ರೋಹಿತ್ ಶರ್ಮಾ 2027ರ ವಿಶ್ವಕಪ್ ಆಡಲ್ಲ, 2 ವರ್ಷಗಳಲ್ಲಿ ನಿವೃತ್ತಿ; ಅಚ್ಚರಿ ವಿಚಾರ ಬಹಿರಂಗಪಡಿಸಿದ ಹರ್ಭಜನ್ ಸಿಂಗ್-harbhajan singh reveal news on team india captain rohit sharma not playing icc odi world cup 2027 retires in 2 years vbt ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ರೋಹಿತ್ ಶರ್ಮಾ 2027ರ ವಿಶ್ವಕಪ್ ಆಡಲ್ಲ, 2 ವರ್ಷಗಳಲ್ಲಿ ನಿವೃತ್ತಿ; ಅಚ್ಚರಿ ವಿಚಾರ ಬಹಿರಂಗಪಡಿಸಿದ ಹರ್ಭಜನ್ ಸಿಂಗ್

ರೋಹಿತ್ ಶರ್ಮಾ 2027ರ ವಿಶ್ವಕಪ್ ಆಡಲ್ಲ, 2 ವರ್ಷಗಳಲ್ಲಿ ನಿವೃತ್ತಿ; ಅಚ್ಚರಿ ವಿಚಾರ ಬಹಿರಂಗಪಡಿಸಿದ ಹರ್ಭಜನ್ ಸಿಂಗ್

ಟಿ20 ವಿಶ್ವಕಪ್‌ ಬಳಿಕ ಮುಂದಿನ ವರ್ಷ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಭಾರತ ಕ್ರಿಕೆಟ್‌ ತಂಡ ಆಡಲಿದೆ. ಆ ಬಳಿಕ 2027ರಲ್ಲಿ ಮುಂದಿನ ವಿಶ್ವಕಪ್‌ ನಡೆಯಲಿದೆ. ಆವರೆಗೆ ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಆಡುತ್ತಾರಾ ಎಂಬುದು ಸದ್ಯದ ಪ್ರಶ್ನೆ.

ರೋಹಿತ್ ಶರ್ಮಾ 2027ರ ವಿಶ್ವಕಪ್ ಆಡಲ್ಲ, 2 ವರ್ಷಗಳಲ್ಲಿ ನಿವೃತ್ತಿ
ರೋಹಿತ್ ಶರ್ಮಾ 2027ರ ವಿಶ್ವಕಪ್ ಆಡಲ್ಲ, 2 ವರ್ಷಗಳಲ್ಲಿ ನಿವೃತ್ತಿ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ರೋಹಿತ್ ಶರ್ಮಾ ಅವರನ್ನು ಟೀಮ್ ಇಂಡಿಯಾ ನಾಯಕನನ್ನಾಗಿ ಮಾಡಿದ್ದಕ್ಕೆ ನಿರೀಕ್ಷೆ ಹುಸಿಗೊಳಿಸಲಿಲಲ್ಲ. 11 ವರ್ಷಗಳಿಂದ ಇದ್ದ ಐಸಿಸಿ ಪ್ರಶಸ್ತಿ ಬರವನ್ನು ಹಿಟ್​ಮ್ಯಾನ್ ತಮ್ಮ ಕ್ಯಾಪ್ಟನ್ಸಿಯಲ್ಲಿ ಕೊನೆಗೊಳಿಸಿದರು. ಇವರ ನಾಯಕತ್ವದಲ್ಲಿ ಭಾರತ 2024ರ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದರೊಂದಿಗೆ ಈ ಟೂರ್ನಿಯನ್ನು ಎರಡು ಬಾರಿ ಗೆದ್ದ ಟೀಮ್ ಇಂಡಿಯಾದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಆದರೆ, ಪ್ರಶಸ್ತಿ ಗೆದ್ದ ತಕ್ಷಣ ರೋಹಿತ್ ಈ ಸ್ವರೂಪಕ್ಕೆ ನಿವೃತ್ತಿ ಘೋಷಿಸಿದರು.

ಟಿ20ಯಿಂದ ಹಿಂದೆ ಸರಿದ ಬಳಿಕ ರೋಹಿತ್ ಅವರ ಅಂತಾರಾಷ್ಟ್ರೀಯ ವೃತ್ತಿಜೀವನದ ಬಗ್ಗೆ ನಿರಂತರ ಮಾತುಕತೆಗಳು ನಡೆಯುತ್ತಿವೆ. 2027ರಲ್ಲಿ ಏಕದಿನ ವಿಶ್ವಕಪ್ ಆಡುವ ಆಸೆಯನ್ನು ಸ್ವತಃ ರೋಹಿತ್ ವ್ಯಕ್ತಪಡಿಸಿದ್ದರೂ, ಇದು ಸಂಭವಿಸುವುದು ಅನುಮಾನ ಎಂದು ಕೂಡ ಹೇಳಲಾಗುತ್ತಿದೆ. 37ರ ಹರೆಯದಲ್ಲೂ ಅಮೋಘ ಹಾಗೂ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ರೋಹಿತ್ ಶರ್ಮಾ ಟಿ20 ವಿಶ್ವಕಪ್​ನಲ್ಲೂ ಅದೇ ಶೈಲಿಯನ್ನು ಪ್ರದರ್ಶಿಸಿ ಭಾರತವನ್ನು ಚಾಂಪಿಯನ್ ಪಟ್ಟಕ್ಕೇರಿಸಿದರು.

ಟಿ20 ಸ್ವರೂಪದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ, ಈಗ ರೋಹಿತ್‌ ಅವರ ಸಂಪೂರ್ಣ ಗಮನವು ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿದೆ. ಇದರಲ್ಲಿ ಚಾಂಪಿಯನ್ಸ್ ಟ್ರೋಫಿ 2025 ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2025 ಪ್ರಶಸ್ತಿಯನ್ನು ಗೆಲ್ಲುವುದು ಅವರ ಗುರಿಯಾಗಿದೆ. ಇದರೊಂದಿಗೆ ಕಳೆದ ವರ್ಷ ಕಳೆದುಕೊಂಡಿರುವ ಏಕದಿನ ವಿಶ್ವಕಪ್ ಟ್ರೋಫಿ ಗೆಲ್ಲುವುದು ಅವರ ದೊಡ್ಡ ಗುರಿ ಮತ್ತು ಆಸೆ. ಮುಂದಿನ ವಿಶ್ವಕಪ್ 2027ರಲ್ಲಿ ನಡೆಯಲಿದ್ದು, ಆಗ ರೋಹಿತ್‌ಗೆ 40 ವರ್ಷ ತುಂಬಲಿದೆ. ಹೀಗಿರುವಾಗ ಅವರ ಭವಿಷ್ಯದ ಬಗ್ಗೆ ಪ್ರಶ್ನೆಗಳು ಎದ್ದಿವೆ.

ಈ ಸುದ್ದಿಗೆ ಪುಷ್ಠಿ ಎಂಬಂತೆ ರೋಹಿತ್ ಆಪ್ತ ಹಾಗೂ ಟೀಮ್ ಇಂಡಿಯಾದ ಮಾಜಿ ಸ್ಟಾರ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅಚ್ಚರಿಯ ವಿಚಾರವೊಂದನ್ನು ಹೇಳಿದ್ದಾರೆ.

ರೋಹಿತ್ ಬಗ್ಗೆ ಹರ್ಭಜನ್ ಹೇಳಿದ್ದೇನು?

“2011ರಲ್ಲಿ ವಿಶ್ವಕಪ್ ಗೆದ್ದ ತಂಡದಲ್ಲಿ ರೋಹಿತ್‌ಗೆ ಸ್ಥಾನ ಸಿಗಲಿಲ್ಲ. ಈ ಬಗ್ಗೆ ಹಲವು ಬಾರಿ ವಿಷಾದ ವ್ಯಕ್ತಪಡಿಸಿದ್ದರು. ನಂತರ ಕಳೆದ ವರ್ಷ, ಅವರ ನಾಯಕತ್ವದಲ್ಲಿ, ಟೀಮ್ ಇಂಡಿಯಾ ವಿಶ್ವಕಪ್ ಫೈನಲ್‌ನಲ್ಲಿ ಸೋತಿತು. ಇದು ರೋಹಿತ್ ಸೇರಿದಂತೆ ಕೋಟ್ಯಂತರ ಭಾರತೀಯ ಅಭಿಮಾನಿಗಳಿಗೆ ಆಘಾತ ನೀಡಿತು. ಇದಾದ ಬಳಿಕ 2027ರ ವಿಶ್ವಕಪ್‌ಗಾಗಿ ಕಾಯುತ್ತಿದ್ದೇನೆ ಎಂದಿದ್ದರು. ಆದರೆ ಅಲ್ಲಿಯವರೆಗೆ ಆಡಲು ರೋಹಿತ್​ಗೆ ಸಾಧ್ಯವಾಗುವುದು ಅನುಮಾನ” ಎಂದು ಹರ್ಭಜನ್ ಹೇಳಿದ್ದಾರೆ.

ರೋಹಿತ್ ಶರ್ಮಾ ಕನಿಷ್ಠ 2 ವರ್ಷಗಳ ಕಾಲ ಆಡಬಹುದು ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹರ್ಭಜನ್ ಹೇಳಿದ್ದಾರೆ. ವಿರಾಟ್ ಕೊಹ್ಲಿಯ ಫಿಟ್‌ನೆಸ್ ಅನ್ನು ಕೂಡ ಉಲ್ಲೇಖಿಸಿದ ಭಜ್ಜಿ, ಕೊಹ್ಲಿ ಮುಂದಿನ 5 ವರ್ಷಗಳ ಕಾಲ ಆರಾಮವಾಗಿ ಆಡಬಹುದು ಎಂದು ಹೇಳಿದರು. ಇದೇವೇಳೆ ಈ ಇಬ್ಬರೂ ಆಟಗಾರರು ಫಿಟ್ ಆಗಿದ್ದರೆ, ರನ್ ಗಳಿಸುತ್ತಿದ್ದರೆ ಮತ್ತು ತಂಡಕ್ಕೆ ಕೊಡುಗೆ ನೀಡುತ್ತಿದ್ದರೆ ಖಂಡಿತವಾಗಿಯೂ ವಿಶ್ವಕಪ್ ಆಡಬೇಕು ಎಂದು ಹೇಳಿದರು.

ಟೆಸ್ಟ್ ಕ್ರಿಕೆಟ್‌ಗೆ ಇವರ ಅಗತ್ಯ ಇದೆ

ಮುಂಬರುವ ದಿನಗಳಲ್ಲಿ ಟೀಮ್ ಇಂಡಿಯಾಗೆ, ಮುಖ್ಯವಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ರೋಹಿತ್-ಕೊಹ್ಲಿ ಅಗತ್ಯವಿದೆ ಎಂದು ಹರ್ಭಜನ್ ಹೇಳಿದ್ದಾರೆ. ಭಾರತ ಪರ 400ಕ್ಕೂ ಹೆಚ್ಚು ಟೆಸ್ಟ್ ವಿಕೆಟ್‌ಗಳನ್ನು ಪಡೆದಿರುವ ಆಫ್ ಸ್ಪಿನ್ನರ್ ಹರ್ಭಜನ್ ಪ್ರಕಾರ, ಯಾವುದೇ ಫಾರ್ಮ್ಯಾಟ್ ಆಗಿರಲಿ, ಪ್ರತಿ ತಂಡಕ್ಕೂ ಅನುಭವಿ ಆಟಗಾರರ ಅಗತ್ಯವಿದೆ ಮತ್ತು ಯುವ ಆಟಗಾರರನ್ನು ರೂಪಿಸುವಲ್ಲಿ ಇದು ಮುಖ್ಯವಾಗಿದೆ. ಯಾರಾದರೂ ಫಿಟ್ ಆಗಿದ್ದರೆ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೆ ಅವರನ್ನು ಆಯ್ಕೆ ಮಾಡಬೇಕು. ಇದೇ ವೇಳೆ ಯಾರಾದರೂ ವಿಫಲರಾದರೆ ಅವರನ್ನು ಕೈಬಿಡಬೇಕು ಎಂದು ಹೇಳಿದರು.