ಗ್ಯಾರಿ ಕರ್ಸ್ಟನ್ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಗಂಭೀರ ಆರೋಪ; ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟಿದ್ದ ಕೋಚ್ ಈತ!
Pakistan Cricket Board: ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ತಮ್ಮ ಮುಖ್ಯ ಕೋಚ್ ಗ್ಯಾರಿ ಕರ್ಸ್ಟನ್ ಒಪ್ಪಂದವನ್ನು ಉಲ್ಲಂಘಿಸುವ ಮೂಲಕ ತಮ್ಮ ಒಪ್ಪಂದವನ್ನು ಮುರಿದಿದರು ಎಂದು ಹೇಳಿದ್ದಾರೆ. ಕರ್ಸ್ಟನ್ ಇತ್ತೀಚೆಗೆ ವೈಟ್-ಬಾಲ್ ಮುಖ್ಯ ತರಬೇತುದಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ದಕ್ಷಿಣ ಆಫ್ರಿಕಾದ ಗ್ಯಾರಿ ಕರ್ಸ್ಟನ್ ಅವರು ಮಂಡಳಿ ಜೊತೆಗಿನ ತಮ್ಮ ಒಪ್ಪಂದದಲ್ಲಿ ಕೆಲವು ಉಲ್ಲಂಘನೆ ಮಾಡಿದ ಕಾರಣ ಪಾಕಿಸ್ತಾನದ ವೈಟ್-ಬಾಲ್ ಮುಖ್ಯಕೋಚ್ ಆಗಿ ಅಧಿಕಾರಾವಧಿ ಕೊನೆಗೊಳಿಸಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (Pakistan Cricket Board) ಅಧ್ಯಕ್ಷ ಮೊಹ್ಸಿನ್ ನಖ್ವಿ (Mohsin Naqvi) ಹೇಳಿದ್ದಾರೆ. ಆದರೆ, ಕೋಚ್‌ಗಳ ಆಯ್ಕೆ ವಿಷಯದಲ್ಲಿ ತಮ್ಮ ಅಧಿಕಾರ ಕಸಿದ ಕಾರಣ 2011ರ ವಿಶ್ವಕಪ್ ಗೆಲುವಿಗೆ ಭಾರತಕ್ಕೆ ಮಾರ್ಗದರ್ಶನ ನೀಡಿದ ಕರ್ಸ್ಟನ್, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಜೊತೆ ಭಿನ್ನಾಭಿಪ್ರಾಯ ಉಂಟಾಗಿ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.
ಆದರೆ, ಈ ಕುರಿತು ಈವರೆಗೂ ಕರ್ಸ್ಟನ್ ಸ್ಪಷ್ಟನೆ ನೀಡಿಲ್ಲ. ಮಂಡಳಿ ನಿಯಮಗಳನ್ನು ಉಲ್ಲಂಘಿಸಿದ ಕಾರಣ ಕರ್ಸ್ಟನ್ ಪಿಸಿಬಿ ಒಪ್ಪಂದ ಮುರಿದರು ಎಂದು ನಖ್ವಿ ಅನೌಪಚಾರಿಕ ಚರ್ಚೆಯ ಸಂದರ್ಭದಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಕರ್ಸ್ಟನ್ ಅವರ ಹಠಾತ್ ರಾಜೀನಾಮೆಗೆ ಪಿಸಿಬಿ ಸ್ಪಷ್ಟ ಕಾರಣವನ್ನು ನೀಡಿಲ್ಲ. ಭಾನುವಾರ (ಅ.27) ಆಸ್ಟ್ರೇಲಿಯಾ ಮತ್ತು ಜಿಂಬಾಬ್ವೆ ಪ್ರವಾಸಗಳಿಗೆ ತಂಡವನ್ನು ಮತ್ತು ವೈಟ್ ಬಾಲ್ ಮಾದರಿ ಕ್ರಿಕೆಟ್ಗೆ ನೂತನ ನಾಯಕ ಮೊಹಮ್ಮದ್ ರಿಜ್ವಾನ್ ಅವರನ್ನು ಪಿಸಿಬಿ ಘೋಷಿಸಿದ ವೇಳೆ ಕರ್ಸ್ಟನ್ ಭಾಗಿಯಾಗಿರಲಿಲ್ಲ ಎಂದು ಮೂಲಗಳು ಖಚಿತಪಡಿಸಿವೆ.
ವಿದೇಶಿ ಕೋಚಿಂಗ್ ನೇಮಕಕ್ಕೆ ಒತ್ತಾಯಿಸಿದ್ದ ಗ್ಯಾರಿ ಕರ್ಸ್ಟನ್
ಕರ್ಸ್ಟನ್ ತನ್ನ ಒಪ್ಪಂದದ ಕೆಲವು ಷರತ್ತುಗಳನ್ನು ಉಲ್ಲಂಘಿಸಿದ್ದಾರೆ ಎಂದು ಪಿಸಿಬಿ ಹೇಳುತ್ತಿದೆ. ಆದರೆ, ಅಲ್ಲಿ ನಡೆದಿರುವ ಸಂಗತಿಯೇ ಬೇರೆ ಎಂದು ಮೂಲಗಳು ಹೇಳುತ್ತಿವೆ. ಕರ್ಸ್ಟನ್ ಅವರು ಸಂಪೂರ್ಣ ವಿದೇಶಿ ಕೋಚಿಂಗ್ ಸಿಬ್ಬಂದಿಯನ್ನು ನಿಯೋಜಿಸಲು ಒತ್ತಾಯಿಸಿದ್ದರು. ಆದರೆ ಪಿಸಿಬಿ ಅದಕ್ಕೆ ಆದ್ಯತೆ ನೀಡಲಿಲ್ಲ ಎಂದು ವರದಿಯಾಗಿದೆ. ಇದೀಗ ತೆರವಾದ ಸ್ಥಾನಕ್ಕೆ ವೈಟ್ ಬಾಲ್ ತಂಡಕ್ಕೆ ಹೊಸ ಮುಖ್ಯ ಕೋಚ್ ಹುಡುಕುವ ಪ್ರಕ್ರಿಯೆಯನ್ನು ಪಿಸಿಬಿ ಪ್ರಾರಂಭಿಸಿದ್ದು, ಈಗಾಗಲೇ 4-5 ನೂತನ ಕೋಚ್‌ಗಳ ಚರ್ಚೆ ನಡೆಸಲಾಗಿದೆ ಎಂದು ಪಿಸಿಬಿ ತಿಳಿಸಿದೆ.
ಬಾಬರ್ ಪರ ಬ್ಯಾಟ್ ಬೀಸಿದ ಮೊಹ್ಸಿನ್ ನಖ್ವಿ
ಪ್ರಸ್ತುತ ಟೆಸ್ಟ್ ಕೋಚ್ ಆಗಿರುವ ಜೇಸನ್ ಗಿಲ್ಲಿಸ್ಪಿ ಆಸ್ಟ್ರೇಲಿಯಾದಲ್ಲಿ ವೈಟ್ ಬಾಲ್ ಸರಣಿಗೆ ಮಧ್ಯಂತರ ಆಧಾರದ ಮೇಲೆ ತಂಡದ ಜವಾಬ್ದಾರಿ ಹೊರಲು ಒಪ್ಪಿಕೊಂಡಿದ್ದಾರೆ. ಜಿಂಬಾಬ್ವೆ ಪ್ರವಾಸಕ್ಕೆ ನೂತನ ಕೋಚ್ ನೇಮಕವಾಗಲಿದೆ. ಕರ್ಸ್ಟನ್ ಅವರ ಬದಲಿಯಾಗಿ ಅಧಿಕಾರ ವಹಿಸಿಕೊಳ್ಳಲು ಹಿರಿಯ ಆಯ್ಕೆಗಾರ ಆಕಿಬ್ ಜಾವೇದ್ ಆಸಕ್ತಿ ತೋರಿದ್ದಾರೆ ಎಂದು ಪಿಸಿಬಿ ತಿಳಿಸಿದೆ. ಆದರೆ ಅಂತಿಮವಾಗಿ ಯಾರಿಗೆ ಅವಕಾಶ ಸಿಗುತ್ತದೆ ಎಂಬುದನ್ನು ಕಾದುನೋಡಬೇಕು. ಇದೇ ವೇಳೆ ಪಿಸಿಬಿ ಅಧ್ಯಕ್ಷ ನಖ್ವಿ ಅವರು, ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಬಾಬರ್ ಅಜಮ್ ಅವರನ್ನು ಕೈಬಿಟ್ಟಿದ್ದಕ್ಕೆ ಟೀಮ್ ಮ್ಯಾನೇಜ್ಮೆಂಟ್ ವಿರುದ್ಧ ಗರಂ ಆಗಿದ್ದಾರೆ.
ನಖ್ವಿ ಅವರು ಎಕ್ಸ್ ಖಾತೆಯಲ್ಲಿ ಬಾಬರ್ ಅಜಮ್ ಪರವಾಗಿ ಮಾಡಿದ್ದ ಪೋಸ್ಟ್‌ಗಾಗಿ ಪಿಸಿಬಿಯಿಂದ ಶೋಕಾಸ್ ನೋಟಿಸ್ ಪಡೆದಿರುವ ಫಖರ್ ಜಮಾನ್ ವಿಷಯದ ಬಗ್ಗೆಯೂ ಮಾತನಾಡಿದ ನಖ್ವಿ, ಇಂಗ್ಲೆಂಡ್ ವಿರುದ್ಧ ಕೊನೆಯ 2 ಟೆಸ್ಟ್‌ಗಳಿಗೆ ಬಾಬರ್ ಅಜಮ್‌ಗೆ ವಿಶ್ರಾಂತಿ ನೀಡುವ ಮಂಡಳಿಯ ನಿರ್ಧಾರ ಟೀಕಿಸಿದ್ದರು. ಪರಿಣಾಮವಾಗಿ, ಆಸ್ಟ್ರೇಲಿಯಾ ಮತ್ತು ಜಿಂಬಾಬ್ವೆ ಪ್ರವಾಸಕ್ಕೆ ಅವಕಾಶ ಪಡೆದಿಲ್ಲ. ಆಯ್ಕೆದಾರರ ನಿರ್ಧಾರವನ್ನು ನಾನು ಪ್ರಶ್ನಿಸುವುದಿಲ್ಲ. ನಾನು ಆಯ್ಕೆಗಾರರು ಮತ್ತು ಕೋಚ್‌ಗಳ ಕೆಲಸದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ನಖ್ವಿ ಹೇಳಿದ್ದಾರೆ.