ಏನ್ರೀ ಮೀಡಿಯಾ, ಇದು ಕರ್ನಾಟಕದಲ್ಲಿ..; ಎಬಿಡಿ ಬಾಯಲ್ಲಿ ಡಿಬಾಸ್ ಡೈಲಾಗ್, ಸೋಷಿಯಲ್ ಮೀಡಿಯಾದಲ್ಲಿ ವೈರಲ್
ಕನ್ನಡ ಸುದ್ದಿ  /  ಕ್ರಿಕೆಟ್  /  ಏನ್ರೀ ಮೀಡಿಯಾ, ಇದು ಕರ್ನಾಟಕದಲ್ಲಿ..; ಎಬಿಡಿ ಬಾಯಲ್ಲಿ ಡಿಬಾಸ್ ಡೈಲಾಗ್, ಸೋಷಿಯಲ್ ಮೀಡಿಯಾದಲ್ಲಿ ವೈರಲ್

ಏನ್ರೀ ಮೀಡಿಯಾ, ಇದು ಕರ್ನಾಟಕದಲ್ಲಿ..; ಎಬಿಡಿ ಬಾಯಲ್ಲಿ ಡಿಬಾಸ್ ಡೈಲಾಗ್, ಸೋಷಿಯಲ್ ಮೀಡಿಯಾದಲ್ಲಿ ವೈರಲ್

AB de Villiers: ನಟ ದರ್ಶನ್ ತೂಗುದೀಪ ಅವರು ಮಾಧ್ಯಮಗಳಿಗೆ ಬೈದಿದ್ದ ಏನ್ರೀ ಮೀಡಿಯಾ ಡೈಲಾಗ್ ಅನ್ನು ಆರ್​ಸಿಬಿ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಅವರು ಕನ್ನಡದಲ್ಲೇ ಹೇಳಿದ್ದು, ಇದು ಕರ್ನಾಟಕದಲ್ಲಿ ಫೇಮಸ್ ಡೈಲಾಗ್ ಎಂದಿದ್ದಾರೆ.

ಏನ್ರೀ ಮೀಡಿಯಾ ಎಂದು ಎಬಿ ಡಿವಿಲಿಯರ್ಸ್ ಕನ್ನಡದಲ್ಲೇ ಹೇಳಿರುವ ವಿಡಿಯೋ ವೈರಲ್ ಆಗುತ್ತಿದೆ.
ಏನ್ರೀ ಮೀಡಿಯಾ ಎಂದು ಎಬಿ ಡಿವಿಲಿಯರ್ಸ್ ಕನ್ನಡದಲ್ಲೇ ಹೇಳಿರುವ ವಿಡಿಯೋ ವೈರಲ್ ಆಗುತ್ತಿದೆ.

ದಕ್ಷಿಣ ಆಫ್ರಿಕಾ ತಂಡದ ದಿಗ್ಗಜ, ಆರ್​​ಸಿಬಿ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಅದೆಷ್ಟು ಬಾರಿ ಕನ್ನಡಿಗರ ಮನ ಗೆದ್ದಿದ್ದರೋ ಗೊತ್ತಿಲ್ಲ. ಆಗಾಗ್ಗೆ ಕನ್ನಡದಲ್ಲಿ ಮಾತನಾಡುತ್ತಾ, ಕನ್ನಡದಲ್ಲಿ ಪ್ರತಿಕ್ರಿಯಿಸುತ್ತಾ ಕರ್ನಾಟಕದ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಇತ್ತೀಚೆಗೆ ಐಸಿಸಿ ಹಾಲ್​ ಆಫ್ ಫೇಮ್ ಗೌರವ ಪಡೆದಾಗ ಆರ್​​ಸಿಬಿ ಹಂಚಿಕೊಂಡಿದ್ದ ಅಭಿನಂದನಾ ಪೋಸ್ಟ್​​ಗೂ ಎಬಿ, ಧನ್ಯವಾದ ಎಂದು ಕನ್ನಡದಲ್ಲೇ ರಿಪ್ಲೈ ಕೊಟ್ಟಿದ್ದರು. ಇದೀಗ ಮತ್ತೊಮ್ಮೆ ಕನ್ನಡದ ಫೇಮಸ್ ಡೈಲಾಗ್​ ಒಂದನ್ನು ಹೇಳುವ ಮೂಲಕ ಗಮನ ಸೆಳೆದಿದ್ದಾರೆ.

ನಟ ದರ್ಶನ್ ಮಾಧ್ಯಮಗಳಿಗೆ ಹೇಳಿದ್ದ ಡೈಲಾಗ್​ ಅನ್ನು ಎಬಿಡಿ ಹೇಳಿದ್ದು, ಅದನ್ನು ಇಂಗ್ಲಿಷ್​ಗೆ ಅನುವಾದ ಕೂಡ ಮಾಡಿದ್ದಾರೆ. ಏನ್ರೀ ಮೀಡಿಯಾ ಎಂದು ಹೇಳಿರುವ ಮಾಜಿ ಕ್ರಿಕೆಟಿಗ, What is Media ಎಂದು ಇಂಗ್ಲಿಷ್​ನಲ್ಲಿ ಕರೆಯುತ್ತಾ, ಇದು ಕರ್ನಾಟಕದಲ್ಲಿ ತುಂಬಾ ಫೇಮಸ್ ಡೈಲಾಗ್ ಎಂದಿದ್ದಾರೆ. ಕಾಯಕವೇ ಕೈಲಾಸ ಎಂದು ಮತ್ತೊಂದು ಪದವನ್ನು ಕನ್ನಡದಲ್ಲಿ ಹೇಳಿ, ಅದನ್ನು Work is Worship ಎಂದು ಇಂಗ್ಲಿಷ್​ಗೆ ಟ್ರಾನ್ಸಲೇಟ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರಲ್ಲೂ ದರ್ಶನ್​ ಅಭಿಮಾನಿಗಳು ತುಂಬಾ ಇಷ್ಟಪಟ್ಟಿದ್ದು, ವೈರಲ್ ಮಾಡುತ್ತಿದ್ದಾರೆ.

ಇತ್ತೀಚೆಗೆ ಹಾಲ್​ ಆಫ್ ಫೇಮ್ ಗೌರವ ಪಡೆದ ಎಬಿಡಿ

ಸೌತ್ ಆಫ್ರಿಕಾ ಕ್ರಿಕೆಟ್ ತಂಡದ ಪರ ಅಪಾರ ಸಾಧನೆ ಮಾಡಿರುವ ಎಬಿ ಡಿವಿಲಿಯರ್ಸ್ ಅವರಿಗೆ ಐಸಿಸಿ ಇತ್ತೀಚೆಗೆ ಹಾಲ್ ಆಫ್ ಫೇಮ್ ಗೌರವ ನೀಡಿತ್ತು. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ದಾಖಲೆಗಳ ಸರದಾರನಾದ ಎಬಿ, ವಿಶೇಷ ಗೌರವಕ್ಕೆ ಪಾತ್ರವಾಗುವ ಮೂಲಕ ದಿಗ್ಗಜ ಸಾಲಿಗೆ ಸೇರಿದರು. ಇಂಗ್ಲೆಂಡ್​ನ ಅಲೆಸ್ಟರ್​ ಕುಕ್ ಮತ್ತು ಭಾರತದ ಮಹಿಳಾ ಆಟಗಾರ್ತಿ ನೀತು ಡೇವಿಡ್​ ಅವರೊಂದಿಗೆ ಎಬಿ ಈ ಗೌರವ ಪಡೆದರು. ಈವರೆಗೂ 115 ಕ್ರಿಕೆಟಿಗರು ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಹಾಲ್ ಆಫ್ ಫೇಮ್ ಪಡೆದ ಸೌತ್ ಆಫ್ರಿಕಾದ 7ನೇ ಆಟಗಾರ ಎಬಿ.

ಕನ್ನಡದಲ್ಲಿ ಧನ್ಯವಾದ ಹೇಳಿದ ಎಬಿಡಿ

ಎಬಿಡಿ ಐಸಿಸಿ 'ಹಾಲ್ ಆಫ್ ಫೇಮ್ 2024' ಗೌರವ ಪಡೆದ ಬಳಿಕ ಆರ್​​ಸಿಬಿ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿತ್ತು. ಗೌರವ ಎನ್ನುವುದು ಬರುತ್ತದೆ, ಹೋಗುತ್ತದೆ. ಆದರೆ, ಈ ಫ್ರೇಮ್ ಯಾವಾಗಲೂ ನಿನ್ನ ಜೊತೆಯೇ ಇರುತ್ತದೆ ಎಂದು ಹಾಲ್ ಆಫ್ ಫೇಮ್ ಜತೆ ತೆಗೆದ ಫೋಟೊವನ್ನು ಶೇರ್​ ಮಾಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಆರ್​​ಸಿಬಿ ಮಾಜಿ ಆಟಗಾರ, ಧನ್ಯವಾದ ಎಂದು ಕನ್ನಡದಲ್ಲೇ ರಿಪ್ಲೈ ಕೊಟ್ಟಿದ್ದಾರೆ. ಆ ಮೂಲಕ ಕನ್ನಡಿಗರ ಹೃದಯ ಗೆಲ್ಲುವಲ್ಲಿ ಮತ್ತೊಮ್ಮೆ ಯಶಸ್ವಿಯಾಗಿದ್ದಾರೆ.

ಆರ್​​ಸಿಬಿ ಫ್ರಾಂಚೈಸಿ ತಲೆಕೆಡಿಸಿಕೊಳ್ತಿಲ್ಲ

ಐಪಿಎಲ್ ತೊರೆದ ಕ್ಷಣದಿಂದಲೂ ವಿಲಿಯರ್ಸ್ ಅವರನ್ನು ಆರ್​ಸಿಬಿ ಕೋಚ್ ಅಥವಾ ಮೆಂಟರ್ ಆಗಿ ಸೇರಿಸಿಕೊಳ್ಳಬೇಕು ಎಂದು ಫ್ಯಾನ್ಸ್ ಒತ್ತಾಯ ಮಾಡುತ್ತಲೇ ಇದ್ದಾರೆ. ಆದರೆ ಅದ್ಯಾಕೋ ಆರ್​ಸಿಬಿ ಫ್ರಾಂಚೈಸಿ ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಈ ಹಿಂದೆ ಎಬಿಡಿ, ಆರ್​ಸಿಬಿ ಸೇರುವ ಆಸೆ ಇರುವುದಾಗಿ ಹೇಳಿದ್ದರು. ಇಷ್ಟಿದ್ದರೂ ಫ್ರಾಂಚೈಸಿ ನಿರ್ಲಕ್ಷ್ಯ ವಹಿಸಿರುವುದು ಅಚ್ಚರಿ ಮೂಡಿಸಿದೆ. ಮುಂದಿನ ದಿನಗಳಲ್ಲಾದರೂ ಅವರ ಆಯ್ಕೆಗೆ ಫ್ರಾಂಚೈಸಿ ಒಲವು ತೋರಿಸಲಿ ಎಂದು ಫ್ಯಾನ್ಸ್ ಹಾರೈಸಿದ್ದಾರೆ.

Whats_app_banner