Darshan Vs Umapathy: ರಾಬರ್ಟ್ ಸಿನಿಮಾ ಮಾಡಿದ್ದಕ್ಕೆ ನಾನು ಲಾಸ್ ಆದೆ, ದರ್ಶನ್ ಅವರದ್ದೇನಾದ್ರೂ ಹಾಳಾಯ್ತಾ? ಉಮಾಪತಿ ಗರಂ
ಕಾಟೇರ ಶೀರ್ಷಿಕೆ ಕಾಂಟ್ರವರ್ಸಿ ನಡುವೆಯೇ ರಾಬರ್ಟ್ ಸಿನಿಮಾ ಕಲೆಕ್ಷನ್ ವಿಚಾರವೂ ಮುನ್ನೆಲೆಗೆ ಬಂದಿದೆ. ಅಸಲಿಗೆ ರಾಬರ್ಟ್ ಸಿನಿಮಾದ ನಿಜವಾದ ಕಲೆಕ್ಷನ್ ಬಗ್ಗೆ ಉಮಾಪತಿ ಶ್ರೀನಿವಾಸ್ ಮಾತನಾಡಿದ್ದಾರೆ. ಈ ಸಿನಿಮಾ ಮಾಡಿ ಲಾಸ್ ಆದೆ ಎಂದೂ ಹೇಳಿಕೊಂಡಿದ್ದಾರೆ.
Darshan Vs Umapathy: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ನಡುವೆ ಮಾತಿನ ಸಮರ ಮುಂದುವರಿದಿದೆ. ಇದು ಸದ್ಯಕ್ಕೆ ಮುಕ್ತಾಯವಾಗೋ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಇತ್ತ ರಾಬರ್ಟ್ ಸಿನಿಮಾದಿಂದ ನಾನು ಕೋಟಿ ಕೋಟಿ ನಷ್ಟ ಅನುಭವಿಸಿದ್ದಿನಿ, ನೂರು ಕೋಟಿ ಇನ್ನೂರು ಕೋಟಿ ಎಲ್ಲಾ ಸುಳ್ಳು ಅಂತ ಉಮಾಪತಿ ಹೊಸ ಬಾಂಬ್ ಸಿಡಿಸಿದ್ದಾರೆ.
'ಕಾಟೇರ' ಟೈಟಲ್‌ಗೆ ಸಂಬಂಧಿಸಿದ ವಿಷಯಕ್ಕೆ ಸಂಬಂಧಿಸಿದಂತೆ ದರ್ಶನ್, 'ರಾಬರ್ಟ್' ನಿರ್ಮಾಪಕ ಉಮಾಪತಿ ವಿರುದ್ಧ ಆಕ್ರೋಶ ಹೊರಹಾಕಿದ್ದರು. 'ಕಾಟೇರ' ಟೈಟಲ್ ಕೊಟ್ಟಿದ್ದೇ ನಾನು ಎಂದು ಹೇಳಿದ್ದರು. ಈ ವೇಳೆ ಕೋಪದ ಭರಾಟೆಯಲ್ಲಿ ಉಮಾಪತಿಗೆ ತಗಡು ಅನ್ನೋ ಪದ ಬಳಕೆ ಮಾಡಿದ್ದರು. ಇದು 'ರಾಬರ್ಟ್' ಸಿನಿಮಾ ನಿರ್ಮಾಪಕನ ಆಕ್ರೋಶಕ್ಕೆ ಕಾರಣವಾಗಿತ್ತು.
ಇದಾದ ಬಳಿಕ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಸಹ ಹಲವು ಯೂಟ್ಯೂಬ್ ಚಾನೆಲ್‌ಗಳಿಗೆ ಸಂದರ್ಶನ ನೀಡಿದ್ದಾರೆ. ಉಮಾಪತಿ ಕೂಡ ದರ್ಶನ್ ವಿರುದ್ಧ ಆಕ್ರೋಶದಿಂದಲೇ ಮಾತಾಡಿದ್ದಾರೆ. ಬರೀ ಕಾಟೇರ ಸಿನಿಮಾ ಮಾತ್ರವಲ್ಲ 'ರಾಬರ್ಟ್' ಸಿನಿಮಾದ ಕಲೆಕ್ಷನ್‌ನ ಅಸಲಿ ವಿಚಾರದ ಬಗ್ಗೆಯೂ ಮಾತಾಡಿದ್ದಾರೆ.
ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಈ ಹಿಂದೆ ದರ್ಶನ್‌ಗಾಗಿ ರಾಬರ್ಟ್ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ತರುಣ್ ಸುಧೀರ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂಬ ಸುದ್ದಿಯೂ ಹಬ್ಬಿತ್ತು. ಆಗ ಈ ಸಿನಿಮಾ ಹಳೆಯ ದಾಖಲೆಗಳನ್ನು ಅಳಸಿ ಹಾಕಿದೆ ಅಂತ ಕೂಡ ಹೇಳಲಾಗಿತ್ತು. ಇದೀಗ ಉಮಾಪತಿ ಪರೋಕ್ಷವಾಗಿ 100 ಕೋಟಿ ಮಾಡಿಲ್ಲ ಅನ್ನೋದನ್ನ ಒಪ್ಪಿಕೊಂಡಿದ್ದಾರೆ. ಸಿನಿಮಾದಿಂದ ಲಾಸ್ ಆಗಿದೆ ಎಂದೂ ಹೇಳಿದ್ದಾರೆ.
ಯಾವ 100 ಕೋಟಿನೂ ಇಲ್ಲ, 200 ಕೋಟಿನೂ ಇಲ್ಲ!
ಉಮಾಪತಿ 'ರಾಬರ್ಟ್' ಸಿನಿಮಾ ಬಾಕ್ಸಾಫೀಸ್ ಕಲೆಕ್ಷನ್ ಬಗ್ಗೆ ಪರೋಕ್ಷವಾಗಿ ಮಾತಾಡಿದ್ದಾರೆ. ನೇರವಾಗಿ ಕಲೆಕ್ಷನ್ ಗುಟ್ಟನ್ನ ಬಿಟ್ಟುಕೊಡದೇ ಇದ್ದರೂ, 100 ಕೋಟಿ ರೂಪಾಯಿ ಕಲೆಕ್ಷನ್ ಆಗಿಲ್ಲ ಎಂದಿದ್ದಾರೆ. "100 ಕೋಟಿ, 200 ಕೋಟಿ ರೂಪಾಯಿ ಅಂತಾರಲ್ಲ ಚಾಲೆಂಜ್ ಮಾಡ್ತಿನಿ ಯಾವ ನೂರು ಕೋಟಿ ಮುಟ್ಟಿಸಿದ್ದಾರೆ ಹೇಳಿಬಿಡಲಿ. ನಾನು ಅವತ್ತು ಉತ್ತರ ಕೊಡುತ್ತೇನೆ" ಎಂದಿದ್ದಾರೆ.
ಕೋಟಿ ಕೋಟಿ ಹಾಕಿದೆ, ಬಂದಿದ್ದು 16 ಲಕ್ಷ ಮಾತ್ರ
ಆಂಧ್ರದಲ್ಲಿ ಇವರ ಮಾತು ಕಟ್ಕೊಂಡು ಕೋಟ್ಯಾಂತರ ರೂಪಾಯಿ ಹಾಕಿದೆ. ಬಂದಿದ್ದು 16 ಲಕ್ಷ ರೂಪಾಯಿ. ನಾನು ಯಾರಿಗೆ ಹೇಳಲಿ. ಯಾರ ಮನೆ ಹಾಳಾಗಿದ್ದು, ಅವರದ್ಯಾರ ಮನೆಯೂ ಹಾಳಲಾಗಲಿಲ್ಲ. ಯಾರಿಗೆ ಏನೇನು ಮಾತಾಡಿದ್ದೀನೋ ಅದನ್ನು ನಾನು ಕೊಟ್ಟಿದ್ದೀನಿ." ಎಂದು ನಿರ್ಮಾಪಕ ಉಮಾಪತಿ ಸ್ಪೀಡ್ ಪ್ಲಸ್ ಯೂಟ್ಯೂಬ್ ಚಾನೆಲ್ ಜತೆ ಹೇಳಿಕೊಂಡಿದ್ದಾರೆ. ಈಗ ಉಮಾಪತಿ ಮತ್ತು ದರ್ಶನ್ ಕಿತ್ತಾಟ್ಟಕ್ಕೆ ಒಕ್ಕಲಿಗ ನಾಯಕರು ಎಂಟ್ರಿಯಾಗಿದ್ದು, ಪುಟ್ಟೇನಹಳ್ಳಿ ಠಾಣೆಯಲ್ಲಿ ಮತ್ತೊಂದು ದೂರು ಸಹ ದಾಖಲಾಗಿದೆ.
ವರದಿ: ಮನೋಜ್ ವಿಜಯೀಂದ್ರ