ಕನ್ನಡ ಸುದ್ದಿ  /  ಕ್ರಿಕೆಟ್  /  ವಿವಿಎಸ್ ಲಕ್ಷ್ಮಣ್ ನೇತೃತ್ವದಲ್ಲಿ ಜಿಂಬಾಬ್ವೆಗೆ ಹಾರಿದ ಟೀಮ್ ಇಂಡಿಯಾ; ಅಭಿಷೇಕ್‌, ಪರಾಗ್ ಮುಖದಲ್ಲಿ ಖುಷಿಯ ಅಲೆ

ವಿವಿಎಸ್ ಲಕ್ಷ್ಮಣ್ ನೇತೃತ್ವದಲ್ಲಿ ಜಿಂಬಾಬ್ವೆಗೆ ಹಾರಿದ ಟೀಮ್ ಇಂಡಿಯಾ; ಅಭಿಷೇಕ್‌, ಪರಾಗ್ ಮುಖದಲ್ಲಿ ಖುಷಿಯ ಅಲೆ

ಅಭಿಷೇಕ್ ಶರ್ಮಾ, ರಿಯಾನ್ ಪರಾಗ್, ಮುಖೇಶ್ ಕುಮಾರ್, ಋತುರಾಜ್ ಗಾಯಕ್ವಾಡ್, ಆವೇಶ್ ಖಾನ್ ಸೇರಿದಂತೆ ಯುವ ಆಟಗಾರರು ಜಿಂಬಾಬ್ವೆಗೆ ತೆರಳಿದ್ದಾರೆ. ಟಿ20 ಸರಣಿಗೆ ಶುಭ್ಮನ್‌ ಗಿಲ್‌ ನೇತೃತ್ವದಲ್ಲಿ ಭಾರತ ತಂಡ ಆಡಲಿದೆ. ಯುವ ಆಟಗಾರರಿಗೆ ಮೊದಲ ಅವಕಾಶ ಸಿಗಲಿದೆ.

ವಿವಿಎಸ್ ಲಕ್ಷ್ಮಣ್ ನೇತೃತ್ವದಲ್ಲಿ ಜಿಂಬಾಬ್ವೆಗೆ ಹಾರಿದ ಟೀಮ್ ಇಂಡಿಯಾ
ವಿವಿಎಸ್ ಲಕ್ಷ್ಮಣ್ ನೇತೃತ್ವದಲ್ಲಿ ಜಿಂಬಾಬ್ವೆಗೆ ಹಾರಿದ ಟೀಮ್ ಇಂಡಿಯಾ

ಟಿ20 ವಿಶ್ವಕಪ್ ಮುಗಿದಿದೆ. ಇದೀಗ ಭಾರತ ತಂಡದ ಮುಂದಿನ ಸರಣಿ ಜಿಂಬಾಬ್ವೆಯಲ್ಲಿ ನಡೆಯಲಿದೆ. ಜುಲೈ 6ರಿಂದ ಆರಂಭವಾಗುವ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಆಡಲು ಭಾರತ ತಂಡವು ಸೋಮವಾರ ತಡರಾತ್ರಿ ಜಿಂಬಾಬ್ವೆಗೆ ತೆರಳಿದೆ. ಈವರೆಗೆ ಟೀಮ್‌ ಇಂಡಿಯಾ ಕೋಚ್‌ ಆಗಿದ್ದ ರಾಹುಲ್‌ ದ್ರಾವಿಡ್‌ ಅಧಿಕಾರವಧಿ ಅಂತ್ಯವಾಗಿದ್ದು, ಮಧ್ಯಂತರ ಕೋಚ್ ವಿವಿಎಸ್ ಲಕ್ಷ್ಮಣ್ ನೇತೃತ್ವದಲ್ಲಿ ಯುವ ಭಾರತೀಯ ಕ್ರಿಕೆಟ್ ತಂಡ ಪ್ರವಾಸ ಮಾಡಿದೆ. ಸದ್ಯ ಟಿ20 ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ ಟ್ರೋಫಿ ಗೆದ್ದ ತಂಡದ ಎಲ್ಲಾ ಅನುಭವಿ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ತಂಡವನ್ನು ಶುಭ್ಮನ್ ಗಿಲ್ ಮುನ್ನಡೆಸುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಜೂನ್ 29ರ ಶನಿವಾರ ನಡೆದ ವಿಶ್ವಕಪ್‌ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿತು. ಆ ಮೂಲಕ ಬರೋಬ್ಬರಿ 17 ವರ್ಷಗಳ ನಂತರ ಟಿ20 ವಿಶ್ವಕಪ್ ಗೆದ್ದಿತು.

ಚಂಡಮಾರುತದಿಂದಾಗಿ ಕಳೆದ ಎರಡು ದಿನಗಳಿಂದ ಬಾರ್ಬಡೋಸ್‌ನಲ್ಲಿ ಸಿಲುಕಿರುವ ವಿಶ್ವಕಪ್ ವಿಜೇತ ಆಟಗಾರರು ತವರಿಗೆ ಮರಳುವುದನ್ನು ಇಡೀ ಭಾರತವೇ ಕಾಯುತ್ತಿದೆ. ಇದರ ನಡುವೆಯೇ ಮತ್ತೊಂದು ತಂಡ ಹೊಸ ಪ್ರಯಾಣ ಆರಂಭಿಸಿದೆ. ವೆಸ್ಟ್‌ ಇಂಡೀಸ್‌ನಿಂದ ಬುಧವಾರ ರಾತ್ರಿ ಭಾರತ ತಂಡವು ನವದೆಹಲಿಗೆ ಮರಳುವ ಸಾಧ್ಯತೆಯಿದೆ.

ಯುವ ಆಟಗಾರರಿಗೆ ಮೊದಲ ಅವಕಾಶ

ಇತ್ತ ಯುವ ಆಟಗಾರರಾದ ಅಭಿಷೇಕ್ ಶರ್ಮಾ, ಮುಖೇಶ್ ಕುಮಾರ್, ಋತುರಾಜ್ ಗಾಯಕ್ವಾಡ್, ಆವೇಶ್ ಖಾನ್ ಮತ್ತು ರಿಯಾನ್ ಪರಾಗ್ ಸೇರಿದಂತೆ ಈತರ ಆಟಗಾರರು ಜಿಂಬಾಬ್ವೆಗೆ ತೆರಳಿದ್ದಾರೆ. ಆಟಗಾರರ ಫೋಟೋಗಳನ್ನು ಬಿಸಿಸಿಐ ಹಂಚಿಕೊಂಡಿದೆ. ಭಾರತ ಯುವ ತಂಡಕ್ಕೆ ಎನ್‌ಸಿಎ ಮುಖ್ಯಸ್ಥ ಲಕ್ಷ್ಮಣ್ ತಂಡಕ್ಕೆ ತರಬೇತುದಾರರಾಗಿದ್ದಾರೆ. ಭಾರತದ ವಿಶ್ವಕಪ್ ವಿಜೇತ 15 ಸದಸ್ಯರಲ್ಲಿ ಕೇವಲ ಮೂವರು ಸದಸ್ಯರು ಮಾತ್ರ ಜಿಂಬಾಬ್ವೆ ಪ್ರಯಾಣಿಸಲಿದ್ದಾರೆ.

ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್ ಮತ್ತು ಶಿವಂ ದುಬೆ ತಡವಾಗಿ ತಂಡವನ್ನು ಸೇರುವ ಸಾಧ್ಯತೆಯಿದೆ. ಭಾರತದ ವಿಶ್ವಕಪ್ ತಂಡದ ಮೀಸಲು ಆಟಗಾರರ ಭಾಗವಾಗಿ ಕೆರಿಬಿಯನ್ ದ್ವೀಪಗಳಲ್ಲಿದ್ದ ಖಲೀಲ್ ಅಹ್ಮದ್ ಮತ್ತು ರಿಂಕು ಸಿಂಗ್ ಕೂಡಾ ಸ್ಯಾಮ್ಸನ್, ಜೈಸ್ವಾಲ್ ಮತ್ತು ದುಬೆ ಅವರೊಂದಿಗೆ ಜಿಂಬಾಬ್ವೆಗೆ ಪ್ರಯಾಣಿಸಲಿದ್ದಾರೆ. ಶಿವಂ ದುಬೆ ಆರಂಭದಲ್ಲಿ ತಂಡದ ಭಾಗವಾಗಿರಲಿಲ್ಲ. ಆದರೆ ಗಾಯಾಳು ನಿತೀಶ್ ಕುಮಾರ್ ರೆಡ್ಡಿ ಬದಲಿಗೆ ತಂಡಕ್ಕೆ ಸೇರಿಕೊಂಡಿದ್ದಾರೆ.

ಅಭಿಷೇಕ್ ಶರ್ಮಾ, ರಿಯಾನ್ ಪರಾಗ್ ಮತ್ತು ತುಷಾರ್ ದೇಶಪಾಂಡೆ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡುವ ಅವಕಾಶ ಪಡೆದಿದ್ದಾರೆ. ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಬಳಿಕ ಅವರು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಈಗಾಗಲೇ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಟಿ20 ಸ್ವರೂಪಕ್ಕೆ ವಿದಾಯ ಹೇಳಿದ್ದಾರೆ. ಹೀಗಾಗಿ ಅನುಭವಿ ಆಟಗಾರರ ಅನುಪಸ್ಥಿತಿಯಲ್ಲಿ ಜಿಂಬಾಬ್ವೆ ಸರಣಿ ಹೊಸ ಅಧ್ಯಾಯವನ್ನು ಬರೆಯಲಿದೆ. ವಿಶ್ವಕಪ್ ಗೆಲುವಿನ ನಂತರ ಮೂವರು ಚುಟುಕು ಸ್ವರೂಪದಿಂದ ನಿವೃತ್ತಿ ಘೋಷಿಸಿದರು.

ಐಪಿಎಲ್‌ನಲ್ಲಿ ಗುಜರಾತ್‌ ತಂಡದ ನಾಯಕತ್ವ ವಹಿಸಿದ್ದ ಶುಭ್ಮನ್ ಗಿಲ್, ಇದೇ ಮೊದಲ ಬಾರಿಗೆ ಭಾರತ ತಂಡದ ನಾಯಕತ್ವಕ್ಕೆ ಸಜ್ಜಾಗಿದ್ದಾರೆ. ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದ ಆಟಗಾರ ಇದೀಗ ನಾಯಕತ್ವದ ಜವಾಬ್ದಾರಿ ಪಡೆದಿದ್ದಾರೆ.

ಜಿಂಬಾಬ್ವೆ ಸರಣಿಗೆ ಭಾರತ ತಂಡ

ಶುಬ್ಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ಶಿವಂ ದುಬೆ, ರಿಯಾನ್ ಪರಾಗ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಆವೇಶ್ ಖಾನ್, ಖಲೀಲ್ ಅಹ್ಮದ್, ಮುಖೇಶ್ ಕುಮಾರ್, ತುಷಾರ್ ದೇಶಪಾಂಡೆ.