WPL 2024: ಈ ಬಾರಿ ಆರ್‌ಸಿಬಿ ವನಿತೆಯರ ತಂಡ ಹೇಗಿದೆ; ತಂಡದ ಬಲಾಬಲ ಮತ್ತು ದೌರ್ಬಲ್ಯಗಳೇನು? ಹೀಗಿದೆ ವಿಶ್ಲೇಷಣೆ-royal challengers bangalore women team analysis for wpl 2024 rcb squad strengths weakness and team analysis jra ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  Wpl 2024: ಈ ಬಾರಿ ಆರ್‌ಸಿಬಿ ವನಿತೆಯರ ತಂಡ ಹೇಗಿದೆ; ತಂಡದ ಬಲಾಬಲ ಮತ್ತು ದೌರ್ಬಲ್ಯಗಳೇನು? ಹೀಗಿದೆ ವಿಶ್ಲೇಷಣೆ

WPL 2024: ಈ ಬಾರಿ ಆರ್‌ಸಿಬಿ ವನಿತೆಯರ ತಂಡ ಹೇಗಿದೆ; ತಂಡದ ಬಲಾಬಲ ಮತ್ತು ದೌರ್ಬಲ್ಯಗಳೇನು? ಹೀಗಿದೆ ವಿಶ್ಲೇಷಣೆ

Royal Challengers Bangalore: ರಾಯಲ್ ಚಾಲೆಂಜರ್ಸ್ ಬೆಂಗಳೂರು ವನಿತೆಯರ ತಂಡವು 2024ರ ಆವೃತ್ತಿಯ ಡಬ್ಲ್ಯೂಪಿಎಲ್‌ಗೆ ಭರ್ಜರಿ ಸಿದ್ಧತೆ ನಡೆಸಿದೆ. ಫೆಬ್ರವರಿ 24ರಿಂದ ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ನಲ್ಲಿ ಅಭಿಯಾನ ಆರಂಭಿಸಲಿರುವ ಆರ್‌ಸಿಬಿ ಬಳಗವು, ಟ್ರೋಫಿ ಗೆಲುವಿನ ಕನಸಿನಲ್ಲಿದೆ. ತಂಡದ ಬಲಾಬಲ ಹೀಗಿದೆ.

ಈ ಬಾರಿ ಆರ್‌ಸಿಬಿ ವನಿತೆಯರ ತಂಡ ಹೇಗಿದೆ
ಈ ಬಾರಿ ಆರ್‌ಸಿಬಿ ವನಿತೆಯರ ತಂಡ ಹೇಗಿದೆ

ವಿಮೆನ್ಸ್ ಪ್ರೀಮಿಯರ್ ಲೀಗ್‌(WPL)ನ ಎರಡನೇ ಆವೃತ್ತಿಯು ಫೆಬ್ರವರಿ 23ರ ಶುಕ್ರವಾರ ಆರಂಭವಾಗುತ್ತಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವನಿತೆಯರ ತಂಡವು ಶನಿವಾರದಿಂದ ಅಭಿಯಾನ ಆರಂಭಿಸಲಿದೆ. ಕಳೆದ ಆವೃತ್ತಿಯಲ್ಲಿ ಆಡಿದ ಎಂಟು ಪಂದ್ಯಗಳಲ್ಲಿ ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ ಗೆದ್ದಿದ್ದ ಸ್ಮೃತಿ ಮಂಧನಾ ಪಡೆ, ಈ ಬಾರಿ ನಾಕೌಟ್‌ ಹಂತಕ್ಕೆ ಲಗ್ಗೆ ಹಾಕುವ ಗುರಿ ಇಟ್ಟುಕೊಂಡಿದೆ.

ಈ ಬಾರಿಯ ಹರಾಜಿನ ಬಳಿಕ ಮತ್ತಷ್ಟು ಬಲಿಷ್ಠವಾಗಿರುವ ಚಾಲೆಂಜರ್ಸ್‌ ಬಳಗವು, ತವರು ನೆಲ ಚಿನ್ನಸ್ವಾಮಿ ಮೈದಾನದಲ್ಲಿ ಅಬ್ಬರಿಸುವ ಪಣ ತೊಟ್ಟಿದೆ. ತಂಡದಲ್ಲಿ ಘಟಾನುಘಟಿ ಸ್ಫೋಟಕ ಆಟಗಾರರ ದಂಡೇ ಇದ್ದು, ಟ್ರೋಪಿ ಗೆಲ್ಲುವ ಉತ್ಸಾಹದಲ್ಲಿದೆ.

ಚೊಚ್ಚಲ ಋತುವಿನಲ್ಲಿ ಸ್ಮೃತಿ ಮಂಧಾನ, ರೇಣುಕಾ ಠಾಕೂರ್‌ರಂಥ ಭಾರತೀಯ ತಾರೆಗಳು ಟೂರ್ನಿಯಲ್ಲಿ ವಿಫಲರಾಗಿದ್ದರು. ಆದರೆ, ಎಲ್ಲಿಸ್ ಪೆರ್ರಿ, ಸೋಫಿ ಡಿವೈನ್ ಅಬ್ಬರಿಸಿದ್ದರು. ಈ ಬಾರಿ ಹೀದರ್‌ ನೈಟ್‌ ತಂಡದಿಂದ ಹೊರಬಿದ್ದಿದ್ದಾರೆ. ಆದರೆ, ಹೊಸ ಆಟಗಾರರೊಂದಿಗೆ ತಂಡ ಮತ್ತಷ್ಟು ಬಲಿಷ್ಠವಾಗಿದೆ.

ಇದನ್ನೂ ಓದಿ | ಟೂರ್ನಿ ಆರಂಭಕ್ಕೂ ಮುನ್ನವೇ ಆರ್‌ಸಿಬಿಗೆ ಆಘಾತ; ಡಬ್ಲ್ಯೂಪಿಎಲ್ 2024ರಿಂದ ಹೊರಬಿದ್ದ ಕನಿಕಾ ಅಹುಜಾ

ಅನುಭವಿ ವೇಗಿ ಮೇಗನ್ ಶುಟ್ ಅವರನ್ನು ಕೈಬಿಟ್ಟ ತಂಡವು, ಆರ್‌ಸಿಬಿ ಅಭಿಮಾನಿ ಹಾಗೂ ಬಲಿಷ್ಠ ಆಲ್‌ರೌಂಡರ್ ಕೇಟ್ ಕ್ರಾಸ್‌ ಅವರನ್ನು 30 ಲಕ್ಷ ರೂಪಾಯಿಗೆ ಖರೀದಿಸಿದೆ. ತಂಡದಲ್ಲಿ ಆಲ್‌ರೌಂಡರ್‌ಗಳ ದಂಡೇ ಇದ್ದು, ಸೋಫಿ ಡಿವೈನ್ ಮತ್ ಎಲಿಸ್ತು ಪೆರ್ರಿ ಸೇರಿದಂತೆ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಕೂಡಾ ಪೂರ್ಣ ಪ್ರಮಾಣದಲ್ಲಿ ಬೌಲಿಂಗ್‌ ಮಾಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ.

ತಂಡದ ಸಾಮರ್ಥ್ಯ

ಅನುಭವಿ ಹಾಗೂ ಸ್ಫೋಟಕ ಆಟಗಾರರು ತಂಡದಲ್ಲಿದ್ದಾರೆ. ಹೆಚ್ಚು ಆಲ್‌ರೌಂಡರ್‌ಗಳೊಂದಿಗೆ ವೈವಿಧ್ಯಮಯ ಬೌಲಿಂಗ್ ದಾಳಿಯ ಆಯ್ಕೆ ತಂಡದಲ್ಲಿದೆ. ಉತ್ತಮ ಸ್ಟ್ರೈಕ್ ರೇಟ್‌ನೊಂದಿಗೆ ಬ್ಯಾಟಿಂಗ್‌ ಮಾಡಬಲ್ಲ ಸಾಮರ್ಥ್ಯವಿರುವ ಆಟಗಾರ್ತಿಯರು.

ದೌರ್ಬಲ್ಯ

ವಿದೇಶಿ ಆಟಗಾರ್ತಿಯರ ಮೇಲೆ ಅತಿಯಾದ ಅವಲಂಬನೆ. ಪ್ರಮುಖ ಭಾರತೀಯ ಆಟಗಾರ್ತಿಯರೇ ವಿಫಲರಾಗುವ ಭೀತಿ. ನಾಯಕಿ ಸ್ಮೃತಿ ಮಂಧಾನ ಆರಂಭಿಕರಾಗಿ ಕಳೆದ ವರ್ಷ ಫಾರ್ಮ್ ಕಳೆದುಕೊಂಡಿದ್ದರು. ಇದು ತಂಡಕ್ಕೆ ದೊಡ್ಡ ಭೀತಿಯಾಗಿದೆ.

ಇದನ್ನೂ ಓದಿ | ಡಬ್ಲ್ಯುಪಿಎಲ್​ನಲ್ಲಿ ಕಣಕ್ಕಿಳಿಯುವ 5 ತಂಡಗಳು ಹೇಗಿವೆ, ನಾಯಕಿಯರು ಯಾರು; ಈ ಸಲ ಪುಟಿದೇಳುತ್ತಾ ಆರ್​ಸಿಬಿ?

ಆರ್‌ಸಿಬಿಯ ಬ್ಯಾಟಿಂಗ್ ಲೈನಪ್‌ ಭಾರಿ ಬಲಿಷ್ಠವಾಗಿದೆ. ವಿಕೆಟ್‌ ಕೀಪರ್ ಹಾಗೂ ಬ್ಯಾಟರ್ ರಿಚಾ ಕೆಳ ಕ್ರಮಾಂಕದಲ್ಲಿ ಅಬ್ಬರಿಸುವ ಸಾಮರ್ಥ್ಯ ಹೊಂದಿದ್ದಾರೆ. ಇತ್ತೀಚೆಗೆ ಭಾರತ ಟೆಸ್ಟ್‌ ತಂಡಕ್ಕೆ ಪದಾರ್ಪಣೆ ಮಾಡಿದ ಶುಭಾ ಸತೀಶ್, ಹೊಸ ಹೊಡೆತಗಳೊಂದಿಗೆ ಅಗ್ರ ಕ್ರಮಾಂಕದಲ್ಲಿ ತಂಡದ ಪ್ರಮುಖ ಅಸ್ತ್ರವಾಗಲಿದ್ದಾರೆ.

ಚೊಚ್ಚಲ ಆವೃತ್ತಿಯ ಟೂರ್ನಿಯಲ್ಲಿ ತಂಡದ ಪರ ಸೋಫಿ ಡಿವೈನ್ ಅಬ್ಬರಿಸಿದ್ದರು. 172.22ರ ಅಪ್ರತಿಮ ಸ್ಟ್ರೈಕ್ ರೇಟ್‌ನಲ್ಲಿ 266 ರನ್‌ ಸಿಡಿಸಿದ್ದರು. ಒಂದು ಪಂದ್ಯದಲ್ಲಿ 99 ರನ್‌ಗಳಿಗೆ ಔಟಾಗಿ ಒಂದು ರನ್‌ ಅಂತರದಿಂದ ಶತಕ ವಂಚಿತರಾಗಿದ್ದರು.

ತಂಡದ ಆಡುವ ಬಳಗ ಹೇಗಿರಲಿದೆ?

ಕಳೆದ ಬಾರಿ ಆರಂಭಿಕರಾಗಿ ಅಬ್ಬರಿಸಿದ್ದ ಸೋಫಿ ಡಿವೈನ್ ಮತ್ತು ನಾಯಕಿ ಸ್ಮೃತಿ ಮಂಧಾನ ಆಡುವುದು ಖಚಿತವಾಗಿದೆ. ಆದರೆ ಮೂರನೇ ಕ್ರಮಾಂಕದಲ್ಲಿ ಎಲಿಸ್​ ಪೆರ್ರಿ ಆಡಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ದಿಶಾ ಕಸತ್, ರಿಚಾ ಘೋಷ್, ಕನಿಕಾ ಅಹುಜಾ ಬ್ಯಾಟಿಂಗ್ ನಡೆಸಲಿದ್ದಾರೆ. ಕನ್ನಡತಿ ಶ್ರೇಯಾಂಕಾ ಪಾಟೀಲ್, ಜಾರ್ಜಿಯಾ ವೇರ್‌ಹ್ಯಾಮ್, ಆಶಾ ಶೋಭನಾ, ಕೇಟ್ ಕ್ರಾಸ್ ಅವರು ಆಲ್​ರೌಂಡರ್​​ಗಳಾಗಿ ಕಣಕ್ಕಿಳಿಯಲಿದ್ದಾರೆ.

ಇದನ್ನೂ ಓದಿ | ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಣಕ್ಕಿಳಿಸುವ ಪ್ಲೇಯಿಂಗ್​ 11 ಹೇಗಿರಲಿದೆ; ಆರ್​ಸಿಬಿ ವೇಳಾಪಟ್ಟಿ, ತಂಡ ಇಲ್ಲಿದೆ ನೋಡಿ

ವೇಗದ ಬೌಲಿಂಗ್ ಕೋಟಾದಲ್ಲಿ ರೇಣುಕಾ ಸಿಂಗ್ ಆಡುವುದು ಖಚಿತ. ಅತ್ತ ಪೆರ್ರಿ, ಸೋಫಿ ಡಿವೈನ್ ಕೂಡಾ ಆಲ್​ರೌಂಡರ್​ಗಳೇ. ಅಲ್ಲದೆ, ವಿದೇಶಿ ಆಟಗಾರರ ಪೈಕಿ ಇಬ್ಬರ ಜೊತೆಗೆ ಕೇಟ್ ಕ್ರಾಸ್ ಮತ್ತು ಜಾರ್ಜಿಯಾ ವೇರ್‌ಹ್ಯಾಮ್ ಕಣಕ್ಕಿಳಿಯಲಿದ್ದಾರೆ. ಇವರು ಕೂಡಾ ಆಲ್​ರೌಂಡರ್​​ಗಳೇ. ಉದಯೋನ್ಮುಖ ಆಟಗಾರ್ತಿ ಶುಭಾ ಸತೀಶ್ ಮೂರನೇ ಕ್ರಮಾಂಕದಲ್ಲಿ ಆಡುವ ಅವಕಾಶ ಪಡೆದರೂ ಅಚ್ಚರಿ ಇಲ್ಲ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ

ಆಶಾ ಶೋಭನಾ, ದಿಶಾ ಕಸತ್, ಎಲ್ಲಿಸ್ ಪೆರ್ರಿ, ನಡಿನ್ ಡಿ ಕ್ಲರ್ಕ್, ಇಂದ್ರಾಣಿ ರಾಯ್, ಕನಿಕಾ ಅಹುಜಾ, ರೇಣುಕಾ ಸಿಂಗ್, ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಜಾರ್ಜಿಯಾ ವೇರ್‌ಹ್ಯಾಮ್, ಕೇಟ್ ಕ್ರಾಸ್, ಏಕ್ತಾ ಬಿಷ್ತ್, ಶುಭಾ ಸತೀಶ್, ಸಬ್ಬಿನೇನಿ ಮೇಘನಾ, ಸೋಫಿ ಮೊಲಿನೆಕ್ಸ್, ಸಿಮ್ರಾನ್ ಬಹದ್ದೂರ್.

(This copy first appeared in Hindustan Times Kannada website. To read more like this please logon to kannada.hindustantimes.com)

mysore-dasara_Entry_Point