ಕೆಕೆಆರ್ ವಿರುದ್ಧ ಟಾಸ್ ಗೆದ್ದ ಎಸ್ಆರ್ಹೆಚ್ ಫೀಲ್ಡಿಂಗ್; ದುಬಾರಿ ಆಟಗಾರರೇ ಈ ಪಂದ್ಯದ ಪ್ರಮುಖ ಆಕರ್ಷಣೆ
KKR vs SRH: ಐಪಿಎಲ್ನ ಮೂರನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
17ನೇ ಆವೃತ್ತಿಯ ಐಪಿಎಲ್ನ 3ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ತಂಡಗಳು ಮುಖಾಮುಖಿಯಾಗುತ್ತಿವೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಎಸ್ಆರ್ಹೆಚ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಬೆನ್ನು ನೋವಿನಿಂದಾಗಿ ಕಳೆದ ಐಪಿಎಲ್ನಿಂದ ಹೊರಬಿದ್ದಿದ್ದ ಶ್ರೇಯಸ್ ಅಯ್ಯರ್, ಈ ಬಾರಿ ಕೆಕೆಆರ್ ತಂಡಕ್ಕೆ ಮರಳಿದ್ದಾರೆ. 2023ರ ಏಕದಿನ ವಿಶ್ವಕಪ್ ಎತ್ತಿಹಿಡಿದ ಆಸ್ಟ್ರೇಲಿಯಾದ ಯಶಸ್ವಿ ನಾಯಕ ಪ್ಯಾಟ್ ಕಮಿನ್ಸ್, ಈ ಬಾರಿ ಎಸ್‌ಆರ್‌ಎಚ್ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಉಭಯ ತಂಡಗಳಲ್ಲೂ ದುಬಾರಿ ಆಟಗಾರರು
ಕೆಕೆಆರ್ ಮತ್ತು ಎಸ್ಆರ್ಹೆಚ್ ತಂಡದಲ್ಲಿ ಐಪಿಎಲ್ನ ದುಬಾರಿ ಆಟಗಾರರಿದ್ದಾರೆ. ಕೆಕೆಆರ್ ಪರ 24.75 ಕೋಟಿ ರೂಪಾಯಿ ಪಡೆದ ಮಿಚೆಲ್ ಸ್ಟಾರ್ಕ್ ತಂಡದ ಪ್ರಮುಖ ವೇಗಿಯಾಗಿದ್ದಾರೆ. ಹೈದರಾಬಾದ್ ಪರ ನಾಯಕ ಪ್ಯಾಟ್ ಕಮಿನ್ಸ್ ಅವರೇ ದುಬಾರಿ ಆಟಗಾರನಾಗಿದ್ದು, 20.50 ಕೋಟಿ ಪಡೆದಿದ್ದಾರೆ.
ಕಳೆದ ಆವೃತ್ತಿಯಲ್ಲಿ ಪ್ಲೇಆಫ್‌ಗೆ ಲಗ್ಗೆ ಹಾಕಲು ವಿಫಲವಾಗಿದ್ದ ಉಭಯ ತಂಡಗಳು, ಈ ಬಾರಿ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿವೆ. ಎರಡೂ ತಂಡಗಳು ಒಟ್ಟು 25 ಬಾರಿ ಮುಖಾಮುಖಿಯಾಗಿದ್ದು, ಕೆಕೆಆರ್ ಮೇಲುಗೈ ಸಾಧಿಸಿದೆ. 25 ಪಂದ್ಯಗಳ ಪೈಕಿ ಕೋಲ್ಕತ್ತಾ 16, ಹೈದರಾಬಾದ್ 9 ಗೆಲುವು ಸಾಧಿಸಿದೆ.
ಇದನ್ನೂ ಓದಿ | ಇನ್ನೂ ಕೆಲವು ವರ್ಷ ಕ್ರಿಕೆಟ್ ಆಡಬಲ್ಲ ಸಾಮರ್ಥ್ಯ ಅವರಲ್ಲಿದೆ; ವಿರಾಟ್ ಕೊಹ್ಲಿ ಕುರಿತು ಭವಿಷ್ಯ ನುಡಿದ ಕ್ರಿಸ್ ಗೇಲ್
ಈಡನ್ ಗಾರ್ಡನ್ಸ್ ಮೈದಾನದ ಪಿಚ್ ವರದಿ
ಏಕದಿನ ವಿಶ್ವಕಪ್ ಟೂರ್ನಿಯ ಪಂದ್ಯಗಳಿಗೂ ಆತಿಥ್ಯ ವಹಿಸಿದ್ದ ಕೋಲ್ಕತ್ತಾದ ಈಡನ್ ಗಾರ್ಡನ್ ಪಿಚ್, ತುಂಬಾ ಸ್ಲೋ ಇದೆ. ಸ್ಪಿನ್ನರ್‌ಗಳು ಮತ್ತು ನಿಧಾನಗತಿಯ ಬೌಲರ್‌ಗಳಿಗೆ ಹೆಚ್ಚು ನೆರವಾಗುವ ಈ ಪಿಚ್ನಲ್ಲಿ ಹುಲ್ಲಿನಿಂದ ವೇಗಿಗಳಿಗೂ ತುಸು ಸಹಾಯವಾಗಲಿದೆ. ದುಬಾರಿ ಆಟಗಾರನಾಗಿ ಹೊರಹೊಮ್ಮಿರುವ ಮಿಚೆಲ್ ಸ್ಟಾರ್ಕ್, ಆತಿಥೇಯ ತಂಡದ ಪರ ತವರಿನಲ್ಲಿ ಹೇಗೆ ಪ್ರದರ್ಶನ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಕೋಲ್ಕತ್ತಾ ಹವಾಮಾನ ವರದಿ
ಮಾರ್ಚ್ 23ರಂದು ಕೋಲ್ಕತ್ತಾದಲ್ಲಿ ಮಳೆಯ ಸಾಧ್ಯತೆ ಕಡಿಮೆ ಇದೆ. ವರುಣಾಗಮನದ ಸಂಭವ 5 ಪ್ರತಿಶತದಷ್ಟು ಮಾತ್ರ ಇದೆ. ಯಾವುದೇ ಅಡೆ ತಡೆ ಇಲ್ಲದೆ ಈ ಪಂದ್ಯ ನಡೆಯುವುದು ಖಚಿತ.
ನೇರಪ್ರಸಾರ ಮತ್ತು ಲೈವ್ ಸ್ಟ್ರೀಮಿಂಗ್ ವಿವರ
ಐಪಿಎಲ್ ಪಂದ್ಯಗಳನ್ನು ಸ್ಟಾರ್ ಸ್ಫೋರ್ಟ್ಸ್ ವಾಹಿನಿಯಲ್ಲಿ ನೇರಪ್ರಸಾರ ಮಾಡಲಾಗುತ್ತದೆ. ಇದೇ ವೇಳೆ ಜಿಯೋ ಸಿನಿಮಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಮೂಲಕ ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸಬಹುದು. ವಿವಿಧ ಭಾಷೆಗಳಲ್ಲಿ ಕಾಮೆಂಟರಿ ಕೂಡಾ ಲಭ್ಯವಿರಲಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್ ಇಲೆವೆನ್
ಫಿಲಿಪ್ ಸಾಲ್ಟ್ (ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ನಿತೀಶ್ ರಾಣಾ, ರಿಂಕು ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೈನ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.
ಸನ್‌ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ ಇಲೆವೆನ್
ಮಯಾಂಕ್ ಅಗರ್ವಾಲ್, ರಾಹುಲ್ ತ್ರಿಪಾಠಿ, ಏಡೆನ್ ಮಾರ್ಕ್ರಮ್, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಮಾರ್ಕೊ ಜಾನ್ಸೆನ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಂಡೆ, ಟಿ ನಟರಾಜನ್.
ಸನ್‌ರೈಸರ್ಸ್ ಹೈದರಾಬಾದ್ ಇಂಪ್ಯಾಕ್ಟ್ ಪ್ಲೇಯರ್ಸ್: ನಿತೀಶ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಉಮ್ರಾನ್ ಮಲಿಕ್, ಗ್ಲೆನ್ ಫಿಲಿಪ್ಸ್, ಅಭಿಷೇಕ್ ಶರ್ಮಾ.
ಕೋಲ್ಕತ್ತಾ ನೈಟ್ ರೈಡರ್ಸ್ ಇಂಪ್ಯಾಕ್ಟ್ ಪ್ಲೇಯರ್ಸ್: ಸುಯಶ್ ಶರ್ಮಾ, ಮನೀಶ್ ಪಾಂಡೆ, ವೈಭವ್ ಅರೋರಾ, ಆಂಗ್ಕ್ರಿಶ್ ರಘುವಂಶಿ, ರಹಮಾನುಲ್ಲಾ ಗುರ್ಬಾಜ್.