Chandramukhi 2: ಎರಡನೇ ದಿನ ಬಾಕ್ಸ್ ಆಫೀಸ್‌ನಲ್ಲಿ ಮುಗ್ಗರಿಸಿದ ಚಂದ್ರಮುಖಿ; ರಾಘವ ಲಾರೆನ್ಸ್ ಕಂಗನಾ ರಣಾವತ್ ಚಿತ್ರದ ಗಳಿಕೆಯ ವಿವರ
Chandramukhi 2 box office collection day 2: ಕನ್ನಡದ ಆಪ್ತರಕ್ಷಕದ ತಮಿಳು ರೂಪ ಚಂದ್ರಮುಖಿ 2 ಸಿನಿಮಾ ಬಿಡುಗಡೆಯಾದ ಎರಡನೇ ದಿನ ಬಾಕ್ಸ್ ಆಫೀಸ್‌ನಲ್ಲಿ ಎಷ್ಟು ಕಲೆಕ್ಷನ್ ಮಾಡಿದೆ? ಕಂಗನಾ ರಣಾವತ್ ಮತ್ತು ರಾಘವ ಲಾರೆನ್ಸ್ ನಟನೆಯ ಈ ಚಿತ್ರ ಸಿನಿಮಾ ನಿರ್ದೇಶಕರಿಗೆ ಲಾಭ ತರುವುದೇ? ಇಲ್ಲಿದೆ ವರದಿ.
Chandramukhi 2 box office collection day 2: ಚಂದ್ರಮುಖಿ 2 ಸಿನಿಮಾವು ಬಿಡುಗಡೆಯಾಗಿ ಮೂರು ದಿನಗಳಾಗಿದ್ದು, ಎರಡನೇ ದಿನ ಗಲ್ಲಾಪೆಟ್ಟಿಗೆಯಲ್ಲಿ ಎಷ್ಟು ಹಣ ಗಳಿಸಿದೆ? ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಸಚ್‌ನಿಲ್ಕ್.ಕಾಂನ ವರದಿ ಪ್ರಕಾರ ಎರಡನೇ ದಿನ ಚಂದ್ರಮುಖಿ 2 ಸಿನಿಮಾವು ಸಾಮಾನ್ಯ ಗಳಿಕೆ ಮಾಡಿದೆ. ಮೊದಲ ದಿನದ ಗಳಿಕೆಗೆ ಹೋಲಿಸಿದರೆ ಎರಡನೇ ದಿನದ ಗಳಿಕೆ ಗಮನಾರ್ಹವಾಗಿ ಇಳಿಕೆ ಕಂಡಿದೆ. ಮೊದಲ ದಿನದ ಅರ್ಧದಷ್ಟು ಗಳಿಕೆ ಮಾಡಿದೆ. ಚಂದ್ರಮುಖಿ 2 ಸಿನಿಮಾವು ಸೆಪ್ಟೆಂಬರ್ 2ರಂದು ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಕಂಗನಾ ರಣಾವತ್ ಮತ್ತು ರಾಘವ ಲಾರೆನ್ಸ್ ಮುಖ್ಯಪಾತ್ರದಲ್ಲಿ ನಟಿಸಿದ ಈ ಚಿತ್ರವು ಕನ್ನಡದ ಆಪ್ತ ರಕ್ಷಕ ಸಿನಿಮಾದ ಕಥೆಯನ್ನೇ ಹೊಂದಿದೆ.
ಚಂದ್ರಮುಖಿ ಬಾಕ್ಸ್ ಆಫೀಸ್ ಕಲೆಕ್ಷನ್
ವರದಿಯ ಪ್ರಕಾರ ಚಂದ್ರಮುಖಿ 2 ಸಿನಿಮಾವು ರಿಲೀಸ್ ಆದ ಬಳಿಕ ಎರಡನೇ ದಿನ ಭಾರತದಲ್ಲಿ 4.50 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದು ಎಲ್ಲಾ ಭಾಷೆಗಳಲ್ಲಿ ಆದ ಒಟ್ಟು ಕಲೆಕ್ಷನ್. ಮೊದಲ ದಿನ ಇದು 8.25 ಕೋಟಿ ರೂಪಾಯಿ ಕಲಕ್ಷನ್ ಮಾಡಿತ್ತು. ಶೇಕಡ 51.90ರಷ್ಟು ಜನರು ನಿನ್ನೆ ತಮಿಳುಭಾಷೆಯಲ್ಲಿ ವೀಕ್ಷಣೆ ಮಾಡಿದ್ದಾರೆ. ತೆಲುಗು ಮತ್ತು ಹಿಂದಿ ಶೋಗಳ ವೀಕ್ಷಣೆ ಕ್ರಮವಾಗಿ ಶೇಕಡ 42.65 ಮತ್ತು ಶೇಕಡ 12.77 ರಷ್ಟು ಇತ್ತು.
ಚಂದ್ರಮುಖಿ 2 ಸಿನಿಮಾವನ್ನು ಪಿ. ವಾಸು ನಿರ್ದೇಶಿಸಿದ್ದಾರೆ. ಈ ಚಿತ್ರದ ಬಹುತೇಕ ಶೂಟಿಂಗ್ ನಮ್ಮ ಮೈಸೂರಿನಲ್ಲಿಯೇ ಆಗಿದೆ. ರಾಘವ ಲಾರೆನ್ಸ್ ಅವರು ಚಂದ್ರಮುಖಿ 2 ಬಿಡುಗಡೆಗೆ ಮುನ್ನ ತಮ್ಮ ಗುರು ರಜನಿಕಾಂತ್ ಅವರ ಬಳಿಗೆ ಹೋಗಿ ಆಶೀರ್ವಾದ ಪಡೆದಿದ್ದಾರೆ. ರಾಘವೇಂದ್ರ ಸ್ವಾಮಿ ದೇವರ ದರ್ಶನ ಪಡೆದು ಆಶೀರ್ವಾದ ಪಡೆದಿದ್ದರು. ಆದರೆ, ಸಿನಿಮಾ ಬಿಡುಗಡೆಯಾದ ಬಳಿಕ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ದಿನ ತುಸು ಹೆಚ್ಚು ಕಲೆಕ್ಷನ್ ಇದ್ದರೂ, ಎರಡನೇ ದಿನ ಕಲೆಕ್ಷನ್ ಡಲ್ ಆಗಿದೆ. ಆದರೆ, ಇದೀಗ ವೀಕೆಂಡ್‌ನಲ್ಲಿ ಅಂದರೆ ಇಂದು ಮತ್ತು ನಾಳೆ ತುಸು ಗಳಿಕೆ ಹೆಚ್ಚಿರುವ ನಿರೀಕ್ಷೆಯಿದೆ.
ಆಪ್ತಮಿತ್ರ ಹಾಗೂ ಚಂದ್ರಮುಖಿ ಎರಡೂ ಸಿನಿಮಾಗಳು 1993ರಲ್ಲಿ ತೆರೆ ಕಂಡಿದ್ದ ಮಲಯಾಳಂನ ಮಣಿಚಿತ್ರತಾಳ್ ರೀಮೇಕ್. ಆಪ್ತಮಿತ್ರ ಹಾಗೂ ಆಪ್ತರಕ್ಷಕ ಚಿತ್ರಗಳನ್ನು ಪಿ ವಾಸು ಕಥೆ ಬರೆದು ನಿರ್ದೇಶಿಸಿದ್ದರು. ರಜನಿಕಾಂತ್ , ಪ್ರಭು, ಜ್ಯೋತಿಕಾ ನಟನೆಯ ಚಂದ್ರಮುಖಿ ಚಿತ್ರವನ್ನು ಕೂಡಾ ಪಿ ವಾಸು ಕಥೆ ಬರೆದು ನಿರ್ದೇಶಿಸಿದ್ದರು. ಇದೀಗ ಚಂದ್ರಮುಖಿ 2 ಚಿತ್ರಕ್ಕೆ ಕೂಡಾ ವಾಸು ಆ್ಯಕ್ಷನ್ ಕಟ್ ಹೇಳಿದ್ದಾರೆ. ಲೈಕಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕ ಸುಭಾಸ್ಕರನ್ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದ್ದಾರೆ.