ಮುಂಬೈ ಇಂಡಿಯನ್ಸ್ ವಿರುದ್ಧ ಟಾಸ್ ಗೆದ್ದ ಆರ್‌ಸಿಬಿ ಫೀಲ್ಡಿಂಗ್ ಆಯ್ಕೆ; ಇಂದು ಗೆದ್ದರೆ ಪ್ಲೇ ಆಫ್ ಟಿಕೆಟ್ ಖಚಿತ
WPL 2024: ಮುಂಬೈ ಇಂಡಿಯನ್ಸ್ ವಿರುದ್ಧ ಈವರೆಗೆ ಆರ್‌ಸಿಬಿ ಆಡಿದ ಎಲ್ಲಾ ಮೂರು ಪಂದ್ಯಗಳಲ್ಲಿ ಸೋತಿದೆ. ಡಬ್ಲ್ಯೂಪಿಎಲ್‌ನಲ್ಲಿ ಆಡಿದ ಕೊನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೇವಲ ಒಂದು ರನ್ ಅಂತರದಿಂದ ಸೋತಿರುವ ಮಂಧಾನ ಪಡೆ, ಇಂದು ಗೆದ್ದು ಗೆಲುವಿನ ಖುಷಿ ಅನುಭವಿಸುವ ನಿರೀಕ್ಷೆಯಲ್ಲಿದೆ.
ಡಬ್ಲ್ಯೂಪಿಎಲ್ (Womens Premier League 2024) ಎರಡನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCBW vs MIW) ತಂಡಗಳು ಎರಡನೇ ಬಾರಿ ಪರಸ್ಪರ ಮುಖಾಮುಖಿಯಾಗುತ್ತಿವೆ. ಮಾರ್ಚ್ 12ರ ಮಂಗಳವಾರ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಉಭಯ ತಂಡಗಳಿಗೂ ಈ ಪಂದ್ಯ ಮಹತ್ವದ್ದು. ಹರ್ಮನ್‌ಪ್ರೀತ್ ಪಡೆಯು ಪಂದ್ಯದಲ್ಲಿ ಗೆದ್ದು ಅಗ್ರಸ್ಥಾನದ ಮೇಲೆ ಕಣ್ಣಿಟ್ಟಿದ್ದರೆ, ಆರ್‌ಸಿಬಿ ತಂಡವು ಪ್ಲೇ ಆಫ್ ಪ್ರವೇಶದ ಕನಸಿನಲ್ಲಿ ಅಗ್ರ ಮೂರನೇ ಸ್ಥಾನದತ್ತ ಚಿತ್ತ ಹರಿಸಿದೆ.
ನಾಯಕಿ ಸ್ಮೃತಿ ಮಂಧಾನ ಟಾಸ್ ಗೆದ್ದರೂ ಫೀಲ್ಡಿಂಗ್ ಆಯ್ಕೆ ಮಾಡಿ ಅಚ್ಚರಿ ಮೂಡಿಸಿದ್ದಾರೆ. ತಂಡವು ಯಾವುದೇ ಬದಲಾವಣೆಗಳಿಲ್ಲದೆ ಕಣಕ್ಕಿಳಿಯುತ್ತಿದೆ. ಅತ್ತ ಮುಂಬೈ ತಂಡದಲ್ಲಿ ಯಾಸ್ತಿಕಾ ಭಾಟಿಯ ಆಡುತ್ತಿಲ್ಲ. ಅವರ ಬದಲಿಗೆ ಪ್ರಿಯಾಂಕಾ ಬಾಲಾ ಆಡುತ್ತಿದ್ದಾರೆ. ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ಯಾಸ್ತಿಕ ಅನುಪಸ್ಥಿತಿ ಇಂದು ಮುಂಬೈಗೆ ಕಾಡಲಿದೆ.
ಈಗಾಗಲೇ ಪ್ಲೇ ಆಫ್ ಪ್ರವೇಶಿಸಿರುವ ಮುಂಬೈ ತಂಡವು, ಇಂದಿನ ಪಂದ್ಯ ಗೆದ್ದರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪ್ರವೇಶಿಸಲಿದೆ. ಅತ್ತ ಆರ್‌ಸಿಬಿ ಗೆದ್ದರೆ, ಮೂರನೇ ಸ್ಥಾನ ಖಚಿತಪಡಿಸಿಕೊಂಡು ಪ್ಲೇ ಆಫ್ ಪ್ರವೇಶಿಸಲಿದೆ. ಗೆಲುವು ಸಾಧಿಸಿದರೆ ಸ್ಮೃತಿ ಮಂಧಾನ ಪಡೆಗೆ ನೆಟ್ ರನ್ ರೇಟ್ ಚಿಂತೆ ಇರುವುದಿಲ್ಲ. ಒಂದು ವೇಳೆ ಆರ್‌ಸಿಬಿ ಇಂದಿನ ಪಂದ್ಯದಲ್ಲಿ ಸೋತರೆ, ತಂಡದ ಸೋಲಿನ ಅಂತರದ ಮೇಲೆ ಗುಜರಾತ್ ಜೈಂಟ್ಸ್ ಮತ್ತು ಯುಪಿ ವಾರಿಯರ್ಸ್ ತಂಡಗಳ ಪ್ಲೇ ಆಫ್ ಕನಸು ಚಿಗುರಲಿದೆ.
ಇದನ್ನೂ ಓದಿ | Video: ನಾಯಕನಾಗಿ ಮುಂಬೈ ಇಂಡಿಯನ್ಸ್ ಕ್ಯಾಂಪ್ ಸೇರಿಕೊಂಡ ಹಾರ್ದಿಕ್ ಪಾಂಡ್ಯ; ಡ್ರೆಸ್ಸಿಂಗ್ ರೂಮ್‌ನಲ್ಲಿ ದೇವರಿಗೆ ಪೂಜೆ
ಮುಂಬೈ ಇಂಡಿಯನ್ಸ್ ವಿರುದ್ಧ ಈವರೆಗೆ ಆರ್‌ಸಿಬಿ ಆಡಿದ ಎಲ್ಲಾ ಮೂರು ಪಂದ್ಯಗಳಲ್ಲಿ ಸೋತಿದೆ. ಹೀಗಾಗಿ ಈ ಪಂದ್ಯವು ಆರ್‌ಸಿಬಿ ಪಾಲಿಗೆ ಕಬ್ಬಿಣದ ಕಡಲೆಯಾಗಿದೆ. ತಂಡಕ್ಕೆ ಬ್ಯಾಟಿಂಗ್ ಬೌಲಿಂಗ್ ಜೊತೆಗೆ ಫೀಲ್ಡಿಂಗ್ ಕೂಡಾ ನಿರ್ಣಾಯಕ ಪಾತ್ರ ವಹಿಸಲಿದೆ. ಕೊನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೇವಲ ಒಂದು ರನ್ ಅಂತರದಿಂದ ಸೋತಿರುವ ಮಂಧಾನ ಪಡೆ, ಇಂದು ಗೆದ್ದು ಗೆಲುವಿನ ಖುಷಿ ಅನುಭವಿಸುವ ನಿರೀಕ್ಷೆಯಲ್ಲಿದ್ದಾರೆ.
ಮುಂಬೈ ಇಂಡಿಯನ್ಸ್ ಆಡುವ ಬಳಗ
ಹೇಲಿ ಮ್ಯಾಥ್ಯೂಸ್, ನ್ಯಾಟ್ ಸಿವರ್-ಬ್ರಂಟ್, ಪ್ರಿಯಾಂಕಾ ಬಾಲಾ (ವಿಕೆಟ್ ಕೀಪರ್), ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮೆಲಿಯಾ ಕೆರ್, ಅಮನ್ಜೋತ್ ಕೌರ್, ಎಸ್ ಸಜನಾ, ಪೂಜಾ ವಸ್ತ್ರಕರ್, ಹುಮೈರಾ ಕಾಜಿ, ಶಬ್ನಿಮ್ ಇಸ್ಮಾಯಿಲ್, ಸೈಕಾ ಇಶಾಕ್.
ರಾಯಲ್ ಚಾಲೆಂಜರ್ಸ್ ಆಡುವ ಬಳಗ
ಸ್ಮೃತಿ ಮಂಧಾನ (ನಾಯಕಿ), ಸೋಫಿ ಮೊಲಿನೆಕ್ಸ್, ಎಲ್ಲಿಸ್ ಪೆರ್ರಿ, ಸೋಫಿ ಡಿವೈನ್, ರಿಚಾ ಘೋಷ್ (ವಿಕೆಟ್ ಕೀಪರ್), ಜಾರ್ಜಿಯಾ ವೇರ್ಹ್ಯಾಮ್, ದಿಶಾ ಕಸತ್, ಶ್ರೇಯಾಂಕಾ ಪಾಟೀಲ್, ಆಶಾ ಸೋಭಾನಾ, ಶ್ರದ್ಧಾ ಪೋಖರ್ಕರ್, ರೇಣುಕಾ ಠಾಕೂರ್ ಸಿಂಗ್.
ಇದನ್ನೂ ಓದಿ | ಟಿ20 ವಿಶ್ವಕಪ್‌ಗೆ ವಿರಾಟ್ ಕೊಹ್ಲಿ ಆಯ್ಕೆ ಅನುಮಾನ; ಕಠಿಣ ನಿರ್ಧಾರಕ್ಕೆ ಮುಂದಾದ ಬಿಸಿಸಿಐ
ಕ್ರಿಕೆಟ್ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
(This copy first appeared in Hindustan Times Kannada website. To read more like this please logon to kannada.hindustantimes.com)