ವಾಂಖೆಡೆ ಸ್ಟೇಡಿಯಂನಲ್ಲಿ ಜನಸಾಗರದ ನಡುವೆ ಕುಣಿದು ಕುಪ್ಪಳಿಸಿದ ರೋಹಿತ್-ವಿರಾಟ್; ವಿಶೇಷ ವಿಡಿಯೋ ಇಲ್ಲಿದೆ
Virat Kohli and Rohit Sharma: ಮುಂಬೈನ ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ಟಿ20 ವಿಶ್ವಕಪ್ 2024 ವಿಜಯೋತ್ಸದ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಡ್ಯಾನ್ಸ್ ಮಾಡುವ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ವಿಡಿಯೋ ವೈರಲ್ ಆಗುತ್ತಿದೆ.
ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಜಂಟಿ ಆತಿಥ್ಯದಲ್ಲಿ ನಡೆದ ಟಿ20 ವಿಶ್ವಕಪ್ 2024 ಟ್ರೋಫಿ ಜಯಿಸಿದ 5 ದಿನಗಳ ನಂತರ ತವರಿಗೆ ಮರಳಿದ ಟೀಮ್ ಇಂಡಿಯಾಗೆ ಭವ್ಯ ಸ್ವಾಗತ ದೊರೆಯಿತು. ನವ ದೆಹಲಿಯಿಂದ ಮುಂಬೈ ತನಕ ಅಭಿಮಾನಿಗಳು ಅದ್ಧೂರಿಯಾಗಿ ವೆಲ್ಕಮ್ ಮಾಡಿಕೊಂಡರು. ಅದರಲ್ಲೂ ಮುಂಬೈನ ಮರೀನ್ ಡ್ರೈವ್ನಲ್ಲಿ ರೋಡ್ ಶೋ ಮತ್ತು ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ನಡೆದ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದು ಬಂದಿತ್ತು. ಕ್ರಿಕೆಟಿಗರು ಮರೆಯಲಾಗದ ಮತ್ತು ಜೀವಮಾನದ ಕ್ಷಣಗಳನ್ನು ಅನುಭವಿಸಿದರು.
ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ನಂತರ ವಿಮಾನದ ಮೂಲಕ ನೇರವಾಗಿ ಮುಂಬೈಗೆ ಆಗಮಿಸಿದ ಭಾರತೀಯ ಕ್ರಿಕೆಟಿಗರು, ಮರೀನ್ ಡ್ರೈವ್ನಲ್ಲಿ ಅದ್ಧೂರಿ ರೋಡ್ಶೋ ನಡೆಸಿದರು. ಈ ರೋಡ್ಶೋನಲ್ಲಿ ಕಣ್ಣು ಹಾಯಿಸಿದಷ್ಟೂ ಜನಸಾಗರ ಕಂಡು ಬಂತು. ಅಭಿಮಾನಿಗಳು ಇಂಡಿಯಾ, ಇಂಡಿಯಾ ಎಂದು ಅಭಿಮಾನಿಗಳು ಘೋಷಣೆ ಕೂಗಿದಾಗ ಕ್ರಿಕೆಟಿಗರು ಭಾವುಕರಾದರು. ನಂತರ ವಾಂಖೆಡೆ ಮೈದಾನದಲ್ಲಿ ಕಾರ್ಯಕ್ರಮ ನಡೆಯಿತು. 125 ಕೋಟಿ ರೂಪಾಯಿಗಳ ಚೆಕ್ ಅನ್ನು ಬಿಸಿಸಿಐ ಆಟಗಾರರಿಗೆ ವಿತರಿಸಿತು.
ರೋಹಿತ್-ಕೊಹ್ಲಿ ಭರ್ಜರಿ ಸ್ಟೆಪ್ಸ್
ಭಾರತೀಯ ಕ್ರಿಕೆಟ್ ತಂಡವು ಜುಲೈ 4ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಂಬಲಾಗದ ಅಸಂಖ್ಯ ಅಭಿಮಾನಿಗಳೊಂದಿಗೆ ತಮ್ಮ ಟಿ20 ವಿಶ್ವಕಪ್ ಯಶಸ್ಸನ್ನು ಆಚರಿಸಿತು. ಬಿಸಿಸಿಐ ಹೊಸ ಟಿ20 ವಿಶ್ವ ಚಾಂಪಿಯನ್‌ಗಳನ್ನು ಅಭಿನಂದಿಸಲು ವಿಜಯೋತ್ಸವದ ಮೆರವಣಿಗೆ ಮತ್ತು ಸ್ವಾಗತ ಕಾರ್ಯಕ್ರಮವನ್ನು ಆಯೋಜಿಸಿದಾಗ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಇದೇ ವೇಳೆ ಮೈದಾನದಲ್ಲಿ ಟಿ20ಐ ಕ್ರಿಕೆಟ್ಗೆ ವಿದಾಯ ಘೋಷಿಸಿರುವ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಭರ್ಜರಿ ಸ್ಟೆಪ್ಸ್ ಹಾಕಿ ಅಭಿಮಾನಿಗಳನ್ನು ರಂಜಿಸಿದರು.
ರೋಹಿತ್ ಮತ್ತು ಕೊಹ್ಲಿ ಮೈದಾನದಲ್ಲಿ ಒಟ್ಟಿಗೆ ನಡೆದುಕೊಂಡು ಹೋಗುತ್ತಿರುತ್ತಾರೆ. ಅವರ ಹಿಂದೆಯೇ ಬರುತ್ತಿದ್ದ ಸಹ ಆಟಗಾರರು ಸಂತೋಷದ ಅಲೆಯಲ್ಲಿ ಡ್ಯಾನ್ಸ್ ಮಾಡಲು ಆರಂಭಿಸಿದರು. ಆಗ ರೋಹಿತ್ ಮತ್ತು ವಿರಾಟ್ ಅವರೊಂದಿಗೆ ಸೇರಿ ನೃತ್ಯ ಮಾಡಿದರು. ಮೈದಾನದಲ್ಲಿ ನೆರೆದಿದ್ದ ಫ್ಯಾನ್ಸ್ ಅನ್ನು ಎಂಟರ್ಟೈನ್ ಮಾಡಿದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಇಬ್ಬರು ದಿಗ್ಗಜ ಕ್ರಿಕೆಟಿಗರಿಗೆ ಇದೇ ಕೊನೆಯ ಟಿ20 ವಿಶ್ವಕಪ್ ಆಗಿರುವ ಕಾರಣ ಅಭಿಮಾನಿಗಳು ಸಹ ಭಾವುಕರಾದರು.
ಹೋಟೆಲ್ ಮುಂದೆಯೂ ಹಿಟ್ಮ್ಯಾನ್ ಡ್ಯಾನ್ಸ್
ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಟೀಮ್ ಇಂಡಿಯಾ ದೆಹಲಿಯ ಐಟಿಸಿ ಹೋಟೆಲ್ಗೆ ಆಗಮಿಸಿದಾಗ ರೋಹಿತ್ ಶರ್ಮಾ ಬಾಂಗ್ರಾ ಡ್ಯಾನ್ಸ್ ಮಾಡಿದ್ದರು. ನಂತರ ವಾಂಖೆಡೆಯಲ್ಲೂ ಸ್ಟೆಪ್ಸ್ ಹಾಕಿದರು. 125 ಕೋಟಿ ನಗದು ಬಹುಮಾನದೊಂದಿಗೆ ಭಾರತ ತಂಡವನ್ನು ಬಿಸಿಸಿಐ ಅಭಿನಂದಿಸಿತು. ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿಯೇ ಅತಿ ದೊಡ್ಡ ಕ್ರೀಡಾ ಸಂಭ್ರಮಕ್ಕೆ ಅಭಿಮಾನಿಗಳು ಸಾಕ್ಷಿಯಾದರು. ಇದೇ ವೇಳೆ ಕೊಹ್ಲಿ ಮತ್ತು ರೋಹಿತ್ ತಮ್ಮ ಭಾವನೆಗಳನ್ನು ಹಂಚಿಕೊಂಡರು. ಮೆಗಾ ಈವೆಂಟ್‌ನಲ್ಲಿ ಭಾರತದ ಯಶಸ್ಸಿಗೆ ಜಸ್ಪ್ರೀತ್ ಬುಮ್ರಾ ಅವರಿಗೆ ಮನ್ನಣೆ ನೀಡಿದರು.
ಬಾರ್ಬಡೋಸ್ನಿಂದ ದೆಹಲಿಗೆ ಆಗಮಿಸಿದ ನಂತರ ಐಟಿಸಿ ಮೌರ್ಯ ಹೋಟೆಲ್ ತಲುಪಿದ ಕ್ರಿಕೆಟಿಗರು ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಲೋಕಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನಿವಾಸಕ್ಕೆ ಆಗಮಿಸಿದರು. ಪ್ರಧಾನಿ ಮೋದಿ ತಮ್ಮ ಮನೆಗೆ ಆಗಮಿಸಿದ ಭಾರತೀಯ ಕ್ರಿಕೆಟಿಗರ ಜೊತೆ ವಿಶೇಷ ಸಭೆ ನಡೆಸಿದರು. ಬ್ರೇಕ್‌ಫಾಸ್ಟ್ ವಿತ್ ಚಾಂಪಿಯನ್ಸ್ ಕಾರ್ಯಕ್ರಮದ ಅಂಗವಾಗಿ ಕ್ರಿಕೆಟಿಗರೊಂದಿಗೆ ಸಂವಾದ ನಡೆಸಿದ ಮೋದಿ, ಪಂದ್ಯದ ಪ್ರದರ್ಶನದ ಕುರಿತು ಕೇಳಿದರು.