ಅಕ್ಷರ್ ಪಟೇಲ್-ಕುಲ್ದೀಪ್ ಯಾದವ್ ಅವರನ್ನೇ ಕೈಬಿಟ್ಟು ತನುಷ್ ಕೋಟ್ಯಾನ್‌ಗೆ ಅವಕಾಶ ನೀಡಿದ್ದೇಕೆ?
India vs Australia Boxing Day Test: ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೂ ಮುನ್ನ ಆರ್ ಅಶ್ವಿನ್ ಅವರಿಂದ ತೆರವಾದ ಸ್ಥಾನಕ್ಕೆ ತನುಷ್ ಕೋಟ್ಯಾನ್ ಅವರನ್ನು ಭಾರತ ಕ್ರಿಕೆಟ್ ತಂಡ ಆಯ್ಕೆ ಮಾಡಿದೆ. ಆದರೆ, ಅಕ್ಷರ್ ಪಟೇಲ್ ಮತ್ತು ಕುಲ್ದೀಪ್ ಯಾದವ್ ಅವರಿಗೇಕೆ ಆದ್ಯತೆ ನೀಡಲಿಲ್ಲ?
ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಮೂರು ಟೆಸ್ಟ್ ಪಂದ್ಯಗಳ ನಂತರ ಆಸ್ಟ್ರೇಲಿಯಾ-ಭಾರತ 1-1 ರಲ್ಲಿ ಸಮಬಲ ಸಾಧಿಸಿವೆ. ಪರ್ತ್ ಟೆಸ್ಟ್ನಲ್ಲಿ 295 ರನ್ಗಳ ಅಂತರದ ಜಯ ಸಾಧಿಸಿದ ಭಾರತ ತಂಡ, ಅಡಿಲೇಡ್ನ ಪಿಂಕ್ ಬಾಲ್ ಟೆಸ್ಟ್ನಲ್ಲಿ 10 ವಿಕೆಟ್ಗಳ ಸೋಲು ಅನುಭವಿಸಿದೆ. ಆದರೆ ಬ್ರಿಸ್ಬೇನ್ನ 3ನೇ ಪಂದ್ಯವು ಡ್ರಾನಲ್ಲಿ ಮುಗಿಯಿತು. ಡಿಸೆಂಬರ್ 26 ರಿಂದ ಶುರುವಾಗುವ 4ನೇ ಟೆಸ್ಟ್ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದ್ದು, ಗೆಲ್ಲಲು ಉಭಯ ತಂಡಗಳು ತೀವ್ರ ಕಸರತ್ತು ನಡೆಸಿವೆ. ಈ ಪಂದ್ಯ ಉಭಯ ತಂಡಗಳಿಗೆ ನಿರ್ಣಾಯಕವಾಗಿದೆ. ಗೆದ್ದರೆ ಸರಣಿಯಲ್ಲಿ ಮುನ್ನಡೆ ಸಾಧಿಸುವುದರ ಜತೆಗೆ ಡಬ್ಲ್ಯುಟಿಸಿ ಫೈನಲ್ ಹಾದಿಯನ್ನು ಸುಗಮ ಮಾಡಿಕೊಳ್ಳಲು ಮತ್ತಷ್ಟು ನೆರವಾಗಲಿದೆ.
ನಿವೃತ್ತಿ ನೀಡಿದ ರವಿಚಂದ್ರನ್ ಅಶ್ವಿನ್ ಅವರಿಂದ ತೆರವಾದ ಸ್ಥಾನಕ್ಕೆ ಸ್ಪಿನ್ ಆಲ್ರೌಂಡರ್ ತನುಷ್ ಕೋಟ್ಯಾನ್ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. 26 ವರ್ಷದ ತನುಷ್ ಇತ್ತೀಚೆಗೆ ಭಾರತ ‘ಎ’ ತಂಡದ ಪರ ಆಸ್ಟ್ರೇಲಿಯಾ ಪರ ಭಾಗವಾಗಿದ್ದರು. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಆಧಾರದ ಮೇಲೆ ತನುಷ್, ಭಾರತ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಆದಾಗ್ಯೂ, ಅಶ್ವಿನ್ ಬದಲಿಗೆ ಅಕ್ಷರ್ ಪಟೇಲ್ ಅಥವಾ ಕುಲ್ದೀಪ್ ಯಾದವ್ ಅವರಿಗೇಕೆ ಅವಕಾಶ ನೀಡಲಿಲ್ಲ ಎಂಬ ದೊಡ್ಡ ಪ್ರಶ್ನೆ ಉದ್ಭವಗೊಂಡಿದೆ. ಟೀಕೆ ವ್ಯಕ್ತವಾದ ಬೆನ್ನಲ್ಲೇ ಕುಲ್ದೀಪ್ ಮತ್ತು ಅಕ್ಷರ್ ಬದಲಿಗೆ ತನುಷ್ಗೆ ಅವಕಾಶ ನೀಡಿದ್ದೇಕೆ ಎಂದು ನಾಯಕ ರೋಹಿತ್ ಶರ್ಮಾ ವಿವರಿಸಿದ್ದಾರೆ.
ರೋಹಿತ್ ಶರ್ಮಾ ಹೇಳಿದ್ದೇನು?
ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ 2 ದಿನಗಳ ಮೊದಲೇ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೋಹಿತ್ ಶರ್ಮಾ, ತನುಷ್ ಕೋಟ್ಯಾನ್ ಆಸ್ಟ್ರೇಲಿಯಾದಲ್ಲಿ ಆಡಿದ್ದಾರೆ. ಕುಲ್ದೀಪ್ಗೆ ಸಂಬಂಧಿಸಿ ವೀಸಾ ಸಮಸ್ಯೆ ಇದೆ ಎಂದು ನಾನು ಭಾವಿಸುತ್ತೇನೆ. ಅಲ್ಲದೆ, ಅವರು ಶೇ 100 ರಷ್ಟು ಫಿಟ್ ಆಗಿಲ್ಲ. ಅಕ್ಷರ್ ಪಟೇಲ್ ಇತ್ತೀಚೆಗಷ್ಟೇ ಮಗುವಿಗೆ ತಂದೆಯಾಗಿದ್ದಾರೆ. ಹೀಗಾಗಿ ಸಿದ್ಧವಾಗಿದ್ದ ತನುಷ್ಗೆ ಮಣೆ ಹಾಕಲಾಗಿದೆ. ಸಿಡ್ನಿಯಲ್ಲಿ ಇಬ್ಬರು ಸ್ಪಿನ್ನರ್ಗಳೊಂದಿಗೆ ಆಡುವ ಅವಶ್ಯಕತೆ ಇದ್ದರೆ ನಮಗೆ ಬ್ಯಾಕಪ್ ಅಗತ್ಯವಿದೆ. ತನುಷ್ ಅವರು ರೆಡ್ ಬಾಲ್ ಕ್ರಿಕೆಟ್ನಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಎದುರಾಳಿಗಳ ವಿರುದ್ಧ ಏನು ಮಾಡಬಹುದು ಎಂಬುದನ್ನು ಈಗಾಗಲೇ ತೋರಿಸಿದ್ದಾರೆ ಎಂದಿದ್ದಾರೆ.
ತನುಷ್ ಕೋಟ್ಯಾನ್ ವೃತ್ತಿಜೀವನ
ತನುಷ್ ಕೋಟ್ಯಾನ್ ಅವರು ಯಾವುದೇ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿಲ್ಲ. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ತನುಷ್ 33 ಪಂದ್ಯಗಳ 47 ಇನ್ನಿಂಗ್ಸ್ಗಳಲ್ಲಿ 41.21ರ ಬ್ಯಾಟಿಂಗ್ ಸರಾಸರಿಯಲ್ಲಿ 1525 ರನ್ ಗಳಿಸಿದ್ದಾರೆ. 59 ಇನ್ನಿಂಗ್ಸ್ಗಳಲ್ಲಿ 25.60ರ ಬೌಲಿಂಗ್ ಸರಾಸರಿಯಲ್ಲಿ 101 ವಿಕೆಟ್ ಕಬಳಿಸಿದ್ದಾರೆ. ತನುಷ್ 2 ಶತಕ, 13 ಅರ್ಧಶತಕ ಗಳಿಸಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಮುಂಬೈ ಪರ ಆಡುತ್ತಿದ್ದ ತನುಷ್ ಇತ್ತೀಚೆಗೆ ಹೈದರಾಬಾದ್ ವಿರುದ್ಧ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಲೀಸ್ಟ್ ಎ ಕ್ರಿಕೆಟ್ನಲ್ಲಿ 22 ವಿಕೆಟ್, ಟಿ20ಐ ಕ್ರಿಕೆಟ್ನಲ್ಲಿ 33 ವಿಕೆಟ್ ಕಿತ್ತಿದ್ದಾರೆ. ಇದೀಗ ಭಾರತ ವಿರುದ್ಧ ಪದಾರ್ಪಣೆ ಮಾಡುವ ಅವಕಾಶದಲ್ಲಿದ್ದು, ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದ್ದಾರೆ.