ಕನ್ನಡ ಸುದ್ದಿ  /  ಚುನಾವಣೆಗಳು  /  ಲೋಕಸಭಾ ಚುನಾವಣೆ; ಬೆಂಗಳೂರು ಕೇಂದ್ರ ಭಾಗದಲ್ಲಿ ಮತದಾನ ಜಾಗೃತಿ ಸಂದೇಶ ನೀಡುತ್ತಿರುವ ಹಿರಿಯ ನಾಗರಿಕ, ವಿಡಿಯೋ ವೈರಲ್‌

ಲೋಕಸಭಾ ಚುನಾವಣೆ; ಬೆಂಗಳೂರು ಕೇಂದ್ರ ಭಾಗದಲ್ಲಿ ಮತದಾನ ಜಾಗೃತಿ ಸಂದೇಶ ನೀಡುತ್ತಿರುವ ಹಿರಿಯ ನಾಗರಿಕ, ವಿಡಿಯೋ ವೈರಲ್‌

ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಶುರುವಾಗಿದೆ. ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿದ್ದು, ಬೆಂಗಳೂರು ಕೇಂದ್ರ ಭಾಗದಲ್ಲಿ ಮತದಾನ ಜಾಗೃತಿ ಸಂದೇಶ ನೀಡುತ್ತಿರುವ ಹಿರಿಯ ನಾಗರಿಕರೊಬ್ಬರ ವಿಡಿಯೋ ವೈರಲ್‌ ಆಗಿದೆ.

ಲೋಕಸಭೆ ಚುನಾವಣೆ 2024: ಬೆಂಗಳೂರು ಕೇಂದ್ರ ಭಾಗದಲ್ಲಿ ಮತದಾನ ಜಾಗೃತಿ ಸಂದೇಶ ನೀಡುತ್ತಿರುವ ಹಿರಿಯ ನಾಗರಿಕನ ವಿಡಿಯೋದಿಂದ ತೆಗೆದ ಚಿತ್ರ.
ಲೋಕಸಭೆ ಚುನಾವಣೆ 2024: ಬೆಂಗಳೂರು ಕೇಂದ್ರ ಭಾಗದಲ್ಲಿ ಮತದಾನ ಜಾಗೃತಿ ಸಂದೇಶ ನೀಡುತ್ತಿರುವ ಹಿರಿಯ ನಾಗರಿಕನ ವಿಡಿಯೋದಿಂದ ತೆಗೆದ ಚಿತ್ರ. (Screengrab)

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha election 2024)ಯ ಭಾಗವಾಗಿ ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಇಂದು (ಏಪ್ರಿಲ್ 26) ಬೆಳಗ್ಗೆ 7 ಗಂಟೆಗೆ ಶುರುವಾಗಿದೆ. ಮತದಾನದಲ್ಲಿ ಭಾಗವಹಿಸುವಂತೆ ಮತದಾನ ಜಾಗೃತಿ ಅಭಿಯಾನ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದು, ಎರಡು ದಿನಗಳಿಂದೀಚೆಗೆ ಈ ಅಭಿಯಾನ ತೀವ್ರಗೊಂಡಿದೆ.

ಟ್ರೆಂಡಿಂಗ್​ ಸುದ್ದಿ

ಸೋಷಿಯಲ್ ಮೀಡಿಯಾದಲ್ಲಿ ಮತದಾನ ಜಾಗೃತಿಯ ವಿಡಿಯೋ ಒಂದು ವೈರಲ್ ಆಗಿದ್ದು, ಅದರಲ್ಲಿ ಹಿರಿಯ ನಾಗರಿಕರೊಬ್ಬರು ಮತದಾನ ಜಾಗೃತಿಯ ಪ್ಲಕಾರ್ಡ್ ಹಿಡಿದುಕೊಂಡು ಬೆಂಗಳೂರು ವಿಧಾನಸೌಧ ಎದುರು ಭಾಗದಲ್ಲಿ ಪ್ರದರ್ಶಿಸುತ್ತ ಓಡಾಡುತ್ತಿರುವ ದೃಶ್ಯವಿದೆ.

ಆ ಹಿರಿಯ ನಾಗರಿಕರು ಹಿಡಿದುಕೊಂಡಿರುವ ಪ್ಲಕಾರ್ಡ್‌ನಲ್ಲಿ "ಐ ವಿಲ್ ವೋಟ್ ಫಾರ್ ಚೇಂಜ್‌, ನಾಟ್ ಫಾರ್‌ ಹೇಟ್" (ನಾನು ಬದಲಾವಣೆಗೆ ಮತ ಚಲಾಯಿಸುವೆ, ದ್ವೇಷಕ್ಕಲ್ಲ) ಎಂಬ ಘೋ‍ಷಣೆ ಇದೆ.

ಈ ವಿಡಿಯೋವನ್ನು ಎಕ್ಸ್ ಬಳಕೆದಾರರೊಬ್ಬರು ಶೇರ್ ಮಾಡಿದ್ದು, “ಬೆಂಗಳೂರಿನ ಬೀದಿಯಲ್ಲಿ ಹಿರಿಯ ನಾಗರಿಕರೊಬ್ಬರು ನಿಮಗಾಗಿ ಒಂದು ಸಂದೇಶವನ್ನು ನೀಡಿದ್ದಾರೆ” ಎಂದು ಸ್ಟೇಟಸ್ ಅಪ್ಡೇಟ್ ಮಾಡಿದ್ದಾರೆ. ಹೃದಯದ ಚಿಹ್ನೆಯೊಂದಿಗೆ ಇರುವ ಟ್ವೀಟ್ ಬಹುಬೇಗ ಎಲ್ಲರ ಗಮನಸೆಳೆದಿದೆ. ಈ ಹಿರಿಯ ನಾಗಿಕರನ್ನು ಸ್ಥಳೀಯರು ಪೆಟ್ರೋಲ್ ಅಂಕಲ್ ಎಂದೇ ಗುರುತಿಸುತ್ತಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿಮಾಡಿದೆ.

ಪೆಟ್ರೋಲ್ ಅಂಕಲ್‌ ಕುರಿತಾದ ವಿಡಿಯೋ ಇಲ್ಲಿದೆ

ವಿಡಿಯೋದಲ್ಲಿರುವ ವ್ಯಕ್ತಿಯನ್ನು ಮೊಹಮ್ಮದ್ ಆರಿಫ್ ಸೇಟ್ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಹೊಸತಲೆಮಾರಿನ ಹುಡುಗರು ಇವರನ್ನು ಪೆಟ್ರೋಲ್ ಅಂಕಲ್ ಎಂದೇ ಗುರುತಿಸುತ್ತಾರೆ. ಎಂಜಿ ರಸ್ತೆ ಆಸುಪಾಸಲ್ಲಿ ಇಂಧನ ಖಾಲಿಯಾದರೆ ನೆರವಿಗೆ ಬರುವವರೇ ಈ “ಪೆಟ್ರೋಲ್ ಅಂಕಲ್‌”. 2008ರಿಂದ ಒಂದು ಬಾಟಲಿಯಲ್ಲಿ ಪೆಟ್ರೋಲ್ ಇಟ್ಟುಕೊಂಡು ಕಷ್ಟಕ್ಕೆ ಬಿದ್ದವರಿಗೆ ನೀಡಿ ನೆರವಾಗುತ್ತಾರೆ. ನೀರು ಬೇಕು ಎಂದವರಿಗೆ ನೀರನ್ನೂ ಕೊಟ್ಟು ಉಪಚರಿಸುತ್ತಿದ್ದಾರೆ ಎಂದು ವರದಿ ಹೇಳಿದೆ.

ವಿಡಿಯೋ ದೃಶ್ಯದಲ್ಲಿ ಆರಿಫ್ ಸೇಟ್‌ ವಿಧಾನಸೌಧದ ಎದುರು ನಿಂತು ಪ್ಲಕಾರ್ಡ್ ಪ್ರದರ್ಶಿಸುವ ದೃಶ್ಯವಿದೆ. ಮುಂದುವರಿದಂತೆ ಸೇಟ್ ಅವರು ಪ್ಲಕಾರ್ಡ್ ಹಿಡಿದುಕೊಂಡು ಎಂಜಿ ರಸ್ತೆ, ಕಮರ್ಷಿಯಲ್ ಸ್ಟ್ರೀಟ್‌, ಬ್ರಿಗೇಡ್ ರಸ್ತೆಗಳಲ್ಲಿ ಸಂಚರಿಸಿದ್ದ ದೃಶ್ಯಗಳೂ ಇವೆ. ಇದರ ನಡುವೆ ಕೆಲವು ದಾರಿಹೋಕರು ಅವರ ಜೊತೆ ಮಾತನಾಡಿದ ದೃಶ್ಯಗಳೂ ಇವೆ. ಕೆಲವರು ಅವರ ವಿಡಿಯೋ ತೆಗೆದುಕೊಂಡರು. ಇನ್ನು ಕೆಲವರು ಅವರ ಫೋಟೋ, ಅವರ ಜೊತೆಗೆ ಫೋಟೋ ತೆಗೆಸಿಕೊಂಡರು. ಈ ವಿಡಿಯೋವನ್ನು ಈಗಾಗಲೇ ಹಲವರು ಶೇರ್ ಮಾಡಿದ್ದಾರೆ.

ಎಕ್ಸ್ ಬಳೆದಾರರ ಪ್ರತಿಕ್ರಿಯೆ ಹೀಗಿದೆ ನೋಡಿ

“ಒಳ್ಳೆಯ ಮನುಷ್ಯ, ಗೌರವಿಸೋಣ” ಎಂದು ಒಬ್ಬ ವ್ಯಕ್ತಿ ಬರೆದುಕೊಂಡಿದ್ದಾರೆ.

“ಹೌದು ಇದು ಸರಿಯಾದ ಸಂದೇಶ” ಎಂದು ಮತ್ತೊಬ್ಬ ಪ್ರತಿಕ್ರಿಯಿಸಿದ್ದಾರೆ.

“ಮನುಷ್ಯನೊಬ್ಬ ತನ್ನ ದೇಶವನ್ನು ಸ್ವಾರ್ಥರಹಿತವಾಗಿ ಪ್ರೀತಿಸುವಾಗ ಮಾತ್ರ ಹೀಗಿರಲು ಸಾಧ್ಯ” ಎಂದು ಮತ್ತೊಬ್ಬ ಹೇಳಿಕೊಂಡಿದ್ದಾರೆ.

“ಉತ್ತಮ ನೋಟ” ಎಂದು ನಾಲ್ಕನೇಯವರು ಹೇಳಿದ್ದಾರೆ.

“ಜನ ಈಗ ಬದಲಾವಣೆ ಬಯಸಿದ್ದಾರೆ. ಇಂದು ತುಂಬಾ ದ್ವೇಷವಿದೆ, ಆದರೆ ಅದು ಬದಲಾಗಬೇಕೆಂದು ನಾವು ಬಯಸುತ್ತೇವೆ. ಅದಕ್ಕಾಗಿ ನಡೆಯಲು ನಿರ್ಧರಿಸಿದೆ” ಎಂದು ಆರಿಫ್ ಸೇಟ್ ಹೇಳಿದ್ದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಆರಿಫ್‌ ಸೇಟ್ ಅವರು ನಿವೃತ್ತ ಉದ್ಯೋಗಿಯಾಗಿದ್ಉದ, ಅದಕ್ಕೂ ಮೊದಲು ಫೂಟ್‌ವೇರ್ ವ್ಯಾಪಾರ ಮಾಡುತ್ತಿದ್ದರು. ವಾಟ್ಸ್‌ಆಪ್‌ನಲ್ಲಿ ತನ್ನದೇ ಬ್ರಾಡ್‌ಕಾಸ್ಟ್‌ ಲಿಸ್ಟ್ ಹೊಂದಿರುವ ಅವರು ಸದಾ ಜಾಗೃತಿ ಸಂದೇಶ ರವಾನಿಸುತ್ತಿರುತ್ತಾರೆ ಎಂದು ವರದಿ ಹೇಳಿದೆ.