋತರೆ, ಸೌತ್ ಆಫ್ರಿಕಾ ಪ್ರಯಾಸದ ಗೆಲುವು ಸಾಧಿಸಿತು.

ಸೇಡು ತೀರಿಸಿಕೊಂಡ ಸೌತ್ ಆಫ್ರಿಕಾ

ನೆದರ್ಲೆಂಡ್ಸ್ ವಿರುದ್ಧ ಗೆಲ್ಲುವುದರೊಂದಿಗೆ ಸೌತ್ ಆಫ್ರಿಕಾ 2022ರ ಸೋಲಿಗೆ ಸೇಡು ತೀರಿಸಿಕೊಂಡಿತು. 2022ರ ವಿಶ್ವಕಪ್​​ನಲ್ಲಿ ಸೌತ್ ಆಫ್ರಿಕಾ ತಂಡವನ್ನು ಸೋಲಿಸುವ ಮೂಲಕ ಸೆಮಿಫೈನಲ್​​ ಪ್ರವೇಶಿಸಲು ನೆದರ್ಲೆಂಡ್ಸ್ ಅಡ್ಡಿಯಾಗಿತ್ತು. ಇದೀಗ ಅಂದಿನ ಸೋಲಿನ ಸೇಡನ್ನು ಇಂದು ಆಫ್ರಿಕಾ ತೀರಿಸಿಕೊಂಡಿದೆ ಎಂದೇ ಹೇಳಬಹುದು. ಏಕದಿನ ವಿಶ್ವಕಪ್ ಟೂರ್ನಿಯಲ್ಲೂ ದಕ್ಷಿಣ ಆಫ್ರಿಕಾವನ್ನು ಮಣಿಸಿತ್ತು.

ಟಿ20 ವರ್ಲ್ಡ್‌ಕಪ್ 2024

ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲ ಸುದ್ದಿ, T20 ವಿಶ್ವಕಪ್, T20 ವಿಶ್ವಕಪ್ ವೇಳಾಪಟ್ಟಿ, T20 ವಿಶ್ವಕಪ್ ಅತ್ಯಧಿಕ ರನ್‌ಗಳು, T20 ವಿಶ್ವಕಪ್ ಪಾಯಿಂಟ್ಸ್ ಟೇಬಲ್, T20 ವಿಶ್ವಕಪ್ ಲೈವ್ ಸ್ಕೋರ್, T20 ವಿಶ್ವಕಪ್ ಅಂಕಿಅಂಶಗಳು.. ಕ್ರಿಕೆಟ್‌ಗೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ HT ಕನ್ನಡ ವೆಬ್‌ಸೈಟ್ ನೋಡಿ