ಐಪಿಎಲ್ 2024ರಲ್ಲಿ ದುಬಾರಿ ಆಟಗಾರರ ಪ್ರದರ್ಶನ ಹೇಗಿತ್ತು; ತಂಡದ ಕೈ ಹಿಡಿದೋರ್ಯಾರು, ಕೈ ಕೊಟ್ಟೋರು ಯಾರು?
ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್ 2024ರಲ್ಲಿ ದುಬಾರಿ ಆಟಗಾರರ ಪ್ರದರ್ಶನ ಹೇಗಿತ್ತು; ತಂಡದ ಕೈ ಹಿಡಿದೋರ್ಯಾರು, ಕೈ ಕೊಟ್ಟೋರು ಯಾರು?

ಐಪಿಎಲ್ 2024ರಲ್ಲಿ ದುಬಾರಿ ಆಟಗಾರರ ಪ್ರದರ್ಶನ ಹೇಗಿತ್ತು; ತಂಡದ ಕೈ ಹಿಡಿದೋರ್ಯಾರು, ಕೈ ಕೊಟ್ಟೋರು ಯಾರು?

ಮಿಚೆಲ್ ಸ್ಟಾರ್ಕ್ ಅವರನ್ನು ಕೆಕೆಆರ್‌ ಫ್ರಾಂಚೈಸಿಯು 24.75 ಕೋಟಿ ರೂಪಾಯಿ ಕೊಟ್ಟು ಖರೀದಿಸಿದಾಗ ಹುಬ್ಬೇರಿಸಿದವರೇ ಹೆಚ್ಚು. ಪಂದ್ಯಾವಳಿಯ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರನಾದ ಸ್ಟಾರ್ಕ್‌, ಫೈನಲ್‌ ಪಂದ್ಯದಲ್ಲಿ ನಿರ್ಣಾಯಕ ಪ್ರದರ್ಶನ ನೀಡಿ ಮ್ಯಾನ್‌ ಆಫ್‌ ದಿ ಮ್ಯಾಚ್‌ ಪ್ರಶಸ್ತಿ ಪಡೆದರು.

ಐಪಿಎಲ್ 2024ರಲ್ಲಿ ದುಬಾರಿ ಆಟಗಾರರ ಪ್ರದರ್ಶನ ಹೇಗಿತ್ತು
ಐಪಿಎಲ್ 2024ರಲ್ಲಿ ದುಬಾರಿ ಆಟಗಾರರ ಪ್ರದರ್ಶನ ಹೇಗಿತ್ತು (X Image)

ಕೆಕೆಆರ್‌ ತಂಡ ಚಾಂಪಿಯನ್‌ ಪಟ್ಟ ಅಲಂಕರಿಸುವುದರೊಂದಿಗೆ ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಆವೃತ್ತಿಗೆ ತೆರೆ ಬಿದ್ದಿದೆ. ಮಿಲಿಯನ್‌ ಡಾಲರ್‌ ಮೌಲ್ಯದ ಟೂರ್ನಿಯಲ್ಲಿ ಹಲವು ದಾಖಲೆಗಳು ನಿರ್ಮಾಣವಾದವು. ಟೂರ್ನಿಯ ಆರಂಭಕ್ಕೂ ಮುನ್ನ ನಡೆದ ಹರಾಜು ಪ್ರಕ್ರಿಯೆಯಲ್ಲಿ ದಾಖಲೆಯ ಮೊತ್ತ ಪಡೆದು ಬಂದ ಆಟಗಾರರು ಭಾರಿ ನಿರೀಕ್ಷೆ ಮೂಡಿಸಿದ್ದರು. ಅದರಂತೆಯೇ ಕೆಲವು ಆಟಗಾರರು ಉತ್ತಮ ಪ್ರದರ್ಶನ ನೀಡದರೆ, ಇನ್ನೂ ಕೆಲವು ಆಟಗಾರರು ಮಿಂಚುವಲ್ಲಿ ವಿಫಲರಾಗಿದ್ದಾರೆ. ಹಾಗಿದ್ದರೆ, ಐಪಿಎಲ್‌ 2024ರ ಆವೃತ್ತಿಯಲ್ಲಿ ಭಾರಿ ಮೊತ್ತಕ್ಕೆ ಹರಾಜಾದ ಆಟಗಾರರ ಪ್ರದರ್ಶನ ಹೇಗಿತ್ತು ಎಂಬುದನ್ನು ನೋಡೋಣ.

ಟೂರ್ನಿಯಲ್ಲಿ ಹೆಚ್ಚು ನಿರೀಕ್ಷೆ ಮೂಡಿಸಿದವರು ಆಸ್ಟ್ರೇಲಿಯಾ ವೇಗಿಗಳಾದ ಮಿಚೆಲ್ ಸ್ಟಾರ್ಕ್ ಹಾಗೂ ಪ್ಯಾಟ್‌ ಕಮಿನ್ಸ್. ಕೋಲ್ಕತಾ ನೈಟ್ ರೈಡರ್ಸ್ ಬಳಗಕ್ಕೆ 24.75 ಕೋಟಿ ರೂಪಾಯಿ ಹರಾಜಾದ ಸ್ಟಾರ್ಕ್‌, ತಂಡವು ಚಾಂಪಿಯನ್‌ ಪಟ್ಟಕ್ಕೇರುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದೇ ವೇಳೆ 20.75 ಕೋಟಿ ರೂಪಾಯಿ ಪಡೆದ ಕಮಿನ್ಸ್‌ ಅವರ ನಾಯಕತ್ವದಲ್ಲಿ ಎಸ್‌ಆರ್‌ಎಚ್‌ ತಂಡವು ರನ್ನರ್‌ ಅಪ್‌ ಸ್ಥಾನ ಪಡೆಯಿತು. ಅಗ್ರ ಎರಡು ದುಬಾರಿ ಆಟಗಾರರು ಕೂಡಾ ಫೈನಲ್‌ನಲ್ಲಿ ಆಡಿದ್ದು ವಿಶೇಷ.

ಟಾಪ್ 10 ದುಬಾರಿ ಆಟಗಾರರ ಪ್ರದರ್ಶನ ಹೇಗಿತ್ತು?

1. ಮಿಚೆಲ್ ಸ್ಟಾರ್ಕ್ (24.75 ಕೋಟಿ)

ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ ಐಪಿಎಲ್‌ ಇತಿಹಾಸದಲ್ಲಿಯೇ ಅತ್ಯಂತ ದುಬಾರಿ ಆಟಗಾರ. ಎಡಗೈ ವೇಗದ ಬೌಲರ್ ಟೂರ್ನಿಯ ಆರಂಭದಲ್ಲಿ ಕೆಕೆಆರ್ ತಂಡದ ನಿರೀಕ್ಷೆಗಳಿಗೆ ತಕ್ಕಂತೆ ಪ್ರದರ್ಶನ ನೀಡಲು ವಿಫಲರಾದರು. ಕೆಲವು ಪಂದ್ಯಗಳಲ್ಲಿ ಪ್ರತಿ ಓವರ್‌ನಲ್ಲೂ 10ಕ್ಕೂ ಹೆಚ್ಚು ರನ್‌ ಬಿಟ್ಟುಕೊಟ್ಟು ದುಬಾರಿಯಾದರು. ಆದರೆ, ದ್ವಿತಿಯಾರ್ಧದಲ್ಲಿ ಮಿಂಚಿದ ಅವರು ನಿರ್ಣಾಯಕ ಪ್ರದರ್ಶನ ನೀಡಿದರು. ಅದರಲ್ಲೂ ಪ್ಲೇಆಪ್‌ ಪಂದ್ಯಗಳಲ್ಲಿ ಪವರ್‌ಪ್ಲೇನಲ್ಲಿಯೇ ಅಬ್ಬರಿಸಿ ನಿರ್ಣಾಯಕ ವಿಕೆಟ್‌ ಪಡೆದರು. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಮೊದಲ ಕ್ವಾಲಿಫೈಯರ್‌ನಲ್ಲಿ 34 ರನ್ ಬಿಟ್ಟುಕೊಟ್ಟು 3 ವಿಕೆಟ್‌ ಪಡೆದು ತಂಡವನ್ನು ಫೈನಲ್ ಪಂದ್ಯಕ್ಕೆ ಕರೆದೊಯ್ದರು. ಫೈನಲ್‌ ಪಂದ್ಯದಲ್ಲಿ ಮತ್ತೆರಡು ನಿರ್ಣಾಯಕ ವಿಕೆಟ್‌ ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಋತುವಿನಲ್ಲಿ ಆಡಿದ 13 ಪಂದ್ಯಗಳಲ್ಲಿ ಅವರು 17 ವಿಕೆಟ್ ಪಡೆದು ತಮ್ಮ ಬೆಲೆಯನ್ನು ಸಮರ್ಥಿಸಿದ್ದಾರೆ.

2. ಪ್ಯಾಟ್ ಕಮಿನ್ಸ್ (20.75 ಕೋಟಿ)

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಮತ್ತು ಏಕದಿನ ವಿಶ್ವಕಪ್ ಟ್ರೋಫಿ ಗೆದ್ದ ಯಶಸ್ವಿ ನಾಯಕ ಪ್ಯಾಟ್ ಕಮಿನ್ಸ್, ಸನ್‌ರೈಸರ್ಸ್ ಹೈದರಾಬಾದ್ ತಂಡದ ದುಬಾರಿ ಆಟಗಾರ. ನಾಯಕನಾಗಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ಕಮಿನ್ಸ್‌, ತಮ್ಮ ಬೆಲೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇವರ ನಾಯಕತ್ವದಲ್ಲಿ ಎಸ್‌ಆರ್‌ಎಚ್‌ ತಂಡವು ಟೂರ್ನಿಯಲ್ಲಿ ಆಕ್ರಮಣಕಾರಿ ಆಟದೊಂದಿಗೆ ಸ್ಫೋಟಕ ಪ್ರದರ್ಶನ ನೀಡಿತು.

ತಾನೊಬ್ಬ ಆಲ್‌ರೌಂಡ್‌ ಆಟಗಾರ ಎಂಬುದನ್ನು ಕಮಿನ್ಸ್‌ ಸಾಬೀತುಪಡಿಸಿದರು. ನಿರ್ಣಾಯಕ ಸಂದರ್ಭದಲ್ಲಿ ತಂಡದ ಪರ ರನ್‌ ಗಳಿಸಿದರು. ಆಡಿದ 16 ಪಂದ್ಯಗಳಲ್ಲಿ ಕಮಿನ್ಸ್ 18 ವಿಕೆಟ್ ಪಡೆದಿದ್ದಾರೆ. ಆ ಮೂಲಕ ಪರ್ಪಲ್‌ ಕ್ಯಾಪ್‌ ಪಟ್ಟಿಯಲ್ಲಿ 9ನೇ ಸ್ಥಾನ ಪಡೆದಿದ್ದಾರೆ.

3. ಡೇರಿಲ್ ಮಿಚೆಲ್ (14 ಕೋಟಿ)

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್‌ ಡೇರಿಲ್ ಮಿಚೆಲ್, ನ್ಯೂಜಿಲ್ಯಾಂಡ್‌ ಪರ 2023ರ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಹೀಗಾಗಿ ಸಿಎಸ್‌ಕೆ ತಂಡ ಇವರಿಗೆ ದುಬಾರಿ ಬೆಲೆ ಕೊಟ್ಟು ಖರೀದಿ ಮಾಡಿತು. ಆದರೆ, ಐದು ಬಾರಿ ಚಾಂಪಿಯನ್‌ ಪರ ಅಬ್ಬರಿಸಲು ಇವರಿಂದ ಸಾಧ್ಯವಾಗಲಿಲ್ಲ. ಪ್ರಸಕ್ತ ಋತುವಿನಲ್ಲಿ ಕೇವಲ 2 ಅರ್ಧಶತಕಗಳನ್ನು ಗಳಿಸಿರುವ ಮಿಚೆಲ್, ಆಡಿದ 13 ಪಂದ್ಯಗಳಿಂದ 318 ರನ್ ಮಾತ್ರ ಗಳಿಸಿದ್ದಾರೆ.

4. ಹರ್ಷಲ್ ಪಟೇಲ್ (11.75 ಕೋಟಿ)

ಆರ್‌ಸಿಬಿ ತಂಡದಿಂದ ಹೊರಬಿದ್ದ ಭಾರತದ ಮಧ್ಯಮ ವೇಗಿ ಹರ್ಷಲ್ ಪಟೇಲ್ ಅವರನ್ನು, ಪಂಜಾಬ್ ಕಿಂಗ್ಸ್ ದುಬಾರಿ ಮೊತ್ತ ಕೊಟ್ಟು ಖರೀದಿಸಿತು. ಡೆತ್‌ ಓವರ್‌ನಲ್ಲಿ ಅದ್ಭುತ ಬೌಲಿಂಗ್‌ ಮಾಡಿ ಹಲವು ಪಂದ್ಯಗಳಲ್ಲಿ ತಂಡದ ಗೆಲುವಿಗೆ ಇವರು ಕಾರಣರಾಗಿದ್ದಾರೆ. ಹರ್ಷಲ್ ಕೇವಲ 14 ಪಂದ್ಯಗಳಿಂದ 9.73ರ ಸರಾಸರಿಯಲ್ಲಿ 24 ವಿಕೆಟ್ ಕಬಳಿಸಿದ್ದಾರೆ. ಅಲ್ಲದೆ ಟೂರ್ನಿಯ ಇತಿಹಾಸದಲ್ಲಿ ಎರಡನೇ ಬಾರಿಗೆ ಪರ್ಪಲ್‌ ಕ್ಯಾಪ್‌ ಗೆದ್ದಿದ್ದಾರೆ. ತಂಡಕ್ಕೆ ಇವರ ಕೊಡುಗೆ ಸಿಕ್ಕಿದೆ.

5. ಅಲ್ಜಾರಿ ಜೋಸೆಫ್ (11.5 ಕೋಟಿ)

ಮಾರಣಾಂತಿಕ ಯಾರ್ಕರ್‌ಗಳಿಗೆ ಹೆಸರುವಾಸಿಯಾದ ವಿಂಡೀಸ್‌ ವೇಗಿ ಅಲ್ಜಾರಿ ಜೋಸೆಫ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಬರೋಬ್ಬರಿ 11.5 ಕೋಟಿ ರೂಪಾಯಿ ಕೊಟ್ಟು ಖರೀದಿಸಿ ಕೈಸುಟ್ಟುಕೊಂಡಿತು. ಋತುವಿನ ಮೊದಲ ಮೂರು ಪಂದ್ಯಗಳಲ್ಲಿ ಆಡಿದ ಅವರು, 11ಕ್ಕೂ ಅಧಿಕ ಎಕಾನಮಿಯಲ್ಲಿ ರನ್‌ ಸೋರಿಕೆ ಮಾಡಿದರು. ಹೀಗಾಗಿ ಆಡುವ ಬಳಗದಿಂದ ಅವರನ್ನು ಹೊರಗಿಡಲಾಯ್ತು. ಆ ನಂತರ ಗಾಯಕ್ಕೆ ಒಳಗಾದ ಅವರು ಋತುವಿನಿಂದ ಹೊರಗುಳಿದರು. ಹೀಗಾಗಿ ತಂಡಕ್ಕೆ ಜೋಸೆಫ್‌ ಖರೀದಿ ದುಬಾರಿಯಾಯ್ತು.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner