ಆತನೂ ಮನುಷ್ಯ, ಅರ್ಥ ಮಾಡಿಕೊಳ್ಳಿ; ಹಾರ್ದಿಕ್​ ಪಾಂಡ್ಯ ಬೆಂಬಲಿಸಿದ ರವಿ ಶಾಸ್ತ್ರಿ ಫ್ಯಾನ್ಸ್​ಗೆ ಮನವಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಆತನೂ ಮನುಷ್ಯ, ಅರ್ಥ ಮಾಡಿಕೊಳ್ಳಿ; ಹಾರ್ದಿಕ್​ ಪಾಂಡ್ಯ ಬೆಂಬಲಿಸಿದ ರವಿ ಶಾಸ್ತ್ರಿ ಫ್ಯಾನ್ಸ್​ಗೆ ಮನವಿ

ಆತನೂ ಮನುಷ್ಯ, ಅರ್ಥ ಮಾಡಿಕೊಳ್ಳಿ; ಹಾರ್ದಿಕ್​ ಪಾಂಡ್ಯ ಬೆಂಬಲಿಸಿದ ರವಿ ಶಾಸ್ತ್ರಿ ಫ್ಯಾನ್ಸ್​ಗೆ ಮನವಿ

Ravi Shastri: ಹಾರ್ದಿಕ್ ಪಾಂಡ್ಯ ಅವರ ವಿರುದ್ಧ ಘೋಷಣೆ ಕೂಗುತ್ತಿರುವ ರೋಹಿತ್​ ಶರ್ಮಾ ಅಭಿಮಾನಿಗಳಿಗೆ ಭಾರತದ ಮಾಜಿ ಹೆಡ್​ಕೋಚ್​​ ರವಿ ಶಾಸ್ತ್ರಿ ಅವರು ವಿಶೇಷ ಮನವಿ ಮಾಡಿದ್ದಾರೆ.

ಹಾರ್ದಿಕ್​ ಪಾಂಡ್ಯ ಬೆಂಬಲಿಸಿ ಫ್ರಾಂಚೈಸಿಗೆ ಬೈದ ರವಿ ಶಾಸ್ತ್ರಿ
ಹಾರ್ದಿಕ್​ ಪಾಂಡ್ಯ ಬೆಂಬಲಿಸಿ ಫ್ರಾಂಚೈಸಿಗೆ ಬೈದ ರವಿ ಶಾಸ್ತ್ರಿ

ರೋಹಿತ್ ಶರ್ಮಾ (Rohit Sharma) ಅವರ ಅಭಿಮಾನಿಗಳು ಹಾರ್ದಿಕ್ ಪಾಂಡ್ಯ (Hardik Pandya) ವಿರುದ್ಧ ಕೂಗುವುದನ್ನು ನಿಲ್ಲಿಸುವಂತೆ ಭಾರತದ ಮಾಜಿ ಹೆಡ್​ಕೋಚ್​​ ರವಿ ಶಾಸ್ತ್ರಿ ಅವರು ಮನವಿ ಮಾಡಿದ್ದಾರೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲೂ ಪಾಂಡ್ಯ ತೀವ್ರ ಮುಖಭಂಗಕ್ಕೆ ಒಳಗಾದರು. ಮುಂಬೈ ಇಂಡಿಯನ್ಸ್ (Mumbai Indians) ನಾಯಕನಾಗಿ ನೇಮಕಗೊಂಡ ಬಳಿಕ ಮೊದಲ ತವರಿನ ಪಂದ್ಯದಲ್ಲಿ ಹೆಚ್ಚಿನ ವಿರೋಧಕ್ಕೆ ಒಳಗಾದರು.

ಹಾರ್ದಿಕ್ ವಿರುದ್ಧ ವಿರೋಧ ತೀವ್ರವಾದ ಬೆನ್ನಲ್ಲೇ ಹಾಲಿ-ಮಾಜಿ ಕ್ರಿಕೆಟರ್​​ಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ಆರ್​. ಅಶ್ವಿನ್ ಮತ್ತು ಸಂಜಯ್ ಮಾಂಜ್ರೇಕರ್ ಬಳಿಕ ಭಾರತದ ಮಾಜಿ ಹೆಡ್​ಕೋಚ್ ಮತ್ತು ಕಾಮೆಂಟೇಟರ್​​ ರವಿ ಶಾಸ್ತ್ರಿ (Ravi Shastri) ಅವರು ಮುಂಬೈ ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ್ದಾರೆ. ಹಾರ್ದಿಕ್​ ವಿರುದ್ಧ ಕೂಗುವುದನ್ನು ನಿಲ್ಲಿಸುವಂತೆ ಕೇಳಿಕೊಂಡಿದ್ದಾರೆ. ಆತನು ಮನುಷ್ಯ, ಆತನು ಮಲಗಬೇಕು, ಅರ್ಥ ಮಾಡಿಕೊಳ್ಳಿ ಎಂದು ಹೇಳಿದ್ದಾರೆ.

'ಹಾರ್ದಿಕ್ ಪಾಂಡ್ಯ ವಿಚಾರವಾಗಿ ಅಭಿಮಾನಿಗಳು ತಾಳ್ಮೆ ತೋರಬೇಕು. ಆತನ ವಿರುದ್ಧ ಘೋಷಣೆ ಕೂಗುವುದಕ್ಕೆ ಸಂಬಂಧಿಸಿ ಮಾನವೀಯ ದೃಷ್ಟಿಕೋನದಿಂದ ಆಲೋಚಿಸಬೇಕು' ಎಂದು ಮಾಜಿ ಮುಖ್ಯ ಕೋಚ್​ ಮನವಿ ಮಾಡಿದ್ದಾರೆ. ಇದೇ ವೇಳೆ ಮುಂಬೈ ಇಂಡಿಯನ್ಸ್​ ನಾಯಕ ಹಾರ್ದಿಕ್​ಗೂ ಸಲಹೆ ನೀಡಿರುವ ಶಾಸ್ತ್ರಿ, ಅಭಿಮಾನಿಗಳ ಕೂಗನ್ನು ನಿರ್ಲಕ್ಷಿಸಿ ಆಟದ ಮೇಲೆ ಕೇಂದ್ರೀಕರಿಸಿ ಎಂದು ಹೇಳಿದ್ದಾರೆ.

ನಿಮ್ಮಂತೆಯೇ ಮನುಷ್ಯ ಎಂದ ರವಿ ಶಾಸ್ತ್ರಿ

ನೀವು (ಅಭಿಮಾನಿಗಳು) 17 ವರ್ಷಗಳಿಂದ ತಂಡ ಬೆಂಬಲಿಸಿದ್ದೀರಿ. ಕೇವಲ 2-3 ಪಂದ್ಯಗಳಲ್ಲಿ ಮುಂಬೈ ಕೆಟ್ಟ ತಂಡವಾಗಲ್ಲ. ಬರೋಬ್ಬರಿ 5 ಬಾರಿ ಚಾಂಪಿಯನ್ ಬಳಿಕ ಹೊಸ ನಾಯಕನನ್ನು ಹೊಂದಿದೆ. ತಾಳ್ಮೆಯಿಂದಿರಿ, ನಿಮಗೆ ಗೊತ್ತು, ನೀವು ಕೂಗುತ್ತಿರುವ ವ್ಯಕ್ತಿಯೂ ನಿಮ್ಮಂತೆಯೇ ಮನುಷ್ಯ. ದಿನದ ಕೊನೆಯಲ್ಲಿ ಆತನೂ ರಾತ್ರಿಯಲ್ಲಿ ಮಲಗಬೇಕು. ಆದ್ದರಿಂದ ಅದರ ಬಗ್ಗೆ ಯೋಚಿಸಿ, ಶಾಂತವಾಗಿರಿ ಎಂದು ವಿಶೇಷವಾಗಿ ಮನವಿ ಮಾಡಿದ್ದಾರೆ.

ಹಾರ್ದಿಕ್​ ಪಾಂಡ್ಯಗೆ ಸಲಹೆ ನೀಡಿದ ರವಿ ಶಾಸ್ತ್ರಿ, 'ತಮ್ಮ ವಿರುದ್ಧ ಕೇಳಿ ಬರುತ್ತಿರುವ ಕೂಗಿಗೆ ಪ್ರತಿಕ್ರಿಯಿಸದೆ ಶಾಂತ, ತಾಳ್ಮೆಯಿಂದಿರಿ. ಅದನ್ನು ನಿರ್ಲಕ್ಷಿಸಿ. ನಿಮ್ಮ ಆಟದ ಮೇಲೆ ಕೇಂದ್ರೀಕರಿಸಿ. ಅದ್ಭುತ ಪ್ರದರ್ಶನ ನೀಡುವ ಕಡೆ ಗಮನ ಕೊಡಿ. 3-4 ಪಂದ್ಯಗಳನ್ನು ಗೆದ್ದರೆ ಎಲ್ಲವೂ ಕಡಿಮೆಯಾಗುತ್ತದೆ. ವಿಷಯಗಳು ಬದಲಾಗುತ್ತವೆ' ಎಂದು ಸ್ಟಾರ್ ಸ್ಪೋರ್ಟ್ಸ್​​​ನಲ್ಲಿ ತಿಳಿಸಿದ್ದಾರೆ.

ಮುಂಬೈ ಇಂಡಿಯನ್ಸ್, ಭಾರತೀಯ ಕ್ರಿಕೆಟ್ ಅಲ್ಲ ಎಂದು ಹೇಳಿದ ಶಾಸ್ತ್ರಿ, ಯಾರು ನಾಯಕರಾಗಬೇಕೆಂದು ಮಾಲೀಕರ ಆಯ್ಕೆಯಾಗಿದೆ ಎಂದು ಹೇಳಿದ್ದಾರೆ. ಫ್ರಾಂಚೈಸಿ ತೆಗೆದುಕೊಂಡ ನಿರ್ಧಾರದ ಕಳಪೆ ಸಂವಹನದ ಕುರಿತು ಟೀಕಿಸಿದ್ದಾರೆ. ಮುಂಬೈ ಫ್ರಾಂಚೈಸಿ ಇದನ್ನು ಅಭಿಮಾನಿಗಳಿಗೆ ಸರಿಯಾದ ಮಾರ್ಗದಲ್ಲಿ ಸ್ಪಷ್ಟಪಡಿಸಬೇಕಿತ್ತು. ಸ್ಪಷ್ಟ ಉತ್ತರದೊಂದಿಗೆ ಅಭಿಮಾನಿಗಳೊಂದಿಗೆ ಸಂವಹನ ನಡೆಸಬೇಕಿತ್ತು ಎಂದಿದ್ದಾರೆ.

ಭವಿಷ್ಯದ ತಂಡವನ್ನು ಕಟ್ಟಲು ಹೊಸ ನಾಯಕನನ್ನು ಹುಡುಕುತ್ತೇವೆ. ಪ್ರತಿಯೊಬ್ಬರಿಗೂ ತಿಳಿದಿರುವಂತೆ ನಾವು ಅಸಾಧಾರಣ ಕೆಲಸವನ್ನು ಮಾಡುತ್ತಿದ್ದೇವೆ. ಹೀಗಾಗಿ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನಾಗಿ ನೇಮಿಸಲು ನಿರ್ಧರಿಸಿದ್ದೇವೆ ಎಂದು ಸರಿಯಾದ ಸಂವಹನದಿಂದ ನಾಯಕನ ಘೋಷಣೆ ಮಾಡಬೇಕಿತ್ತು. ಅದೇ ರೀತಿ ನಮಗೆ ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸುವ ವಿಚಾರದಲ್ಲೂ ಫ್ರಾಂಚೈಸಿ ಸರಿಯಾಗಿ ನಡೆದುಕೊಳ್ಳಲಿಲ್ಲ. ಆತನಿಗೆ ನೀವು ಬೇಡ ಎಂದು ಫ್ರಾಂಚೈಸಿ ಹೇಳಿಲ್ಲ. ಆದರೆ ಅವರನ್ನು ಅವಮಾನಿಸಿ ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ ಎಂದು ಫ್ರಾಂಚೈಸಿ ವಿರುದ್ಧ ಕಿಡಿಕಾರಿದ್ದಾರೆ.

ಮೂರಕ್ಕೆ ಮೂರು ಸೋತ ಮುಂಬೈ

ಹಾರ್ದಿಕ್ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್, ಮೂರಕ್ಕೆ ಮೂರು ಪಂದ್ಯಗಳಲ್ಲೂ ಸೋಲು ಕಂಡಿದೆ. ತನ್ನ ಆರಂಭಿಕ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಎದುರು ಮುಗ್ಗರಿಸಿದ ಮುಂಬೈ, 2ನೇ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ಎದುರು ಶರಣಾಯಿತು. ರಾಜಸ್ಥಾನ್ ರಾಯಲ್ಸ್ ಎದುರು ಸೋತಿರುವ ಮುಂಬೈ ಹ್ಯಾಟ್ರಿಕ್ ಸೋಲಿಗೆ ಗುರಿಯಾಗಿದೆ. ತನ್ನ ನಾಲ್ಕನೇ ಪಂದ್ಯದಲ್ಲಿ ಏಪ್ರಿಲ್ 7ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದೆ.

Whats_app_banner