ಇಶಾನ್ ಕಿಶನ್ ಔಟ್, ರಿಷಭ್ ಪಂತ್ ಇನ್; ವಿಕೆಟ್ ಕೀಪರ್ ಕೋಟಾದಲ್ಲಿ ಪಂತ್ಗೆ ಟಿ20 ವಿಶ್ವಕಪ್ ಟಿಕೆಟ್ ಫಿಕ್ಸ್
Rishabh Pant - T20 World Cup 2024 : ಜೂನ್ 1ರಿಂದ ಆರಂಭವಾಗುವ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ರಿಷಭ್ ಪಂತ್ ಸಜ್ಜಾಗಿದ್ದಾರೆ.
ಬ್ಯಾಕ್ ಟು ಬ್ಯಾಕ್ ಅರ್ಧಶತಕ ಸಿಡಿಸಿ ಭರ್ಜರಿ ಫಾರ್ಮ್ನಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್, 2022ರ ಡಿಸೆಂಬರ್ 30ರಂದು ಕಾರು ಅಪಘಾತಕ್ಕೆ ಒಳಗಾಗಿ ಒಂದು ವರ್ಷಕ್ಕೂ ಅಧಿಕ ಕಾಲ ಸ್ಪರ್ಧಾತ್ಮಕ ಕ್ರಿಕೆಟ್ನಿಂದ ದೂರವಿದ್ದರು. ಇದೀಗ ತನ್ನ ಹಳೆಯ ಖದರ್ಗೆ ಮರಳುತ್ತಿದ್ದಾರೆ. ಜೂನ್ 1ರಿಂದ ಆರಂಭವಾಗುವ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಸಜ್ಜಾಗಿದ್ದಾರೆ. ವಿಶ್ವಕಪ್ ಯೋಜನೆಗೆ ಇಶಾನ್ ಕಿಶನ್ ಬದಲಿಗೆ ರಿಷಭ್ ಹೆಸರು ಸೇರ್ಪಡೆಯಾಗುವುದು ಖಚಿತವಾಗಿದೆ.
ಇದೇ ತಿಂಗಳ ಕೊನೆಯ ವಾರದಲ್ಲಿ ಟಿ20 ವಿಶ್ವಕಪ್ ಟೂರ್ನಿಗೆ 15 ಸದಸ್ಯರ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಲಿದೆ. ಮೇ 1 ರಂದು ತಂಡವನ್ನು ಪ್ರಕಟಿಸಲು ಕೊನೆಯ ದಿನವಾಗಿದೆ. ಈಗಾಗಲೇ ಬಿಸಿಸಿಐ ಸೆಲೆಕ್ಟರ್ಗಳು ಯಾರಿಗೆ ಮಣೆ ಹಾಕಬೇಕು? ಯಾರನ್ನು ಕೈಬಿಡಬೇಕು? ಹೊಸ ಮುಖಗಳಲ್ಲಿ ಯಾರಿಗೆ ಅವಕಾಶ ನೀಡಿದರೆ ಉತ್ತಮ? ಹಿರಿಯ ಆಟಗಾರರ ತಂಡ ಕಟ್ಟಬೇಕಾ? ಅಥವಾ ಯುವ ಆಟಗಾರರ ತಂಡ ಕಟ್ಟಬೇಕಾ? ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಈ ಪೈಕಿ ಯಾವ ಆಟಗಾರರು ಬೇಕು ಎಂಬ ಒಂದು ಯೋಜನೆ ರೂಪಿಸಿರುವ ಸೆಲೆಕ್ಟರ್ಸ್ ಅದಕ್ಕೆ ಪಂತ್ ಹೆಸರು ಸೇರ್ಪಡೆಗೊಳಿಸಿದ್ದಾರೆ.
ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕೋಟಾದಲ್ಲಿ ಇಶಾನ್ ಕಿಶನ್ ಹೆಸರು ಮೊದಲು ಹರಿದಾಡಿತ್ತು. ಇಶಾನ್ ತಂಡದ ಭಾಗವಾಗುವುದು ಖಚಿತ ಎಂದು ಹೇಳಲಾಗಿತ್ತು. ಆದರೆ, ಕಳೆದ 2-3 ತಿಂಗಳಲ್ಲಿ ಕಿಶನ್ ವರ್ತನೆ ಬಿಸಿಸಿಐ ಮತ್ತು ಸೆಲೆಕ್ಟರ್ಗಳಿಗೆ ಇಷ್ಟವಾಗಲಿಲ್ಲ. ರಣಜಿ ಆಡುವಂತೆ ಸೂಚಿಸಿದ್ದ ಬಿಸಿಸಿಐ ಆದೇಶಗಳನ್ನೇ ನಿರ್ಲಕ್ಷಿಸಿದ ಯುವ ಆಟಗಾರ, ಐಪಿಎಲ್ಗೆ ಅಭ್ಯಾಸ ನಡೆಸಿದ್ದರು. ಇದು ಬಿಸಿಸಿಐಗೆ ಕೋಪ ತರಿಸಿತ್ತು. ಹಾಗಾಗಿ ಆಟಗಾರರ ವಾರ್ಷಿಕ ಗುತ್ತಿಗೆಯಿಂದ ಕೈಬಿಡಲಾಯಿತು. ಅಲ್ಲದೆ, ವಿಶ್ವಕಪ್ ಪ್ಲಾನ್ನಿಂದಲೂ ಸೆಲೆಕ್ಟರ್ಸ್ ಕೈ ಬಿಟ್ಟಿದ್ದಾರೆ.
ಐಪಿಎಲ್ನಲ್ಲಿ ರಿಷಭ್ ಪಂತ್ ಹೇಗೆ ಪ್ರದರ್ಶನ ನೀಡುತ್ತಾರೋ ಅದರ ಮೇಲೆ ಟಿ20 ವಿಶ್ವಕಪ್ ಆಯ್ಕೆಗೆ ಪರಿಗಣನೆಗೆ ತೆಗೆದುಕೊಳ್ಳುವುದಾಗಿ ಬಿಸಿಸಿಐ ಮೂಲಗಳು ತಿಳಿಸಿದ್ದವು. ಪ್ರಸ್ತುತ ರಿಷಭ್ ಪಂತ್ ಭರ್ಜರಿ ಫಾರ್ಮ್ಗೆ ಮರಳಿದ್ದು, ಬಿಸಿಸಿಐ ಕೂಡ ಸಂತಸಗೊಂಡಿದೆ. ರಿಷಭ್ ಪಂತ್ಗೆ ಬ್ಯಾಕಪ್ ವಿಕೆಟ್ ಕೀಪರ್ ಆಗಿ ಯಾರಿಗೆ ಮಣೆ ಹಾಕಬೇಕು ಎಂಬ ಚರ್ಚೆಗಳು ನಡೆಯುತ್ತಿವೆ. ಅಲ್ಲದೆ, ಕೆಎಲ್ ರಾಹುಲ್ರನ್ನು ಮೊದಲ ಆಯ್ಕೆಯಾಗಿ ಪರಿಗಣಿಸಿ ಅವರನ್ನೇ ಕೀಪರ್ ಮಾಡಬೇಕು ಎನ್ನುವ ಚಿಂತನೆಯೂ ಸೆಲೆಕ್ಟರ್ಗಳ ಮುಂದಿದೆ. ಪಂತ್ ಕೀಪರ್ ಆಗಿ, ರಾಹುಲ್ ಬ್ಯಾಟರ್ ಆಗಿ ಕಣಕ್ಕಿಳಿಯಲಿ ಎಂಬ ಚರ್ಚೆಗಳು ನಡೆದಿವೆ.
ಅಷ್ಟೆ ಅಲ್ಲದೆ, ಇತ್ತೀಚೆಗೆ ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ವಿಕೆಟ್ ಕೀಪರ್ ಆಗಿದ್ದ ಯುವ ಆಟಗಾರ ಧ್ರುವ್ ಜುರೆಲ್ ಸಹ ಆಯ್ಕೆಯ ರೇಸ್ಗಿಳಿದಿದ್ದಾರೆ. ಸಂಜು ಸ್ಯಾಮ್ಸನ್ ಮತ್ತು ಜಿತೇಶ್ ಶರ್ಮಾ ಸಹ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಬಹುತೇಕ ಅನುಭವಿಗಳು ತುಂಬಿರುವ ಆಟಗಾರರಿಗೆ ಮಣೆ ಹಾಕಲು ಬಿಸಿಸಿಐ ಚಿಂತಿಸಿದೆ. ಆದರೆ ಯಾರಿಗೆ ಅವಕಾಶ ಸಿಗುತ್ತದೆ ಎಂಬುದನ್ನು ಕಾದುನೋಬೇಕಿದೆ.
ಇಶಾನ್ ಕಿಶನ್ ಮಾಡಿದ್ದೇನು?
2023ರ ಡಿಸೆಂಬರ್ನಲ್ಲಿ ನಡೆದ ಭಾರತ ಮತ್ತು ಸೌತ್ ಆಫ್ರಿಕಾ ಟೆಸ್ಟ್ ಸರಣಿಗೆ ಮಾನಸಿಕ ಆಯಾಸವೆಂದು ಕಾರಣ ಹೇಳಿ ತನ್ನ ಹೆಸರನ್ನು ಹಿಂತೆಗೆದುಕೊಂಡ ಇಶಾನ್, ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯುವುದಾಗಿ ಹೇಳಿದ್ದರು. ಆದರೆ ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮ ಮತ್ತು ದುಬೈನಲ್ಲಿ ಪಾರ್ಟಿಯೊಂದರಲ್ಲಿ ಭಾಗವಹಿಸಿದ್ದರು. ಆ ಬಳಿಕ ಮತ್ತೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲು ರಣಜಿ ಆಡುವುದು ಕಡ್ಡಾಯ ಎಂದು ಬಿಸಿಸಿಐ ಸೂಚಿಸಿತ್ತು. ಹೆಡ್ ಕೋಚ್ ರಾಹುಲ್ ದ್ರಾವಿಡ್ ಕೂಡ ಈ ಬಗ್ಗೆ ಹೇಳಿದ್ದರು. ಆದರೆ, ಬಿಗ್ ಬಾಸ್ಗಳ ಆದೇಶವನ್ನೇ ಲೆಕ್ಕಿಸದೆ ಐಪಿಎಲ್ಗಾಗಿ ರಹಸ್ಯ ಸ್ಥಳದಲ್ಲಿ ಅಭ್ಯಾಸ ನಡೆಸಿದ್ದರು. ಇದು ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿತ್ತು.
ಟಿ20 ವಿಶ್ವಕಪ್ ಟೂರ್ನಿಗೆ ಭಾರತದ ಸಂಭಾವ್ಯ ತಂಡ
ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಂಕು ಸಿಂಗ್, ರಿಷಭ್ ಪಂತ್ (ವಿಕೆಟ್ ಕೀಪರ್), ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್ , ರವಿ ಬಿಷ್ಣೋಯ್, ಜಸ್ಪ್ರೀತ್ ಬುಮ್ರಾ, ಅರ್ಷ್ದೀಪ್ ಸಿಂಗ್, ಮೊಹಮ್ಮದ್ ಸಿರಾಜ್.
ಸಿಎಸ್ಕೆ ಬಳಿಕ ಕೆಕೆಆರ್ ವಿರುದ್ಧ ಪಂತ್ ಅರ್ಧಶತಕ
ವೈಜಾಗ್ನ ಡಾ ವೈಎಸ್ ರಾಜಶೇಖರರೆಡ್ಡಿ ಮೈದಾನದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ನ ಮೂರನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 32 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಸಹಿತ 51 ರನ್ ಚಚ್ಚಿದ್ದ ಪಂತ್, ಇದೇ ಮೈದಾನದಲ್ಲಿ ಕೆಕೆಆರ್ ಎದುರಿನ ಪಂದ್ಯದಲ್ಲಿ 25 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್ ಸಹಿತ 55 ರನ್ ಬಾರಿಸಿದರು. ಭರ್ಜರಿ ಬ್ಯಾಟಿಂಗ್ ನಡೆಸುತ್ತಿರುವ ರಿಷಭ್, ಆರೆಂಜ್ ಕ್ಯಾಪ್ ರೇಸ್ಗೆ ಇಳಿದಿದ್ದಾರೆ. ಸದ್ಯ ಪಂದ್ಯ ನಾಲ್ಕು ಪಂದ್ಯಗಳಿಂದ 152 ರನ್ ಕಲೆ ಹಾಕಿದ್ದಾರೆ.
ಒಂದೇ ಓವರ್ನಲ್ಲಿ 28 ರನ್ ಚಚ್ಚಿದ ಡೆಲ್ಲಿ ಕ್ಯಾಪ್ಟನ್
ಕೋಲ್ಕತ್ತಾ ವಿರುದ್ಧದ ಓವರ್ವೊಂದರಲ್ಲಿ ರಿಷಭ್ ಪಂತ್ ಬರೋಬ್ಬರಿ 28 ರನ್ ಬಾರಿಸಿದರು. ಮಧ್ಯಮ ಓವರ್ಗಳಲ್ಲಿ ಬಿರುಸಿನ ಬ್ಯಾಟಿಂಗ್ಗೆ ಕೈ ಹಾಕಿದ ರಿಷಭ್, ವೆಂಕಟೇಶ್ ಅಯ್ಯರ್ ಎಸೆದ 12ನೇ ಓವರ್ನಲ್ಲಿ ಎರಡು ಸಿಕ್ಸರ್, 4 ಬೌಂಡರಿ ಸಿಡಿಸಿದರು. ಮೊದಲ ಎಸೆತವನ್ನು ಬೌಂಡರಿಗೆ ಕಳುಹಿಸಿದರೆ, 2ನೇ ಎಸೆತದಲ್ಲಿ ಸಿಕ್ಸರ್ ಸಿಡಿಸಿದರು. 4, 6, 4, 4 ಕ್ರಮವಾಗಿ ಉಳಿದ ನಾಲ್ಕು ಎಸೆತಗಳಲ್ಲಿ ಈ ಸ್ಕೋರ್ ಮಾಡಿದರು. ಐದನೇ ಎಸೆತದಲ್ಲಿ ಬೌಂಡರಿ ಸಿಡಿಸಿ ತನ್ನ ಅರ್ಧಶತಕವನ್ನೂ ಪೂರ್ಣಗೊಳಿಸಿದರು. ಒಟ್ಟು 28 ರನ್ಗಳನ್ನು ಈ ಓವರ್ನಲ್ಲಿ ಕಲೆ ಹಾಕಿದರು.