ಭಾರತದ ಅಭ್ಯಾಸಕ್ಕೆ ಕಳಪೆ ಪಿಚ್ ನೀಡಿ ತಾರತಮ್ಯ ಮಾಡಿದ ಆಸ್ಟ್ರೇಲಿಯಾ; ರೋಹಿತ್ ಶರ್ಮಾ-ಪಿಚ್ ಕ್ಯುರೇಟರ್ ಜಟಾಪಟಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತದ ಅಭ್ಯಾಸಕ್ಕೆ ಕಳಪೆ ಪಿಚ್ ನೀಡಿ ತಾರತಮ್ಯ ಮಾಡಿದ ಆಸ್ಟ್ರೇಲಿಯಾ; ರೋಹಿತ್ ಶರ್ಮಾ-ಪಿಚ್ ಕ್ಯುರೇಟರ್ ಜಟಾಪಟಿ

ಭಾರತದ ಅಭ್ಯಾಸಕ್ಕೆ ಕಳಪೆ ಪಿಚ್ ನೀಡಿ ತಾರತಮ್ಯ ಮಾಡಿದ ಆಸ್ಟ್ರೇಲಿಯಾ; ರೋಹಿತ್ ಶರ್ಮಾ-ಪಿಚ್ ಕ್ಯುರೇಟರ್ ಜಟಾಪಟಿ

MCG Pitch Report: ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಟೀಮ್ ಇಂಡಿಯಾ ಅಭ್ಯಾಸಕ್ಕೆಂದು ಬಳಸಿದ ಮತ್ತು ಕಳಪೆ ಪಿಚ್‌ಗಳಲ್ಲಿ ನೀಡಿದ್ದಕ್ಕೆ ಎಂಸಿಜಿ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಆದರೆ ರೋಹಿತ್​ ಶರ್ಮಾ ಸಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾರತದ ಅಭ್ಯಾಸಕ್ಕೆ ಬಳಸಿದ, ಕಿತ್ತೊದ ಪಿಚ್ ನೀಡುವ ಮೂಲಕ ಆಸ್ಟ್ರೇಲಿಯಾ ತಾರತಮ್ಯ; ರೋಹಿತ್ ಶರ್ಮಾ-ಪಿಚ್ ಕ್ಯುರೇಟರ್ ಜಟಾಪಟಿ
ಭಾರತದ ಅಭ್ಯಾಸಕ್ಕೆ ಬಳಸಿದ, ಕಿತ್ತೊದ ಪಿಚ್ ನೀಡುವ ಮೂಲಕ ಆಸ್ಟ್ರೇಲಿಯಾ ತಾರತಮ್ಯ; ರೋಹಿತ್ ಶರ್ಮಾ-ಪಿಚ್ ಕ್ಯುರೇಟರ್ ಜಟಾಪಟಿ

ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಅಥವಾ ಬಾಕ್ಸಿಂಗ್ ಡೇ ಟೆಸ್ಟ್  ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಅಭ್ಯಾಸ ನಡೆಸಲು ಬಳಸಿದ, ಕಿತ್ತು ಹೋಗಿರುವ ಮತ್ತು ಕಳಪೆ ಪಿಚ್​ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಭಾರತ ತಂಡ ಅಸಮಾಧಾನ ಹೊರಹಾಕಿದೆ. ಡಿಸೆಂಬರ್​ 26ರಿಂದ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುವ ಈ ಪಂದ್ಯಕ್ಕೆ ಉಭಯ ತಂಡಗಳು ಭರ್ಜರಿ ಕಸರತ್ತು ನಡೆಸುತ್ತಿವೆ. ಆದರೆ ರೋಹಿತ್ ಪಡೆ ಅಭ್ಯಾಸ ನಡೆಸಲು ನೀಡಿರುವ ಪಿಚ್​​ಗಳ ಕುರಿತು ಅಸಮಾಧಾನ ವ್ಯಕ್ತವಾಗಿದೆ.

ಬಾಕ್ಸಿಂಗ್​ ಡೇ ಟೆಸ್ಟ್​​ಗೂ ಮುನ್ನ ಮೆಲ್ಬೋರ್ನ್​​ನಲ್ಲಿ ಭಾರತ ತಂಡ ಅಭ್ಯಾಸ ನಡೆಸಲು ಕಿತ್ತು ಹೋಗಿರುವ ಪಿಚ್​ ಅನ್ನು ನೀಡಲಾಗಿದೆ. ಅಲ್ಲಲ್ಲಿ ಗುಂಡಿಗಳು ಸಹ ಇವೆ. ಇಂತಹ ಪಿಚ್​​​ನಲ್ಲಿ ಅಭ್ಯಾಸ ನಡೆಸುವುದು ಹೇಗೆ ಎಂದು ಆಟಗಾರರು ಪ್ರಶ್ನಿಸುತ್ತಿದ್ದಾರೆ ಎಂದು ವರದಿಯಾಗಿದೆ. ಬಳಸಿದ ಮತ್ತು ಕಳಪೆ ಪಿಚ್​​ನಲ್ಲಿ ಚೆಂಡು ಬೌನ್ಸ್ ಆಗುತ್ತಿಲ್ಲ. ಅಭ್ಯಾಸ ಮಾಡಲು ಯೋಗ್ಯವೂ ಅಲ್ಲ ಎನ್ನಲಾಗಿದೆ. ಅಲ್ಲದೆ, ನಾಯಕ ರೋಹಿತ್ ಶರ್ಮಾ ಅವರ ಮೊಣಕಾಲು ಗಾಯಕ್ಕೂ ಪಿಚ್​​ ಅಸಮ ಬೌನ್ಸ್ ಕಾರಣ ಎಂದು ಹೇಳಲಾಗಿದೆ.

ಪಿಚ್ ಕ್ಯುರೇಟರ್​ ಸಮರ್ಥನೆ

ಟೀಮ್ ಇಂಡಿಯಾ ಕೆಟ್ಟ ಪಿಚ್​ಗಳಲ್ಲಿ ಅಭ್ಯಾಸ ನಡೆಸಿದರೆ, ಮತ್ತ ಆಸ್ಟ್ರೇಲಿಯಾ ಹೊಸ ಪಿಚ್​​ಗಳಲ್ಲಿ ಪ್ರಾಕ್ಟೀಸ್ ನಡೆಸುವ ಮೂಲಕ ತಾರತಮ್ಯದ ಆರೋಪ ಎದುರಿಸಿದೆ. ಹಿಟ್​ಮ್ಯಾನ್ ಬೇಸರ ವ್ಯಕ್ತಪಡಿಸಿದ್ದರೆ, ಪಿಚ್​ ಕ್ಯುರೇಟರ್ ಸಮರ್ಥನೆ ಮಾಡಿಕೊಂಡಿದ್ದಾರೆ. ಇದು ಇಬ್ಬರ ನಡುವೆ ಜಟಾಪಟಿಗೆ ಕಾರಣವಾಗಿದೆ ಎಂದು ವರದಿಯಾಗಿದೆ. ರೋಹಿತ್​​ ಪಿಚ್​ ಬಗ್ಗೆ ಕಿತ್ತು ಹೋದ ಪಿಚ್ ನೀಡಲಾಗಿದೆ ಎಂದು ಆರೋಪಿಸಿದ್ದರೆ, ಪಿಚ್ ಕ್ಯುರೇಟರ್ ಪ್ರೋಟೋಕಾಲ್​ ಅನ್ನು ಅನುಕರಿಸಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.

ಆಸೀಸ್​ಗೆ ಅಭ್ಯಾಸ ಮಾಡಲೆಂದು ನೀಡಲಾದ ಪಿಚ್​​ಗಳು ಉತ್ತಮ ಗುಣಮಟ್ಟದಿಂದ ಕೂಡಿವೆ. ಅವರಿಗಾಗಿ ರೋಲರ್​ ಕೂಡ ಬಳಸಿ ಉತ್ತಮ ಅಭ್ಯಾಸಕ್ಕೆ ಅನುವು ಮಾಡಿ ಕೊಡಲಾಗಿದೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ವೈರಲ್ ಆಗುತ್ತಿವೆ. ಇದು ಎಂಸಿಜಿ ಆಡಳಿತ ಮಂಡಳಿ ತಾರತಮ್ಯವನ್ನು ಎತ್ತಿ ತೋರಿಸುತ್ತಿದೆ ಎಂದು ಕ್ರಿಕೆಟ್ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಷ್ಟಿದ್ದರೂ ಪಿಚ್ ಕ್ಯುರೇಟರ್, ನಮ್ಮಲ್ಲಿದ್ದ ಪಿಚ್​​ಗಳನ್ನಷ್ಟೇ ಕೊಡಲು ಸಾಧ್ಯ ಎಂದು ತಮ್ಮ ನಡೆ ಸಮರ್ಥಿಸಿ ಆರೋಪ ತಳ್ಳಿ ಹಾಕಿದ್ದಾರೆ.

ಥ್ರೋಡೌನ್ ಸ್ಪೆಷಲಿಸ್ಟ್​ ದಯಾನಂದ್ ಗರಣಿ ಥ್ರೋಡೌನ್ ಮಾಡುತ್ತಿದ್ದಾಗ ರೋಹಿತ್ ಅವರ ಎಡ ಮೊಣಕಾಲಿನಲ್ಲಿ ಊತ ಕಾಣಿಸಿಕೊಂಡಿತು. ಅದರ ನಂತರ ಅವರು ನೆಟ್ಸ್​​ನಲ್ಲಿ ಅಭ್ಯಾಸ ನಡೆಸಲಿಲ್ಲ. ಬಳಿಕ ನಾಯಕನ ಕಾಲಿನ ಊತ ಹೆಚ್ಚಾದ ಕಾರಣ ಅಭ್ಯಾಸ ಮಾಡಲಿಲ್ಲ. ವರದಿ ಪ್ರಕಾರ ಭಾರತ 2 ತಿಂಗಳ ಹಿಂದೆ ತನ್ನ ತರಬೇತಿ ವೇಳಾಪಟ್ಟಿಯನ್ನು ಆಸ್ಟ್ರೇಲಿಯಾಕ್ಕೆ ಕಳುಹಿಸಿತ್ತು. ನೂತನ ಪಿಚ್​​ ನೀಡಬೇಕೆಂದು ಸೂಚನೆ ನೀಡಿತ್ತು. ಆದರೆ ಆಸ್ಟ್ರೇಲಿಯಾ ಸೂಚನೆಗೆ ವಿರುದ್ಧವಾಗಿ ನಡೆದುಕೊಂಡು ಕೆಟ್ಟ ಪಿಚ್​ ಕೊಟ್ಟಿದೆ.

ಪಿಚ್​ ಕ್ಯುರೇಟರ್​ ಹೇಳಿದ್ದೇನು?

ಪಂದ್ಯವಾಡುವ ಮುಖ್ಯ ಪಿಚ್​​ಗೆ​​ ಹೋಲುವ ಪಿಚ್ ಭಾರತಕ್ಕೆ ಏಕೆ ನೀಡಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಮ್ಯಾಟ್ ಪೇಜ್, 'ನಾವು 3 ದಿನ ಮುಂಚಿತವಾಗಿ ಇಲ್ಲಿ ಪಿಚ್ ರೆಡಿ ಮಾಡುತ್ತೇವೆ. ಆದರೆ ಯಾವ ತಂಡ ಮೊದಲು ಆಡುತ್ತದೆಯೋ ಅದಕ್ಕೆ ಹೊಸ ಪಿಚ್​​ಗಳನ್ನು ನೀಡುತ್ತೇವೆ. ಹೀಗಾಗಿ, ನಮ್ಮವರು ಹೊಸ ಪಿಚ್​ಗಳಲ್ಲಿ ಪ್ರಾಕ್ಟೀಸ್ ಮಾಡ್ತಿದ್ದಾರೆ. ನಾವು ಇಲ್ಲಿ ಮುಖ್ಯ ಪಿಚ್​ನಂತೆಯೇ ಅಭ್ಯಾಸ ಪಿಚ್​​ಗಳನ್ನೂ ತಯಾರಿಸುತ್ತೇವೆ. ಇಲ್ಲಿ ಇರುವ ಪಿಚ್​ಗಳನ್ನೇ ಅಭ್ಯಾಸಕ್ಕಾಗಿ ಕೊಡುತ್ತೇವೆ ಎಂದು ಹೇಳಿದ್ದಾರೆ.

ಕ್ರಿಕೆಟ್ ಆಸ್ಟ್ರೇಲಿಯಾಗೆ ಬಿಸಿಸಿಐ ಮಾಹಿತಿ ನೀಡಿದೆಯೇ ಎಂದು ಕೇಳಿದಾಗ ಉತ್ತರಿಸಿದ ಮ್ಯಾಟ್ ಪೇಜ್, ಹೌದು ಎಂದು ಉತ್ತರಿಸಿದ್ದಾರೆ. "ಹೌದು, ಬಿಸಿಸಿಐ ನಮಗೆ ತರಬೇತಿ ವೇಳಾಪಟ್ಟಿ ನೀಡಿದೆ. ಸಿಎ ಮತ್ತು ಭಾರತೀಯ ಮಂಡಳಿಯ ನಡುವೆ ಪತ್ರ ವ್ಯವಹಾರ ನಡೆದಿದೆ. ಆದರೆ ಏನೆಲ್ಲಾ ನಡೆಯಿತು ಎಂದು ತಿಳಿದಿಲ್ಲ ಎಂದು ಜಾರಿಕೊಂಡಿದ್ದಾರೆ. ಇದು ವೇಗಿಗಳಿಗೆ ಅನುಕೂಲವಾಗುವಂತೆ ಎಂಸಿಜಿ ಪಿಚ್ ಇರಲಿದೆ. ಇದು ಸ್ಪಿನ್ನರ್​ಗಳಿಗೆ ನೆರವು ಆಗುವುದಿಲ್ಲ ಮತ್ತು ಬ್ಯಾಟರ್​ಗಳು ಕಷ್ಟಪಡಬೇಕಾಗುತ್ತದೆ ಎಂದಿದ್ದಾರೆ.

ರೋಹಿತ್​ ಶರ್ಮಾ ತಿರುಗೇಟು

ನಮಗೆ ಈಗಾಗಲೇ ಬಳಸಿದ ಪಿಚ್​​ಗಳನ್ನು ನೀಡಲಾಗಿದೆ ಎಂದು ರೋಹಿತ್ ಪಿಚ್ ವಿವಾದದ ಕುರಿತು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಬೌನ್ಸ್ ನೋಡಿದರೆ ಕಳೆದ ಕೆಲವು ದಿನಗಳ ಹಿಂದೆ ನಾವು ಅಭ್ಯಾಸ ಮಾಡಿದ ಪಿಚ್‌ಗಳನ್ನು ಬಿಗ್ ಬ್ಯಾಷ್‌ಗೆ ಬಳಸಲಾಗಿದೆ ಎಂದು ಭಾವಿಸುತ್ತೇನೆ ಎಂದು ದೂರಿದ್ದಾರೆ. ಅಸಮ ಬೌನ್ಸ್ ಇತ್ತು. ಇದು ಅಭ್ಯಾಸಕ್ಕೆ ಕಷ್ಟವಾಗಿದೆ. ಆದರೆ ಅಭ್ಯಾಸ ಪಿಚ್​ಗಳಲ್ಲಿ ಕೆಲವು ಪರವಾಗಿಲ್ಲ. ಅದಕ್ಕೆ ಅನುಗುಣವಾಗಿ ಅಭ್ಯಾಸ ಮಾಡುತ್ತೇವೆ ಎಂದು ಮ್ಯಾಟ್ ಪೇಜ್​ಗೆ ತಿರುಗೇಟು ನೀಡಿದ್ದಾರೆ. 

 

 

Whats_app_banner