Bigg Boss OTT 3: ಇಂದಿನಿಂದ ಬಿಗ್‌ಬಾಸ್ ಒಟಿಟಿ 3 ಹಬ್ಬ, ದೊಡ್ಮನೆ ಆಟಕ್ಕೆ ಅನಿಲ್ ಕಪೂರ್ ಸಾರಥಿ, ಸ್ಪರ್ಧಿಗಳು ಯಾರು? ತಿಳಿದುಕೊಳ್ಳಿ
Bigg Boss OTT 3: ಅನಿಲ್ ಕಪೂರ್ ನಡೆಸಿಕೊಡುವ ಬಿಗ್‌ಬಾಸ್ ಒಟಿಟಿ 3 ಇಂದಿನಿಂದ ಆರಂಭವಾಗಲಿದೆ. ಈ ರಿಯಾಲಿಟಿ ಶೋವನ್ನು ಎಲ್ಲಿ? ಯಾವ ಸಮಯದಲ್ಲಿ ನೋಡಬಹುದು ಎಂಬ ವಿವರ ಇಲ್ಲಿದೆ.
Bigg Boss OTT 3: ವಿವಾದಾತ್ಮಕ ರಿಯಾಲಿಟಿ ಶೋ ಬಿಗ್ ಬಾಸ್ ಒಟಿಟಿಯ ಮೂರನೇ ಸೀಸನ್ ಇಂದಿನಿಂದ ಆರಂಭವಾಗಲಿದೆ. ಆದರೆ, ಈ ಬಾರಿ ನಿರೂಪಕರಾಗಿ ಸಲ್ಮಾನ್ ಖಾನ್ ಕಾರ್ಯನಿರ್ವಹಿಸುತ್ತಿಲ್ಲ. ಬಿಗ್‌ಬಾಸ್ ಒಟಿಟಿ ಸೀಸನ್ 3ಯ ನಿರೂಪಕರಾಗಿ ಅನಿಲ್ ಕಪೂರ್ ದೊಡ್ಮನೆಯ ಸ್ಪರ್ಧಿಗಳನ್ನು ಆಟ ಆಡಿಸಲಿದ್ದಾರೆ. ಪ್ರತಿ ಸೀಸನ್‌ನಂತೆ ಈ ಸಲವೂ ಸಾಕಷ್ಟು ಜಗಳ, ವಿವಾದ, ಆಟ, ಪ್ಲ್ಯಾನಿಂಗ್, ತಂತ್ರಗಳು ಇರಲಿವೆ. ರಿಯಾಲಿಟಿ ಶೋ ಬಿಗ್ ಬಾಸ್ ಒಟಿಟಿಯ ಮೂರನೇ ಸೀಸನ್ ನಲ್ಲಿ ವಿವಿಧ ಕ್ಷೇತ್ರಗಳ ಹಲವಾರು ಸೆಲೆಬ್ರಿಟಿ ಸ್ಪರ್ಧಿಗಳು ಭಾಗವಹಿಸಲಿದ್ದಾರೆ.
ಬಿಗ್‌ಬಾಸ್ ಸೀಸನ್ 3 ಪ್ರಸಾರ ವಿವರ
ಬಿಗ್‌ಬಾಸ್ ಸೀಸನ್ 3 ರಿಯಾಲಿಟಿ ಶೋನಲ್ಲಿ ಈ ಬಾರಿ ಸೆಲೆಬ್ರಿಟಿ ಸ್ಪರ್ಧಿಗಳು ಒಂದು ತಿಂಗಳಿಗೂ ಹೆಚ್ಚು ಕಾಲ ದೊಡ್ಮನೆಯಲ್ಲಿ ಲಾಕ್ ಆಗಲಿದ್ದಾರೆ. ಈ ರಿಯಾಲಿಟಿ ಶೋ ಜೂನ್ 21 ರ ಶುಕ್ರವಾರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. ಈ ಕಾರ್ಯಕ್ರಮವು ಜಿಯೋ ಸಿನೆಮಾ ಪ್ರೀಮಿಯಂನಲ್ಲಿ ಪ್ರಸಾರವಾಗಲಿದೆ. ಪ್ರೀಮಿಯರ್ ಲೈವ್ ಸ್ಟ್ರೀಮಿಂಗ್ ಬಳಿಕ ಮುಂದಿನ ಎಪಿಸೋಡ್‌ಗಳು ಜಿಯೋ ಸಿನೆಮಾ ಒಟಿಟಿಯಲ್ಲಿ ಮಾತ್ರ ಪ್ರಸಾರವಾಗಲಿದೆ. ಈ ಬಾರಿಯೂ ಜಿಯೊ ಸಿನೆಮಾ ಚಂದದಾರರಿಗೆ ದಿನದ 24 ಗಂಟೆ ದೊಡ್ಮನೆಯೊಳಗೆ ಏನು ನಡೆಯುತ್ತಿದೆ ಎಂದು ನೋಡುವ ಅವಕಾಶ ದೊರಕಲಿದೆ. ಜಿಯೋ ಸಿನೆಮಾ ಒಟಿಟಿಯ ತಿಂಗಳ ಚಂದಾದಾರಿಕೆ 29 ರೂಪಾಯಿಯಿಂದ ಆರಂಭವಾಗುತ್ತದೆ.
ಬಿಗ್‌ಬಾಸ್ ಒಟಿಟಿ 3: ಸ್ಪರ್ಧಿಗಳ ವಿವರ
ಈ ಬಾರಿ ಟಿವಿ ನಟರು, ಇನ್‌ಫ್ಲೂಯೆನ್ಸರ್‌ಗಳು, ಸುದ್ದಿ ಮಾಧ್ಯಮದವರು, ಸಂಗೀತಗಾರರು ಮತ್ತು ಸ್ಪೋರ್ಟ್ಸ್ ಪರ್ಸನಾಲಿಟಿಗಳು ಭಾಗವಹಿಸಲಿದ್ದಾರೆ. ಸಾಯಿ ಕೇತನ್ ರಾವ್, ಪೌಲೋಮಿ ಪೊಲೊ ದಾಸ್, ಸನಾ ಸುಲ್ತಾನ್, ಸನಾ ಮಕ್ಬುಲ್, ವಿಶಾಲ್ ಪಾಂಡೆ, ಚಂದ್ರಿಕಾ ಗೆರಾ ದೀಕ್ಷಿತ್, ನಯೀಜಿ, ನೀರಜ್ ಗೋಯತ್ ಮತ್ತು ಅರ್ಮಾನ್ ಮಲಿಕ್ ಮತ್ತು ಇಬ್ಬರು ಪತ್ನಿಯರಾದ ಪಾಯಲ್ ಮತ್ತು ಕೃತಿಕಾ ಅವರ ಹೆಸರುಗಳು ಬಿಗ್‌ಬಾಸ್ ಒಟಿಟಿ ಸ್ಪರ್ಧಿಗಳಾಗಲಿದ್ದಾರೆ ಎಂದು ವದಂತಿಗಳು ಹರಡಿವೆ.
ಈ ಬಾರಿ ಬಿಗ್‌ಬಾಸ್ ಒಟಿಟಿ ಮನೆಯ ಥೀಮ್ ಆಕರ್ಷಕವಾಗಿದೆ. ಮೂರು ಮನೆ, ಡ್ರಾಗನ್‌ಗಳು, ಯಕ್ಷಿಣಿಗಳ ಹೊಸ ಲೋಕದಂತೆ ಬಿಗ್‌ಬಾಸ್ ಮನೆಯನ್ನು ಮಾರ್ಪಾಡಿಸಲಾಗಿದೆ.
ಈ ಸೀಸನ್ ಕುರಿತು ಅನಿಲ್ ಕಪೂರ್ ಹೀಗೆ ಹೇಳಿದ್ದಾರೆ. "ನಾವೆಲ್ಲರೂ ವಿಭಿನ್ನ ಜನರು. ನೀವು ಕೇವಲ ನೀವೇ ಆಗಿರುವಿರಿ. ನಿಮ್ಮ ಜೀವನ ಅನುಭವಗಳನ್ನು, ಯಾವ ರೀತಿಯ ವ್ಯಕ್ತಿಯಾಗಿದ್ದೀರಿ ಎಂದು ಹೊರಗೆ ತೋರಿಸುವುದು ಈ ಬಿಗ್‌ಬಾಸ್‌ನ ಉದ್ದೇಶವಾಗಿದೆ. ನಾನು ಕೀಫರ್ ಸದರ್‌ಲ್ಯಾಂಡ್ ಅಥವಾ ದಿ ನೈಟ್ ಮ್ಯಾನೇಜರ್ ಸಿನಿಮಾ ಮಾಡಿದ ಸಂದರ್ಭದಲ್ಲಿ ನನ್ನ ಶೈಲಿಯಲ್ಲಿ ಮಾಡಿದ್ದೆ. ನನ್ನ ಪಾತ್ರವನ್ನು ಹಗ್ ಲಾರಿ ಅವರದ್ದೇ ರೀತಿ ಮಾಡಿದರು. ನಾನು, ಕಮಲ್ ಹಾಸನ್, ರಜನಿಕಾಂತ್, ಚಿರಮಜೀವಿ ಮುಖ್ಯ ಭೂಮಿಕೆಯಲ್ಲಿದ್ದ ಚಿತ್ರಗಳನ್ನು ಹಿಂದಿಗೆ ರಿಮೇಕ್ ಮಾಡಿದಾಗ ಆ ಸಿನಿಮಾಗಳಲ್ಲಿ ನಟಿಸುವ ನಟರು ತಮ್ಮದೇ ಶೈಲಿ, ತಮ್ಮತನವನ್ನು ತೋರಿಸಿದ್ದಾರೆ" ಎಂದು ಅನಿಲ್ ಕಪೂರ್ ಹೇಳಿದ್ದಾರೆ. ಈ ಮೂಲಕ ಬಿಗ್‌ಬಾಸ್ ಸೀಸನ್ 3ಯಲ್ಲಿ ಭಾಗವಹಿಸುವ ಸ್ಪರ್ಧಿಗಳ ನಿಜವಾದ ಮುಖವನ್ನು ಅನಾವರಣ ಮಾಡುವ ಕ್ಷಣಗಳ ಕುರಿತು ಕುತೂಹಲ ಹೆಚ್ಚಿಸಿದ್ದಾರೆ.