Fact Check: ರಾಹುಲ್ ಗಾಂಧಿ ಸುದ್ದಿಗೋಷ್ಠಿ ವೀಕ್ಷಿಸಿದ ವಿರಾಟ್ ಕೊಹ್ಲಿ; ಫ್ಯಾಕ್ಟ್ಚೆಕ್ನಲ್ಲಿ ಬಯಲಾಯ್ತು ಅಸಲಿ ಸತ್ಯ
Virat Kohli : ವಿರಾಟ್ ಕೊಹ್ಲಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸುದ್ದಿಗೋಷ್ಠಿಯನ್ನು ತಮ್ಮ ಮೊಬೈಲ್ನಲ್ಲಿ ವೀಕ್ಷಿಸುತ್ತಿದ್ದಾರೆ ಎನ್ನಲಾದ ಫೋಟೋ ವೈರಲ್ ಆಗಿದೆ. ಆದರೀಗ ಅದರ ಅಸಲಿ ಸತ್ಯ ಬಹಿರಂಗವಾಗಿದೆ.
ಮಾರ್ಚ್ 22ರಿಂದ ಐಪಿಎಲ್ 17ನೇ ಸೀಸನ್ (IPL 2024) ಆರಂಭವಾಗಿದೆ. ಹೀಗಾಗಿ ಕ್ರಿಕೆಟ್ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರ ಆಟವನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ. ಇದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ವಿರಾಟ್ ಕೊಹ್ಲಿ (Virat Kohli) ಅವರ ಫೋಟೋವೊಂದು ವೈರಲ್ ಆಗಿದ್ದು, ಸಂಚಲನ ಮೂಡಿಸಿದೆ. ಇದು ಪರ-ವಿರೋಧದ ಚರ್ಚೆಗಳನ್ನು ಹುಟ್ಟು ಹಾಕಿದೆ.
ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ವಿಡಿಯೋವನ್ನು ತಮ್ಮ ಮೊಬೈಲ್ನಲ್ಲಿ ವೀಕ್ಷಿಸುತ್ತಿದ್ದಾರೆ ಎನ್ನಲಾದ ಫೋಟೋ ವೈರಲ್ ಆಗಿದೆ. ಆದರೆ, ನಾವು ಈ ಬಗ್ಗೆ ಸತ್ಯಾಸತ್ಯತೆಯನ್ನು ಪರಿಶೀಲಿಸಿದಾಗ ಬೇರೆಯದೇ ಸತ್ಯ ಹೊರಬಿದ್ದಿದೆ.
ರಾಹುಲ್ ಗಾಂಧಿ ಸುದ್ದಿಗೋಷ್ಠಿ ವೀಕ್ಷಿಸಿದರೇ ಕೊಹ್ಲಿ?
ಎಕ್ಸ್ ಖಾತೆಯಲ್ಲಿ ಅಕ್ಷಿತ್ ಹೆಸರಿನ ಬಳಕೆದಾರೊಬ್ಬರು ವಿರಾಟ್ ಕೊಹ್ಲಿ ಅವರು ರಾಹುಲ್ ಗಾಂಧಿ ಸುದ್ದಿಗೋಷ್ಠಿ ನೋಡುತ್ತಿದ್ದಾರೆ ಎನ್ನಲಾದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಫೋಟೋವನ್ನು 2024ರ ಮಾರ್ಚ್ 22ರಂದು ಪೋಸ್ಟ್ ಮಾಡಲಾಗಿದೆ. ವಿರಾಟ್ ಕೊಹ್ಲಿ ಅವರು ರಾಹುಲ್ ಗಾಂಧಿ ಪತ್ರಿಕಾಗೋಷ್ಠಿಯನ್ನು ವೀಕ್ಷಿಸುತ್ತಿರುವಂತೆ ತೋರುತ್ತಿದೆ ಎಂದು ಫೋಟೋ ಜೊತೆ ಬರೆದಿದ್ದಾರೆ.
ಹಾಗೆಯೇ ಮುಂದುವರೆಸಿ ಕಾಂಗ್ರೆಸ್ ಬ್ಯಾಂಕ್ ಖಾತೆಗಳನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿರುವ ಕುರಿತು ರಾಹುಲ್ ಗಾಂಧಿ ಅವರು ಮಾತನಾಡಿದ್ದಾರೆ. ಭಾರತದ ಪ್ರಜಾಸತ್ತಾತ್ಮಕ ಮತ್ತು ಜಾತ್ಯತೀತ ಪ್ರಜೆಯಾಗಿ, ಕಾಂಗ್ರೆಸ್ ಬ್ಯಾಂಕ್ ಖಾತೆಗಳನ್ನು ಅಸಂವಿಧಾನಿಕವಾಗಿ ಸ್ಥಗಿತಗೊಳಿಸುವುದರ ಬಗ್ಗೆ ಕೊಹ್ಲಿಗೆ ತಿಳಿದಿದೆ ಎಂದು ಎಕ್ಸ್ ಖಾತೆಯ ಬಳಕೆದಾರರು ಪೋಸ್ಟ್ನಲ್ಲಿ ಬರೆದಿದ್ದಾರೆ. ಫ್ಯಾಕ್ಟ್ ಚೆಕ್ ಹೇಳಿದ್ದೇನು? ಮುಂದೆ ಓದಿ.
ಫ್ಯಾಕ್ಟ್ ಚೆಕ್ ಹೇಳುವುದೇನು?
ಈ ವೈರಲ್ ಫೋಟೋ ಬಗ್ಗೆ ಅನುಮಾನಗಳು ಬಂದ ನಂತರ ಅದರ ಹಿಂದಿನ ಸತ್ಯ ಬೆಳಕಿಗೆ ಬಂದಿದೆ. ಸಂಬಂಧಿತ ಫೋಟೋದ ರಿವರ್ಸ್ ಇಮೇಜ್ ಹುಡುಕಾಟ ನಡೆಸಿದ ಬಳಿಕ ಕೊಹ್ಲಿ, ರಾಹುಲ್ ಗಾಂಧಿ ಅವರ ಸುದ್ದಿಗೋಷ್ಠಿ ನೋಡುತ್ತಿದ್ದರು ಎಂಬುದು ಸುಳ್ಳು ಸುದ್ದಿ ಎಂಬುದು ಬೆಳಕಿಗೆ ಬಂದಿದೆ. 'ವಿರಾಟ್ ಫಾರೆವರ್' ಹೆಸರಿನ ಇನ್ಸ್ಟಾಗ್ರಾಂ ಖಾತೆಯಲ್ಲಿ ಕೊಹ್ಲಿ ಅವರ ನಿಜವಾದ ಚಿತ್ರ ಬೆಳಕಿಗೆ ಬಂದಿದೆ. 2024ರ ಮಾರ್ಚ್ 20ರಂದು ಪೋಸ್ಟ್ ಮಾಡಲಾಗಿದೆ.
'ವಿರಾಟ್ ಫಾರೆವರ್' ಎಂಬ ಹೆಸರಿನ ಖಾತೆಯಲ್ಲಿ ವಿರಾಟ್ ಕೊಹ್ಲಿ ಕುರ್ಷಿಯಲ್ಲಿ ಕೂತು ಮೊಬೈಲ್ ವೀಕ್ಷಿಸುತ್ತಿರುವ ಫೋಟೋವನ್ನು ಪೋಸ್ಟ್ ಮಾಡಲಾಗಿದೆ. ವಿರಾಟ್ ಜಾಹೀರಾತಿನ ಚಿತ್ರೀಕರಣಕ್ಕೆ ಮುನ್ನ ವಿಶ್ರಾಂತಿ ಕ್ಷಣವನ್ನು ಎಂಜಾಯ್ ಮಾಡುತ್ತಿದ್ದಾರೆ ಎಂದು ಬರೆದಿದ್ದಾರೆ. ಈ ಎಲ್ಲಾ ಪುರಾವೆಗಳನ್ನು ನೋಡಿದಾಗ, ರಾಹುಲ್ ಗಾಂಧಿ ಸುದ್ದಿ ಗೋಷ್ಠಿಯನ್ನು ವಿರಾಟ್ ವೀಕ್ಷಿಸುತ್ತಿದ್ದಾರೆ ಎಂಬುದು ಸುಳ್ಳು ಎಂದು ಗೊತ್ತಾಗುತ್ತದೆ.
ಅಸಲಿ ಪೋಸ್ಟ್ ಇಲ್ಲಿದೆ ನೋಡಿ
ಪರ-ವಿರೋಧ ಚರ್ಚೆಯಾಗಿತ್ತು
ಕುರ್ಚಿಯೊಂದರಲ್ಲಿ ಕುಳಿತು ಆರ್ಸಿಬಿ ಜೆರ್ಸಿ ತೊಟ್ಟಿರುವ ಕೊಹ್ಲಿ ನೋಡುತ್ತಿದ್ದಾರೆ ಎನ್ನಲಾದ ಫೋಟೋದಿಂದ ಪರ-ವಿರೋಧ ಚರ್ಚೆ ನಡೆದಿತ್ತು. ಕೆಲವರಂತೂ ಕೊಹ್ಲಿಯನ್ನು ಕಾಂಗ್ರೆಸ್ ಏಜೆಂಟ್ ಎಂದು ಕರೆದಿದ್ದರು. ಕೆಲವರು ಪತ್ರಿಕಾಗೋಷ್ಠಿ ನೋಡಿದ ತಕ್ಷಣ ಒಬ್ಬ ವ್ಯಕ್ತಿ ಯಾವುದೇ ಪಕ್ಷಕ್ಕೆ ಸೀಮಿತ ಅಲ್ಲ ಎಂದಿದ್ದಾರೆ.