ODI Ranking: ಟೀಂ ಇಂಡಿಯಾ ಏಷ್ಯಾಕಪ್ ಗೆದ್ದರೂ ಪಾಕಿಸ್ತಾನಕ್ಕೆ ಏಕದಿನ ಕ್ರಿಕೆಟ್ ರ‍್ಯಾಂಕಿಂಗ್‌ನಲ್ಲಿ ನಂ 1 ಸ್ಥಾನ; ಅದ್ಹೇಗೆ?
ಕನ್ನಡ ಸುದ್ದಿ  /  ಕ್ರಿಕೆಟ್  /  Odi Ranking: ಟೀಂ ಇಂಡಿಯಾ ಏಷ್ಯಾಕಪ್ ಗೆದ್ದರೂ ಪಾಕಿಸ್ತಾನಕ್ಕೆ ಏಕದಿನ ಕ್ರಿಕೆಟ್ ರ‍್ಯಾಂಕಿಂಗ್‌ನಲ್ಲಿ ನಂ 1 ಸ್ಥಾನ; ಅದ್ಹೇಗೆ?

ODI Ranking: ಟೀಂ ಇಂಡಿಯಾ ಏಷ್ಯಾಕಪ್ ಗೆದ್ದರೂ ಪಾಕಿಸ್ತಾನಕ್ಕೆ ಏಕದಿನ ಕ್ರಿಕೆಟ್ ರ‍್ಯಾಂಕಿಂಗ್‌ನಲ್ಲಿ ನಂ 1 ಸ್ಥಾನ; ಅದ್ಹೇಗೆ?

ಶ್ರೀಲಂಕಾ ವಿರುದ್ಧದ ಏಷ್ಯಾಕಪ್ ಫೈನಲ್‌ನಲ್ಲಿ ಟೀಂ ಇಂಡಿಯಾ ಪ್ರಶಸ್ತಿ ಗೆದ್ದರೂ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಪಾಕಿಸ್ತಾನವೇ ನಂಬರ್ 1 ಸ್ಥಾನಕ್ಕೇರಲಿದೆ. ಅದು ಹೇಗೆ ಅನ್ನೋದನ್ನ ತಿಳಿಯಿರಿ.

ಇಂಡಿಯಾ ನಾಯಕ ರೋಹಿತ್ ಮತ್ತು ಪಾಕಿಸ್ತಾನ ನಾಯಕ ಬಾಬರ್ ಅಜಮ್ ಪಂದ್ಯದ ವೇಳೆ ಮುಖಾಮುಖಿಯಾದಾಗ (ಫೋಟೋ ಫೈಲ್)
ಇಂಡಿಯಾ ನಾಯಕ ರೋಹಿತ್ ಮತ್ತು ಪಾಕಿಸ್ತಾನ ನಾಯಕ ಬಾಬರ್ ಅಜಮ್ ಪಂದ್ಯದ ವೇಳೆ ಮುಖಾಮುಖಿಯಾದಾಗ (ಫೋಟೋ ಫೈಲ್)

ಮುಂಬೈ: 2023ರ ಏಷ್ಯಾಕಪ್ ಫೈನಲ್‌ಗೆ (Asia Cup Final) ಕೆಲವೇ ಗಂಟೆಗಳು ಬಾಕಿ ಇದ್ದು, ಭಾರತ ಮತ್ತು ಶ್ರೀಲಂಕಾ (India vs Sri Lanka) ನಡುವಿನ ಈ ಹೈವೋಲ್ಟೇಜ್ ಹಣಾಹಣಿಯಲ್ಲಿ ಯಾರು ವಿಜೇತರಾಗುತ್ತಾರೆ ಎಂಬ ಕುತೂಹಲ ಕೇರಳಿಸಿದೆ. ಕೊಲಂಬೊದ (Colombo) ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಮಳೆಯ ನಡುವೆ ಫೈನಲ್ ಪೈಪೋಟಿಗೆ ವೇದಿಕೆ ಸಿದ್ಧವಾಗಿದೆ.

ಏಷ್ಯಾಕಪ್ ಫೈನಲ್‌ನಲ್ಲಿ ತನ್ನದೇ ತವರು ನೆಲದಲ್ಲಿ ಶ್ರೀಲಂಕಾವನ್ನು ಟೀಂ ಇಂಡಿಯಾ ಸೋಲಿಸಿ ಕಪ್ ಎತ್ತಿಹಿಡಿದರೂ ಸಹ ಐಸಿಸಿ ಏಕದಿನ ಕ್ರಿಕೆಟ್ ರ‍್ಯಾಂಕಿಂಗ್‌ನಲ್ಲಿ (ICC ODI Ranking) ಪಾಕಿಸ್ತಾನವೇ ನಂಬರ್ 1 ಸ್ಥಾನಕ್ಕೇರುವ ಸಾಧ್ಯತೆ ಇದೆ. ಟೀಂ ಇಂಡಿಯಾ (Team India) ಅಗ್ರಸ್ಥಾನಕ್ಕೇರುವ ಸುವರ್ಣಾವಕಾಶವಿತ್ತು. ಆದರೆ ಏಷ್ಯಾಕಪ್ ಸೂಪರ್ 4 ಸುತ್ತಿನ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಸೋತ ಪರಿಣಾಮ ಈ ಅವಕಾಶವನ್ನು ಕೈಚೆಲ್ಲಿಕೊಂಡಿತು.

ಲಂಕಾ ವಿರುದ್ಧ ಸೋತು ನಂಬರ್ 1 ಪಟ್ಟ ಕಳೆದುಕೊಂಡ ಪಾಕಿಸ್ತಾನ

ಮತ್ತೊಂದೆಡೆ, ಬಾಬರ್ ಅಜಮ್ ಅಂಡ್ ಟೀಂ ಏಷ್ಯಾಕಪ್‌ನ ಸೂಪರ್ 4 ಸುತ್ತಿನಲ್ಲಿ ಟೀಂ ಇಂಡಿಯಾ ಮತ್ತು ಶ್ರೀಲಂಕಾ ವಿರುದ್ಧದ ಪಂದ್ಯಗಳಲ್ಲಿ ಸೋಲು ಕಂಡ ಹಿನ್ನೆಲೆಯಲ್ಲಿ ತನ್ನ ನಂಬರ್ 1 ಪಟ್ಟವನ್ನು ಕಳೆದುಕೊಂಡಿದೆ.

ಪ್ರಸ್ತುತ, ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ಎರಡೂ ತಂಡಗಳು ತಲಾ 115 ರೇಟಿಂಗ್ ಹೊಂದಿವೆ. ಭಾನುವಾರ (ಸೆಪ್ಟೆಂಬರ್ 17) ನಡೆಯಲಿರುವ ಐದನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೇಲಿಯಾವನ್ನು ಮಣಿಸಿದರೆ, ಭಾರತ ವಿರುದ್ಧ ಶ್ರೀಲಂಕಾ ಏಷ್ಯಾಕಪ್ ಫೈನಲ್ ಪಂದ್ಯದ ಫಲಿತಾಂಶವನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಪಾಕಿಸ್ತಾನ ಮತ್ತೆ ಅಗ್ರಸ್ಥಾನಕ್ಕೆ ಹೋಗಲಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ಸೋತರೂ ಆಸೀಸ್‌ಗೆ ನಂಬರ್ 1 ಪಟ್ಟ

ಶುಕ್ರವಾರ ಸೂಪರ್ ಸ್ಪೋರ್ಟ್ ಪಾರ್ಕ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಹೆನ್ರಿಕ್ ಕ್ಲಾಸೆನ್ 83 ಎಸೆತಗಳಲ್ಲಿ 174 ರನ್‌ಗಳಿಸಿದ ಪರಿಣಾಮ ಆಸೀಸ್ ವಿರುದ್ಧ ದಕ್ಷಿಣ ಆಫ್ರಿಕಾ 164 ರನ್‌ಗಳ ದೊಡ್ಡ ಗೆಲುವು ಸಾಧಿಸಲು ಸಾಧ್ಯವಾಗಿತ್ತು. ಕ್ಲಾಸೆನ್ ಅವರ ಅದ್ಭುತ ಆಟದಲ್ಲಿ 13 ಬೌಂಡರಿಗಳು ಹಾಗೂ 13 ಭರ್ಜರಿ ಸಿಕ್ಸರ್‌ಗಳು ಸೇರಿದ್ದವು. ಮಿಚೆಲ್ ಮಾರ್ಷ್ ನೇತೃತ್ವದ ತಂಡಕ್ಕೆ ಸೋಲು ಪಾಕಿಸ್ತಾನದೊಂದಿಗೆ ರೇಟಿಂಗ್‌ ಪಾಯಿಂಟ್‌ಗಳಲ್ಲಿ ಸಮಾನಾಗುವಂತೆ (115) ಮಾಡಿತು. ಆದರೂ ಆಸ್ಟ್ರೇಲಿಯಾ ನಂಬರ್ 1 ಸ್ಥಾನದಲ್ಲಿ ಮುಂದುವರಿದಿದೆ.

ಮಿಲ್ಲರ್ ಔಟಾಗದೆ 94 ಎಸೆತಗಳಿಂದ 82 ರನ್ ಗಳಿಸಿದರು. ಅಲ್ಲದೆ, ಐದನೇ ವಿಕೆಟ್‌ಗೆ ಹೆನ್ರಿಕ್ ಕ್ಲಾಸೆನ್ ಅವರೊಂದಿಗೆ 222 ರನ್‌ಗಳ ಉತ್ತಮ ಜೊತೆಯಾಟಕ್ಕೆ ನೆರವಾದರು. ಇದರ ಪರಿಣಾಮವಾಗಿ ದಕ್ಷಿಣ ಆಫ್ರಿಕಾ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 416 ರನ್ ಗಳಿಸಿತ್ತು. ಈ ಬೃಹತ್ ಮೊತ್ತ ಬೆನ್ನತ್ತಿದ ಆಸ್ಟ್ರೇಲಿಯಾ 34.5 ಓವರ್‌ಗಳಲ್ಲಿ 252 ರನ್‌ಗಳಿ ಸರ್ವ ಪತನ ಕಂಡಿತು.

ಆಸ್ಟ್ರೇಲಿಯಾ ಪರ ಅಲೆಕ್ಸ್ ಕ್ಯಾರಿ 77 ಎಸೆತಗಳಲ್ಲಿ 99 ರನ್‌ಗಳಿಸಿ ಕೇವಲ 1 ರನ್‌ನಿಂದ ಔಟಾದರು. ದಕ್ಷಿಣ ಆಫ್ರಿಕಾ ಪರ ವೇಗಿ ಲುಂಗಿ ಎನ್‌ಗಿಡಿ 8 ಓವರ್‌ಗಳಲ್ಲಿ 51 ರನ್‌ ನೀಡಿ ಪ್ರಮುಖ ನಾಲ್ಕು ವಿಕೆಟ್ ಪಡೆದರು. ಮತ್ತೊಂದೆಡೆ ಏಷ್ಯಾಕಪ್ ಸೂಪರ್ 4 ಸುತ್ತಿನ ಕೊನೆಯ ಪಂದ್ಯದಲ್ಲಿ (ಸೆಪ್ಟೆಂಬರ್ 15, ಶುಕ್ರವಾರ) ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ 6 ರನ್‌ಗಳಿಂದ ಸೋತ ಪರಿಣಾಮ ಏಕದಿನ ಶ್ರೇಯಾಂಕದಲ್ಲಿ 1 ಸ್ಥಾನಕ್ಕೇರುವ ಅವಕಾಶವನ್ನು ಕಳೆದುಕೊಂಡಿತು.

ಇದನ್ನೂ ತಿಳಿಯಿರಿ: ಏಷ್ಯಾಕಪ್ 2023 ವೇಳಾಪಟ್ಟಿ

Whats_app_banner