ಕನ್ನಡ ಸುದ್ದಿ  /  ಕ್ರಿಕೆಟ್  /  ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಡೇವಿಡ್ ವಾರ್ನರ್ ಗುಡ್‌ಬೈ; ಭಾರತ ವಿರುದ್ಧದ ಸೂಪರ್ 8 ಪಂದ್ಯವೇ ದಿಗ್ಗಜನ ಕೊನೆಯ ಮ್ಯಾಚ್

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಡೇವಿಡ್ ವಾರ್ನರ್ ಗುಡ್‌ಬೈ; ಭಾರತ ವಿರುದ್ಧದ ಸೂಪರ್ 8 ಪಂದ್ಯವೇ ದಿಗ್ಗಜನ ಕೊನೆಯ ಮ್ಯಾಚ್

David Warner: ಟಿ20 ವಿಶ್ವಕಪ್‌ನಿಂದ ಆಸ್ಟ್ರೇಲಿಯಾ ತಂಡ ಹೊರಬೀಳುತ್ತಿದ್ದಂತೆ ಡೇವಿಡ್ ವಾರ್ನರ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿರ್ಗಮಿಸಿದ್ದಾರೆ. ಭಾರತ ವಿರುದ್ಧದ ಸೂಪರ್‌ 8 ಪಂದ್ಯವೇ ಆರಂಭಿಕ ಆಟಗಾರನ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಡೇವಿಡ್ ವಾರ್ನರ್ ಗುಡ್‌ಬೈ
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಡೇವಿಡ್ ವಾರ್ನರ್ ಗುಡ್‌ಬೈ (AFP)

ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಬ್ಯಾಟಿಂಗ್ ದಿಗ್ಗಜ ಡೇವಿಡ್ ವಾರ್ನರ್, ತಮ್ಮ 15 ವರ್ಷಗಳ ಸುದೀರ್ಘ ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ. ಹತ್ತಾರು ಅದ್ಭುತ ಇನ್ನಿಂಗ್ಸ್‌ಗಳು, ಹಲವು ಸಾಧನೆಗಳ ವೃತ್ತಿಬದುಕಿಗೆ ಆಸೀಸ್‌ ಆರಂಭಿಕ ಆಟಗಾರ ವಿದಾಯ ಹೇಳಿದ್ದಾರೆ. ಟಿ20 ವಿಶ್ವಕಪ್‌‌ 2024ರ ಪಂದ್ಯಾವಳಿಯಲ್ಲಿ ಬಾಂಗ್ಲಾದೇಶವನ್ನು ಸೋಲಿಸಿ ಅಫ್ಘಾನಿಸ್ತಾನ ತಂಡವು ಸೆಮಿಫೈನಲ್‌ ಪ್ರವೇಶಿಸುತ್ತಿದ್ದಂತೆಯೇ ಆಸ್ಟ್ರೇಲಿಯಾ ತಂಡ ಟೂರ್ನಿಯಿಂದ ನಿರ್ಗಮಿಸಿತು. ಚುಟುಕು ವಿಶ್ವಕಪ್‌ನಲ್ಲಿ ಆಸೀಸ್‌ ಅಭಿಯಾನ ಅಂತ್ಯಗೊಳ್ಳುತ್ತಿದ್ದಂತೆಯೇ ವಾರ್ನರ್‌‌ ಅಂತಾರಾಷ್ಟ್ರೀಯ ಕ್ರಿಕೆಟ್‌ ಜೀವನವೂ ಅಂತ್ಯವಾಗಿದೆ. ಭಾರತ ವಿರುದ್ಧದ ಪಂದ್ಯವೇ ವಾರ್ನರ್‌ ಅವರ ಕೊನೆಯ ಪಂದ್ಯವಾಗಿದೆ.

ಟೂರ್ನಿಯ ಆರಂಭಕ್ಕೂ ಮುನ್ನವೇ ವಾರ್ನರ್‌ ತಮ್ಮ ನಿವೃತ್ತಿ ಕುರಿತು ಸ್ಪಷ್ಟಪಡಿಸಿದ್ದರು. ಟಿ20 ವಿಶ್ವಕಪ್‌ ಆಸ್ಟ್ರೇಲಿಯಾ ಪರ ತನ್ನ ಕೊನೆಯ ಪಂದ್ಯಾವಳಿ ಎಂದು ಹೇಳಿದ್ದರು.

2009ರ ಜನವರಿಯಲ್ಲಿ ಟಿ20 ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ 37 ವರ್ಷದ ವಾರ್ನರ್, ಇದೇ ಜೂನ್ 24ರಂದು ಗ್ರೋಸ್ ಐಸ್ಲೆಟ್‌ನಲ್ಲಿನಡೆದ ಪಂದ್ಯದಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ 24 ರನ್‌ಗಳಿಂದ ಸೋಲುವುದರೊದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿರ್ಗಮಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಆಸ್ಟ್ರೇಲಿಯಾ ಕಂಡ ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್‌ಗಳಲ್ಲಿ ಒಬ್ಬರಾಗಿ ವಾರ್ನರ್‌, ವಿದಾಯದ ಕುರಿತು ಯಾವುದೇ ಹೆಚ್ಚುವರಿ ನಾಟಕಗಳಿಲ್ಲದೆ ನಿವೃತ್ತಿ ಪಡೆದರು. ಭಾರತ ವಿರುದ್ಧದ ಪಂದ್ಯವೇ ಅವರ ಕೊನೆಯ ಪಂದ್ಯವಾಗಿತ್ತು. ಆದರೆ ಗಾರ್ಡ್‌ ಆಫ್‌ ಹಾನರ್‌, ಚಪ್ಪಾಳೆ ಯಾವುದೂ ಅವರಿಗೆ ಸಿಗಲಿಲ್ಲ. ಭಾರತ ವಿರುದ್ಧದ ಪಂದ್ಯದಲ್ಲಿ ಆರು ಎಸೆತಗಳಲ್ಲಿ ಆರು ರನ್ ಗಳಿಸಿ ವಾರ್ನರ್‌ ಔಟಾದರು. ಮೊದಲ ಓವರ್‌ನಲ್ಲೇ ಅರ್ಷದೀಪ್ ಸಿಂಗ್ ಎಸೆತದಲ್ಲಿ ಅವರು ಕ್ಯಾಚ್‌ ನೀಡಿ ನಿರ್ಗಮಿಸಿದರು. ಆದರೆ, ಅದು ತನ್ನ ಕೊನೆಯ ಪಂದ್ಯ ಎಂದು ತಮಗೇ ಅರಿವಿಲ್ಲದಂತೆ ತಲೆ ತಗ್ಗಿಸಿ ಪಿಚ್‌ನಿಂದ ಹೊರನಡೆದರು.

2023ರ ನವೆಂಬರ್ ತಿಂಗಳಲ್ಲಿ ಭಾರತದ ವಿರುದ್ಧ ಏಕದಿನ ವಿಶ್ವಕಪ್ ಫೈನಲ್ ಗೆಲುವಿನೊಂದಿಗೆ ಅವರು ತಮ್ಮ ಕೊನೆಯ ಏಕದಿನ ಪಂದ್ಯವನ್ನು ಆಡಿದರು. ಆ ಬಳಿಕ ಇದೇ ವರ್ಷದ ಜನವರಿಯಲ್ಲಿ ಪಾಕಿಸ್ತಾನ ವಿರುದ್ಧ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದರು. ಈ ಬಾರಿಯ ಟಿ20 ವಿಶ್ವಕಪ್ ತನ್ನ ಕೊನೆಯ ಪಂದ್ಯಾವಳಿಯಾಗಲಿದೆ ಎಂದು ಅವರು ಈ ಹಿಂದೆಯೇ ಸುಳಿವು ನೀಡಿದ್ದರು.

ಅಧಿಕ ರನ್‌ ಸರದಾರ

ಚುಟುಕು ಸ್ವರೂಪದಲ್ಲಿ 110 ಪಂದ್ಯಗಳಲ್ಲಿ ಆಡಿರುವ ವಾರ್ನರ್‌, 33.43ರ ಸರಾಸರಿ ಮತ್ತು 142.47ರ ಸ್ಟ್ರೈಕ್ ರೇಟ್‌ನೊಂದಿಗೆ 3,277 ರನ್‌ ಗಳಿಸಿದ್ದಾರೆ. ಟಿ20 ಸ್ವರೂಪದಲ್ಲಿ ಆಸ್ಟ್ರೇಲಿಯಾ ಪರ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟರ್. ಈ ಸ್ವರೂಪದಲ್ಲಿ ಒಂದು ಶತಕ ಮತ್ತು 28 ಅರ್ಧಶತಕ ಸಿಡಿಸಿದ್ದಾರೆ. 2011ರಿಂದ 2024ರ ಅವಧಿಯಲ್ಲಿ 112 ಟೆಸ್ಟ್ ಪಂದ್ಯಗಳನ್ನಾಡಿರುವ ಅವರು 44.59ರ ಸರಾಸರಿಯಲ್ಲಿ 8,786 ರನ್ ಗಳಿಸಿದ್ದಾರೆ. 161 ಏಕದಿನ ಪಂದ್ಯಗಳಲ್ಲಿ 45.30ರ ಸರಾಸರಿಯಲ್ಲಿ 22 ಶತಕ ಹಾಗೂ 33 ಅರ್ಧಶತಕ ಸಹಿತ 6,932 ರನ್ ಗಳಿಸಿದ್ದಾರೆ. ಎಲ್ಲಾ ಮೂರು ಸ್ವರೂಪಗಳಲ್ಲಿ 49 ಶತಕ ಸಿಡಿಸಿದ ವಾರ್ನರ್‌, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸರಿಸುಮಾರು 19,000 ರನ್‌ ಗಳಿಸಿದ್ದಾರೆ.