Kirik Keerthi: ರಾಖಿ ಕಟ್ಟಿದ ತಂಗಿ ಜೊತೆ ನನ್ನ ಮದುವೆ ಮಾಡಿಸಿದ್ರಿ; ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಕಿರಿಕ್ ಕೀರ್ತಿ ಆಕ್ರೋಶ
ನಾನೂ ಮುಮ್ತಾಜ್ ಅಣ್ಣ ತಂಗಿ ಇದ್ದಂತೆ. ಈ ಫೋಟೋಗಳನ್ನು ತೆಗೆದದ್ದು ರಕ್ಷಾ ಬಂಧನದ ದಿನ. ಅಣ್ಣ ತಂಗಿಯ ಫೋಟೋವನ್ನು ಈ ರೀತಿ ಅಪ್‌ಲೋಡ್ ಮಾಡಿ ಮದುವೆ ಆಗಿದೆ ಎಂದು ಹೇಳುತ್ತಿದ್ದೀರ ಎಂದು ಕಿರಿಕ್ ಕೀರ್ತಿ ಬೇಸರದಿಂದಲೇ ವಿಡಿಯೋ ಮಾಡಿದ್ದಾರೆ.
ಕಿರಿಕ್ ಕೀರ್ತಿ ಆರ್‌ಜೆ, ನಟ, ನಿರ್ದೇಶಕ, ನಿರೂಪಕನಾಗಿ ಹೆಸರು ಮಾಡಿದವರು. ಬಹುಮುಖ ಪ್ರತಿಭೆ ಕೀರ್ತಿ ಕೆಲವು ದಿನಗಳ ಹಿಂದೆ ತಮ್ಮ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಬಹಳ ಸುದ್ದಿಯಲ್ಲಿದ್ದರು. ಆತ್ಮಹತ್ಯೆಗೆ ಕೂಡಾ ಪ್ರಯತ್ನ ಪಟ್ಟಿದ್ದಾಗಿ ಹೇಳಿಕೊಂಡಿದ್ದರು. ಇದೀಗ ಮತ್ತೆ ಕಿರಿಕ್ ಕೀರ್ತಿ ಮತ್ತೊಂದು ವಿಡಿಯೋ ಹಂಚಿಕೊಂಡಿದ್ದಾರೆ.
ಕಿರಿಕ್ ಕೀರ್ತಿ ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದ ಅರ್ಪಿತಾ ಅವರನ್ನು 2012ರಲ್ಲಿ ಮದುವೆ ಆಗಿದ್ದರು. ಈ ದಂಪತಿಗೆ ಆವಿಷ್ಕಾರ್ ಎಂಬ ಮಗ ಇದ್ದಾನೆ. ಆದರೆ ಕೀರ್ತಿ ಹಾಗೂ ಅರ್ಪಿತಾ ಬೇರೆ ಬೇರೆಯಾಗಿದ್ದಾರೆ ಎಂಬ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿದೆ. ತಾವಿಬ್ಬರೂ ಬೇರೆ ಬೇರೆ ಆಗಿರುವುದನ್ನು ಕೀರ್ತಿ ಆಗಲೀ, ಅರ್ಪಿತಾ ಆಗಲೀ ಇದುವರೆಗೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಅದೇ ಸಮಯದಲ್ಲಿ ತಾನು ಆತ್ಮಹತ್ಯೆಗೆ ಪ್ರಯತ್ನಿಸಿದ್ದೆ, ಆದರೆ ಕೊನೆ ಕ್ಷಣದಲ್ಲಿ ನಿರ್ಧಾರ ಬದಲಿಸಿದೆ. ಇನ್ಮುಂದೆ ಇಂತಹ ಯೋಚನೆಗಳನ್ನು ಮಾಡುವುದಿಲ್ಲ. ನನ್ನವರಿಗಾಗಿ ಬದುಕುತ್ತೇನೆ ಎಂದು ಹೇಳಿಕೊಂಡಿದ್ದರು. ತಾವು ಹಂಚಿಕೊಳ್ಳುವ ಪ್ರತಿ ವಿಡಿಯೋಗಳಿಗೂ ಕೀರ್ತಿ ಕಾಮೆಂಟ್ ಸೆಕ್ಷನ್ ಆಫ್ ಮಾಡಿದ್ದರು.
ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ
ಆದರೆ ಇದೀಗ ಮತ್ತೆ ಕೀರ್ತಿ ಕೆಲವರ ವರ್ತನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ''ನನಗೆ ಎರಡನೇ ಮದುವೆ ಆಗಿದೆ ಎಂದು ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ನಮ್ಮ ವೈಯಕ್ತಿಕ ಜೀವನದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದರೆ ನಿಮಗೆ ಏನು ದೊರೆಯುತ್ತದೆ? ನಾನೂ ಮುಮ್ತಾಜ್ ಅಣ್ಣ ತಂಗಿ ಇದ್ದಂತೆ. ಈ ಫೋಟೋಗಳನ್ನು ತೆಗೆದದ್ದು ರಕ್ಷಾ ಬಂಧನದ ದಿನ. ಅಣ್ಣ ತಂಗಿಯ ಫೋಟೋವನ್ನು ಈ ರೀತಿ ಅಪ್‌ಲೋಡ್ ಮಾಡಿ ಮದುವೆ ಆಗಿದೆ ಎಂದು ಹೇಳುತ್ತಿದ್ದೀರ. ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳಿಲ್ವಾ? ನಿಮಗೆ ನಾಚಿಕೆ ಆಗುವುದಿಲ್ವಾ? ನನಗೆ ಇದೆಲ್ಲಾ ಅಭ್ಯಾಸ ಆಗಿದೆ. ಆದರೆ ಮದುವೆ ಆಗದ ಒಂದು ಹೆಣ್ಣು ಮಗುವಿನ ಬಗ್ಗೆ ಹೀಗೆಲ್ಲಾ ಸುಳ್ಳು ಸುದ್ದಿ ಹಬ್ಬಿಸುವುದು ಎಷ್ಟು ಸರಿ? ‘’
''ಇದು ಕಳೆದ ವರ್ಷ ಆಗಸ್ಟ್ 11 ರಂದು ತೆಗೆದ ಫೋಟೋಗಳಿವು. ಅಂದು ರಕ್ಷಾಬಂಧನ, ಆಕೆ ನನ್ನ ಹಣೆಗೆ ತಿಲಕ ಇಟ್ಟು ರಾಖಿ ಕಟ್ಟಿದ ದಿನ ತೆಗೆದ ಫೋಟೋಗಳು. ನಿಮ್ಮದು ಹೊಲಸು ಮನಸ್ಥಿತಿ. ಫೋಟೋದಲ್ಲಿ ನನ್ನ ಕೈಯಲ್ಲಿ ರಾಖಿ ಕಾಣಿಸುತ್ತಿದೆ. ಹಣೆಯಲ್ಲಿ ಕುಂಕುಮ ಇದೆ. ಇದೆಲ್ಲವನ್ನೂ ಯೋಚಿಸದೆ ನಿಮ್ಮ ಮನಸ್ಸಿಗೆ ಬಂದಂತೆ ಕಾಮೆಂಟ್ ಮಾಡುತ್ತಿದ್ದೀರಿ, ಆಕೆ ಕೂಡಾ ತನ್ನ ಪ್ರೊಫೈಲ್‌ನಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾಳೆ. ''ಅಣ್ಣ ತಂಗಿಯರ ಈ ಬಂಧ'' ಎಂದು ಬರೆದುಕೊಂಡಿದ್ದಾಳೆ. ನಿಮ್ಮ ಅಕ್ಕತಂಗಿಯರ ಜೊತೆ ನಿಮ್ಮ ಫೋಟೋ ಹಾಕಿದಾಗ ಬೇರೆಯವರು ಇದೇ ರೀತಿ ಕಾಮೆಂಟ್ ಮಾಡಿದರೆ ನಿಮಗೆ ಹೇಗೆ ಅನ್ನಿಸುತ್ತೆ?''
ನಿಮಗೆಲ್ಲಾ ಬುದ್ಧಿ ಕಲಿಸುತ್ತೇನೆ
''ಸೋಷಿಯಲ್ ಮೀಡಿಯಾದಲ್ಲಿ ಹೀಗೆಲ್ಲಾ ಸುಳ್ಳುಸುದ್ದಿ ಹಬ್ಬಿಸಿದರೆ ಏನೆಲ್ಲಾ ಆಗಬಹುದು ಎಂಬ ಕನಿಷ್ಠ ಜ್ಞಾನ ಇಲ್ಲದೆ ಹೀಗೆಲ್ಲಾ ಮಾಡುತ್ತಿದ್ದೀರಿ. ಖಂಡಿತ ನೀವೆಲ್ಲಾ ಅನುಭವಿಸುತ್ತೀರಿ. ಇದಕ್ಕೆಲ್ಲಾ ನಾನು ಫುಲ್ ಸ್ಟಾಪ್ ಇಡುತ್ತೇನೆ'' ಎಂದು ಕಿರಿಕ್ ಕೀರ್ತಿ ಬೇಸರದಿಂದಲೇ ವಿಡಿಯೋ ಮಾಡಿದ್ದಾರೆ.