2003ರ ಬಳಿಕ ಟೀಮ್ ಇಂಡಿಯಾ-ಆಸ್ಟ್ರೇಲಿಯಾ ಫೈನಲ್ ಫೈಟ್; 20 ವರ್ಷಗಳ ಹಿಂದಿನ ಸೇಡು ತೀರಿಸಿಕೊಳ್ಳುವುದೇ ಭಾರತ?
ಕನ್ನಡ ಸುದ್ದಿ  /  ಕ್ರಿಕೆಟ್  /  2003ರ ಬಳಿಕ ಟೀಮ್ ಇಂಡಿಯಾ-ಆಸ್ಟ್ರೇಲಿಯಾ ಫೈನಲ್ ಫೈಟ್; 20 ವರ್ಷಗಳ ಹಿಂದಿನ ಸೇಡು ತೀರಿಸಿಕೊಳ್ಳುವುದೇ ಭಾರತ?

2003ರ ಬಳಿಕ ಟೀಮ್ ಇಂಡಿಯಾ-ಆಸ್ಟ್ರೇಲಿಯಾ ಫೈನಲ್ ಫೈಟ್; 20 ವರ್ಷಗಳ ಹಿಂದಿನ ಸೇಡು ತೀರಿಸಿಕೊಳ್ಳುವುದೇ ಭಾರತ?

India vs Australia CWC Final: ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್​ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗುತ್ತಿವೆ. 2003ರ ಏಕದಿನ ವಿಶ್ವಕಪ್ ಫೈನಲ್​ ಬಳಿಕ ಮತ್ತೊಮ್ಮೆ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ.

2003ರ ಬಳಿಕ ಟೀಮ್ ಇಂಡಿಯಾ-ಆಸ್ಟ್ರೇಲಿಯಾ ಫೈನಲ್ ಫೈಟ್.
2003ರ ಬಳಿಕ ಟೀಮ್ ಇಂಡಿಯಾ-ಆಸ್ಟ್ರೇಲಿಯಾ ಫೈನಲ್ ಫೈಟ್.

ಏಕದಿನ ವಿಶ್ವಕಪ್ ಟೂರ್ನಿಯ 2ನೇ ಸೆಮಿಫೈನಲ್​ನಲ್ಲಿ ಸೌತ್ ಆಫ್ರಿಕಾ ವಿರುದ್ಧ ಗೆದ್ದ ಆಸ್ಟ್ರೇಲಿಯಾ 8ನೇ ಬಾರಿಗೆ ಫೈನಲ್ ಪ್ರವೇಶಿಸಿದೆ. 1975, 1987, 1996, 1999, 2003, 2007, 2015 ಮತ್ತು 2023ರಲ್ಲಿ ಪ್ರಶಸ್ತಿ ಸುತ್ತಿಗೇರಿದೆ. ಈ ಹಿಂದೆ 7 ಬಾರಿ ಆಡಿದ್ದ ಫೈನಲ್​​ನಲ್ಲಿ ಐದು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಆಸ್ಟ್ರೇಲಿಯಾ, ಇದೀಗ 6ನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ನವೆಂಬರ್ 19ರಂದು ನಡೆಯುವ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಸೆಣಸಾಟ ನಡೆಸಲಿದೆ.

2003ರ ನಂತರ ಭಾರತ-ಆಸ್ಟ್ರೇಲಿಯಾ ಮುಖಾಮುಖಿ

ಏಕದಿನ ವಿಶ್ವಕಪ್​ ಫೈನಲ್​ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಎರಡನೇ ಬಾರಿಗೆ ಮುಖಾಮುಖಿಯಾಗುತ್ತಿವೆ. ಈ ಹಿಂದೆ 2003ರ ಅಂದರೆ 20 ವರ್ಷಗಳ ನಂತರ ವಿಶ್ವಕಪ್​​​ನಲ್ಲಿ ಮತ್ತೊಮ್ಮೆ ಎದುರಾಗುತ್ತಿವೆ. ಆದರೆ ಅಂದು ಸೌರವ್ ಗಂಗೂಲಿ ನೇತೃತ್ವದ ಭಾರತ ತಂಡವು ರನ್ನರ್​ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ರಿಕಿ ಪಾಂಟಿಂಗ್ ನಾಯಕತ್ವದಲ್ಲಿ ಆಸೀಸ್​ ವಿಶ್ವ ಕಿರೀಟಕ್ಕೆ ಮುತ್ತಿಕ್ಕಿತು.

125 ರನ್​​ಗಳ ಸೋಲನುಭವಿಸಿದ್ದ ಭಾರತ

ಸೌತ್​ ಆಫ್ರಿಕಾದ ಜೋಹಾನ್ಸ್​ಬರ್ಗ್​ನ ವಾಂಡರರ್ಸ್ ಮೈದಾನದಲ್ಲಿ ಭಾರತ-ಆಸ್ಟ್ರೇಲಿಯಾ ನಡುವಿನ ಪಂದ್ಯ ನಡೆದಿತ್ತು. ಮೊದಲು ಬ್ಯಾಟಿಂಗ್ ನಡೆಸಿದ ಆಸೀಸ್ ಬೃಹತ್ ಮೊತ್ತ ಕಲೆ ಹಾಕಿತ್ತು. ರಿಕಿ ಪಾಂಟಿಂಗ್ ಭರ್ಜರಿ 140 ರನ್ ಸಿಡಿಸಿ ಭಾರತೀಯ ಬೌಲರ್​ಗಳಿಗೆ ಮುಳುವಾಗಿದ್ದರು. 50 ಓವರ್​​ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ 359 ರನ್ ಕಲೆ ಹಾಕಿತ್ತು. ಆದರೆ ಈ ಗುರಿ ಬೆನ್ನಟ್ಟಿದ್ದ ಭಾರತ 234 ರನ್​ಗಳಿಗೆ ಆಲೌಟ್​ ಆಗಿತ್ತು. 125 ರನ್​ಗಳ ಜಯ ಸಾಧಿಸಿ ಅಂದು 3ನೇ ಬಾರಿಗೆ ಪ್ರಶಸ್ತಿ ಎತ್ತಿ ಹಿಡಿದಿತ್ತು.

ಅಂದು ಆಸೀಸ್, ಇಂದು ಭಾರತ?

2003ರಲ್ಲಿ ಆಸ್ಟ್ರೇಲಿಯಾ ಒಂದೂ ಪಂದ್ಯವನ್ನು ಸೋಲದೆ, ಕಪ್ ಗೆದ್ದಿತ್ತು. ಲೀಗ್​​ನಿಂದ ಫೈನಲ್​​ವರೆಗೂ ಆಡಿದ್ದ 11 ಪಂದ್ಯಗಳಲ್ಲೂ ಜಯಿಸಿ ಚಾಂಪಿಯನ್ ಆಗಿತ್ತು. ಮತ್ತೊಂದು ಸಂಗತಿ ಅಂದು ಲೀಗ್ ಹಂತದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋತಿತ್ತು. ಪ್ರಸ್ತುತ ವಿಶ್ವಕಪ್​ನ ಲೀಗ್​​​ನಲ್ಲಿ ಭಾರತ ಸೆಮಿಫೈನಲ್​​ವರೆಗೂ ಅಜೇಯ ಗೆಲುವು ಸಾಧಿಸಿದೆ. ಲೀಗ್ ಹಂತದಲ್ಲಿ ಆಸೀಸ್​ ತಂಡವನ್ನು ಸೋಲಿಸಿರುವ ಭಾರತ 2003ರ ಸೇಡು ತೀರಿಸಿಕೊಂಡು ಲೆಕ್ಕಾ ಚುಪ್ತಾ ಮಾಡಲು ಸಜ್ಜಾಗಿದೆ.

2011ರ ಕ್ವಾರ್ಟರ್​​ ಫೈನಲ್​​ನಲ್ಲಿ ಸೋಲಿಸಿದ್ದ ಭಾರತ

2011ರ ವಿಶ್ವಕಪ್​​​ನಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಈ ಟೂರ್ನಿಯ ಕ್ವಾರ್ಟರ್​ ಫೈನಲ್​​ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿದ್ದ ಭಾರತ ಸೆಮಿಫೈನಲ್​​ಗೆ ಲಗ್ಗೆ ಇಟ್ಟಿತ್ತು. ಇನ್ನು 2015 ವಿಶ್ವಕಪ್​​​ನ ಸೆಮಿಫೈನಲ್​​ನಲ್ಲಿ ಭಾರತ ತಂಡವನ್ನು ಆಸೀಸ್​ ಸೋಲಿಸಿ ಫೈನಲ್ ಪ್ರವೇಶಿಸಿತ್ತು. 2019ರ ವಿಶ್ವಕಪ್​​ನ ಲೀಗ್​​ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಇಲ್ಲಿ ಭಾರತ ಜಯ ಸಾಧಿಸಿತ್ತು. ಪ್ರಸ್ತುತ ಟೂರ್ನಿಯ ಲೀಗ್​​​ನಲ್ಲೂ ಕಾಂಗರೂ ಪಡೆ ಎದುರು ಮೆನ್ ಬ್ಲೂ ಜಯಭೇರಿ ಬಾರಿಸಿದೆ.

2011ರ ನಂತರ ಭಾರತ ಫೈನಲ್​ಗೆ

ಟೀಮ್​ ಇಂಡಿಯಾ 12 ವರ್ಷಗಳ ನಂತರ ಫೈನಲ್​​ಗೆ ಲಗ್ಗೆ ಇಟ್ಟಿದೆ. 2011ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ವಿಶ್ವಕಿರೀಟಕ್ಕೆ ಮುತ್ತಿಕ್ಕಿದ್ದ ಭಾರತ, ಇದೀಗ ಮತ್ತೊಮ್ಮೆ 140 ಕೋಟಿ ಭಾರತೀಯ ಕನಸು ನನಸು ಮಾಡಲು ಹೊರಟಿದೆ. ಆ ಮೂಲಕ ಭಾರತಕ್ಕೆ 3ನೇ ಏಕದಿನ ವಿಶ್ವಕಪ್ ಗೆದ್ದುಕೊಡುವ ವಿಶ್ವಾಸದಲ್ಲಿದೆ. 1983ರಲ್ಲಿ ಮೊದಲ ಬಾರಿಗೆ ಭಾರತ ವಿಶ್ವಕಪ್ ಗೆದ್ದಿತ್ತು. 2019ರಲ್ಲಿ ಭಾರತ ಸೆಮಿಫೈನಲ್​ನಲ್ಲಿ ಸೋತು ಹೊರ ನಡೆದಿತ್ತು.

2015ರ ಬಳಿಕ ಮತ್ತೊಮ್ಮೆ ಫೈನಲ್​ಗೆ

ಕೊನೆಯ ಬಾರಿಗೆ ಆಸ್ಟ್ರೇಲಿಯಾ ಫೈನಲ್ ತಲುಪಿದ್ದು 2015ರ ವಿಶ್ವಕಪ್​​ನಲ್ಲಿ. ಅಂದು ಸೆಮಿಫೈನಲ್​ನಲ್ಲಿ ಭಾರತವನ್ನು ಸೋಲಿಸಿದ್ದ ಕಾಂಗರೂ ಫೈನಲ್ ತಲುಪಿತ್ತು. ಫೈನಲ್​ನಲ್ಲಿ​ ನ್ಯೂಜಿಲೆಂಡ್​ಗೆ ಆಘಾತ ನೀಡಿದ್ದ ಯಲ್ಲೋ ಆರ್ಮಿ, 5ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಆದರೆ, 2019ರ ವಿಶ್ವಕಪ್​ನಲ್ಲಿ ಆಸೀಸ್​ ಸೆಮಿಫೈನಲ್​ನಲ್ಲಿ ಇಂಗ್ಲೆಂಡ್ ಎದುರು ಸೋತು ಹೊರ ಬಿದ್ದಿತ್ತು.

ಫೈನಲ್​​​ನಲ್ಲಿ ಭಾರತವೇ ಗೆಲ್ಲುವ ಸಾಧ್ಯತೆ

ಈ ಬಾರಿ ಭಾರತವೇ ವಿಶ್ವಕಪ್ ಗೆಲ್ಲಲು ಹಲವು ಕಾರಣಗಳಿವೆ. ತಂಡದ ಎಲ್ಲಾ ಆಟಗಾರರು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್​​ ಮೂಲಕ ಆಲ್​ರೌಂಡ್​ ಪ್ರದರ್ಶನ ನೀಡುತ್ತಿರುವ ಭಾರತ ಪ್ರಶಸ್ತಿ ಗೆಲ್ಲಲು ಅರ್ಹವಾಗಿದೆ. ಅದರಲ್ಲೂ ತವರಿನ ಲಾಭ ಪಡೆಯಲಿರುವ ಮೆನ್ ಇನ್ ಬ್ಲೂ, ಆಸ್ಟ್ರೇಲಿಯಾ ತಂಡಕ್ಕಿಂತ ಹೆಚ್ಚು ಬಲಿಷ್ಠವಾಗಿದೆ. ಲೀಗ್​​ನಲ್ಲಿ ಸೋಲಿಸಿರುವ ವಿಶ್ವಾಸದಲ್ಲಿರುವ ಭಾರತ, ಫೈನಲ್​ನಲ್ಲೂ ಸೋಲಿಸಿ ಅಜೇಯದೊಂದಿಗೆ ವಿಶ್ವಕಿರೀಟಕ್ಕೆ ಮುತ್ತಿಕ್ಕುವ ವಿಶ್ವಾಸದಲ್ಲಿದೆ.

Whats_app_banner