Ind vs Aus: ಪರ್ತ್ ಟೆಸ್ಟ್ ಗೆಲುವಿನ ಹೀರೋಗಳು ಒಬ್ಬಿಬ್ಬರಲ್ಲ, ಐವರು; ಬುಮ್ರಾ, ಜೈಸ್ವಾಲ್ ಜೊತೆಗೆ ಈ ಮೂವರನ್ನು ಮರೆಯುವಂತಿಲ್ಲ!
india vs australia 1st test: ಬಾರ್ಡರ್-ಗವಾಸ್ಕರ್ ಟ್ರೋಫಿ 2025ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ 295 ರನ್ಗಳಿಂದ ಗೆಲುವು ಸಾಧಿಸಿದ ಟೀಮ್ ಇಂಡಿಯಾ 1-0 ಮುನ್ನಡೆ ಸಾಧಿಸಿದೆ. ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಪರ್ತ್ನಲ್ಲಿ ನಡೆಯಿತು. ಹಾಗಾದರೆ ಈ ಟೆಸ್ಟ್ ಗೆಲುವಿನ ಹೀರೋಗಳು ಯಾರು?
ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಟೆಸ್ಟ್ ಗೆದ್ದು ಭಾರತ ತಂಡ ಶುಭಾರಂಭ ಮಾಡಿದೆ. ನಾಲ್ಕನೇ ದಿನದಾಟದ ಕೊನೆಯ ಸೆಷನ್ನಲ್ಲಿ ಆತಿಥೇಯರನ್ನು ದಾಖಲೆಯ 295 ರನ್ಗಳ ಭರ್ಜರಿ ಜಯ ಸಾಧಿಸಿದ ಭಾರತ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಜಸ್ಪ್ರೀತ್ ಬುಮ್ರಾ ಮತ್ತು ಯಶಸ್ವಿ ಜೈಸ್ವಾಲ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಆದರೆ ಇವರು ಇಬ್ಬರಷ್ಟೇ ಅಲ್ಲ, ಈ ಮೂವರು ಆಟಗಾರರಿಲ್ಲದೆ ಈ ಟೆಸ್ಟ್ ಗೆಲ್ಲುವುದು ಕಷ್ಟವಾಗುತ್ತಿತ್ತು. ರೋಹಿತ್ ಶರ್ಮಾ, ಮೊಹಮ್ಮದ್ ಶಮಿ, ಶುಭ್ಮನ್ ಗಿಲ್ ಅವರಂತಹ ಆಟಗಾರರ ಅನುಪಸ್ಥಿತಿಯು ಈ ಟೆಸ್ಟ್ ಗೆಲುವನ್ನು ಹೆಚ್ಚು ವಿಶೇಷಗೊಳಿಸಿದೆ. ಪರ್ತ್ ಟೆಸ್ಟ್ ಗೆಲುವಿನ ಪಂದ್ಯದ 5 ಹೀರೋಗಳನ್ನು ನೋಡೋಣ
ಜಸ್ಪ್ರೀತ್ ಬುಮ್ರಾ
ಭಾರತ ತಂಡವನ್ನು ರಕ್ಷಿಸಿದ್ದೇ ಜಸ್ಪ್ರೀತ್ ಬುಮ್ರಾ. ಭಾರತ ಮೊದಲ ಇನ್ನಿಂಗ್ಸ್ನಲ್ಲಿ 150 ಕ್ಕೆ ಆಲೌಟ್ ಆಗಿತ್ತು. ಬ್ಯಾಟಿಂಗ್ ವೈಫಲ್ಯ ಕಾರಣ ಮೊದಲ ಪಂದ್ಯವನ್ನು ಭಾರತ ತಂಡ ಗೆಲ್ಲುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಪ್ರತ್ಯುತ್ತರವಾಗಿ ಬ್ಯಾಟಿಂಗ್ ನಡೆಸಿದ ಆಸೀಸ್ ವಿರುದ್ಧ ಮೊದಲ ಇನ್ನಿಂಗ್ಸ್ನಲ್ಲಿ ಬುಮ್ರಾ ಐದು ವಿಕೆಟ್ ಉರುಳಿಸಿ 104 ರನ್ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾದರು. ಅಲ್ಲದೆ, ಎರಡನೇ ಇನ್ನಿಂಗ್ಸ್ನಲ್ಲಿ ಪ್ರಮುಖ 3 ವಿಕೆಟ್ ಉರುಳಿಸಿ ಮತ್ತೆ ಆಸೀಸ್ ತಂಡವನ್ನು ಒತ್ತಡಕ್ಕೆ ಸಿಲುಕಿಸಿ ಟೀಮ್ ಇಂಡಿಯಾಗೆ ಯಶಸ್ಸು ತಂದುಕೊಟ್ಟರು. ಬೌಲಿಂಗ್ ಜೊತೆಗೆ ನಾಯಕನಾಗಿ ಪ್ರಮುಖ ಯೋಜನೆಗಳು, ನಿರ್ಧಾರಗಳು ಸಹ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು.
ಯಶಸ್ವಿ ಜೈಸ್ವಾಲ್
ಮೊದಲ ಬಾರಿಗೆ ಟೆಸ್ಟ್ ಸರಣಿ ಆಡಲು ಆಸ್ಟ್ರೇಲಿಯಾಕ್ಕೆ ಬಂದ ಯಶಸ್ವಿ ಜೈಸ್ವಾಲ್ ಉತ್ತಮ ಆರಂಭ ಪಡೆಯದಿದ್ದರೂ 2ನೇ ಇನ್ನಿಂಗ್ಸ್ನಲ್ಲಿ ಶತಕ ಸಿಡಿಸುವ ಮೂಲಕ ತನ್ನ ಸಾಮರ್ಥ್ಯವನ್ನು ನಿರೂಪಿಸಿದರು. ಮೊದಲ ಇನ್ನಿಂಗ್ಸ್ನಲ್ಲಿ ಡಕೌಟ್ ಆಗಿದ್ದ ಜೈಸ್ವಾಲ್, ದ್ವಿತೀಯ ಇನ್ನಿಂಗ್ಸ್ನಲ್ಲಿ 297 ಎಸೆತಗಳಲ್ಲಿ 15 ಬೌಂಡರಿ, 3 ಸಿಕ್ಸರ್ ಸಹಿತ 161 ರನ್ ಗಳಿಸಿದರು. ದಾಖಲೆಯ ಶತಕದ ನೆರವಿನಿಂದ ಬೃಹತ್ ಗೆಲುವಿಗೆ ಕಾರಣವಾಯಿತು.
ಕೆಎಲ್ ರಾಹುಲ್
ಅದ್ಭುತ ಕ್ಯಾಚ್ ಹಿಡಿದ ರಾಹುಲ್ ಅವರ ಕೊಡುಗೆ ಮರೆಯಬಾರದು. ಪರ್ತ್ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಒಂದು ತುದಿಯಿಂದ ವಿಕೆಟ್ಗಳು ಪತನವಾಗುತ್ತಿದ್ದರೂ ರಾಹುಲ್ 74 ಎಸೆತಗಳನ್ನು ಆಡಿ ಅಮೂಲ್ಯ 26 ರನ್ಗಳ ಇನ್ನಿಂಗ್ಸ್ ಆಡಿದರು. ರಾಹುಲ್ ಅವರು ದುರದೃಷ್ಟವಶಾತ್ ವಿವಾದಾತ್ಮಕವಾಗಿ ಔಟಾದರು. ಆದರೆ 2ನೇ ಇನ್ನಿಂಗ್ಸ್ನಲ್ಲಿ ಸೊಗಸಾದ ಅರ್ಧಶತಕ ಗಳಿಸಿದರು. 176 ಎಸೆತಗಳಲ್ಲಿ 77 ರನ್ ಸಿಡಿಸಿ ಔಟಾದರು. ಅಲ್ಲದೆ, ಯಶಸ್ವಿ ಜೊತೆಗೆ ಮೊದಲ ವಿಕೆಟ್ಗೆ 201 ರನ್ಗಳ ಜೊತೆಯಾಟವಾಡಿದರು.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ಆಸ್ಟ್ರೇಲಿಯಾದಲ್ಲಿ ಆಡುವುದರ ಅರ್ಥವೇನೆಂದು ಯಾರಿಗೂ ಹೇಳುವ ಅಗತ್ಯವಿಲ್ಲ. ಆಸ್ಟ್ರೇಲಿಯಾದಲ್ಲಿ ವಿರಾಟ್ ದಾಖಲೆಗಳು ಅವರು ಇಲ್ಲಿ ಆಡಲು ಎಷ್ಟು ಇಷ್ಟಪಡುತ್ತಾರೆ ಎಂಬುದನ್ನು ತೋರಿಸುತ್ತದೆ. ಮೊದಲ ಇನ್ನಿಂಗ್ಸ್ಗಳಲ್ಲಿ 5 ರನ್ಗಳಿಗೆ ಔಟಾಗಿದ್ದ ವಿರಾಟ್, 2ನೇ ಇನ್ನಿಂಗ್ಸ್ನಲ್ಲಿ ಶತಕ ಬಾರಿಸುವ ಮೂಲಕ ಗಮನ ಸೆಳೆದರು. ಇದು ಅವರ ವೃತ್ತಿಜೀವನದ 30ನೇ ಟೆಸ್ಟ್ ಶತಕ.
ನಿತೀಶ್ ಕುಮಾರ್ ರೆಡ್ಡಿ
ಭಾರತದ ಪರ ಪದಾರ್ಪಣೆ ಪಂದ್ಯದಲ್ಲೇ ನಿತೀಶ್ ಕುಮಾರ್ ರೆಡ್ಡಿ, ಎರಡೂ ಇನ್ನಿಂಗ್ಸ್ಗಳಲ್ಲಿ ಬ್ಯಾಟಿಂಗ್ನಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡಿದರು. 2ನೇ ಇನ್ನಿಂಗ್ಸ್ನಲ್ಲಿ ಬೌಲಿಂಗ್ನಲ್ಲಿ ವಿಕೆಟ್ ಕೂಡ ಪಡೆದರು. ನಿತೀಶ್ ಮೊದಲ ಇನ್ನಿಂಗ್ಸ್ನಲ್ಲಿ ಭಾರತದ ಗರಿಷ್ಠ ಸ್ಕೋರರ್ ಆಗಿದ್ದರು. ಅವರ ಅದ್ಭುತ ಆಟದ ಪರಿಣಾಮ ಭಾರತ 150ರ ಗಡಿ ದಾಟಲು ಸಾಧ್ಯವಾಯಿತು. 59 ಎಸೆತಗಳಲ್ಲಿ ಆರು ಬೌಂಡರಿ, ಸಿಕ್ಸರ್ ಸಹಿತ 41 ರನ್ ಸಿಡಿಸಿದರು. ಇದರ ನಂತರ, ಎರಡನೇ ಇನ್ನಿಂಗ್ಸ್ನಲ್ಲಿ 27 ಎಸೆತಗಳಲ್ಲಿ ಅಜೇಯ 38 ರನ್ ಗಳಿಸಿದರು. ಬೌಲಿಂಗ್ನಲ್ಲಿ ಮಿಚೆಲ್ ಮಾರ್ಷ್ ಅವರ ವಿಕೆಟ್ ಪಡೆದರು.